ಮಲೆನಾಡಲ್ಲಿ ಭರ್ಜರಿ ಮಳೆ: ಒಳನಾಡಲ್ಲಿ ಮುಂಗಾರು ಚುರುಕು, ರಾಜ್ಯಾದ್ಯಂತ ವ್ಯಾಪಿಸುವ ಮುನ್ಸೂಚನೆ

ಬೆಂಗಳೂರು:ಜುಲೈ-6: ರಾಜ್ಯದ ಒಳನಾಡು ಪ್ರದೇಶಗಳಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಶುಕ್ರವಾರ ಕರಾವಳಿ ಕರ್ನಾಟಕ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಬಿದ್ದಿದೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಪ್ರವೇಶ ವಿಳಂಬವಾಗಿತ್ತಲ್ಲದೆ, ಈವರೆಗೆ ದುರ್ಬಲವಾಗಿ ಕಂಡುಬಂದಿತ್ತು. ಇದೀಗ ಮಳೆ ರಾಜ್ಯವನ್ನು ವ್ಯಾಪಿಸುವ ಮುನ್ಸೂಚನೆ ಸಿಕ್ಕಿದ್ದು, ಆತಂಕದಲ್ಲಿದ್ದ ರೈತರಲ್ಲಿ ಕೊಂಚ ನಿರಾಳ ಭಾವ ಮೂಡಿಸಿದೆ.

ಜು.10ರವರೆಗೆ ದಕ್ಷಿಣಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡಿರುವ ಮೇಲ್ಮೈ ಸುಳಿಗಾಳಿ ಮುಂಗಾರು ಚುರುಕುಗೊಳ್ಳಲು ಕಾರಣ ಎಂದು ಹೇಳಲಾಗಿದೆ.

ಶುಕ್ರವಾರ ಕೊಟ್ಟಿಗೆಹಾರದಲ್ಲಿ 150, ಕಾರವಾರದಲ್ಲಿ 110, ಸಿದ್ದಾಪುರದಲ್ಲಿ 90, ಕೊಲ್ಲೂರು, ಗೇರುಸೊಪ್ಪದಲ್ಲಿ 80, ಕದ್ರ, ಮಂಚಿಕೇರಿ, ಹೊಸನಗರ, ಕಮ್ಮರಡಿಯಲ್ಲಿ 70 ಮಿಮೀ ಮಳೆ ಸುರಿದಿದೆ. ಮಂಗಳೂರಿನಿಂದ ಕಾರವಾರವರೆಗೆ ಕರಾವಳಿ ತೀರದಲ್ಲಿ ಎತ್ತರದ ಅಲೆಗಳು ಇರುವುದರಿಂದ ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಹೆದ್ದಾರಿಯಲ್ಲಿ ಬಿರುಕು

ಧಾರಾಕಾರ ಮಳೆ ಪರಿಣಾಮ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಶಾಸಕದ್ವಯರು, ಎಂಎಲ್​ಸಿ ಹಾಗೂ ಜಿಲ್ಲಾಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುರುವಾರ ಕಾಟಕೇರಿ ಬಳಿ ಕಾಣಿಸಿಕೊಂಡಿದ್ದ ಬಿರುಕಿನಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿತ್ತು. ಹೀಗಾಗಿ ಸ್ಥಳಕ್ಕೆ ಜನಪ್ರತಿನಿಧಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಕೊಡಗಿನಲ್ಲಿ 101 ಮಿಮೀ ಮಳೆ

ಭಾಗಮಂಡಲ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಅಬ್ಬರಿಸಲಾರಂಭಿಸಿದ್ದು, 24 ಗಂಟೆ ಅವಧಿಯಲ್ಲಿ ಭಾಗಮಂಡಲದಲ್ಲಿ 101.20 ಮಿ.ಮೀ. ಮಳೆ ಆಗಿದೆ. ಹಾರಂಗಿ ಜಲಾಶಯದ ಒಳಹರಿವಿನಲ್ಲಿ ತುಸು ಹೆಚ್ಚಳವಾಗಿದೆ. ಕಾವೇರಿ, ಲಕ್ಷ್ಮಣ ತೀರ್ಥದಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಜೂನ್​ನಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ತಳಮಟ್ಟ ತಲುಪಿದ್ದ ಜೀವನದಿ ಕಾವೇರಿ ಗತವೈಭವಕ್ಕೆ ಮರಳುತ್ತಿದೆ. ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ತುಂತುರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.

ಕೆಲವೆಡೆ ಶಾಲಾ-ಕಾಲೇಜು ರಜೆ

ಮಲೆನಾಡಿನಲ್ಲಿ ಆರಿದ್ರಾ ಮಳೆ ಆರ್ಭಟಿಸುತ್ತಿದ್ದು, ನದಿಗಳ ಹರಿವೂ ಗಮನಾರ್ಹವಾಗಿ ಏರಿದೆ. ಸಾಗರ, ಹೊಸನಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಘಟ್ಟ ಪ್ರದೇಶ, ಶರಾವತಿ ಮತ್ತು ತುಂಗಾ ನದಿ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಜೋಗ ಜಲಪಾತ ನೀರಿನಿಂದ ಕಂಗೊಳಿಸುತ್ತಿದೆ. ಲಿಂಗನಮಕ್ಕಿ ಅಣೆಕಟ್ಟೆಗೆ 10,880, ಭದ್ರಾ ಜಲಾಶಯಕ್ಕೆ 4,062 ಕ್ಯೂಸೆಕ್ ನೀರು ಬರುತ್ತಿದೆ. ತುಂಗಾ ಡ್ಯಾಂ ಭರ್ತಿ ಆಗಿರುವುದರಿಂದ 8,403 ಕ್ಯೂಸೆಕ್ ನೀರನ್ನು ನದಿ ಮೂಲಕ ಹೊಸಪೇಟೆ ಟಿಬಿ ಡ್ಯಾಂಗೆ ಹರಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಭದ್ರಾ ನದಿ ತುಂಬಿ ಹರಿಯಲಾರಂಭಿಸಿದೆ. ಮುಂಜಾಗ್ರತಾ ಕ್ರಮವಾಗಿ ಮೂಡಿಗೆರೆ ತಾಲೂಕಿನ ಶಾಲಾ-ಕಾಲೇಜುಗಳಿಗೆ ಶನಿವಾರ ರಜೆ ಘೊಷಿಸಲಾಗಿದೆ.

115.8 ಮಿಮೀ ಮಳೆ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ ತೀವ್ರಗೊಂಡಿದ್ದು, ಗುರುವಾರ ರಾತ್ರಿಯಿಂದ ಶುಕ್ರವಾರ ಸಂಜೆಯವರೆಗೆ ಕಾರವಾರದಲ್ಲಿ 115.8 ಮಿಮೀ ಮಳೆಯಾಗಿದೆ. ಅರಗಾ ನೌಕಾನೆಲೆ ಮುಖ್ಯ ದ್ವಾರದ ಸಮೀಪ ಹೆದ್ದಾರಿ ಮೇಲೆ ನೀರು ನಿಂತು ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಬಿಣಗಾ ಘಟ್ಟದಲ್ಲಿ ಕದಂಬ ನೌಕಾನೆಲೆಯ ತಡೆಗೋಡೆ ಕುಸಿದು ಬಿದ್ದಿದೆ.
ಕೃಪೆ:ವಿಜಯವಾಣಿ

ಮಲೆನಾಡಲ್ಲಿ ಭರ್ಜರಿ ಮಳೆ: ಒಳನಾಡಲ್ಲಿ ಮುಂಗಾರು ಚುರುಕು, ರಾಜ್ಯಾದ್ಯಂತ ವ್ಯಾಪಿಸುವ ಮುನ್ಸೂಚನೆ
heavy-rain-malenadu-shivamogga-flood-rain-water-mansoon