ರಾಜ್ಯದ ಕುಡಿಯುವ ನೀರು ಹಾಗೂ ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ವಿಫಲ- ಮಾಜಿ ಸಿಎಂ ಬೊಮ್ಮಾಯಿ ಕಿಡಿ.

ಬೆಂಗಳೂರು.ಆಗಸ್ಟ್,31,2023(www.justkannada.in):  ರಾಜ್ಯದಲ್ಲಿ ನೀರಿನ ಅಭಾವ ಸೃಷ್ಠಿಯಾಗಿದ್ದರೂ ಸಹ ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವ ನಡೆಯನ್ನ ಖಂಡಿಸಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು,  ಸರ್ಕಾರ ಕಾವೇರಿ ವಿಷಯದಲ್ಲಿ ಮೊದಲಿನಿಂದಲೂ ಎಡವುತ್ತ ಬಂದಿದೆ. ಈಗಾಗಲೇ ಸಿಡಬ್ಲುಎಂಎ ಆದೇಶದಂತೆ 10 ಸಾವಿರ ಕ್ಯೂಸೆಕ್ಸ್ ನಂತೆ ಸುಮಾರು 15 ಟಿಎಂಸಿ ನೀರು ಬಿಟ್ಟಿದೆ ಆದರೂ ಅದರ ವಿರುದ್ದ ಯಾವುದೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.

ಈಗ ಸಿಡಬ್ಲುಎಂಎ ಸೂಚನೆ ಮೇರೆಗೆ 5000 ಕ್ಯುಸೆಕ್ಸ್ ನೀರು ಬಿಡಲು ಪ್ರಾರಂಭ ಮಾಡಿದ ಮೇಲೆ ಡಿಸಿಎಂ ಅವರು ಕಾನೂನು ತಜ್ಞರ ಜೊತೆ ಚರ್ಚೆ ಮಾಡುವುದರಲ್ಲಿ ಯಾವ ಅರ್ಥ ಇದೆ. ಹಿಂದಿನ ಆದೇಶದ ವಿರುದ್ದ ಈಗಾಗಲೇ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬೇಕಾಗಿತ್ತು, ಅದು ಕೂಡ ಮಾಡಿಲ್ಲ.

ಈಗ ನೀರು ಬಿಡುತ್ತಿರುವುದರಿಂದ ಕಾನೂನು ಹೋರಾಟಕ್ಕೆ ಅರ್ಥವಿಲ್ಲ. ಕೂಡಲೇ ನೀರು ನಿಲ್ಲಿಸಿ‌ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ ತೀವ್ರವಾದಂತಹ ಮನವರಿಕೆ ಮಾಡುವ ಮೂಲಕ ಕಾನೂನು ಹೋರಾಟ ಮಾಡಬೇಕೆಂದು ಆಗ್ರಹ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯದ ಕುಡಿಯುವ ನೀರು ಹಾಗೂ ರೈತರ ಹಿತಾಸಕ್ತಿ ಕಾಪಾಡಲು ವಿಫಲವಾಗಿದೆ ಎಂದು ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

Key words: government – failed – protect – drinking water – farmers – former CM -Bommai Kidi.