ಜಿ.ಎನ್ ಮೋಹನ್ ಸ್ಪೆಷಲ್: ಬೆಸಗರಹಳ್ಳಿ ರಾಮಣ್ಣಎಂಬ ಕೊಡೆ..

ಬೆಸಗರಹಳ್ಳಿ ರಾಮಣ್ಣ
ಎಂಬ ಕೊಡೆ..
—–
ಆ ‘ಹುಡುಗ’ ನನ್ನೆದುರು ಕುಳಿತಿದ್ದ.
ಆತನ ಕಣ್ಣುಗಳಲ್ಲಿ ಇನ್ನಿಲ್ಲದ ನೋವು ಮಡುಗಟ್ಟಿತ್ತು. ಆಗಲೋ ಈಗಲೋ ಹೊರಗೆ ಜಾರಲು ಕಣ್ಣೀರು ಕಾದು ಕುಳಿತಿತ್ತು.
ಆ ಹುಡುಗನ ಎದೆಯಲ್ಲಿ ನೆನಪುಗಳ ಬತ್ತಲಾರದ ಗಂಗೆಯೊಂದು ಅಡಗಿ ಕುಳಿತಿತ್ತು.
ಆ ‘ಹುಡುಗ’ ಇನ್ನಾರೂ ಅಲ್ಲ, ಕನ್ನಡ ಕಥಾ ಲೋಕವನ್ನು ಮಗ್ಗುಲು ಬದಲಾಯಿಸುವಂತೆ ಮಾಡಿದ ‘ಒಂದು ಹುಡುಗನಿಗೆ ಬಿದ್ದ ಕನಸು’ ವಿನ ಹುಡುಗ- ರವಿಕಾಂತೇಗೌಡ.
ಕನ್ನಡ ಓದುಗರು ಪ್ರೀತಿಯಿಂದ ರಾಮಣ್ಣ ಎಂದು ಎದೆಗೆ ಹಚ್ಚಿಕೊಂಡ ಬೆಸಗರಹಳ್ಳಿ ರಾಮಣ್ಣ ಬರೆದ ಕಥೆಗಳು ಕನ್ನಡ ಸಾಹಿತ್ಯ ಲೋಕಕ್ಕೆ ಮಾನವೀಯತೆಯ ಬೆಸುಗೆ ಹಾಕಿದವು.
ಆಧುನಿಕತೆ ಹೆಜ್ಜೆ ಹಾಕಲು ಸಜ್ಜಾಗುತ್ತಿದ್ದ ಸಮಯದಲ್ಲಿ ಹಳ್ಳಿಯ ಒಡಲು ಅನುಭವಿಸುತ್ತಿದ್ದ ತುಮುಲವನ್ನು ಬೆಸಗರಹಳ್ಳಿ ರಾಮಣ್ಣ ಹೊರಗೆ ಹಾಕಿದ್ದರು.
ಅಂತಹ ಸಾಲಿನಲ್ಲಿ ಬಂದ ಒಂದು ಮಹತ್ವದ ಕಥೆ- ಒಂದು ಹುಡುಗನಿಗೆ ಬಿದ್ದ ಕನಸು.
ರವಿಕಾಂತೇಗೌಡರನ್ನು ನಾನು ನೇರಾ ನೇರಾ ಕೇಳಿದೆ
‘ಆ ಹುಡುಗ ನೀವೇನಾ ?’.
ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಒಂದೇ ಕ್ಷಣಕ್ಕೆ ತಮ್ಮ ಬಾಲ್ಯಕ್ಕೆ ಜಾರಿಹೋಗಿದ್ದರು.
ಅವರ ಕಣ್ಣುಗಳು ಒಂದು ಭಯ, ಒಂದು ಮಿನುಗು ಎರಡನ್ನೂ ಹೊತ್ತಿತ್ತು.
ತಾನು ಕಂಡ ಕನಸೊಂದು ಅಪ್ಪನ ಕಥೆಗೆ ಆಹಾರವಾಯಿತಲ್ಲಾ ಎಂದು ಕಣ್ಣು ಮಿನುಗುತ್ತಿದ್ದರೆ, ಕಂಡ ಆ ಕನಸು ಅವರೊಳಗೆ ಒಂದು ಭಯವನ್ನು ಹುಟ್ಟು ಹಾಕಿತ್ತು.
ಆ ‘ಹುಡುಗ’ ಯಾರು ಎಂದು ನನಗೆ ಗೊತ್ತಾಗಿ ಹೋಗಿತ್ತು.
ಆ ‘ಕನಸು’ ಏನು ಎಂಬುದು ಗೊತ್ತಾಗುವುದು ಮಾತ್ರ ಬಾಕಿಯಿತ್ತು. ‘ಏನದು ಕನಸು ?’ ಎಂದು ಕೇಳಿದೆ.
‘ಕತ್ತಲೆ, ಬೆಳಕು, ಅರಮನೆ, ಮೃಗಾಲಯ. ನಟ್ಟನಡುರಾತ್ರಿ ನಾನು ಕೂಗುತ್ತಾ ಹಾಸಿಗೆಯ ಮೇಲೆ ಎದ್ದು ಕುಳಿತೆ, ಒಂದು ಕನಸು ಒಡೆದು ಹೋಗಿತ್ತು. ಅದು ಒಡೆದು ಹೋದ ಕನಸು’ ಎಂದರು.
ಬೆಸಗರಹಳ್ಳಿ ರಾಮಣ್ಣ ತಮ್ಮ ಬದುಕು ಹಾಗೂ ಕಥೆಯ ನಡುವೆ ಎಂದೂ ಒಂದು ಕೋಟೆಯನ್ನು ಕಟ್ಟಿದವರೇ ಅಲ್ಲ. ಹಾಗಾಗಿಯೇ ಆ ‘ಒಂದು ಹುಡುಗನಿಗೆ ಬಿದ್ದ ಕನಸು’ ಒಂದು ದೇಶದ, ಒಂದು ಸಮಾಜದ ಕನಸಾಗಿ ಬದಲಾಯಿಸುತ್ತಾ ಹೋದರು.
ದಾರಿಯುದ್ದಕ್ಕೂ ಹಸಿರು ಚಿಮ್ಮಿಸುತ್ತಾ ಇದ್ದ ಗದ್ದೆಗಳನ್ನು ನೋಡುತ್ತಾ ಮಂಡ್ಯ ತಲುಪಿದ ನನಗೆ ಒಮ್ಮೆ ನನ್ನ ಕಣ್ಣನ್ನೇ ನಂಬಲಾಗದ ಸ್ಥಿತಿ.
ಮಂಡ್ಯದ ಆ ಕಲಾಮಂದಿರದ ಅಂಗಳ ವಸ್ತುಶಃ ಒಂದು ಕರ್ನಾಟಕವಾಗಿ ಬದಲಾಗಿ ಹೋಗಿತ್ತು. ಬೆಸಗರಹಳ್ಳಿ ರಾಮಣ್ಣನವರ ನೆನಪಿನ ಕಂದೀಲು ಸದಾ ಉರಿಯುತ್ತಲೇ ಇರುವಂತೆ ನೋಡಿಕೊಳ್ಳಲು ಡಾ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಕಥೆಗಾರರಿಗೆ ಕೊಡುವ ಪ್ರಶಸ್ತಿ ಕಾರ್ಯಕ್ರಮಕ್ಕೆ ಎಲ್ಲೆಂಲ್ಲಿಂದಲೋ ಜನ ಮನೆಯ ಮದುವೆಗೆ ಬಂದಂತೆ ಹೊರಟು ಬಂದಿದ್ದರು.
ನನಗೆ ನೆನಪಾದದ್ದು ‘ನೆಲದ ಒಡಲು’.
ಬೆಸಗರಹಳ್ಳಿ ರಾಮಣ್ಣನವರ ಮನೆಯ ಹೆಸರೂ ಅದೇ. ಅವರ ಮೊದಲ ಕಥಾ ಸಂಕಲನದ ಹೆಸರೂ ಅದೇ.
ಹಿಂದೆ ಇದೇ ರವಿಕಾಂತೇಗೌಡರಿಗೆ ‘ಹಾಗೇಕೆ?’ ಎಂದು ಪ್ರಶ್ನಿಸಿದ್ದೆ. ಆಗ ಅವರು ನೆಲದ ಬಗ್ಗೆ ರಾಮಣ್ಣನವರಿಗಿದ್ದ ಅಪಾರ ಪ್ರೀತಿಯ ಬಗ್ಗೆ ಹೇಳುತ್ತಾ ಹೋಗಿದ್ದರು.
‘ನನ್ನ ಅಪ್ಪ ಸದಾ ಹೇಳುತ್ತಿದ್ದರು. ಹಕ್ಕಿ ಎಷ್ಟು ಎತ್ತರಕ್ಕೆ ಬೇಕಾದರೂ ರೆಕ್ಕೆ ಬಿಚ್ಚಿ ಹಾರಬಹುದು ಆದರೆ ಅದಕ್ಕೆ ಕಾಳು ಬೇಕೆಂದಾಗ ಈ ನೆಲದ ಒಡಲಿಗೆ ಬರಲೇಬೇಕು’ ಎಂದು.
ಒಂದು ಕ್ಷಣ ಆ ಅಂಗಳದ ತುಂಬಾ ಇದ್ದ ಜನರ ಪ್ರೀತಿಯನ್ನು ಕಂಡಾಗ ನನಗೆ ಅನಿಸಿತು ಅಷ್ಟೆತ್ತರಕ್ಕೆ ಹಾರಿ ಹೋದ ರಾಮಣ್ಣ ಎನ್ನುವ ಹಕ್ಕಿಯನ್ನು ಹೇಗೆ ಈ ಎಲ್ಲರೂ ಮತ್ತೆ ಈ ಕಾರ್ಯಕ್ರಮದ ಮೂಲಕ ನೆಲದ ಒಡಲಿಗೆ ಬರುವಂತೆ ಮಾಡಿದ್ದಾರಲ್ಲಾ ಎಂದು.
ರವಿಕಾಂತೇಗೌಡರು ಹಾಗೂ ನಾನು ಗಂಟೆಗಟ್ಟಲೆ ರಾಮಣ್ಣನವರ ಬಗ್ಗೆ ಮಾತಾಡಿದ್ದೇವೆ.
ಕಥೆಯೆಂಬ ಹುಲಿಯ ಬೆನ್ನೇರಿದ ರಾಮಣ್ಣನನ್ನು ನಾನು ಎಟುಕಿಸಿಕೊಂಡಿದ್ದು ಅವರ ಕಥೆಗಳ ಮೂಲಕ ಮಾತ್ರವಲ್ಲ, ರಾಮಣ್ಣ ಒಬ್ಬ ಜಾನಪದ ಮಾಯಕಾರನೋ ಎಂಬಂತೆ ಹಲ ಜನರ ನಾಲಿಗೆಯಲ್ಲಿ ನಲಿದಾಡಿದ್ದನ್ನು ಕೇಳಿದ್ದೇನೆ.
ಬಹುಷಃ ಕನ್ನಡದ ಎಷ್ಟು ಕಥೆಗಾರರಿಗೆ ಆ ಭಾಗ್ಯವಿದೆಯೋ ಗೊತ್ತಿಲ್ಲ. ಬೆಸಗರಹಳ್ಳಿ ರಾಮಣ್ಣ ಓದುಗರಿಗೆ ಎಂದೂ ಬಹುವಚನದ ರಾಮಣ್ಣ ಆಗಿರಲೇ ಇಲ್ಲ. ತಮ್ಮ ಮನೆಯ ಒಬ್ಬ ನೆಂಟನೇನೋ ಎನ್ನುವಂತೆ ಒಳಗುಮಾಡಿಕೊಂಡುಬಿಟ್ಟಿದ್ದರು.
ಕೆ ವಿ ನಾರಾಯಣ್ ಅವರು ಬರೆದದ್ದು ಇನ್ನೂ ನನ್ನ ಮನಸ್ಸಲ್ಲಿತ್ತು. ‘ವೈದ್ಯರಾದ ರಾಮಣ್ಣನವರು ಸಾಮಾಜಿಕ ರೋಗಗಳನ್ನೂ ಪತ್ತೆ ಹಚ್ಚುತ್ತಿದ್ದರು. ಅದರ ಕೊಳೆತ ದೇಹವನ್ನು ಸೀಳಿ ನೋಡುವ ನೈಪುಣ್ಯವಿತ್ತು’.
ಅದು ನೆನಪಾದದ್ದು ಮಗ ರವಿಕಾಂತೇಗೌಡರು ಹೇಳಿದ ಒಂದು ಘಟನೆಯಿಂದ.
ಒಂದು ದಿನ ರಾಮಣ್ಣ ಮನೆಗೆ ಬಂದವರೇ ಮಾತನಾಡದೆ ಕುಳಿತರು. ಅವರ ಕಣ್ಣುಗಳಲ್ಲಿ ನೀರು ಉಕ್ಕುತ್ತಿತ್ತು.
ಮಲೇರಿಯಾ ಅಧಿಕಾರಿಯಾಗಿದ್ದ ರಾಮಣ್ಣ ಕೆ ಆರ್ ಪೇಟೆಯಿಂದ ಬರುತ್ತಿರುವಾಗ ಒಂದು ಹೊಲದಲ್ಲಿ ಉಳುಮೆ ನಡೆಯುತ್ತಿತ್ತು. ಆ ಕಡೆ ಕಣ್ಣು ಹಾಯಿಸಿದ ರಾಮಣ್ಣನವರಿಗೆ ಕಾದಿದ್ದದ್ದು ಒಂದು ದೊಡ್ಡ ಷಾಕ್.
ಅಲ್ಲಿ ರೈತನೊಬ್ಬ ಒಂದು ನೊಗಕ್ಕೆ ಎತ್ತನ್ನೂ, ಇನ್ನೊಂದು ನೊಗಕ್ಕೆ ತನ್ನ ಹೆಂಡತಿಯನ್ನೂ ಹೂಡಿ ಹೊಲ ಉಳುತ್ತಿದ್ದ. ಗ್ರಾಮೀಣ ಭಾರತದ ನೋವು ರಾಮಣ್ಣನ ಎದೆ ಹೊಲದೊಳಗೂ ಇಳಿಯುತ್ತಾ ಹೋಗಿದ್ದು ಹೀಗೆ.
ರವಿಕಾಂತೇಗೌಡರು ನೆನಪುಗಳನ್ನು ಬಿಚ್ಚುತ್ತಾ ಹೋದರು.
ನಾನು ಪಿಯುಸಿ ಪಾಸಾದಾಗ ನನ್ನ ಅಜ್ಜಿ ಒಂದು ಸಾವಿರ ರೂ ಕೊಟ್ಟರು. ಅಪ್ಪ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಅಷ್ಟು ಹಣಕ್ಕೂ ಪುಸ್ತಕ ಕೊಡಿಸಿ ‘ನಾನು ಸಾಹಿತ್ಯದ ಸ್ಪರ್ಶಕ್ಕೆ ಸಿಗದೇ ಹೋಗಿದ್ದರೆ ಒಬ್ಬ ಕ್ರಿಮಿನಲ್ ಆಗಿರುತ್ತಿದ್ದೆ. ಸಾಹಿತ್ಯ ಮನುಷ್ಯನ ಘನತೆಯನ್ನು ಎತ್ತಿಹಿಡಿಯುತ್ತದೆ. ಅಷ್ಟೇ ಅಲ್ಲ, ಸದಾ ಅದನ್ನು ನೆನಪಿಸುತ್ತದೆ’ ಎಂದರು.
ಅವರ ಕಣ್ಣುಗಳನ್ನೇ ನಿಟ್ಟಿಸಿ ನೋಡಿದೆ. ನೆನಪುಗಳು ಹೊರಗೆ ಜಿಗಿಯಲು ಇನ್ನೂ ಕಾದಿದ್ದವು.
‘ನಾನು ಪೊಲೀಸ್ ಇಲಾಖೆಗೆ ಆಯ್ಕೆಯಾದಾಗ ಅಪ್ಪ ಒಂದೇ ಮಾತು ಹೇಳಿದರು. ನೋಡು ಫ್ಯಾನು, ಫೋನು ಇದ್ದಾಗ ಅದರ ಕೆಳಗೆ ಇದ್ದು ದೊಡ್ಡ ಮಾತನಾಡುವುದು ಸುಲಭ. ವ್ಯವಸ್ಥೆಯ ಆಚೆ ಇದ್ದು ದೊಡ್ಡ ಮಾತಾಡಬಹುದು. ಆದರೆ ಆ ವ್ಯವಸ್ಥೆಯ ಒಳಗಿದ್ದು ಏನು ಸುಧಾರಣೆ ಮಾಡುತ್ತೀಯಾ ಎನ್ನುವುದು ಮುಖ್ಯ’
ನೆನಪುಗಳು ಒಂದು ಕೆಲಿಡಿಯೋಸ್ಕೋಪ್ ನಂತೆ ಎಷ್ಟೊಂದು ಬಣ್ಣ ಬಣ್ಣ. ಅಷ್ಟೇ ಅಲ್ಲ ಅದನ್ನು ಹೊರಳಿಸಿದಷ್ಟೂ ಹೊಸ ಹೊಸ ಚಿತ್ತಾರ.
ಇಲ್ಲಿಯೂ ಹಾಗೇ ಆಯಿತು.
‘ಅಪ್ಪನ ತೋಳನ್ನು ಮಿಸ್ ಮಾಡಿಕೊಳ್ತೀರಾ’ ಎಂದೆ.
ರವಿಕಾಂತೇಗೌಡರು ಅದುವರೆಗೂ ಹಿಡಿದಿಟ್ಟಿದ್ದ ಕಣ್ಣೀರು ಅವರ ಮಾತನ್ನೇ ಕೇಳದೆ ಹೊರಗೆ ಜಿಗಿಯಿತು.
‘ಅಮ್ಮನಿಗೊಂದಾಸೆಯಿತ್ತು. ನಮ್ಮದೇ ಒಂದು ಸ್ವಂತದ ಗೂಡಿರಬೇಕು ಅಂತ. ಒಂದು ದಿನ ಅಪ್ಪ ಒಂದು ಪೆಟ್ಟಿಗೆ ಹೊತ್ತು ತಂದರು’.
‘ಅಪ್ಪ ಪೆಟ್ಟಿಗೆ ತೆಗೆದಾಗ ಅಲ್ಲಿದ್ದದ್ದು ಒಂದು ಹಿತ್ತಾಳೆಯ ಬಾಗಿಲ ಹಿಡಿ. ಇದೇನಿದು ಎನ್ನುವ ನಮ್ಮ ಪ್ರಶ್ನೆ ಅರ್ಥವಾದವರಂತೆ ಮನೆ ಕಟ್ತೀವಲ್ಲಾ ಒಂದೊಂದನ್ನೇ ಸಂಗ್ರಹ ಮಾಡೋಣ’ ಎಂದರು.
‘ಅಪ್ಪನನ್ನು ಮಣ್ಣು ಮಾಡುವಾಗ ಧೋ ಎಂದು ಮಳೆ ಸುರಿಯುತ್ತಿತ್ತು. ಆ ಮಳೆಯಲ್ಲಿ ನಮ್ಮ ಕಣ್ಣೀರೂ ಹರಿದು ಭೂಮಿ ಸೇರಿತು. ಅದು ನಮ್ಮ ಕಣ್ಣೀರು ಮಾತ್ರವಲ್ಲ ಅಲ್ಲಿಗೆ ಹಿಂಡುಗಟ್ಟಿ ಬಂದ ಎಲ್ಲರ ಕಣ್ಣೀರನ್ನೂ ಸೇರಿಸಿಕೊಂಡು ಮಳೆ ಭೂಮಿಗಿಳಿಯುತ್ತಿತ್ತು’ ಎಂದರು.
ನನಗೆ ರವಿಕಾಂತೇಗೌಡರನ್ನು ಆಗ ನಿಟ್ಟಿಸಿ ನೋಡಲು ಖಂಡಿತಾ ಸಾಧ್ಯವಾಗಲಿಲ್ಲ.
‘ಅಪ್ಪನನ್ನು ಮಣ್ಣು ಮಾಡಲು ಹೊರಟಾಗ ಮಟ ಮಟ ಬಿಸಿಲು. ಶವಯಾತ್ರೆ ಸಾಗುತ್ತಿದ್ದಾಗ ದಾರಿಹೋಕನೊಬ್ಬ ಓಡೋಡಿ ಬಂದು ರಾಮಣ್ಣನ ಮುಖ ಬಾಡಿ ಹೋಗುತ್ತೆ ಅಂತ ಹೇಳಿ ತನ್ನ ಬಳಿ ಇದ್ದ ಕೊಡೆಯನ್ನು ಅವರ ಮುಖಕ್ಕೆ ಹಿಡಿದ.
ಆ ಕೊಡೆ ಅಂದಿನಿಂದ ಇಂದಿಗೂ ನಮ್ಮ ಮನೆಯಲ್ಲಿದೆ, ಅಪ್ಪ ಹಾಗೂ ಜನರ ನಡುವಿನ ಪ್ರೀತಿಯ ಕೊಂಡಿಯಾಗಿ’ ಎಂದರು.
ಬೆಸಗರಹಳ್ಳಿ ರಾಮಣ್ಣ ಎನ್ನುವುದೇ ಒಂದು ಕೊಡೆ.
ಅದು ನೊಂದ ಮನಸ್ಸುಗಳು ಮತ್ತಷ್ಟು ಬೇಯದಿರಲಿ ಎಂದು ಮುಚ್ಚಟೆಯಿಂದ ಕಾಪಾಡಿದ ಕೊಡೆ. ಬೆಸಗರಹಳ್ಳಿ ರಾಮಣ್ಣ ಎಂಬ ಕೊಡೆ ಹಿಡಿದು ಹೊರಟವರೆಷ್ಟೋ.
ಮೊನ್ನೆ ಅಪ್ಪನ ದಿನಾಚರಣೆ. ಹಾಗಾಗಿ ರವಿಕಾಂತೇಗೌಡರ ಈ ಅಪ್ಪನ ಪ್ರೀತಿ ನೆನಪಾಯಿತು. ರವಿಕಾಂತೇಗೌಡರಿಗೆ ಮಾತ್ರ ನಿನ್ನೆಯೊಂದೇ ಅಪ್ಪನ ದಿನವಲ್ಲ. ಪ್ರತಿ ದಿನವೂ ಅಪ್ಪನ ದಿನ.