ದೇಶದಲ್ಲಿ ಹೆಚ್ಚು ಹುಲಿ ಇರೋದು ನಮ್ಮಲ್ಲೇ!

kannada t-shirts

ಮೈಸೂರು:ಜುಲೈ-29: ದೇಶದ ಹುಲಿಗಳ ರಾಜಧಾನಿ ಎಂಬ ಕರ್ನಾಟಕದ ಹೆಗ್ಗಳಿಕೆ ಈ ಬಾರಿಯೂ ಮುಂದುವರಿಯಲಿದೆ. ಕಳೆದ ವರ್ಷ ನಡೆದ ಗಣತಿಯಲ್ಲಿ ರಾಜ್ಯದಲ್ಲಿ ಹುಲಿಗಳ ಸಂಖ್ಯೆ 70ಕ್ಕೂ ಹೆಚ್ಚಾಗಿದ್ದು, ಒಟ್ಟು ಸಂಖ್ಯೆ 470ಕ್ಕೂ ಹೆಚ್ಚಲಿದೆ.

ಸೋಮವಾರ ಹುಲಿಗಳ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿ ಯಲ್ಲಿ ಗಣತಿ ಅಂಕಿಸಂಖ್ಯೆಯನ್ನು ಬಿಡುಗಡೆ ಮಾಡಲಿದ್ದಾರೆ.

ಈ ಹಿಂದೆ ಹುಲಿ ಗಣತಿ ನಡೆದಿದ್ದು 2014ರಲ್ಲಿ. ಅದರ ಪ್ರಕಾರ ದೇಶದಲ್ಲಿ 2,226 ಹುಲಿಗಳು ಇದ್ದವು. ಅದರಲ್ಲಿ 408 ಹುಲಿಗಳು ಕರ್ನಾಟಕದಲ್ಲಿದ್ದವು. ಹೀಗಾಗಿ ದೇಶದಲ್ಲಿಯೇ ಅತ್ಯಂತ ಹೆಚ್ಚು ಹುಲಿಗಳು ಇರುವ ರಾಜ್ಯ ಕರ್ನಾಟಕ ಎಂದು ಘೋಷಿಸಲಾಗಿತ್ತು. ಹಾಲಿ ಗಣತಿಯಲ್ಲಿಯೂ (2018) ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿದ್ದು, ದೇಶದಲ್ಲಿ ಮೊದಲ ಸ್ಥಾನ ನಮ್ಮದೇ ಎಂದು ಹುಲಿ ಸಂರಕ್ಷಣಾ ಯೋಜನೆ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಬಂಡೀಪುರ, ನಾಗರಹೊಳೆ ಅರಣ್ಯ ಪ್ರದೇಶವನ್ನು ಹುಲಿ ಕಾರಿಡಾರ್‌ ಎಂದು ಕರೆಯಲಾಗಿದೆ. ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 2006ರಲ್ಲಿ 290 ಹುಲಿಗಳು, 2010ರಲ್ಲಿ 300, 2014ರಲ್ಲಿ 408 ಹುಲಿಗಳಿದ್ದವು. ಅದರಲ್ಲಿ 2014ರಲ್ಲಿ ನಾಗರಹೊಳೆಯಲ್ಲಿ 93 ಹುಲಿಗಳು, ಬಂಡೀಪುರದಲ್ಲಿ 110 ಹುಲಿಗಳಿರುವುದು ವಿಶೇಷ ಮತ್ತು ಅತ್ಯಂತ ಪ್ರಮುಖವಾದದ್ದು.

ನಾಗರಹೊಳೆ, ಬಂಡೀಪುರ ಅರಣ್ಯ ಪ್ರದೇಶಗಳು ಹುಲಿ ಸಂತತಿಯ ಹೆಚ್ಚಳಕ್ಕೆ ಅನುಕೂಲವಾದ ವಾತಾವರಣ ಇದೆ.

ಇಂದು ವಿಶ್ವ ಹುಲಿ ದಿನ: ಅಳಿಯುತ್ತಿರುವ ಹುಲಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ 2010ರಲ್ಲಿ ರಷ್ಯಾದ ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ಸಮ್ಮೇಳನ ಆಯೋಜಿಸಲಾಗಿತ್ತು. ಜು.29ರಂದೇ ಸಮ್ಮೇಳನ ನಡೆಸಿದ್ದರಿಂದ ಪ್ರತಿ ವರ್ಷ ಇದೇ ದಿನ ವಿಶ್ವ ಹುಲಿದಿನ ಎಂದು ತೀರ್ಮಾನಿಸಲಾಯಿತು.

ಭಾರತದಲ್ಲಿ ಹುಲಿ ಸಂತತಿ ನಶಿಸುತ್ತಿರುವುದನ್ನ ಮನಗಂಡ ಅಂದಿನ ಪ್ರಧಾನಿ ಇಂದಿರಾ ಗಾಂಧಿ 1973ರಲ್ಲಿ ರಾಷ್ಟ್ರದ 9 ಹುಲಿ ವಾಸ ಮಾಡುವ ಅರಣ್ಯಗಳನ್ನು ಹುಲಿ ಯೋಜನೆ ವ್ಯಾಪ್ತಿಗೆ ತಂದರು.

ಮಹದೇಶ್ವರ ಬೆಟ್ಟ ಇನ್ನು ಹುಲಿ ಸಂರಕ್ಷಣಾ ಪ್ರದೇಶ?
ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿಸಲು ಮೀಸಲು ವಲಯ, ಸೂಕ್ಷ್ಮ ವಲಯಗಳು ಮತ್ತು ಬಫ‌ರ್‌ ವಲಯಗಳನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯದಲ್ಲಿರುವ ಬಂಡೀಪುರ,ನಾಗರಹೊಳೆ,ಭದ್ರಾ, ಬಿ.ಆರ್‌.ಟಿ. ಮತ್ತು ಅಣಶಿ-ದಾಂಡೇಲಿ ಹುಲಿ ಸಂರಕ್ಷಣಾ ಪ್ರದೇಶಗಳ ಸಾಲಿಗೆ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶವನ್ನು ಸೇರಿಸಿ, ಅದನ್ನು ಕರ್ನಾಟಕದ ಆರನೇ ಹುಲಿ ಮೀಸಲು ಪ್ರದೇಶವೆಂದು ಘೋಷಿಸಲು ಇಲಾಖೆ ಕಳೆದ ತಿಂಗಳು ಎನ್‌ಟಿಸಿಎಗೆ ಪ್ರಸ್ತಾವನೆ ಸಲ್ಲಿಸಿದೆ. ಶೀಘ್ರವೇ 906 ಚ.ಕಿ.ಮೀ ವಿಸ್ತೀರ್ಣದ ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶ ಹುಲಿ ಸಂರಕ್ಷಣಾ ಪ್ರದೇಶವಾಗಲಿದೆ.

ರಾಜ್ಯದಲ್ಲಿ ಇನ್ನೂ ಸಾವಿರ ಹುಲಿಗಳು ವಾಸಿಸುವಷ್ಟು ಅರಣ್ಯವಿದೆ. ಆದರೆ ನೀಲಗಿರಿ ಜೈವಿಕ ಮಂಡಲದಿಂದ ಉತ್ತರ ಕರ್ನಾಟಕ, ಉತ್ತರ ಭಾರತದ ರಾಷ್ಟ್ರೀಯ ಉದ್ಯಾನ ಮತ್ತು ಅಭಯಾರಣ್ಯಗಳಿಗೆ ಹುಲಿಗಳು ಸಂಚಾರ ಮಾಡಲು ಕನೆಕ್ಟಿವಿಟಿ ಮಾಡಬೇಕಿದೆ. ಮತ್ತಷ್ಟು ಹುಲಿಗಳ ಹೆಚ್ಚಳಕ್ಕೆ ಬಯೋಲಾಜಿಕಲ್‌ ಕಾರಿಡಾರ್‌ ನಿರ್ಮಾಣ ಆಗಬೇಕು. ಹುಲಿಗಳ ಹೆಚ್ಚಳಕ್ಕೆ ಅರಣ್ಯ ಇಲಾಖೆ ಪರಿಶ್ರಮವನ್ನು ಪ್ರಶಂಸನೀಯ.
– ಕೆ.ಎಸ್‌. ಸುದೀರ್‌ ಶಂಕರ್‌,
ಹಿರಿಯ ವನ್ಯಜೀವಿ ತಜ್ಞರು.

ಈ ಬಾರಿಯ ಹುಲಿ ಗಣತಿಯಲ್ಲಿ ಕರ್ನಾಟಕ ರಾಜ್ಯದಲ್ಲಿ 70ಕ್ಕೂ ಹೆಚ್ಚು ಹುಲಿಗಳು ಹೆಚ್ಚಾಗಿರುವುದು ಕಂಡುಬಂದಿದೆ. ಇದು ರಾಜ್ಯದ ವನ್ಯಸಂಪತ್ತು ಮತ್ತು ಕಾಡುಗಳು ಸುಸ್ಥಿರವಾಗಿವೆ ಎಂಬುದನ್ನು ತೋರಿಸುತ್ತದೆ. ಈ ಬಾರಿಯೂ ಕರ್ನಾಟಕ ಮೊದಲನೇ ಸ್ಥಾನ ಕಾಯ್ದುಕೊಳ್ಳಲಿದೆ.
-ಜಗತ್‌ ರಾಮ್‌, ರಾಜ್ಯ ಹುಲಿ ಯೋಜನೆ ನಿರ್ದೇಶಕರು.
ಕೃಪೆ:ಉದಯವಾಣಿ

ದೇಶದಲ್ಲಿ ಹೆಚ್ಚು ಹುಲಿ ಇರೋದು ನಮ್ಮಲ್ಲೇ!
we-have-more-tigers-in-the-country

website developers in mysore