ಮೈಸೂರಿನ ಈ ಬಡಾವಣೆಯಲ್ಲಿ ಕೊಳೆತು ನಾರುತ್ತಿರುವ ಕಸದ ರಾಶಿ : ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ.  

ಮೈಸೂರು,ಮೇ,12,2022(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನ ನಂದಿನಿ ಲೇ ಔಟ್ ಒಂದನೇ ಹಂತದಲ್ಲಿ ಪ್ರತಿದಿನ ಕಸದ ರಾಶಿ ಬಂದು ಬೀಳುತ್ತಿದ್ದು ಇದು ಕೊಳೆತು ನಾರುತ್ತಿದೆ. ಆದರೂ  ಸಹ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮಾತ್ರ ಈ ಕಡೆ ಗಮನಹರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ನಂದಿನಿ ಲೇಔಟ್ ಒಂದನೇ ಹಂತದ ಬಡಾವಣೆಯೂ ಹಾಲನಹಳ್ಳಿ ವ್ಯಾಪ್ತಿಯಲ್ಲಿದ್ದು ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿದೆ. ಈ ಬಡಾವಣೆ ಮೊದಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಶದಲ್ಲಿತ್ತು. ಈಗ ಪಟ್ಟಣ ಪಂಚಾಯಿತಿಗೆ ವರ್ಗಾವಣೆಯಾಗಿದೆ ಎಂದು ತಿಳಿದುಬಂದಿದೆ

ಆದರೆ ಈ ಬಡಾವಣೆ ಮಿನಿ ಮಾರ್ಕೆಟಿಂಗ್ ಮಾರ್ಪಾಡಾಗಿದ್ದು ಕಸದ ರಾಶಿ ಪ್ರತಿದಿನ ಬಿದ್ದು, ಕಸ ಕೊಳೆತು ನಾರುತ್ತಿದೆ. ಆದರೆ ಪಟ್ಟಣ ಪಂಚಾಯತಿ ಯಾವ ಅಧಿಕಾರಿಯೂ ಇದುವರೆಗೂ ಬಂದು ಕಸದ ಸಮಸ್ಯೆ ಬಗೆಹರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ನಂದಿನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ  ಇಎಸ್ ನಾಗರಾಜು, ಕಳೆದ 20 ವರ್ಷದಿಂದ ಕಂದಾಯವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿದ್ದೇವೆ. ಇವರು ಒಂದು ಬಿಡಿಗಾಸಿನ ಅಭಿವೃದ್ಧಿಯನ್ನು ಮಾಡಿಲ್ಲ ಕಸದ ರಾಶಿಯಿಂದ ಕಂಗಾಲಾಗಿರುವ ಪಾರ್ಕ್ ಅನ್ನು ಅಭಿವೃದ್ಧಿಪಡಿಸಿ ಎಂದು ನಂದಿನಿ ನಾಗರಿಕ ಹಿತರಕ್ಷಣಾ ಸಮಿತಿಯ ಪರವಾಗಿ ಶಾಸಕ ಜಿಟಿ ದೇವೇಗೌಡರ ಮುಖಾಂತರ ಮನವಿ ಮಾಡಿದ್ದೇವು. ಹಲವು ಬಾರಿ ಮೂಡಾ ಅಧಿಕಾರಿಗಳನ್ನು ಭೇಟಿ ಮಾಡಿದ್ದೇವೆ.  ಈಗ ಆಗ ಪಾರ್ಕ್ ಅಭಿವೃದ್ಧಿ ಪಡಿಸುತ್ತೇವೆ ಎಂದು ಆಶ್ವಾಸನೆಯನ್ನು ಅಧಿಕಾರಿಗಳು ನೀಡುತ್ತಲೇ ಬಂದಿದ್ದಾರೆ.  ಹಾಲನಹಳ್ಳಿ ಗ್ರಾಮ ಪಂಚಾಯಿತಿಯವರು ಕಸವನ್ನು ಎತ್ತುವ ನಿರ್ವಹಣೆಯನ್ನು ಸರಿದೂಗಿಸದಿದ್ದರೇ ಅನ್ಯಮಾರ್ಗವಿಲ್ಲ.  ನಮ್ಮ ಸಮಿತಿಯಿಂದ ಚಳುವಳಿಯನ್ನು ಆರಂಭಿಸುವುದು ಅನಿವಾರ್ಯವಾಗುತ್ತದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಭೇಟಿ ಮಾಡಿ ಸಮಸ್ಯೆಯನ್ನು ನಿಯಂತ್ರಿಸಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.

Key words:  garbage- Mysore – Outrage -against -officers