ರಸಗೊಬ್ಬರ ಬಚ್ಚಿಟ್ಟು ಹೆಚ್ಚಿನ ಬೆಲೆಗೆ ಮಾರಾಟ: ರೈತ ಮುಖಂಡರಿಂದ ದಾಳಿ

ಮೈಸೂರು,ಆಗಸ್ಟ್,5,2025 (www.justkannada,in):  ಅಕ್ರಮವಾಗಿ ರಸಗೊಬ್ಬರವನ್ನ ಬಚ್ಚಿಟ್ಟು  ಹೆಚ್ಚಿನ ಬೆಲೆಗೆ ಮಾರಾಟ ಮಾಡಲು  ಯತ್ನಿಸಿದ ಆರೋಪ ಕೇಳಿಬಂದಿದ್ದು  ಸಂಗ್ರಹಿಸಿಟ್ಟ ಗೊಬ್ಬರ ದಾಸ್ತಾನು ಮೇಲೆ  ರೈತ ಮುಖಂಡರು ದಾಳಿ ನಡೆಸಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಪಟ್ಟಣದ ಗೌಸಿಯ ರೈಸ್ ಮಿಲ್ ನ ದಾಸ್ತಾನು ಕೇಂದ್ರದ ಮೇಲೆ ರೈತ ಸಂಘ ಮತ್ತು ಹಸಿರು ಸೇನೆಯ ಮುಖಂಡರು ದಾಳಿ ನಡೆಸಿದ್ದು ಮೂರು ಲಕ್ಷಕ್ಕೂ ಅಧಿಕ ಬೆಲೆ ಬಾಳುವ ರಾಸಾಯನಿಕ ಗೊಬ್ಬರ ಪತ್ತೆಯಾಗಿದೆ.

ಖಚಿತ ಮಾಹಿತಿಯ ಮೇರೆಗೆ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು ನಂಜನಗೂಡು ರೈತ ಸಂಘದ ಅಧ್ಯಕ್ಷ ಸಿಂಧುವಳ್ಳಿ ಸತೀಶ್ ರಾವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದು ತಕ್ಷಣವೇ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿದರು. ಗ್ರಾಮಾಂತರ ಠಾಣೆ ಪೊಲೀಸರೂ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು  ದಾಸ್ತಾನು ಕೊಠಡಿಯ ಬೀಗ ಹೊಡೆದು ನೋಡಿದಾಗ  200‌  ರಾಸಾಯನಿಕ ಯೂರಿಯಾ ಗೊಬ್ಬರದ ಮೂಟೆಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕ ಮಹಮ್ಮದ್ ಫಾಝಿಲ್ ರೆಹಮನ್  ಮೇಲೆ ಪ್ರಕರಣ ದಾಖಲಾಗಿದೆ.

ನೆರೆ ರಾಜ್ಯಕ್ಕೆ ಅಕ್ರಮ ರಸಗೊಬ್ಬರ ಸಾಗಾಟ ಯತ್ನ: 15 ಟನ್ ಗೂ ಹೆಚ್ಚು ರಸಗೊಬ್ಬರ ವಶ.

ನೆರೆ ರಾಜ್ಯಕ್ಕೆ ಅಕ್ರಮ ರಸಗೊಬ್ಬರ ಸಾಗಾಟ ಯತ್ನಿಸಿದ್ದು ಈ ವೇಳೆ ಕೃಷಿ ಅಧಿಕಾರಿಗಳು ದಾಳಿ ನಡೆಸಿ 15 ಟನ್ನಿಗೂ ಹೆಚ್ಚು ರಸಗೊಬ್ಬರವನ್ನ ವಶಕ್ಕೆ ಪಡೆದಿದ್ದಾರೆ.

ಗುಂಡ್ಲುಪೇಟೆ ಸುಲ್ತಾನ್ ಬತ್ತೇರಿ ಹೆದ್ದಾರಿ ಮೂಲೆಹೊಳೆ ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸಿದ್ದು ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಅಧಿಕಾರಿಗಳು‌ ಕಾರ್ಯಾಚರಣೆ ನಡೆಸಿ ರಸಗೊಬ್ಬರ ವಶಕ್ಕೆ ಪಡೆದಿದ್ದಾರೆ. ನಂಜನಗೂಡನಿಂದ ಕೇರಳದ ಸುಲ್ತಾನ್ ಬತ್ತೇರಿಗೆ ರಸಗೊಬ್ಬರ ಸಾಗಾಟ ಮಾಡಲು ಯತ್ನಿಸಿದ್ದು, ಈ ವೇಳೆ ಸಹಾಯಕ ಕೃಷಿ ನಿರ್ದೇಶಕರಾದ ಶಶಿಧರ್, ಕೃಷಿ ಅಧಿಕಾರಿ ಕಿರಣ್ ಕುಮಾರ್, ಸಿಬ್ಬಂದಿ ಕುಮಾರ್, ಸ್ವಾಮಿ, ಗಣೇಶ್, ಶರಣ್ ಸೇರಿದಂತೆ ಗುಂಡ್ಲುಪೇಟೆ ಪೋಲಿಸರ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತು ಗುಂಡ್ಲುಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: hiding, fertilizer ,selling , higher price, Farmer leaders, Attack