ಕೋವಿಡ್ ನಿಂದ ಮೃತಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ಉದ್ಯೋಗ ನೀಡುವಂತೆ ಹೆಚ್‌ಎಎಲ್ ಉದ್ಯೋಗಿಗಳ ಸಂಘಟನೆ ಕೋರಿಕೆ.

ಬೆಂಗಳೂರು, ಜೂನ್ 10, 2021 (www.justkannada.in): ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್‌ ನ (ಹೆಚ್‌ಎಎಲ್) ಕಾರ್ಮಿಕರ ಸಂಘಟನೆ, ದೇಶದಾದ್ಯಂತ ಇರುವಂತಹ ಸಾರ್ವಜನಿಕ ವಲಯದ ವಿಮಾನ ನಿರ್ಮಾಣ ಘಟಕಗಳಲ್ಲಿ ಕೆಲಸ ನಿರ್ವಹಿಸುತ್ತಿರುವಂತಹ ಕಾರ್ಮಿಕರ ಪೈಕಿ ಇತ್ತೀಚೆಗೆ ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟ ಸಿಬ್ಬಂದಿಗಳ ಕುಟುಂಬಗಳಲ್ಲಿನ ಅರ್ಹ ಅವಲಂಭಿತರಿಗೆ ಉದ್ಯೋಗ ಕಲ್ಪಿಸುವಂತೆ ಕೋರಿದೆ.jk

ಹೆಚ್‌ಎಎಲ್ ಸಿಎಂಡಿ ಆರ್. ಮಾಧವನ್ ಅವರಿಗೆ ಜೂನ್ 9 ರಂದು ಸಂಘಟನೆ ವತಿಯಿಂದ ಬರೆದಿರುವ ಪತ್ರವೊಂದರಲ್ಲಿ ಆಲ್ ಇಂಡಿಯಾ ಹೆಚ್‌ ಎಎಲ್ ಟ್ರೇಡ್ ಯೂನಿಯನ್ಸ್ ಕೋಆರ್ಡಿನೇಷನ್ ಕಮಿಟಿಯ (ಎಐಹೆಚ್‌ಟಿಯುಸಿಸಿ) ಸಂಚಾಲಕ ಸೂರ್ಯದೇವರ ಚಂದ್ರಶೇಖರ್ ಅವರು ಈ ರೀತಿ ಬರೆದಿದ್ದಾರೆ: “ಭಾರತಾದ್ಯಂತ ನಮ್ಮ ಘಟಕಗಳಲ್ಲಿ ಕೋವಿಡ್ ಸೋಂಕಿನಿಂದಾಗಿ 90 ಉದ್ಯೋಗಿಗಳನ್ನು ನಾವು ಕಳೆದುಕೊಂಡಿದ್ದೇವೆ. ಬೆಂಗಳೂರು ಒಂದರಲ್ಲೇ 60 ಉದ್ಯೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ, ಅದೇ ರೀತಿ ಲಕ್ನೊ, ನಾಸಿಕ್, ಆಗೂ ಕಾನ್ಪುರ್ ಘಟಕಗಳಲ್ಲಿಯೂ ಸಾವಿನ ಪ್ರಕರಣಗಳು ವರದಿಯಾಗಿವೆ. ಈ ರೀತಿ ಪ್ರಾಣ ಕಳೆದುಕೊಂಡವರ ಪೈಕಿ ಬಹುತೇಕರು 35 ಹಾಗೂ 45 ವರ್ಷಗಳ ಆಸುಪಾಸಿನವರಾಗದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಹತೆಯ ಮೇರೆಗೆ ಗಂಡ ಅಥವಾ ಹೆಂಡತಿಗೆ ಅಥವಾ ಮಕ್ಕಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವಂತೆ ನಾವು ನಿರ್ವಹಣಾ ಮಂಡಳಿಯನ್ನು ಕೋರಿದ್ದೇವೆ. ಆದರೆ ನಿರ್ವಹಣಾ ಮಂಡಳಿ ಇದಕ್ಕೆ ಇನ್ನೂ ಪ್ರತಿಕ್ರಿಯಿಸಬೇಕಿದೆ.”

“ಹೆಚ್‌ಎಎಲ್ ಒಂದು ಪಿಎಸ್‌ ಯು ಆಗಿದ್ದು, ಈ ಸಾಂಕ್ರಾಮಿಕದ ಸಮಯದಲ್ಲಿ ಈ ಸಂಸ್ಥೆ ಒಂದು ಮಾದರಿ ಉದ್ಯೋಗದಾತ ಸಂಸ್ಥೆಯಾಗಿ ಗುರುತಿಸಿಕೊಳ್ಳಬೇಕು ಮತ್ತು ಸಾಧ್ಯವಿರುವ ಎಲ್ಲಾ ರೀತಿಯಲ್ಲೂ ಪ್ರಾಣಕಳೆದುಕೊಂಡಿರುವ ಉದ್ಯೋಗಿಗಳ ಕುಟುಂಬಗಳಿಗೆ ಸಹಾಯಹಸ್ತ ನೀಡಬೇಕು,” ಎಂದು ಮನವಿ ಮಾಡಿದ್ದಾರೆ.

ಮುಂದುವರೆದು ಪತ್ರದಲ್ಲಿ, “ಮಡಿದ ಉದ್ಯೋಗಿಗಳ ಪೈಕಿ ಬಹುತೇಕರು ಮಧ್ಯಮ ವಯಸ್ಕರಾಗಿದ್ದು, ಅವರವರ ಕುಟುಂಬಗಳ ಏಕೈಕ ದುಡಿಯುವ ವ್ಯಕ್ತಿಗಳಾಗಿದ್ದರು. ಹೆಚ್‌ಎಎಲ್ ದೇಶದಾದ್ಯಂತ ಒಂಬತ್ತು ವಿವಿಧ ಭಾಗಗಳಲ್ಲಿ ತನ್ನ ಘಟಕಗಳನ್ನು ಹೊಂದಿದ್ದು, ಒಟ್ಟು 25,000 ಉದ್ಯೋಗಿಗಳಿದ್ದಾರೆ. ಈ ಪೈಕಿ ಬಹುಪಾಲು ಉದ್ಯೋಗಿಗಳು ಬೆಂಗಳೂರಿನ ಘಟಕಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ,” ಎಂದು ವಿವರಿಸಲಾಗಿದೆ.

ಮಾರ್ಚ್ ಹಾಗೂ ಏಪ್ರಿಲ್ 2020ರಲ್ಲಿ ಆಗಿದ್ದಂತಹ ಮೊದಲ ಲಾಕ್‌ ಡೌನ್ ಅವಧಿಯಲ್ಲಿ ಹೆಚ್‌ ಎಎಲ್ ಘಟಕಗಳನ್ನು 32 ದಿನಗಳ ಕಾಲು ಮುಚ್ಚಲಾಗಿತ್ತು ಹಾಗೂ ಕೋವಿಡ್ ಸೋಂಕಿನ ಎರಡನೆ ಅಲೆ, ಅಂದರೆ ಈ ವರ್ಷ ಮಾರ್ಚ್ ಹಾಗೂ ಮೇ ತಿಂಗಳುಗಳ ನಡುವೆ ಉದ್ಯೋಗಿಗಳ ಜೀವ ಉಳಿಯಲು ಘಟಕಗಳನ್ನು ಮುಚ್ಚುವಂತೆ ಸಂಘಟನೆಯ ನಾಯಕರು ಕಂಪನಿಯನ್ನು ಕೋರಿದ್ದರು.

“ಒಂದು ದಿನಕ್ಕೆ ನಾಲ್ಕು ಜನ ಸಹೋದ್ಯೋಗಿಗಳು ಸಾಯುತ್ತಿರುವುದನ್ನು ನಾವು ಕೇಳಿದೆವು. ಹಾಗಾಗಿ ನಾವು ಘಟಕವನ್ನು ಮುಚ್ಚುವಂತೆ ಹಾಗೂ ಶಟ್‌ ಡೌನ್ ಅವಧಿಯ ಕೆಲಸವನ್ನು ಭವಿಷ್ಯದಲ್ಲಿ ಭಾನುವಾರಗಳು ಅಥವಾ ಇತರೆ ರಜಾ ದಿನಗಳಂದು ಕೆಲಸ ಮಾಡುವ ಮೂಲಕ ಸರಿಹೊಂದಿಸುವಂತೆ ನಿರ್ವಹಣಾ ಮಂಡಳಿಯನ್ನು ಕೋರಿದೆವು,” ಎಂದು ಸಂಘಟನೆಯ ಸಂಚಾಲಕರು ತಿಳಿಸಿದ್ದಾರೆ.

“ಕಳೆದ ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕ ಅವಧಿಯ ಆರಂಭದ ತಿಂಗಳುಗಳಲ್ಲಿ ಲಾಕ್‌ ಡೌನ್‌ನಿಂದಾಗಿ ಉತ್ಪಾದನೆ ಕಡಿಮೆಯಾಗಿತ್ತು, ಆದರೆ ಕೊನೆಯ ತ್ರೈಮಾಸಿಕ ಅವದಿಯಲ್ಲಿ ನಾವು ಕೆಲಸದ ಗುರಿಯನ್ನು ಸಾಧಿಸಿದೆವು ಹಾಗೂ ಹೆಚ್‌ಎಎಲ್ ಲಾಭವನ್ನೂ ದಾಖಲಿಸಿತು. ಈ ವರ್ಷವೂ ಸಹ ನಾವು ಉತ್ಪಾದನಾ ಗುರಿಗಳನ್ನು ಸಾಧಿಸುತ್ತೇವೆ ಎಂದು ಖಾತ್ರಿಪಡಿಸಿದ್ದೇವೆ,” ಎಂದು ಸೂರ್ಯದೇವರ ತಿಳಿಸಿದ್ದಾರೆ.

ಮಾರ್ಚ್ 2020ರಲ್ಲಿ ಹೆಚ್‌ಎಎಲ್ ತನ್ನ ಸಿಎಸ್‌ಆರ್ ಫಂಡ್ ನಿಂದ ರೂ.20 ಕೋಟಿಗಳನ್ನು ಪ್ರಧಾನ ಮಂತ್ರಿ ತುರ್ತು ಸಂದರ್ಭಗಳಲ್ಲಿ ನಾಗರಿಕ ಬೆಂಬಲ ಹಾಗೂ ಪರಿಹಾರ (ಪಿಎಂ-ಕೇರ್ಸ್) ನಿಧಿಗೆ ಒದಗಿಸಿದೆ ಹಾಗೂ ಹೆಚ್‌ಎಎಲ್‌ ನ ಉದ್ಯೋಗಿಗಳೂ ಸಹ ತಮ್ಮ ಒಂದು ದಿನದ ವೇತನವನ್ನು ತ್ಯಾಗ ಮಾಡಿದ್ದು, ಈ ಮೂಲಕ ರೂ.೬.೨೫ ಕೋಟಿ ನಿಧಿಯನ್ನು ಒದಗಿಸಲಾಗಿದೆ.

“ಇದು ಹೆಚ್‌ಎಲ್ ವತಿಯಿಂದ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ಸರ್ಕಾರದ ಪ್ರಯತ್ನಗಳಿಗೆ ನಮ್ಮ ಒಂದು ಸಣ್ಣ ಸಹಾಯವಾಗಿದೆ,” ಎಂದು ಹೆಚ್‌ಎಎಲ್ ಸಿಎಂಡಿ ಆರ್. ಮಾಧವನ್ ಹೇಳಿದ್ದಾರೆ.

ಮೂಲ: ಇಂಡಿಯನ್ ಎಕ್ಸ್ಪ್ರೆಸ್

Key words: HAL- Employees-Organization- requests- employment – staff – died – Covid.