ಮಲೆನಾಡಿನಿಂದ ರಾಜಧಾನಿ ಬೆಂಗಳೂರಿಗೆ ನೀರು?

kannada t-shirts

ಶಿವಮೊಗ್ಗ:ಜೂ-14: ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿರುವ ಬೆಂಗಳೂರಲ್ಲಿ ಕುಡಿಯುವ ನೀರಿನ ಅಭಾವ ಕಾಡುತ್ತಿದೆ. ಸದ್ಯ ಕೆಆರ್‌ಎಸ್‌ನಿಂದ ನೀರು ಪೂರೈಕೆಯಾಗುತ್ತಿದ್ದರೂ ಸಾಲುತ್ತಿಲ್ಲ. ಹೀಗಾಗಿ ಲಿಂಗನಮಕ್ಕಿ, ಭದ್ರಾ ಹಾಗೂ ತುಂಗಾ ನದಿಗಳ ಮೇಲೆ ಈಗ ಸರಕಾರದ ಕಣ್ಣು ಬಿದ್ದಿದೆ.

ಲಿಂಗನಮಕ್ಕಿಯಿಂದ ನೀರೆತ್ತಿ ಬೆಂಗಳೂರಿಗೆ ಹರಿಸುವ ಯೋಜನೆ ಕಾರ್ಯಸಾಧುವಲ್ಲ ಎಂದು ಹಿಂದೊಮ್ಮೆ ಸುಮ್ಮನಾಗಿದ್ದ ಸರಕಾರ ಈಗ ಲಿಂಗನಮಕ್ಕಿ ಜತೆಗೆ ತುಂಗಾ ಹಾಗೂ ಭದ್ರಾ ಜಲಾಶಯಗಳಿಂದಲೂ ನೀರೆತ್ತಲು ಮುಂದಾಗಿದೆ ಎನ್ನಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗಿ ಅಣೆಕಟ್ಟೆಗಳು ಭರ್ತಿಯಾಗದೆ ಅಚ್ಚುಕಟ್ಟು ಪ್ರದೇಶದ ರೈತರು ಕಚ್ಚಾಡುತ್ತಿರುವಾಗ ಬೆಂಗಳೂರಿಗೆ ನೀರು ಪೂರೈಸುವುದು ಎಲ್ಲಿಂದ ಎಂಬ ಪ್ರಶ್ನೆ ಮೂಡಿದೆ.

ಭವಿಷ್ಯದ ಯೋಜನೆ: ಬೆಂಗಳೂರಿನಲ್ಲಿ ಸುಮಾರು ಒಂದು ಕೋಟಿ ಜನಸಂಖ್ಯೆಯಿದ್ದು ಕೆಆರ್‌ಎಸ್‌ ಅಣೆಕಟ್ಟಿನಿಂದ ವಾರ್ಷಿಕ 19 ಟಿಎಂಸಿ ನೀರನ್ನು ಪೂರೈಸ ಲಾಗುತ್ತಿದೆ. ದಿನದಿಂದ ದಿನಕ್ಕೆ ಬೆಂಗಳೂರಿನ ವಿಸ್ತಾರ ಹೆಚ್ಚುತ್ತಿದ್ದು, 2031ರ ವೇಳೆಗೆ ಜನಸಂಖ್ಯೆ ಎರಡು ಕೋಟಿ ದಾಟುವ ಅಂದಾಜಿದೆ. ಇಷ್ಟೆಲ್ಲ ಜನಕ್ಕೆ ಬೇಕಾಗುವಷ್ಟು ನೀರನ್ನು ರಾಜ್ಯದ ಅಣೆಕಟ್ಟೆಗಳಿಂದ ಪಡೆಯಲು ಯೋಜನೆ ರೂಪಿಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಅಂತಾ ರಾಜ್ಯ ವಿವಾದಗಳಿಲ್ಲದ ಲಿಂಗನಮಕ್ಕಿ ಜಲಾಶಯ ದಿಂದ ನೀರೆತ್ತಲು ಚಿಂತನೆ ನಡೆದಿದೆ. ವಿದ್ಯುತ್‌ ಉತ್ಪಾದನೆಗೆ ಮಾತ್ರ ಮೀಸಲಾದ ಲಿಂಗನಮಕ್ಕಿ ಜಲಾಶಯದಿಂದ 30 ಟಿಎಂಸಿ ನೀರನ್ನು ಹರಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ಅಲ್ಲದೇ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೂ ಕುಡಿಯುವ ನೀರು ಹರಿಸುವ ಯೋಜನೆ ಇದಾಗಿದೆ.

ವರದಿ ನೀಡಲು ಸೂಚನೆ: ಬೆಂಗಳೂರಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜಲ ಸಂಪನ್ಮೂಲ ಅಧಿಕಾರಿಗಳ ಜತೆ ಮೊನ್ನೆಯಷ್ಟೇ ನಡೆಸಿದ ಸಭೆಯಲ್ಲಿ ಇಂಜಿನಿಯರ್‌ಗಳು ತುಂಗಾ ಮತ್ತು ಭದ್ರಾ ನದಿಗಳ ಪಾತ್ರದಿಂದ 18 ಟಿಎಂಸಿ ನೀರು ಹರಿಸುವ ಸಾಧ್ಯತೆ ಬಗ್ಗೆ ಗಮನ ಸೆಳೆದಿದ್ದಾರೆ. ಇದಕ್ಕೆ ಸಿಎಂ ಅವರು ಇದರ ಬಗ್ಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಮಳೆ ಇಲ್ಲದೆ ಜಲಾಶಯ ಖಾಲಿ: ಭದ್ರಾ ಜಲಾಶಯಕ್ಕೆ ಭದ್ರಾ ನದಿ, ತುಂಗಭದ್ರಾ ಜಲಾಶಯಕ್ಕೆ ತುಂಗಾ ನದಿ ನೀರೇ ಆಧಾರ. ಮೂಲಗಳ ಪ್ರಕಾರ ತುಂಗಾ ಮತ್ತು ಭದ್ರಾ ನದಿಗಳಲ್ಲಿ ವಾರ್ಷಿಕ ಸುಮಾರು 200 ಟಿಎಂಸಿ ನೀರು ಹರಿಯುತ್ತದೆ. ಇದರಲ್ಲಿ ತುಂಗಾಭದ್ರಾ ಜಲಾಶಯವು 100 ಟಿಎಂಸಿ ಮತ್ತು ಭದ್ರಾ ಜಲಾಶಯ 71.50 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಉತ್ತಮ ಮಳೆಯಾದಾಗ ಎರಡೂ ಜಲಾಶಯಗಳು ಭರ್ತಿಯಾಗಿ 10ರಿಂದ 50 ಟಿಎಂಸಿಯಷ್ಟು ನೀರು ಹೆಚ್ಚುವರಿಯಾಗಿ ಹರಿದ ಉದಾಹರಣೆಗಳಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಳೆ ಕಡಿಮೆಯಾಗುತ್ತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಭದ್ರಾ ಜಲಾಶಯ ಒಮ್ಮೆ ಮಾತ್ರ ಭರ್ತಿಯಾಗಿದೆ. ಉಳಿದ ಮೂರು ವರ್ಷ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಸಹ ಬೆಳೆಯಲು ಸಾಧ್ಯವಾಗಲಿಲ್ಲ.

ಭದ್ರಾ ಮೇಲ್ದಂಡೆ ಯೋಜನೆ: ಇದರ ಮಧ್ಯೆ ಸರಕಾರ ತುಂಗಾ ಮತ್ತು ಭದ್ರಾ ಜಲಾಶಯಗಳಿಂದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆಯ ಬರಪೀಡಿತ ಜಿಲ್ಲೆಗಳ ಒಟ್ಟಾರೆ 2,25,515 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಮತ್ತು 367 ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಿದೆ. ಅದಕ್ಕಾಗಿ ತುಂಗಾ ಜಲಾಶಯದ ಹಿನ್ನೀರಿನಿಂದ 17.40 ಟಿಎಂಸಿ ನೀರೆತ್ತಿ ಭದ್ರಾ ಜಲಾಶಯಕ್ಕೆ ಹರಿಸಿ ಮತ್ತೆ ಅಲ್ಲಿಂದ 12.50 ಟಿಎಂಸಿ ಸೇರಿ ಒಟ್ಟು 29.90 ಟಿಎಂಸಿ ನೀರನ್ನು ಜೂನ್‌ನಿಂದ ಅಕ್ಟೋಬರ್‌ವರೆಗೆ ಹರಿಸುವ ಯೋಜನೆ ಇದಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ಒಂದು ಯೋಜನೆ ನಡೆಯುತ್ತಿರುವಾಗಲೇ ಮತ್ತೆ ಇದೇ ಜಲಮೂಲದಿಂದ ಬೆಂಗಳೂರಿಗೆ ಒಟ್ಟಾರೆ 18 ಟಿಎಂಸಿ ನೀರು ಹರಿಸುವ ಯೋಜನೆ ಬಗ್ಗೆ ಸರಕಾರ ಆಲೋಚಿಸಿರುವುದು ಮಲೆನಾಡಿಗರ ಕಣ್ಣು ಕೆಂಪಾಗಿಸಿದೆ.

ತುಂಗೆಯ ಮೇಲೂ ಒತ್ತಡ
ಶಿವಮೊಗ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ 80,494 ಹೆಕ್ಟೇರ್‌ ಬರಪೀಡಿತ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ತುಂಗಾ ಮೇಲ್ದಂಡೆ ಯೋಜನೆ ಜಾರಿಗೆ ಬಂತು. ಇದರೊಂದಿಗೆ ಜಲಾಶಯದ ಎತ್ತರವನ್ನೂ ಹೆಚ್ಚಿಸಲಾಯಿತು. ಆದರೂ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗಕ್ಕೆ ನೀರು ತಲುಪುವುದು ಮಳೆಗಾಲದಲ್ಲಿ ಮಾತ್ರ. ಇತ್ತೀಚೆಗೆ ತುಂಗಾ ಏತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಹಾಯ್‌ಹೊಳೆ, ಗೌಡನಕೆರೆ ಭಾಗಕ್ಕೂ ನೀರು ಪೂರೈಸಲಾಗುತ್ತಿದೆ. ಮುಂದಿನ ಭಾಗವಾಗಿ ಕುಂಸಿ, ಹಾರನಹಳ್ಳಿ ಮಾತ್ರವಲ್ಲ ಶಿಕಾರಿಪುರದ ಅಂಜನಾಪುರ ಜಲಾಶಯಕ್ಕೂ ನೀರು ಕೊಂಡೊಯ್ಯುವ ಯೋಜನೆ ಘೋಷಣೆಯಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗಾಗಿ ತುಂಗಾ ಜಲಾಶಯದಿಂದ ಭದ್ರಾಕ್ಕೆ 21ಟಿಎಂಸಿ ನೀರು ಕೊಂಡೊಯ್ಯುವ ಪ್ರಸ್ತಾವನೆಯೂ ಇದೆ.

ತುಂಗಾ ಮೇಲ್ದಂಡೆ ಯೋಜನೆ ಬಯಲುಸೀಮೆ ಜನರ ಜೀವನಾಡಿಯಾಗಿದೆ. ತುಂಗೆ ಮತ್ತು ಭದ್ರೆಯಲ್ಲಿ ಲಭ್ಯವಿರುವ ನೀರನ್ನು ಹಂಚಿಕೆ ಮಾಡಲಾಗಿದೆ.ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಗುರುತ್ವಾಕರ್ಷಣ ಬಲದ ಮೇಲೆ ನೀರು ಹರಿಸಲುಯೋಜನೆ ರೂಪಿಸಲಾಗಿದೆ. ಉಳಿದ ಭೂಮಿಗೂ ಏತ ನೀರಾವರಿ ಮೂಲಕ ನೀರು ಹರಿಸಲು ಯೋಜನೆ ರೂಪಿಸಲು ಸೂಚಿಸಿದ್ದೇನೆ.ಮೊದಲು ನಮಗೆ ನೀರು ಸಿಗಲಿ.
– ನಾರಾಯಣಸ್ವಾಮಿ, ಸಂಸದ, ಚಿತ್ರದುರ್ಗ
ಕೃಪೆ:ಉದಯವಾಣಿ

ಮಲೆನಾಡಿನಿಂದ ರಾಜಧಾನಿ ಬೆಂಗಳೂರಿಗೆ ನೀರು?

water-from-capital-city-to-bangalore

website developers in mysore