ಮನಸ್ಥಿತಿ ಬದಲಾಗದ ಹೊರತು ಲಿಂಗ ಸಮಾನತೆ ಸಾಧ್ಯವಿಲ್ಲ: ಮೈವಿವಿ ರಿಜಿಸ್ಟ್ರಾರ್ ವಿ.ಆರ್.ಶೈಲಜಾ

ಮೈಸೂರು, ಜನವರಿ 24, 2022 (www.justkannada.in): ಮೈಸೂರಿನ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಬೆಂಗಳೂರು ಚಾಪ್ಟರ್ ವತಿಯಿಂದ ಆಯೋಜಿಸಿದ್ದ ‘ಸುಸ್ಥಿರ ಅಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ’ ಕುರಿತ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭ ಇಂದು ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು ವಿವಿ ರಿಜಿಸ್ಟ್ರಾರ್ ವಿ.ಆರ್.ಶೈಲಜಾ ಮಾತನಾಡಿ, ಪ್ರಸ್ತುತ ಮಹಿಳೆಯರು ಸಬಲರಾಗಿದ್ದಾರಾ? ಎಂಬ ಬಗ್ಗೆ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕಿದೆ. ಜ್ಞಾನ, ವಿಜ್ಞಾನ-ತಂತ್ರಜ್ಞಾನ ವಿಷಯದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಿದ್ದು, ಎಲ್ಲರೂ ಸುಲಭವಾಗಿ ಬಳಸಬಹುದಾಗಿದೆ. ಇಂತಹ ಕಾಲದಲ್ಲಿಯೂ ಮಹಿಳೆಯರು ಸಬಲರಾಗಿದ್ದಾರಾ? ಎಂಬ ಪ್ರಶ್ನೆ ಕೇಳುವಂತಾಗಿದೆ. ಮಹಿಳೆಯರು ಮನೆಯಿಂದ ಹೊರಬರುವಾಗ ಎಲ್ಲರ ಅನುಮತಿ ಕಡ್ಡಾಯ ಎಂಬಂತ ಪರಿಸ್ಥಿತಿ ಬದಲಾಗಿಲ್ಲ ಎಂದರೆ ಲಿಂಗ ಸಮಾನತೆ ಇದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಜನರ ಮನಸ್ಥಿತಿ ಬದಲಾಗದ ಹೊರತು ಬದಲಾವಣೆ ಸಾಧ್ಯವಿಲ್ಲ ಎಂದರು.

ಮಹಿಳೆಯರಿಗೆ ಲಿಂಗ ಸಮಾನತೆ ಬೇಕಿದೆ. ದೇಶ ಆರ್ಥಿಕವಾಗಿ ಸಬಲವಾಗಬೇಕು ಎಂದರೆ ಲಿಂಗ ಸಮಾನತೆ ಇರಬೇಕು. ಆಗ ಮಾತ್ರ ದೇಶದ ಪ್ರಗತಿ ಸಾಧ್ಯ. ಅಮೆರಿಕಾ, ಚೀನಾ, ಜಪಾನ್ ಸೇರಿದಂತೆ ಹಲವು ಮುಂದುವರಿದ ದೇಶಗಳ ಆರ್ಥಿಕ ಪ್ರಗತಿಯ ಹಿಂದೆ ಲಿಂಗ ಸಮಾನತೆ ಇದೆ. ಆದರೆ ನಮ್ಮಲ್ಲಿ ಇನ್ನೂ ಆ ಮನಸ್ಥಿತಿ ಬದಲಾಗಿಲ್ಲ. ಮಹಿಳೆಯರು ಸಂಶೋಧನಾ ಕ್ಷೇತ್ರಕ್ಕೆ ಬರಬೇಕು ಎಂದರೆ ಅದೆಲ್ಲ ನಿನಗೇಕೆ ಎಂದು ಪ್ರಶ್ನಿಸುವ ಮನಸ್ಥಿತಿ ಇದೆ. ಇದು ಬದಲಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಮುಂದೆ ಬರುತ್ತಿದ್ದಾರೆ. ಶಿಕ್ಷಣ, ಬಿಸಿನೆಸ್, ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚಿನ ಅವಕಾಶ ಗಳಿಸುತ್ತಿದ್ದಾರೆ. ಇದು ಹೀಗೆಯೇ ಮುಂದುವರಿಯಬೇಕು. ಮಹಿಳೆಗೆ ತಾಯಿ ಸ್ಥಾನ ನೀಡಿ ಸುಮ್ಮನೆ ಕೂರಿಸುವುದಿಲ್ಲ. ಬದಲಿಗೆ ಅವಕಾಶ, ಭದ್ರತೆ, ಗೌರವಯುತವಾಗಿ ನಡೆಸಿಕೊಳ್ಳುವುದು ಸೇರಿದಂತೆ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ನೆರವಾಗಬೇಕು. ಈ ನಿಟ್ಟಿನಲ್ಲಿ ಮಹಿಳೆಯರೂ ಕೂಡ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು. ಮಾತ್ರ ಮಹಿಳಾ ಸಬಲೀಕರಣ ಸಾಧ್ಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗ್ಡೆ ಮಾತನಾಡಿ, ಮಹಿಳಾ ಸಬಲೀಕರಣ ವಿಷಯ ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಹಿಳೆಯರಿಗೆ ಸೂಕ್ತ ಶಿಕ್ಷಣ, ನೆರವು, ಪ್ರೋತ್ಸಾಹ ನೀಡಿ ಅವರ ಕೌಶಲ್ಯವನ್ನು ಬೆಳೆಸಿ ಪ್ರಗತಿ ಹಾದಿಯಲ್ಲಿ ಸಾಗಲು ನೆರವು ನೀಡಿದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ತಿಳಿಸಿದೆ.

ಪ್ರೊ. ಎಸ್.ಶ್ರೀಕಂಠಸ್ವಾಮಿ ಅತಿಥಿಗಳನ್ನು ಸ್ವಾಗತಿಸಿದರು. ಎಸ್.ಪ್ರಭಾ, ಡಾ.ಗಂಗಾಧರ್, ಕುಬೇರ್ ಪಿ ಗೌಡ, ಸೇರಿದಂತೆ ಹಲವರು ಇದ್ದರು.