ಜಿ.ಎನ್.ಮೋಹನ್ ಸ್ಪೆಷಲ್: ಇನ್ನೆಂದೂ ಈ ಮಣ್ಣಲಿ ಭೋಪಾಲ್ ಗಳು ಬೇಡ…

ಇನ್ನೆಂದೂ ಈ ಮಣ್ಣಲಿ
ಭೋಪಾಲ್ ಗಳು ಬೇಡ…
—————–
– ಜಿ ಎನ್ ಮೋಹನ್

ಲಂಡನ್ ನ ಸೌತ್ ವಾರ್ಕ್ ನಲ್ಲಿ ಒಲಂಪಿಕ್ ಜ್ಯೋತಿಯನ್ನು ಹೊತ್ತ ಅಮಿತಾಬ್ ಬಚನ್ ಹೆಮ್ಮೆಯಿಂದ ಹೆಜ್ಜೆ ಹಾಕುತ್ತಿದ್ದರು. ಕಿಕ್ಕಿರಿದ ಜನಸಂದಣಿಯತ್ತ ಕೈ ಬೀಸುತ್ತಾ ಮುಂದೆ ಮುಂದೆ ಸಾಗಿದ್ದರು.

ಆದರೆ ಅದೇ ವೇಳೆ ಭೂಪಾಲದಲ್ಲಿ ಇದೇ ಒಲಂಪಿಕ್ಸ್ ಕಾರಣಕ್ಕೇ ನೂರಾರು ಮಂದಿ ಸೇರಿದ್ದರು.

ನಡೆಯಬೇಕೆಂದರೆ ಎಷ್ಟೋ ಜನಕ್ಕೆ ಕಾಲುಗಳೇ ಇರಲಿಲ್ಲ. ಏನಾದರೂ ಹಿಡಿಯಬೇಕೆಂದರೆ ಕೈಗಳೂ ಇರಲಿಲ್ಲ. ಏಕೆ ಇಲ್ಲಿ ಸೇರಿದ್ದೇವೆ ಎಂದು ತಿಳಿಯಬೇಕೆಂದರೆ ಹಲವರಿಗೆ ಮಾನಸಿಕ ಸ್ವಾಸ್ತ್ಯವೂ ಇರಲಿಲ್ಲ.

ಅಲ್ಲಿದ್ದ ತಾಯಂದಿರ ಕಣ್ಣಲ್ಲಿ ನೀರಿತ್ತು. ತಮ್ಮ ಏಳಲಾಗದ, ಓಡಲಾಗದ ಮಕ್ಕಳನ್ನು ತಳ್ಳು ಖುರ್ಚಿಯಲ್ಲಿ ಕೂರಿಸಿಕೊಂಡು ಅವರು ಹೆಜ್ಜೆ ಹಾಕುತ್ತಿದ್ದರು.

ಲಂಡನ್ ಒಲಂಪಿಕ್ಸ್ ನ್ನು ವಿರೋಧಿಸಿ ಇಲ್ಲಿ ನಡೆಯುತ್ತಿದ್ದುದು ಪ್ಯಾರಾ ಒಲಂಪಿಕ್ಸ್.

ಅಲ್ಲಿ ಅಮಿತಾಬ್ ಬಚನ್ ಕೈನಲ್ಲಿ ಒಲಂಪಿಕ್ ಜ್ಯೋತಿ ಇದ್ದರೆ, ಇಲ್ಲಿದ್ದವರ ಕೈಯಲ್ಲಿ ಪೊರಕೆಗಳಿದ್ದವು.

ಅಮಿತಾಬ್ ಒಲಂಪಿಕ್ಸ್ ನ್ನು ಜಗತ್ತಿನ ಹೆಮ್ಮೆ ಎಂದು ಬಣ್ಣಿಸುತ್ತಿದ್ದರೆ, ಇಲ್ಲಿ ಎಲ್ಲರೂ ‘ಲಂಡನ್ ಒಲಂಪಿಕ್ಸ್, ನಿನ್ನ ಕೈಗೆ ರಕ್ತ ಮೆತ್ತಿದೆ’ ಎಂದು ಘೋಷಣೆ ಕೂಗುತ್ತಿದ್ದರು.

ಅದು 1984, ಡಿಸೆಂಬರ್ ಎರಡು ಹಾಗೂ ಮೂರರ ನಡುವಣ ರಾತ್ರಿ.
ಭೂಪಾಲಕ್ಕೆ ಆಗ ಗಾಢ ನಿದ್ದೆ.

ಇದ್ದಕ್ಕಿದ್ದಂತೆ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ನುಸುಳಿ ಹೊರ ಬಂದ ಅನಿಲ ಊರಿಗೆ ಊರನ್ನೇ ಆವರಿಸಿಕೊಳ್ಳತೊಡಗಿತು.

ಮಲಗಿದ್ದವರನ್ನು ನಿದ್ದೆಯಲ್ಲೇ ಇಲ್ಲವಾಗಿಸಿತು. ಎದ್ದಿದ್ದವರನ್ನು ಇದ್ದಲ್ಲೇ ಹೊಸಕಿ ಹಾಕಿತು. ಆ ಅನಿಲಕ್ಕೆ ಕರುಣೆಯ ಕಣ್ಣು ಎನ್ನುವುದೇ ಇರಲಿಲ್ಲ.

ಇಡೀ ಜಗತ್ತಿಗೇ ಜಗತ್ತೇ ಬೆಚ್ಚಿ ಬಿದ್ದು ಕೂತಿತು. ಭೂಪಾಲದ ಯೂನಿಯನ್ ಕಾರ್ಬೈಡ್ ಸಂಸ್ಥೆ ‘ಜಗತ್ತಿನ ಅತ್ಯಂತ ದೊಡ್ಡ ಕೈಗಾರಿಕಾ ದುರಂತ’ಕ್ಕೆ ಕಾರಣವಾಗಿ ಹೋಯಿತು.

ಅದಾಗಿ 28 ವರ್ಷಗಳು ಕಳೆದಿದೆ. ಸಾವಿನ ಎಣಿಕೆ ಮಾತ್ರ ಇನ್ನೂ ಮುಗಿದಿಲ್ಲ. ಮಧ್ಯಪ್ರದೇಶ ಸರ್ಕಾರ ಸತ್ತವರ ಸಂಖ್ಯೆಯನ್ನು 5295 ಎಂದು ಸಾರಿದೆ. ಆ ಸರ್ಕಾರಕ್ಕೆ ಆ ದಿನ ಸಂಭವಿಸಿದ ಸಾವು ಮಾತ್ರ ಲೆಕ್ಕ.

ಆದರೆ ಭಾರತ ವೈದ್ಯಕೀಯ ಸಂಶೋಧನಾ ಮಂಡಳಿ ದುರಂತದ ದಿನ ಹಾಗೂ ಅನಂತರ ಅನಿಲದ ಕಾರಣದಿಂದಾಗಿ ಸತ್ತವರ ಸಂಖ್ಯೆಯನ್ನು 25 ಸಾವಿರ ಎಂದು ಗುರುತಿಸಿದೆ.

5 ಲಕ್ಷಕ್ಕೂ ಹೆಚ್ಚು ಮಂದಿ ಒಂದಲ್ಲಾ ಒಂದು ರೀತಿ ಈ ಅನಿಲ ದುರಂತಕ್ಕೆ ಈಡಾಗಿದ್ದಾರೆ ಎನ್ನುವುದು ಮಾತ್ರ ನಿರ್ವಿವಾದ.

ಈ ದುರಂತ ನಡೆದು ದಶಕಗಳಾದರೂ ಈ ಅನಿಲ ಮಾತ್ರ ಸಾವಿನ ಕುಣಿಕೆಯನ್ನು ಇನ್ನೂ ಬಿಗಿ ಮಾಡುತ್ತಲೇ ನಡೆದಿದೆ. ಭೂಪಾಲದ ನೀರು ಕಲುಪಿತವಾಗಿದೆ. ಭೂಮಿ ವಿಷಮಯವಾಗಿದೆ. ಈ ನೀರು, ಈ ನೆಲವಲ್ಲದೆ ಬದುಕುವ ಬೇರೆ ಮಾರ್ಗವೂ ಇಲ್ಲದ ಜನ ಅಂಗವಿಕಲತೆಗೆ ಪಕ್ಕಾಗುತ್ತಲೇ ಇದ್ದಾರೆ.

ಅವರೆಲ್ಲರ ಬೇಡಿಕೆ ಒಂದೇ- ನಮ್ಮ ನೀರು, ನಮ್ಮ ನೆಲವನ್ನು ಸ್ವಚ್ಛ ಮಾಡಿಕೊಡಿ ಎಂದು. ಅದಕ್ಕಾಗಿಯೇ ಪೊರಕೆಯ ಮೆರವಣಿಗೆ.

ಲಂಡನ್ ಒಲಂಪಿಕ್ಸ್ ಜಗತ್ತಿಗೆ ಸುಂದರತೆಯ ಸಂದೇಶ ರವಾನಿಸುತ್ತಿದ್ದರೆ, ಇಲ್ಲಿ ಜಗತ್ತಿಗೆ ಕರಾಳತೆಯ ಸಂದೇಶದ ರವಾನೆಯಾಗುತ್ತಿದೆ.

ಲಂಡನ್ ಒಲಂಪಿಕ್ಸ್ ನ ಪ್ರಾಯೋಜಕರಾಗಿ ‘ಡೋ ಕೆಮಿಕಲ್ಸ್’ ಕಂಪನಿಯನ್ನು ಸೇರಿಸಿಕೊಂಡಿದ್ದೆ ತಡ ಭೂಪಾಲದ ಸಂತ್ರಸ್ಥರು ರೊಚ್ಚಿಗೆದ್ದರು.

ಯೂನಿಯನ್ ಕಾರ್ಬೈಡ್ ಸಂಸ್ಥೆಯ ಮಾಲೀಕತ್ವ ಈಗ ಡೋ ಕೆಮಿಕಲ್ಸ್ ನ ಕೈನಲ್ಲಿದೆ. ಡೋ ಕೆಮಿಕಲ್ಸ್ ಸಂಸ್ಥೆ ನಮ್ಮ ನೀರು, ನೆಲವನ್ನು ಸ್ವಚ್ಛ ಮಾಡಿಕೊಡುವ ಹೊಣೆಗಾರಿಕೆಯಿಂದ ಜಾರಿಕೊಂಡಿದೆ, ಹಾಗಾಗಿ ಆ ಸಂಸ್ಥೆಯನ್ನು ಒಲಂಪಿಕ್ಸ್ ನಿಂದ ಹೊರಗಿಡಿ ಎಂಬ ಒತ್ತಡವನ್ನು ಭೂಪಾಲ ಸಂತ್ರಸ್ಥರು ಅಂತರರಾಷ್ಟ್ರೀಯ ಒಲಂಪಿಕ್ಸ್ ಸಮಿತಿಯ ಮೇಲೆ ಹೇರಿದರು.

‘ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಳುವಿನ ಚಾರಿತ್ರ್ಯದ ಬಗ್ಗೆ ಪ್ರಮಾಣ ಪತ್ರವನ್ನು ಪಡೆದುಕೊಳ್ಳುತ್ತೀರಿ. ಆದರೆ ಪ್ರಾಯೋಜಕರ ಚಾರಿತ್ರ್ಯವನ್ನು ಯಾಕೆ ಪರಿಶೀಲಿಸುವುದಿಲ್ಲ?’ ಎಂದು ಭಾರತದ 25 ಒಲಂಪಿಯನ್ ಗಳು ಒಲಂಪಿಕ್ ಸಮಿತಿಯನ್ನು ಪ್ರಶ್ನಿಸಿದರು.

ಐದು ತಿಂಗಳ ಕೂಸಾಗಿದ್ದಾಗ ಅನಿಲದ ಈ ದಾಳಿಯಲ್ಲಿ ತನ್ನ ತಂದೆ ತಾಯಿ ಬಂಧುಗಳನ್ನು ಕಳೆದುಕೊಂಡ ಸಂಜಯ್ ವರ್ಮ ಯುರೋಪಿನಲ್ಲಿ ತನ್ನ ಕಥೆಯನ್ನು ಎಲ್ಲರ ಮುಂದೆ ಹರಡಿದ.

ಇದು ಲಂಡನ್ ನಲ್ಲೂ ಪ್ರತಿರೋಧದ ಅಲೆ ಏಳಲು ಕಾರಣವಾಯಿತು. ಲಂಡನ್ ಅಸೆಂಬ್ಲಿಯ ಸದಸ್ಯ ನವೀನ್ ಷಾ ಖುದ್ದಾಗಿ ಭೂಪಾಲಕ್ಕೆ ಭೇಟಿ ಕೊಟ್ಟು ಸಂತ್ರಸ್ತರ ನೋವಿಗೆ ಕಿವಿಯಾದರು. ಡೋ ಕೆಮಿಕಲ್ಸ್ ವಿರುದ್ಧ ಲಂಡನ್ ನಲ್ಲಿ ಸಹಿ ಅಭಿಯಾನಕ್ಕೆ ಕಾರಣರಾದರು.

ಆದರೆ ಅಂತರರಾಷ್ಟ್ರೀಯ ಒಲಂಪಿಕ್ಸ್ ಸಮಿತಿ ‘ಈ ದುರಂತ ನಡೆದಾಗ, ದುರಂತದ ಬಗ್ಗೆ ನ್ಯಾಯಾಲಯ ತೀರ್ಪು ನೀಡುವಾಗ ಡೋ ಕೆಮಿಕಲ್ಸ್ ಸಂಸ್ಥೆ ಅದರ ಮಾಲೀಕರಾಗಿರಲಿಲ್ಲ’ ಎಂಬುದನ್ನು ಮುಂದೆ ಮಾಡಿ ಭಾರತ ಒಲಂಪಿಕ್ಸ್ ಸಂಸ್ಥೆ ಮಾಡಿದ್ದ ಮನವಿಯನ್ನು ತಳ್ಳಿಹಾಕಿತು.

ಇದು ಭೂಪಾಲ ಸಂತ್ರಸ್ತರ ಎದೆಯಲ್ಲಿ ಆಳವಾದ ಒಂದು ಗಾಯಕ್ಕೆ ಕಾರಣವಾಗಿದೆ.

‘ಒಂದು ಸಂಸ್ಥೆಯನ್ನು ಕೊಳ್ಳುವುದು ಎಂದರೆ ಅದು ಮಾಡಿದ ಅಪರಾಧ, ಹಾನಿಗಳನ್ನೂ ಕೊಳ್ಳುವುದು ಎಂದೇ ಅರ್ಥ’ ಎಂದು ಸಂತ್ರಸ್ಥರು ಗಟ್ಟಿ ದನಿಯಲ್ಲಿ ಹೇಳಿದ್ದಾರೆ.

ಲಂಡನ್ ಒಲಂಪಿಕ್ಸ್ ನಡೆಯುವ ಪ್ರಧಾನ ಕ್ರೀಡಾಂಗಣಕ್ಕೆ ಬಣ್ಣ ಬಣ್ಣದ ಬಟ್ಟೆ ತೊಡಿಸುವ ಕೆಲಸವನ್ನು ಈ ಡೋ ಸಂಸ್ಥೆ ಹೊತ್ತುಕೊಂಡಿದೆ. ಇದಕ್ಕೆ ಖರ್ಚು ಮಾಡುತ್ತಿರುವ ಹಣ 100 ದಶಲಕ್ಷ ಡಾಲರ್.

ಸತತ ಸಾವು, ನೋವು ಕಾಡುತ್ತಿರುವ ಅನಿಲ ಸಂತ್ರಸ್ಥರಿಗೆ ಯೂನಿಯನ್ ಕಾರ್ಬೈಡ್ ಪರಿಹಾರ ಎಂದು ಕೊಡಲು ಒಪ್ಪಿದ್ದು ತಾನು ಕೊಡಬೇಕಾಗಿದ್ದ ವಿಮೆಯ ಹಣ ಮಾತ್ರ. ಆದರೆ ಈ ವಿವಾದ ಸುಪ್ರೀಂ ಕೋರ್ಟ್ ನ ಮೆಟ್ಟಿಲೇರಿದಾಗ ಸಂಸ್ಥೆ ವಿಮೆಯ ಜೊತೆಗೆ ಸೇರಿಸಿ ಕೊಡಲು ಒಪ್ಪಿದ್ದು ಅದರ ಬಡ್ಡಿ ಹಣವನ್ನು ಮಾತ್ರ.

ಅಂದರೆ 470 ದಶಲಕ್ಷ ಡಾಲರ್ ಮಾತ್ರ. ಅಂದರೆ ಒಬ್ಬ ಸಂತ್ರಸ್ಥನಿಗೆ ಕೇವಲ 25 ರಿಂದ 50 ಸಾವಿರ ಮಾತ್ರ. ಸತ್ತವರ ಕುಟುಂಬಕ್ಕೆ 10 ಲಕ್ಷ, ಅಂಗವಿಕಲರಾದವರಿಗೆ 5 ಲಕ್ಷ ನೀಡಬೇಕೆಂಬ ಆಗ್ರಹದ ಮುಂದೆ ಡೊ ಕೆಮಿಕಲ್ಸ್ ನೀಡಲು ಮಂದಾಗಿದ್ದು ಇಷ್ಟು ಮಾತ್ರ.

ಅನಿಲ ದುರಂತ ನಮ್ಮ ಸುತ್ತಲಿನ ಗಾಳಿ, ನೀರನ್ನೇ ಆವರಿಸಿ ಕೂತಿದೆ. ಸದ್ದಿಲ್ಲದೆ ಸಾವು ಹೆಜ್ಜೆ ಹಾಕುತ್ತಿದೆ ಎನ್ನುವುದು ಪ್ರತಿಯೊಬ್ಬ ಸಂತ್ರಸ್ಥನಿಗೂ ಗೊತ್ತು. ಹಾಗಾಗಿಯೇ ಇಲ್ಲಿನ ನೀರು ನೆಲವನ್ನು ಸ್ವಚ್ಛ ಮಾಡಿಕೊಡಿ ಎಂಬ ಬಲವಾದ ಬೇಡಿಕೆಯನ್ನು ಮುಂದಿಟ್ಟಿದೆ.

ಈ ಬೇಡಿಕೆ ಅಮೇರಿಕಾ ನ್ಯಾಯಾಲಯದ ಮುಂದೆಯೂ ಬಂದಿದ್ದು ಅಲ್ಲಿನ ನ್ಯಾಯಾಲಯ ಡೋ ಕೆಮಿಕಲ್ಸ್ ಈ ಯಾವುದೇ ಹೊಣೆ ಹೊರಬೇಕಾಗಿಲ್ಲ ಎಂದು ತೀರ್ಪು ನೀಡಿದೆ.

ತನ್ನ ದೇಶದ 250ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳ ತಂಡದೊಂದಿಗೆ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಬಂದಿಳಿದಾಗ ಭೂಪಾಲ ಅನಿಲ ಸಂತ್ರಸ್ಥರು ಬೀದಿಗಿಳಿದರು. 8 ಬಿಲಿಯ ಡಾಲರ್ ಪರಿಹಾರ ಕೊಡಿಸುವಂತೆ ಒಬಾಮಾಗೆ ಆಗ್ರಹಿಸಿದರು.

ಇಷ್ಟೆಲ್ಲಾ ಆದರೂ ಒಲಂಪಿಕ್ಸ್ ಸಮಿತಿ ಡೋ ಕೆಮಿಕಲ್ಸ್ ಗೆ ಬೆಂಗಾವಲಾಗಿ ನಿಂತಿದೆ. ಇದು ಸಂತ್ರಸ್ಥರನ್ನು ಇನಷ್ಟು ಕೆರಳಿಸಿದೆ.

ಲಂಡನ್ ಮೇಯರ್ ಬೋರಿಸ್ ಜಾನ್ಸನ್, ಒಲಂಪಿಕ್ಸ್ ಸಂಘಟನಾ ಸಮಿತಿಯ ಅಧ್ಯಕ್ಷ ಸೆಬಾಸ್ಟಿಯನ್ ಕೊ ಗೆ ‘ಬನ್ನಿ ಒಂದೇ ಒಂದು ಲೋಟ ಭೂಪಾಲದ ನೀರು ಕುಡಿದು ನೋಡಿ’ ಎಂದು ಸವಾಲು ಹಾಕಿದೆ.

ಭೂಪಾಲ ಅನಿಲ ಸಂತ್ರಸ್ಥರ ಹೋರಾಟದ ಹುಮ್ಮಸ್ಸು ಮಾತ್ರ ದೊಡ್ಡದು. ಹಾಗಾಗಿಯೇ ದಶಕಗಳ ಕಾಲ ತಮ್ಮ ಹೋರಾಟವನ್ನು ಜೀವಂತವಾಗಿರುವಂತೆ ನೋಡಿಕೊಂಡಿದ್ದಾರೆ. ಒಲಂಪಿಕ್ಸ್ ಗಿರುವ ಡೋ ಎಂಬ ಕರಾಳ ಮುಖವನ್ನು ಬಯಲು ಮಾಡಲು ಯಶಸ್ವಿಯೂ ಆಗಿದ್ದಾರೆ.

ಈ ಕಾರಣಕ್ಕಾಗಿಯೇ ಒಲಂಪಿಕ್ಸ್ ನೈತಿಕತೆ ಸಮಿತಿಯ ಮುಖ್ಯಸ್ಥೆ ಮೆರೆದಿತ್ ಅಲೆಕ್ಸಾಂಡರ್ ತಮ್ಮ ಜವಾಬ್ದಾರಿಗೆ ರಾಜಿನಾಮೆ ನೀಡಿದರು.

ಒಲಂಪಿಕ್ಸ್ ಸ್ಟೇಡಿಯಂ ಸುತ್ತಾ ಡೋ ಕೆಮಿಕಲ್ಸ್ ಹೊದಿಸಿದ ರಂಗು ರಂಗಿನ ವಸ್ತ್ರದಲ್ಲಿ ತನ್ನ ಲಾಂಛನವನ್ನು ಎಲ್ಲಿಯೂ ಬಳಸದಂತೆ ಒಲಂಪಿಕ್ಸ್ ಸಮಿತಿ ತಾಕೀತು ಮಾಡಿತು.

ಇವೆಲ್ಲವೂ ದೊಡ್ಡ ಹೋರಾಟದ ಹಾದಿಯಲ್ಲಿ ಸಿಕ್ಕ ಪುಟ್ಟ ಪುಟ್ಟ ಜಯ.

ಒಂದಷ್ಟು ವರ್ಷಗಳ ಹಿಂದೆ ‘ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್’ ತನ್ನ ನಾಟಕ ತಂಡದೊಂದಿಗೆ ಬೆಂಗಳೂರಿಗೆ ಬಂದಿತ್ತು.

‘ಇನ್ನೆಂದೂ ಈ ಮಣ್ಣಲಿ ಭೋಪಾಲ್ ಗಳ್ ಬೇಡ…’ ಎಂದು ಆ ನಟರು ಹಾಡುತ್ತಿದ್ದ ಹಾಡು ಇನ್ನೂ ನನ್ನ ಕಿವಿಯಲ್ಲಿ ಗುಂಯ್ ಗುಟ್ಟುತ್ತಿದೆ.


ಇಲ್ಲಿರುವ ಫೋಟೋ ರಘುವೀರ್ ರಾಯ್ ಅವರದ್ದು. ಭೂಪಾಲ ದುರಂತದ ಬಗ್ಗೆ ಅವರು ತೆಗೆದ ಫೋಟೋಗಳು ಜಗತ್ತಿನಾದ್ಯಂತ ಆಕ್ರೋಶದ ಅಲೆ ಏಳಲು ಕಾರಣವಾಯಿತು. ಸಂತ್ರಸ್ಥರ ನೋವನ್ನು ಪರಿಣಾಮಕಾರಿಯಾಗಿ ತಲುಪಿಸಿತು.