ಅಮಾಯಕರನ್ನ ಕೊಂದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದ್ರೂ ಕೊಡಿ- ಸಚಿವ ಸಿಟಿ ರವಿಗೆ ಟ್ವಿಟ್ಟರ್ ನಲ್ಲಿ  ಟಾಂಗ್ ಕೊಟ್ಟ ಸಿದ್ಧರಾಮಯ್ಯ…..

ಬೆಂಗಳೂರು,ಅ,19,2019(www.justkannada.in):  ಸ್ವಾತಂತ್ರ ಹೋರಾಟಗಾರ ವಿ.ಡಿ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ಹೇಳಿಕೆ ವಿಚಾರ ಕುರಿತು ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು  ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ  ಇಬ್ಬರು ನಾಯಕರು ಪರಸ್ಪರ ಕಿತ್ತಾಟ ನಡೆಸಿದ್ದಾರೆ.

ಗಾಂಧಿ ಹತ್ಯೆಗೆ ಸಂಚು ರೂಪಿಸಿದವರಲ್ಲಿ ವಿ.ಡಿ ಸಾವರ್ಕರ್ ಕೂಡಾ ಒಬ್ಬರು ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ ಸಚಿವ ಸಿ.ಟಿ.ರವಿ  ಮಹಾತ್ಮ ಗಾಂಧೀಜಿ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದವರಲ್ಲಿ ಸಾವರ್ಕರ್ ಕೂಡ ಒಬ್ಬರು ಎಂದು ಹೇಳುತ್ತೀರಿ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ನೀವು ಮಾನಸಿಕ ಅಸ್ವಸ್ಥರಾಗಿದ್ದೀರಿ. ಇತಿಹಾಸದ ಬಗ್ಗೆ ನಿಮಗೆ ಅರಿವಿದೆಯಾ? ನೀವ್ಯಾಕೆ ಸೆಲ್ಯೂಲರ್ ಜೈಲಿಗೆ ಹೋಗಬಾರದು. ನಾನೇ ಸ್ಪಾನ್ಸರ್ ಮಾಡುತ್ತೇನೆ ಎಂದು  ಕಿಡಿಕಾರಿದ್ದರು.

ಸಚಿವ ಸಿ.ಟಿ ರವಿ ಟ್ವಿಟ್ ಗೆ ಗುಡುಗಿದ ಮಾಜಿ ಸಿಎಂ ಸಿದ್ಧರಾಮಯ್ಯ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕಪ್ಪಾ ಎಂದು  ಟ್ವಿಟ್ಟರ್ ನಲ್ಲಿ ಕಾಲೆಳೆದಿದ್ದಾರೆ.

ಮತ್ತೊಂದು ಟ್ವಿಟ್ ಮಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಅಧಿಕಾರ ಇಲ್ಲದಾಗ ಮಾನಸಿಕ ಕಾಯಿಲೆಯಿಂದ ನರಳುವವರು ಕಂಠಪೂರ್ತಿ ಕುಡಿದು ಕಾರು ಅಪಘಾತ ಮಾಡಿ ಅಮಾಯಕರನ್ನು ಸಾಯಿಸುತ್ತಾರೆ. ನಮ್ಮಂತಹವರು ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಇತಿಹಾಸ ಓದಿ, ಸತ್ಯ ತಿಳಿದುಕೊಂಡು ಮಾತಾಡುತ್ತೇವೆ ಎಂದು ಟಾಂಗ್ ನೀಡಿದ್ದಾರೆ.

ಹೀಗೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಭಾರತರತ್ನ ಪ್ರಶಸ್ತಿ ಕುರಿತು ಹಗ್ಗಜಗ್ಗಾಟ ನಡೆಯುತ್ತಿದ್ದು ಪರಸ್ಪರ ವಾದ ಪ್ರತಿವಾದ ನಡೆಸುತ್ತಿದ್ದಾರೆ.

Key words: Give- at least – Rajyotsava award – murderer – Siddaramaiah-Minister- CT Ravi.