ಪುಸ್ತಕೋದ್ಯಮವನ್ನು ಸರ್ಕಾರ ಬೆಂಬಲಿಸಬೇಕು: ‘ಬಹುರೂಪಿ’ ಸಂವಾದದಲ್ಲಿ ಹೊಮ್ಮಿದ ಅಭಿಪ್ರಾಯ

ಬೆಂಗಳೂರು, ಮೇ 27, 2023 (www.justkannada.in): ಪುಸ್ತಕೋದ್ಯಮಕ್ಕೆ ತಮಿಳುನಾಡು ಸರಕಾರ ನೀಡುತ್ತಿರುವ ಪ್ರೋತ್ಸಾಹ ಮಾದರಿಯುತವಾಗಿದ್ದು ಕರ್ನಾಟಕದಲ್ಲಿಯೂ ಪುಸ್ತಕೋದ್ಯಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಮಾದರಿಯನ್ನು ಅಳವಡಿಸಿಕೊಳ್ಳಬೇಕು ಎಂದು ತಮಿಳಿನ ಹೆಸರಾಂತ ಸಾಹಿತಿ, ಪ್ರಕಾಶಕರಾದ ಪೊನ್ ವಾಸುದೇವನ್ ಅವರು ಅಭಿಪ್ರಾಯಪಟ್ಟರು.

‘ಬಹುರೂಪಿ’ ಪ್ರಕಾಶನ ಇಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪುಸ್ತಕೋದ್ಯಮ ಇಂದು ಆತಂಕವನ್ನು ಎದುರಿಸುತ್ತಿದೆ. ನಾಳಿನ ಪೀಳಿಗೆಗೆ ಓದುವ ಸಂಸ್ಕೃತಿಯನ್ನು ಉಳಿಸಬೇಕಾದರೆ ಸರ್ಕಾರ ಪ್ರಕಾಶನ ರಂಗಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಾದ ಅವಶ್ಯಕತೆ ಇದೆ ಎಂದರು.

ಡಿಎಂಕೆ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲಾ ಮಟ್ಟದಲ್ಲಿ ನಡೆಸುತ್ತಿರುವ ಪುಸ್ತಕ ಮೇಳಗಳು ಹಾಗೂ ಕೈಗೆತ್ತಿಕೊಂಡಿರುವ ಹಲವು ರೀತಿಯ ಸಗಟು ಖರೀದಿ ಯೋಜನೆಗಳು ಪುಸ್ತಕೋದ್ಯಮ ಉಸಿರಾಡುವಂತೆ ಮಾಡಿದೆ.

ಓದುವ ಸಂಸ್ಕೃತಿಯನ್ನು ಯಾವೆಲ್ಲಾ ರಾಜ್ಯಗಳು ರಕ್ಷಿಸಿವೆಯೋ ಅಲ್ಲೆಲ್ಲ ಪುಸ್ತಕ ಉದ್ಯಮ ಸಂಪನ್ನವಾಗಿದೆ. ಹಾಗಾಗಿ ಓದುವ ಸಂಸ್ಕೃತಿಯನ್ನು ರಕ್ಷಿಸುವ ಕಡೆಗೆ ಗಮನ ಕೊಡಬೇಕಾದ ಹೊಣೆ ಎಲ್ಲರದ್ದು ಎಂದು ವಾಸುದೇವನ್ ತಿಳಿಸಿದರು.

ಈ ಸಂದರ್ಭದಲ್ಲಿ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಕೆ ನಲ್ಲತಂಬಿ ಅವರನ್ನು ‘ಬಹುರೂಪಿ’ ಸನ್ಮಾನಿಸಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಪುಸ್ತಕ ಎನ್ನುವುದು ಅರಿವಿನ ಭಾಗ. ನಮ್ಮ ಜ್ಞಾನ ವೃದ್ಧಿಗೆ ಪುಸ್ತಕ ಓದುವ ಹವ್ಯಾಸ ಎಲ್ಲೆಡೆಯೂ ಪ್ರಸರಿಸಬೇಕಿದೆ. ಸಾಹಿತ್ಯದ ಸಹವಾಸ ನನ್ನ ವ್ಯಕ್ತಿತ್ವವನ್ನು ರೂಪಿಸಿದೆ ಎಂದು ತಿಳಿಸಿದರು.

ಬಹುರೂಪಿಯ ಸಂಸ್ಥಾಪಕರಾದ ಜಿ ಎನ್ ಮೋಹನ್, ಶ್ರೀಜಾ ವಿ ಎನ್, ಕಲಾವಿದರಾದ ಗುಜ್ಜಾರ್, ಆರ್ ಸೂರಿ, ಸಾಹಿತಿ ರಂಜನಿ ಪ್ರಭು, ಸಂಸ್ಕೃತಿ ಚಿಂತಕ ಜಿ ಎನ್ ನಾಗರಾಜ್ ಅವರು ಸಂವಾದ ನಡೆಸಿದರು.