ಜಲಕ್ರಾಂತಿಯ ಕಾಮೇಗೌಡರ ಪುತ್ರನಿಗೆ ಉದ್ಯೋಗ ಕೊಡುವ ಭರವಸೆ ಈಡೇರಿಸಿಲ್ಲ- ಸರ್ಕಾರದ ವಿರುದ್ಧ ಸಿದ್ಧರಾಮಯ್ಯ ಟೀಕೆ.

ಬೆಂಗಳೂರು,ಅಕ್ಟೋಬರ್,18,2022(www.justkannada.in): ಸುಳ್ಳು ಭರವಸೆ ನೀಡುವುದರಲ್ಲಿ ನಿಸ್ಸೀಮನಾಗಿರುವ ಬಿಜೆಪಿ ಸರ್ಕಾರ ಮಳವಳ್ಳಿ ಜಲಕ್ರಾಂತಿಯ ಕಾಮೇಗೌಡ ಅವರ ಪುತ್ರನಿಗೆ ಸರ್ಕಾರಿ ಉದ್ಯೋಗ ಕೊಡುವ ಭರವಸೆಯನ್ನೂ ಈಡೇರಿಸಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿದ್ಧರಾಮಯ್ಯ, ಪ್ರಧಾನಿ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ನಲ್ಲಿ ಕಾಮೇಗೌಡರ ಜಲಕ್ರಾಂತಿಯನ್ನು ಪ್ರಸ್ತಾಪಿಸಿದ್ದರು. ಬಳಿಕ 2020ರ ಜುಲೈ 2 ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಮೇಗೌಡರ ಇಬ್ಬರು ಪುತ್ರರಲ್ಲಿ ಒಬ್ಬರಿಗೆ ಅವರ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಸರ್ಕಾರಿ ನೌಕರಿ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಇದಾಗಿ ಎರಡು ವರ್ಷಗಳು ಕಳೆದು ಕಾಮೇಗೌಡರು ನಿಧನರಾದರೂ ಇವರ ಪುತ್ರನಿಗೆ ಸರ್ಕಾರ ಕೆಲಸ ನೀಡಲಾಗಿಲ್ಲ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರು ತಮ್ಮ ಜಮೀನು ಮತ್ತು ಸುತ್ತ ಮುತ್ತಲ ಸ್ಥಳಗಳಲ್ಲಿ 16 ಸಣ್ಣ ಕೆರೆ ಕಟ್ಟೆಗಳನ್ನು ನಿರ್ಮಿಸಿ ಸದ್ದಿಲ್ಲದೆ ಪರಿಸರ ಸೇವೆಯಲ್ಲಿ ಮತ್ತು ರೈತ ಸಮುದಾಯಕ್ಕೆ ನೆರವಾಗುವ ಕಾರ್ಯ ಮಾಡಿದ್ದನ್ನು ಯಾರೂ ಮರೆಯುವಂತಿಲ್ಲ. ಈ ಕಾರ್ಯವನ್ನು ಪ್ರಧಾನಿ ಮೋದಿ ಅವರು ತಮ್ಮ ಮನ್ ಕಿ ಬಾತ್‌ ನಲ್ಲಿ ಪ್ರಸ್ತಾಪಿಸಿದ್ದು ಸ್ವಾಗತಾರ್ಹ. ಆದರೆ ಆ ಬಳಿಕ ಒಂದೇ ಬಿಜೆಪಿ ಸರ್ಕಾರದ ಇಬ್ಬರು ಮುಖ್ಯಮಂತ್ರಿಗಳು ಬಂದರೂ ಇಬ್ಬರ ಅವಧಿಯಲ್ಲೂ ಕಾಮೇಗೌಡರ ಪುತ್ರನಿಗೆ ಸರ್ಕಾರಿ ಕೆಲಸ ಒದಗಿಸಲು ಸಾಧ್ಯವಾಗಿಲ್ಲ. ಇದು ಮನ್ ಕಿ ಬಾತ್ ಮತ್ತು ಸರ್ಕಾರದ ನಕಲಿತನಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.

ಕಾಮೇಗೌಡರ ಪುತ್ರನಿಗೆ ಸರ್ಕಾರಿ ಕೆಲಸ ಎಂದು ಬಿಜೆಪಿ ಸರ್ಕಾರ ಭರ್ಜರಿ ಪ್ರಚಾರ ಗಿಟ್ಟಿಸಿತ್ತು. ಪ್ರಚಾರದ ಬಳಿಕ ಏನಾದರೂ ಕೆಲಸ ಆಗಿದೆಯೇ ಎಂದು ಪರೀಕ್ಷಿಸಿದರೆ ಏನೇನೂ ಆಗಿಲ್ಲ. ಕಾಮೇಗೌಡರ ಇಬ್ಬರು ಪುತ್ರರಲ್ಲಿ ಒಬ್ಬನಿಗೆ ಕೆಲಸ ಕೊಡುವುದಿರಲಿ, ಇವರ ಕುಟುಂಬದ ವಾರ್ಷಿಕ ಆದಾಯ-ಮತ್ತಿತರೆ ವಿವರಗಳನ್ನು ಸಂಗ್ರಹಿಸುವುದಕ್ಕೂ ಇಬ್ಬರು ಮುಖ್ಯಮಂತ್ರಿಗಳ ಅವಧಿಯಲ್ಲೂ ಸಾಧ್ಯವಾಗಿಲ್ಲ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾಮೇಗೌಡರ ಕುಟುಂಬದ ಆದಾಯ ಮತ್ತು ಇತರೆ ವಿವರಗಳನ್ನು ಒದಗಿಸುವಂತೆ ಕೋರಿ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಇದುವರೆಗೂ ಆರು ಪತ್ರಗಳನ್ನು ಬರೆದಿದೆ. 2020 ರಿಂದ 2021ರ ಡಿಸೆಂಬರ್‌ ವರೆಗೂ ಒಟ್ಟು ಆರು ಪತ್ರಗಳನ್ನು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ಬರೆಯಲಾಗಿದೆ. ಕೊನೆಯ ಪತ್ರದಲ್ಲಿ “ಅವಶ್ಯವಿರುವ ವರದಿಯನ್ನು ನೀಡಲು ಒಂದು ವರ್ಷಕ್ಕೂ ಹೆಚ್ಚಿನ ಅವಧಿಗೆ ಸ್ಪಂದಿಸದಿರುವುದು ವಿಷಾಧಕರ” ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು ಪ್ರಸ್ತಾಪಿಸಿದ್ದಾರೆ. ಆದರೂ ಮಂಡ್ಯ ಜಿಲ್ಲಾಧಿಕಾರಿಗಳಿಂದ ಇದುವರೆಗೂ ಸರ್ಕಾರಕ್ಕೆ ವರದಿ ಬಂದಂತೆ ಕಾಣುತ್ತಿಲ್ಲ. ಕಾಮೇಗೌಡರ ಕುಟುಂಬಕ್ಕೆ ಸರ್ಕಾರಿ ಕೆಲಸ ಸಿಕ್ಕಿಲ್ಲ.

ಇದು ಸರ್ಕಾರದ ಕಾರ್ಯಕ್ಷಮತೆಗೆ ಸ್ಪಷ್ಟ ಉದಾಹರಣೆಯಾಗಿದೆ. ಮುಖ್ಯಮಂತ್ರಿಗಳೇ ಸೂಚಿಸಿದ ಕೆಲಸವೂ ಕೂಡ ಈ ಸರ್ಕಾರದಲ್ಲಿ ಆಗುವುದಿಲ್ಲ. ಬಹುಶಃ 40% ಕಮಿಷನ್ ಸಿಗದ ಕಾರಣಕ್ಕೆ ಸರ್ಕಾರದ ಕಾರ್ಯಕ್ಷಮತೆ ಕುಸಿದಿರಬಹುದು ಎನ್ನುವ ಅನುಮಾನ ಈ ಪ್ರಕರಣದಲ್ಲೂ ಗೋಚರಿಸುತ್ತಿದೆ.

ಕಾಮೇಗೌಡರು ಬದುಕಿರುವವರೆಗಾದರೂ ತಮ್ಮ ಮಕ್ಕಳಿಗೆ ಸರ್ಕಾರಿ ಉದ್ಯೋಗ ನೀಡುವ ಸರ್ಕಾರದ ಭರವಸೆ ಈಡೇರಿದ್ದನ್ನು ನೋಡಲು ಸಾಧ್ಯವಾಗಲಿಲ್ಲ. ಈಗ ಕಾಮೇಗೌಡರ ನಿಧನದ ಬಳಿಕವಾದರೂ ಈ ಕುಟುಂಬಕ್ಕೆ ಸರ್ಕಾರದ ನೆರವು ಸಿಗಬೇಕು.

ಆದ್ದರಿಂದ ಸರ್ಕಾರದ ಭರವಸೆ ಕೇವಲ ಪೇಪರ್ ಮೇಲೆ ಮಾತ್ರ ಉಳಿಯಬಾರದು. ಆದಷ್ಟು ಬೇಗ ಕಾಮೇಗೌಡರ ಕುಟುಂಬದ ವಿವರಗಳನ್ನು ಸರ್ಕಾರ ತರಿಸಿಕೊಂಡು ಅಗತ್ಯ ನೆರವನ್ನು ಒದಗಿಸಬೇಕು. ಒಬ್ಬ ಪುತ್ರನಿಗೆ ಸರ್ಕಾರಿ ಕೆಲಸ ನೀಡಬೇಕು. ಆರು ಬಾರಿ ಪತ್ರ ಬರೆದರೂ ವರದಿ ನೀಡದ ಮಂಡ್ಯ ಜಿಲ್ಲಾಧಿಕಾರಿಗಳು ಮತ್ತು ಇತರರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು  ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

Key words:  government-promise – employment -Kamegowda’s- son-Siddaramaiah

Assurance of job to  Kamegowda’s son not fulfilled: Siddaramaiah criticizes State Govt.
Bengaluru, October 18, 2022 (www.justkannada.in): Leader of the Opposition in the Assembly Siddaramaiah has criticized the State Government mentioning it as a party of lies, and not fulfilling the promise of providing job to the  Kamegowda’s son.
The Prime Minister Narendra Modi had spoken about Kamegowda’s revolutionary water conservation works in his ‘Man Ki Baat’ program. On July 2, 2020, the Chief Minister B.S. Yediyurappa had promised to provide a government job to one of the two sons of Kamegowda based on the educational qualification. But, now Kamegowda is no more, but the government is yet to give a job to his son,” he alleged.
Kamegowda was instrumental in constructing 16 small tanks in and around his land at Dasanadoddi Village, in Malavalli Taluk, of Mandya District. He had also involved in conservation of environment and development of greenery, and we cannot forget his contributions. The PM Modi had spoken about the contributions of Kamegowda in ‘Man Ki Baat,’ and I welcom it. But, after that to Chief Ministers have come in the BJP government. But they couldn’t provide a job. It is a proof for the fake ‘Man Ki Baat.’
Keywords: Siddaramaiah/ Kamegowda/ BJP Govt./ job