ಕಾಂಗ್ರೆಸ್ ಸಹಾಯದಿಂದ ಪಿಎಂ ಆಗಿದ್ದನ್ನು ಮರೆಯಬಾರದು-ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್

ಮೈಸೂರು,ಫೆಬ್ರವರಿ,10,2024(www.justkannada.in):  ಕಾಂಗ್ರೆಸ್ ಸಹಾಯದಿಂದ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದನ್ನು ಮರೆಯಬಾರದು. ಕಾಂಗ್ರೆಸ್ ಜಾತ್ಯತೀತ ನಿಲುವಿನಲ್ಲಿ ಬದ್ಧತೆ ಹೊಂದಿದ್ದ ಕಾರಣಕ್ಕಾಗಿಯೇ ಎಚ್. ಡಿ ದೇವೇಗೌಡರಿಗೆ ಪ್ರಧಾನಿ ಸ್ಥಾನಕ್ಕೆ ಬೆಂಬಲ ನೀಡಿತ್ತು ಎಂಬುದನ್ನು ಮರೆಯಬಾರದು ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಹೇಳಿದ್ದಾರೆ.

ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್, ಕಾಂಗ್ರೆಸ್ ಪಕ್ಷ ಅನೇಕರನ್ನು ಮುಖ್ಯಮಂತ್ರಿ, ಪ್ರಧಾನಮಂತ್ರಿಯನ್ನಾಗಿ ಮಾಡಿದೆ.  ತೃತೀಯ ರಂಗದಲ್ಲಿಅನೇಕರು ಹಿರಿಯರು ಇದ್ದರು. ಆಗ ಸೋನಿಯಾಗಾಂಧಿ ಅವರೇ ಕನ್ನಡಿಗರೊಬ್ಬರು ಪಿಎಂ ಆಗಲೆಂದು ಬಯಸಿ ದೇವೇಗೌಡರಿಗೆ  ಬೆಂಬಲ ನೀಡಿದರು. ಅದೇ ರೀತಿ ಕರ್ನಾಟಕದಲ್ಲಿ ಕಡಿಮೆ ಸ್ಥಾನ ಹೊಂದಿದ್ದರೂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಬೆಂಬಲ ನೀಡಿತ್ತು. ಕಾಂಗ್ರೆಸ್ ಮಾಡಿದ ಸಹಾಯವನ್ನು ಮರೆತು ಈಗ ಎನ್‌ಡಿಎ ಓಲೈಕೆಯ ಮಾತುಗಳನ್ನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.

ಶಾಸಕರು,ಸಚಿವರ ವಿಶ್ವಾಸದಿಂದ ಅಭಿವೃದ್ಧಿ ಕೆಲಸ ಮಾಡುವ ಬದಲಿಗೆ ಖಾಸಗಿ ಹೋಟೆಲ್‌ ನಲ್ಲಿ ಕುಳಿತು ಅಧಿಕಾರ ಮಾಡಲು ಮುಂದಾಗಿದ್ದರಿಂದ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರು. ಕುಮಾರಸ್ವಾಮಿ ಅವರ ಸ್ವಯಂಕೃತ ಅಪರಾಧದಿಂದ ಸರ್ಕಾರ ಪತನವಾಯಿತೆ ಹೊರತು ಕಾಂಗ್ರೆಸ್ ಕಾರಣವಾಗಿಲ್ಲ. ಈಗ ಎಚ್.ಡಿ.ದೇವೇಗೌಡರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಕಾಂಗ್ರೆಸ್ ಒಬ್ಬ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ  ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದೆ. ದೇಶದ ಜನರು ಎನ್‌ಡಿಎ ವಿರುದ್ಧ ನಿಂತಿದ್ದಾರೆ. ಬಿಜೆಪಿ 2024ರ ಲೋಕಸಭಾ ಚುನಾವಣೆಯಲ್ಲಿ ಶ್ರೀರಾಮನ ಹೆಸರಿನಲ್ಲಿ ಚುನಾವಣೆ ಮಾಡಲು ಹೊರಟಿದೆ. ಹತ್ತು ವರ್ಷಗಳ ಸಾಧನೆಗಳನ್ನ ಮುಂದಿಟ್ಟು ಜನರ ವಿಶ್ವಾಸ ಗಳಿಸಬೇಕಾಗಿತ್ತು. ಜನಮನ ಮನ್ನಣೆ ಸಿಗುವುದಿಲ್ಲವೆಂದು ತಿಳಿದ ನಂತರ ಶ್ರೀ ರಾಮನ ಜಪ ಪ್ರಾರಂಭಿಸಿದ್ದಾರೆ. ಬಿಜೆಪಿ – ಜೆಡಿಎಸ್ ಪ್ರಜಾತಂತ್ರಕ್ಕೆ ಮಾಡುತ್ತಿರುವ ದ್ರೋಹವನ್ನು  ಜನ ಕ್ಷಮಿಸುವುದಿಲ್ಲ ಎಂದು ಎಚ್.ಎ.ವೆಂಕಟೇಶ್ ಕಿಡಿಕಾರಿದ್ದಾರೆ.

Key words:  HD Devegowda – became- PM – help – Congress -HA Venkatesh