ಹೆಚ್.ಡಿ ರೇವಣ್ಣ ಪುತ್ರ  ಸೂರಜ್ ಮತ್ತು ಬೆಂಬಲಿಗರಿಂದ ಹಲ್ಲೆ ಆರೋಪ: ಗಾಯಗೊಂಡಿದ್ದ ಬಿಜೆಪಿ ಕಾರ್ಯಕರ್ತರ  ಆರೋಗ್ಯ ವಿಚಾರಿಸಿದ ಡಿಸಿಎಂ ಡಾ. ಅಶ್ವಥ್ ನಾರಾಯಣ್

ಬೆಂಗಳೂರು,ಡಿ,5,2019(www.justkannada.in): ಹೊಳೆನರಸೀಪುರದ ನಂಬಿಹಳ್ಳಿಯಲ್ಲಿ  ಮಾಜಿ ಸಚಿವ ಹೆಚ್.ಡಿ ರೇವಣ್ಣ ಪುತ್ರ ಹಾಗೂ ಬೆಂಬಲಿಗರಿಂದ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತರ ಆರೋಗ್ಯವನ್ನ ಡಿಸಿಎಂ ಅಶ್ವಥ್ ನಾರಾಯಣ್ ವಿಚಾರಿಸಿದರು.

ಬಿಬಿಎಂಪಿ ಬಿಜೆಪಿ ಸದಸ್ಯ ಆನಂದ್ ಹೊಸೂರು ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಮಾಜಿ ಸಚಿವ ಹೆಚ್‌. ಡಿ. ರೇವಣ್ಣ ಪುತ್ರ ಸೂರಜ್ ರೇವಣ್ಣ ಮತ್ತು ಬೆಂಬಲಿಗರು ಹಲ್ಲೆ  ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು ಈ ಕುರಿತು ಎಫ್ ಐಆರ್ ದಾಖಲಾಗಿದೆ.

ಹಲ್ಲೆ ವೇಳೆ ಗಾಯಗೊಂಡಿರುವ ಬಿಜೆಪಿ ಕಾರ್ಯಕರ್ತರು ಬೆಂಗಳೂರಿನ ಶಿವಾನಂದ ಸರ್ಕಲ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಇಂದು ಆಸ್ಪತ್ರೆಗೆ ಭೇಟಿ ನೀಡಿದ  ಡಿಸಿಎಂ ಡಾ. ಅಶ್ವಥ್ ನಾರಾಯಣ್ ಬಿಜೆಪಿ ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು.

ಬಳಿಕ ಮಾತನಾಡಿದ ಡಿಸಿಎಂ ಡಾ. ಅಶ್ವಥ್ ನಾರಾಯಣ್ , ನವೀನ್ ಮತ್ತು ಶಿವಾನಂದ ಅವರಿಗೆ ಮೂಳೆ ಮತ್ತು ತಲೆಗೆ ಗಾಯವಾಗಿದೆ. ಬಿಬಿಎಂಪಿ ಸದಸ್ಯ ಆನಂದ್ ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಕೆ.ಆರ್. ಪೇಟೆ ಕ್ಷೇತ್ರದಿಂದ ಹೊರಬಂದು ಹೊಳೆನರಸೀಪುರ ಕ್ಷೇತ್ರದ ನಂಬಿಹಳ್ಳಿಯಲ್ಲಿ ವಾಸ್ತವ್ಯ ಇದ್ದರು. ಅಲ್ಲಿಂದ ಹೊರಡುವ ಸಮಯದಲ್ಲಿ ಏಕಾಏಕಿ ಜೆಡಿಎಸ್ ಕಾರ್ಯಕರ್ತರು ಸೂರಜ್ ರೇವಣ್ಣ ನೇತೃತ್ವದಲ್ಲಿ ಮನೆಗೆ ನುಗ್ಗಿ ಸರ್ಚ್ ಮಾಡಿದ್ದಾರೆ. ಬಳಿಕ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಮನೆಯ ಐದು ಬಾಗಿಲು ಒಡೆದು ಹಾಕಿದ್ದಾರೆ. ಕಾನೂನು ಕೈಗೆ ತೆಗೆದುಕೊಂಡು ಗೂಂಡಾಗಿರಿ ಮಾಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಇವರು ಇದನ್ನೇ ಮಾಡಿಕೊಂಡು ಬಂದಿದ್ದಾರೆ ಎಂದು ಕಿಡಿಕಾರಿದರು.

ಸುಳ್ಳು ಕೇಸ್ ಹಾಕಿಕೊಂಡು ಜನರ ಮೇಲೆ ದಬ್ಬಾಳಿಕೆ ಮಾಡಿಕೊಂಡು ಬಂದವರು ಐಜಿಪಿ ಅವರನ್ನೇ ದಫೇದಾರ ಅಂತಾ ಕರೆದಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಆಗಬೇಕೆಂಬ ಒತ್ತಾಯ ಇದೆ. ಬಹಿರಂಗ ಪ್ರಚಾರ ಕೊನೆಗೊಂಡ ಬಳಿಕ ನಾವು ಕೆ.ಆರ್. ಪೇಟೆ ಕ್ಷೇತ್ರದಿಂದ ಹೊರಬಂದಿದ್ದೇವೆ. ಕೆ.ಆರ್. ಪೇಟೆ ಕ್ಷೇತ್ರದ ಸುತ್ತಮುತ್ತ ಯಾವ ಶಾಸಕರು ಇದ್ದಾರೆ ಎಂಬುದು ಗೊತ್ತಿದೆ. ಬಾಯಿಗೆ ಬಂದ ಹಾಗೆ ಹೇಳಿಕೆ ನೀಡಲು ಹೆಚ್. ಡಿ. ರೇವಣ್ಣ ಪ್ರಸಿದ್ಧರು. ರಾಜಕೀಯ ಮಾಡಲು ರೀತಿ ನೀತಿ ಇದೆ. ನಾವೂ ಕೂಡಾ ರಾಜಕೀಯ ಕಾರ್ಯಕರ್ತರೇ. ಅವರ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ಮಾಡೋದು ಎಷ್ಟು ಸರಿ?  ಬೇರೆ ಊರಿನಿಂದ ಹೋಗಿ ನಾವು ಅವರ ಕ್ಷೇತ್ರದಲ್ಲಿ ದಬ್ಬಾಳಿಕೆ ಮಾಡಲು ಸಾಧ್ಯವಾ? ನಾವೇನಾದರೂ ಪೌರುಷ ತೋರಲು ಸಾಧ್ಯವೇ? ಮಾಡಿದ ಪಾಪ ಅನುಭವಿಸಬೇಕಾಗುತ್ತದೆ. ಇಂತಹ ದೌರ್ಜನ್ಯ, ಕ್ರೌರ್ಯ ಎಷ್ಟು ದಿನ‌ ನಡೆಯಲು ಸಾಧ್ಯ? ಜನ ಇವರನ್ನು ಸಾಕಷ್ಟು ಸಹಿಸಿಕೊಂಡಿದ್ದಾರೆ. ಇವರ ದಬ್ಬಾಳಿಕೆ ಕೊನೆಯಾಗುವ ದಿನಗಳು ಬಂದಿದೆ, ಕೊನೆಯಾಗುತ್ತದೆ ಎಂದು ಕಿಡಿಕಾರಿದರು.

Key words: health – injured- BJP workers-dcm- Ashwath Narayan -HD Revanna –son- Suraj-assault