ನಾಳೆ ಸಂಜೆ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಅಂತ್ಯಕ್ರಿಯೆ: ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನ..

ನವದೆಹಲಿ, ಆ,24,2019(www.justkannada.in) ಅನಾರೋಗ್ಯದಿಂದ ಇಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದ ಕೇಂದ್ರ ಮಾಜಿ ಸಚಿವ ಅರುಣ್ ಜೇಟ್ಲಿ ಅವರ ಅಂತ್ಯಕ್ರಿಯೆ  ನಾಳೆ ಸಂಜೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು  ಅರುಣ್ ಜೇಟ್ಲಿ ಅವರ ಮೃತದೇಹವನ್ನು ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತದೆ. ಬಳಿಕ ನಾಳೆ ಬೆಳಿಗ್ಗೆ ಮೃತದೇಹವನ್ನು ಬಿಜೆಪಿ ಕೇಂದ್ರ ಕಚೇರಿಗೆ ರವಾನಿಸಿ ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಪಕ್ಷದ ಕಾರ್ಯಕರ್ತರು ಅವರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶವಿರುತ್ತದೆ.

ಬಳಿಕ  ನಾಳೆ ಸಂಜೆ 5 ಗಂಟೆ ವೇಳೆಗೆ ನವದೆಹಲಿಯ ನಿಗಂಬೋಧ್ ಘಾಟ್‌ನಲ್ಲಿ ಕುಟುಂಬದ  ಸಾಂಪ್ರದಾಯಕ ವಿಧಿ ವಿಧಾನಗಳಂತೆ  ಅಂತ್ಯಕ್ರಿಯೆ ನಡೆಯಲಿದೆ. ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ ಅವರನ್ನ  ಆಗಸ್ಟ್ 9ರಂದು ನವದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಅರುಣ್ ಜೇಟ್ಲಿ ಅವರು ನಿಧನರಾಗಿದ್ದಾರೆ.

Key words:  funeral -former Union Minister -Arun Jaitley -tomorrow -evening.