ಟಿಕೆಟ್‌ ರಹಿತ ಪ್ರಯಾಣ ಮಾಡಿದ ಪಕ್ಷಿಗಳು, ದಂಡ ತೆತ್ತ ಬಸ್ ನಿರ್ವಾಹಕ.

 ಬೀದರ್, ಜೂನ್ 15, 2022 (www.justkannada.in): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ)ದ ಬಸ್ ನಿರ್ವಾಹಕರೊಬ್ಬರಿಗೆ ಅದೊಂದು ದುರಾದೃಷ್ಟದ ದಿನ.

ಹೈದ್ರಾಬಾದ್‌ನಿಂದ ಬೀದರ್ ಜಿಲ್ಲೆಯ ಔರಾದ್‌ ಗೆ ತೆರಳುತ್ತಿದ್ದ ಕೆಕೆಆರ್‌ ಟಿಸಿ ಬಸ್ ಒಂದರಲ್ಲಿ ಪ್ರಣಯ ಪಕ್ಷಿಗಳು (ಲವ್ ಬರ್ಡ್ಸ್) ಇದ್ದ ಒಂದು ಪಂಜರದೊಂದಿಗೆ ಪ್ರಯಾಣಿಕನೊಬ್ಬ ಹತ್ತಿದ. ನಿಯಮಗಳ ಪ್ರಕಾರ ಬಸ್ ನಿರ್ವಾಹಕ ಅಶೋಕ್ ಹಿಲಾಲಪುರ ಆ ಪ್ರಯಾಣಿಕನಿಗೆ ಪಂಜರದಲ್ಲಿರುವ ಪಕ್ಷಿಗಳಿಗೆ ಪ್ರತ್ಯೇಕವಾಗಿ ಅರ್ಧ ಟಿಕೆಟ್ ತೆಗೆದುಕೊಳ್ಳುವಂತೆ ಸೂಚಿಸಿದ. ಆದರೆ ಆ ಪ್ರಯಾಣಿಕ ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸಿದ. ಅದಕ್ಕೆ ಸಹಪ್ರಯಾಣಿಕರೂ ಸಹ ಆತನಿಗೆ ಬೆಂಬಲಿಸಿ, ಕೇವಲ ಎರಡು ಪಕ್ಷಿಗಳಿಗೆ ಪ್ರತ್ಯೇಕವಾಗಿ ಟಿಕೆಟ್ ತೆಗೆದುಕೊಳ್ಳಬೇಕಾಗಿಲ್ಲ. ಅದಕ್ಕೆ ಎಷ್ಟು ಮಹಾ ಸ್ಥಳ ಬೇಕಾಗುತ್ತದೆ ಎಂದೆಲ್ಲಾ ಹೇಳಿ ಟಿಕೆಟ್ ತೆಗೆದುಕೊಳ್ಳದಿರುವಂತೆ ಬೆಂಬಲಿಸಿದರು.

ಪ್ರಯಾಣಿಕರ ಒತ್ತಾಯಕ್ಕೆ ಮಣಿದ ನಿರ್ವಾಹಕ ನಿಯಮವನ್ನು ತೊರೆದು ಆ ಪಕ್ಷಿಗಳಿಗೆ ಉಚಿತವಾಗಿ ಪ್ರಯಾಣಿಸಲು ಅನುಮತಿಸಿದ. ಆದರೆ ಆ ಬಸ್‌ ನ ನಿರ್ವಾಹಕ ದುರಾದೃಷ್ಟವೇನೋ ಎನ್ನುವಂತೆ ಆ ಬಸ್ ಅರ್ಧ ದೂರ ಕ್ರಮಿಸುತ್ತಿರುವಂತೆ ತಪಾಸಣಾ ಸಿಬ್ಬಂದಿಗಳು ಅಡ್ಡ ಹಾಕಿದರು. ಪಕ್ಷಿಗಳೊಂದಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಪಕ್ಷಿಗಳಿಗೆ ಟಿಕೆಟ್ ತೆಗೆದುಕೊಳ್ಳದಿರುವುದನ್ನು ಗಮನಿಸಿದರು. ಆಗ ಬಸ್ ನಿರ್ವಾಹಕನನ್ನು ಜವಾಬ್ದಾರನನ್ನಾಗಿ ಮಾಡಿ ತಮ್ಮ ಉನ್ನತ ಅಧಿಕಾರಿಗಳಿಗೆ ವರದಿಯೊಂದನ್ನು ಕಳುಹಿಸಿದರು. ಆ ವರದಿಯನ್ನಾಧರಿಸಿ ಕೆಕೆಆರ್‌ಟಿಸಿಯ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ಆ ಬಸ್ ನಿರ್ವಾಹಕ ಅಶೋಕ್ ಹಿಲಾಲಪುರ ಅವರನ್ನು ಕೆಲಸದಿಂದ ಅಮಾನತುಗೊಳಿಸಿದರು.

ಅಶೋಕ್ 24 ವರ್ಷಗಳಿಂದ ಸಾರಿಗೆ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ಪ್ರಸಂಗದ ಕುರಿತು ಹೀಗೆ ವಿವರಿಸಿದರು, “ಆ ಪ್ರಯಾಣಿಕ ಪಕ್ಷಿಗಳಿಗೆ ರೂ.114 ಕೊಟ್ಟು ತಲಾ ಅರ್ಧ ಟಿಕೆಟ್‌ ಗಳನ್ನು ಖರೀದಿಸಬೇಕಾಗಿತ್ತು. ಆದರೆ ಸಹಪ್ರಯಾಣಿಕರು ವಾದ ಮಾಡಲು ಆರಂಭಿಸಿದ ಕಾರಣದಿಂದಾಗಿ ನಾನು ಒತ್ತಡಕ್ಕೆ ಮಣಿಯಬೇಕಾಯಿತು. ತಪಾಸಣಾ ತಂಡದವರು ಅವರ ಕೆಲಸವನ್ನು ಮಾಡಿದ್ದಾರೆ. ಆದರೆ ಪ್ರಯಾಣಿಕನಿಗೆ ದಂಡವನ್ನು ವಿಧಿಸಬಹುದಾಗಿತ್ತು, ಆದರೆ ನನಗೆ ಶಿಕ್ಷೆಯಾಗಿದೆ,” ಎಂದರು.

ಈ ಕುರಿತು ಮಾತನಾಡಿದುರ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣ ಗೌಡಗೇರಿ ಅವರು ಪ್ರಯಾಣಿಕರು ಪಕ್ಷಿಗಳನ್ನಾಗಲೀ ಅಥವಾ ನಾಯಿ ಮರಿಯನ್ನು ಕರೆತಂದರೂ ಅದಕ್ಕೂ ಟಿಕೆಟ್ ಖರೀದಿಸಲೇಬೇಕು ಎಂದರು. ಇದಕ್ಕೆ ಪ್ರಯಾಣಿಕರಿಗೆ ಟಿಕೆಟ್ ದರದ 10 ಪಟ್ಟು ದಂಡ ವಿಧಿಸಬಹುದು ಹಾಗೂ ನಿರ್ವಾಹಕರನ್ನು ಕೆಲಸದಿಂದ ಅಮಾನತುಗೊಳಿಸುವ ಶಿಕ್ಷೆಗೆ ಅನುಮತಿಯಿದೆ ಎಂದು ವಿವರಿಸಿದ್ದಾರೆ.

ನಿಗಮಕ್ಕೆ ನಷ್ಟ ಉಂಟು ಮಾಡುವ ಯಾವುದೇ ಅಧಿಕಾರಿಯಾದರೂ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ಕ್ರಿಮಿನಲ್ ಪ್ರಕರಣವನ್ನು ದಾಖಲಾಸಿಸಲಾಗುತ್ತದೆ ಎಂದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Ticketless-Birds- fine – KKRTC-bus – conductor