ವಾಹನ ಖರೀದಿ ದುಬಾರಿ: ಪೆಟ್ರೋಲ್, ಡೀಸೆಲ್ ವೆಹಿಕಲ್​ಗಳ ನೋಂದಣಿ ಶುಲ್ಕ ಏರಿಕೆ

ನವದೆಹಲಿ:ಜುಲೈ-28: ದೇಶದ ಆರ್ಥಿಕತೆ ಮೇಲೆ ಬೀಳುತ್ತಿರುವ ಇಂಧನ ಹೊರೆ ಇಳಿಸುವ ಜತೆಗೆ ಪೆಟ್ರೋಲ್, ಡೀಸೆಲ್ ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಎರಡು ಪ್ರಮುಖ ನಿರ್ಧಾರವನ್ನು ಕೈಗೊಂಡಿದೆ. ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳ ಮೇಲೆ ಹೆಚ್ಚಿನ ಶುಲ್ಕ ವಿಧಿಸಿ, ವಿದ್ಯುತ್ ಚಾಲಿತ ವಾಹನಗಳ ತೆರಿಗೆ ಇಳಿಕೆ ಮಾಡಲು ನಿರ್ಧರಿಸಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿಯು ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ಕಡಿತಗೊಳಿಸಿದ್ದರೆ, ಇಂಧನ ಚಾಲಿತ ವಾಹನಗಳ ಮೇಲಿನ ನೋಂದಣಿ ಶುಲ್ಕವನ್ನು 10ರಿಂದ 20 ಪಟ್ಟು ಏರಿಸುವ ಬಗ್ಗೆ ಕೇಂದ್ರ ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಶನಿವಾರ ಬೆಳಗ್ಗೆ ಜಿಎಸ್​ಟಿ ಮಂಡಳಿ ಸಭೆ ನಡೆಯಿತು. ಜು. 25ರಂದು ನಡೆಯಬೇಕಿದ್ದ ಈ ಸಭೆಯನ್ನು ಲೋಕಸಭಾ ಅಧಿವೇಶನದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಇ-ವಾಹನಗಳ ಮೇಲಿನ ತೆರಿಗೆ ಇಳಿಕೆ ಸಭೆಯ ಪ್ರಮುಖ ಕಾರ್ಯಸೂಚಿಯಾಗಿತ್ತು.

ನೋಂದಣಿ ಶುಲ್ಕ ಹೆಚ್ಚಳ

ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ನೋಂದಣಿ ಶುಲ್ಕವನ್ನು ಕನಿಷ್ಠ 10 ಪಟ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರ ಹಣಕಾಸು ಸಚಿವಾಲಯದ ಮುಂದೆ ಈ ಪ್ರಸ್ತಾವನೆ ಇದೆ. ಇದು ಜಾರಿಯಾದರೆ ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ಎಲ್ಲ ವಾಹನಗಳ ನೋಂದಣಿ ಹಾಗೂ ನವೀಕರಣ ಶುಲ್ಕ ಹೆಚ್ಚಾಗಲಿದೆ. ಈಗಾಗಲೇ ಭಾರತದ ವಾಹನೋದ್ಯಮ ಸಂಕಟದಲ್ಲಿದ್ದು, ನೋಂದಣಿ ಶುಲ್ಕ ಹೆಚ್ಚಳ ಮಾಡಿದರೆ ಗಾಯದ ಮೇಲೆ ಬರೆ ಎಳೆದಂತಾಗಬಹುದು ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ವಾಹನ ಸುರಕ್ಷತೆ ಹಾಗೂ ಇಂಧನ ಬಳಕೆ ಕುರಿತು ನಿಯಮಗಳು ಕಠಿಣಗೊಳ್ಳುತ್ತಿರುವುದರಿಂದ ವಾಹನ ಬೆಲೆ ಹೆಚ್ಚಾಗುತ್ತಿದೆ. ಬಿಎಸ್-6 ನಿಯಮಾವಳಿಗಳಿಂದ ವಾಹನ ಬೆಲೆ ಹೆಚ್ಚಾಗಲಿದೆ. ಹೀಗಾಗಿ 2020ರಿಂದ ವಾಹನಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಬಹುದು.

ಇ-ವಾಹನ ಅಗ್ಗ

ಇ-ವಾಹನಗಳ ಮೇಲಿನ ಜಿಎಸ್​ಟಿಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸಲಾಗಿದ್ದರೆ, ವಾಹನಗಳ ಚಾರ್ಜರ್ ಮೇಲಿನ ಜಿಎಸ್​ಟಿಯನ್ನು ಶೇ.18ರಿಂದ ಶೇ. 5ಕ್ಕೆ ತಗ್ಗಿಸಲಾಗಿದೆ. ಇವೆರಡು ತೆರಿಗೆ ಬದಲಾವಣೆಗಳು ಆ. 1ರಿಂದ ಅನ್ವಯವಾಗಲಿದೆ. 12ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುವ ಇ-ಬಸ್​ಗಳಿಗೆ ಸಂಪೂರ್ಣ ಜಿಎಸ್​ಟಿ ವಿನಾಯಿತಿ ನೀಡಲಾಗಿದೆ. ಈ ತೆರಿಗೆ ವಿನಾಯಿತಿಗಳು ಸ್ಥಳೀಯ ಪ್ರಾಧಿಕಾರಗಳ ಬಸ್ ಖರೀದಿಗೆ ಅನ್ವಯವಾಗಲಿದೆ.

ಇ-ಜಮಾನಕ್ಕೆ ಸರ್ಕಾರ ಸಾಥ್

ಭಾರತದಲ್ಲಿ ಇ-ವಾಹನಗಳ ಜನಪ್ರಿಯತೆ ಹಾಗೂ ಖರೀದಿ ಹೆಚ್ಚಿಸಲು ಕಳೆದ ಎರಡು ವರ್ಷಗಳಿಂದ ಕೇಂದ್ರ ಸರ್ಕಾರ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಸರ್ಕಾರ ಇಲಾಖೆಗಳಿಗೆ ಇ-ಕಾರು ಖರೀದಿ ಕಡ್ಡಾಯಗೊಳಿಸಿದೆ. ಇದರ ಜತೆಗೆ ನೋಂದಣಿ ಶುಲ್ಕ ವಿನಾಯಿತಿ ನೀಡಲಾಗಿತ್ತು. ಕಳೆದ ಬಜೆಟ್​ನಲ್ಲಿಯೂ ಇ-ಕಾರು ಖರೀದಿದಾರರಿಗೆ 1.5 ಲಕ್ಷ ರೂ. ಬಡ್ಡಿ ಮೊತ್ತಕ್ಕೆ ಆದಾಯ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಈಗಾಗಲೇ ಇ-ವಾಹನ ತಯಾರಿಕೆಯ ಕೆಲ ಬಿಡಿಭಾಗಗಳ ಮೇಲೆ ಆಮದು ಸುಂಕ ತೆಗೆದುಹಾಕಲಾಗಿದೆ. ಇ-ವಾಹನಗಳ ಖರೀದಿ ಹೆಚ್ಚಳಕ್ಕೆ ಫೇಮ್ ಯೋಜನೆ ಜಾರಿಗೆ ತಂದಿದ್ದು, ಈ ವಲಯಕ್ಕೆ ಬೇಕಿರುವ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ. ನೀಡಿದೆ.

ಇ-ವಾಹನಗಳಿಗೆ ಸಂಬಂಧಿಸಿ ಭಾರತ ಸಮಗ್ರ ಯೋಜನೆ ತಯಾರಿಸಿದೆ. ಬ್ಯಾಟರಿ ಉತ್ಪಾದನೆ ಸೇರಿ ಎಲ್ಲ ರೀತಿಯ ಇ-ವಾಹನಗಳ ಉತ್ಪಾದನೆ ಹಾಗೂ ಮಾರುಕಟ್ಟೆಗೆ ಒತ್ತು ನೀಡಲಾಗುವುದು. ಭವಿಷ್ಯದ ಭಾರತ ನಿರ್ವಣಕ್ಕೆ ಇದು ಅನಿವಾರ್ಯ ಕೂಡ.

| ಅಮಿತಾಬ್ ಕಾಂತ್, ನೀತಿ ಆಯೋಗ ಸಿಇಒ


ಕೃಪೆ:ವಿಜಯವಾಣಿ

ವಾಹನ ಖರೀದಿ ದುಬಾರಿ: ಪೆಟ್ರೋಲ್, ಡೀಸೆಲ್ ವೆಹಿಕಲ್​ಗಳ ನೋಂದಣಿ ಶುಲ್ಕ ಏರಿಕೆ
gst-council-trims-rate-on-electric-vehicles-chargers-to-5-pc