ಮೈಸೂರು ವಿವಿಯಲ್ಲಿ 6 ತಿಂಗಳೊಳಗೆ 336 ಬೋಧಕ ಹುದ್ದೆ ಭರ್ತಿ : ಕುಲಪತಿ ಪ್ರೊ.ಹೇಮಂತ್ ಕುಮಾರ್

 

ಮೈಸೂರು, ಜೂ.07, 2019 : (www.justkannada.in news ) : ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಖಾಲಿ ಉಳಿದಿರುವ 336 ಬೋಧಕ ಸಿಬ್ಬಂದಿ ಹುದ್ದೆಯನ್ನು ಮುಂದಿನ 6 ತಿಂಗಳೊಳಗಾಗಿ ಭರ್ತಿ ಮಾಡಲು ತೀರ್ಮಾನಿಸಲಾಗಿದೆ.

ವಿಶ್ವವಿದ್ಯಾನಿಲಯ ಅನುದಾನ ಸಮಿತಿ (UGC) ಸೂಚನೆ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಶುಕ್ರವಾರ ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಣ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್ ನೇತೃತ್ವದಲ್ಲಿ ನಡೆದ ಶಿಕ್ಷಣ ಮಂಡಳಿ ಸಭೆಯ ವಿವರ ಹೀಗಿದೆ…
ಕಳೆದ ಹಲವಾರು ವರ್ಷಗಳಿಂದ ಭರ್ತಿ ಮಾಡದೆ ಹಾಗೆ ಖಾಲಿ ಉಳಿಸಿಕೊಂಡಿರುವ ಬೋಧಕ ಸಿಬ್ಬಂದಿಗಳ ಹುದ್ದೆ ಭರ್ತಿಗೆ ಅಗತ್ಯ ಕ್ರಮ ಜರುಗಿಸುವುದು. ಒಟ್ಟು 336 ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ಈ ಪೈಕಿ ಮೊದಲ ಹಂತದಲ್ಲಿ ಬ್ಯಾಕ್ ಲಾಗ್ ನ 76 ಹುದ್ದೆ ಹಾಗೂ ಹೈದ್ರಬಾದ್ -ಕರ್ನಾಟಕದ 54 ಹುದ್ದೆ ಸೇರಿದಂತೆ 130 ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ಇದಾದ ಬಳಿಕ ಉಳಿದ 206 ಹುದ್ದೆಗಳನ್ನು ರೋಸ್ಟರ್ ಪದ್ಧತಿ ಅನ್ವಯದಂತೆ ಭರ್ತಿ ಮಾಡಬೇಕು.

ಮೈಸೂರು ವಿವಿ ಖಾಲಿ ಉಳಿದಿರುವ ಹುದ್ದೆಗಳನ್ನು 6 ತಿಂಗಳಲ್ಲಿ ಭರ್ತಿ ಮಾಡಬೇಕು. ತಪ್ಪಿದಲ್ಲಿ ಯುಜಿಸಿ ನೀಡುವ ಅನುದಾನ ರದ್ದಾಗುವ ಅಪಾಯವಿರುತ್ತದೆ.

ಉಪ ಸಮಿತಿ ರಚನೆ :

ಸ್ನಾತಕೋತ್ತರ ಪದವಿಗೆ ಸಂಬಂಧಿಸಿದಂತೆ ಇಂಗ್ಲಿಷ್ ಅಧ್ಯಯನ ವಿಭಾಗಕ್ಕೆ ದಾಖಲಾಗಲು ನಿಗಧಿ ಪಡಿಸಿರುವ ಅಂಕದ ಬಗ್ಗೆ ಉದ್ಭವಿಸಿರುವ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಮಂಡಳಿಯ ಉಪ ಸಮಿತಿ ರಚಿಸಿ ವರದಿ ಪಡೆಯಲು ತೀರ್ಮಾನಿಸಲಾಯಿತು.

ಮೊದಲಿಗೆ ಚಾಮರಾಜನಗರ ಪಿಜಿ ಕೇಂದ್ರದ ಕೋಆರ್ಡಿನೇಟರ್ ಪ್ರೊ.ಶಿವಬಸವಯ್ಯ ಮಾತನಾಡಿ, ಇಂಗ್ಲಿಷ್ ವಿಭಾಗಕ್ಕೆ ದಾಖಲಾಗಲು ನಿಗಧಿ ಪಡಿಸಿರುವ ಅಂಕಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ. ಸ್ನಾತಕೋತ್ತರ ಪದವಿಯ ಇತರೆ ವಿಷಯಗಳಿಗಿಂತ ಭಿನ್ನವಾಗಿ ಇಂಗ್ಲಿಷ್ ಅಧ್ಯಯನಕ್ಕೆ ಅಂಕ ನಿಗಧಿಪಡಿಸಲಾಗಿದೆ. ಸಾಮಾನ್ಯ ವಿದ್ಯಾರ್ಥಿಗೆ ಕನಿಷ್ಠ 50 ಅಂಕ ಹಾಗೂ ಪರಿಶಿಷ್ಠ ಜಾತಿ- ಪಂಗಡದ ವಿದ್ಯಾರ್ಥಿಗಳಿಗೆ ಕನಿಷ್ಠ 45 ಅಂಕಗಳನ್ನು ನಿಗಧಿ ಪಡಿಸಲಾಗಿದೆ. (ಇತರೆ ವಿಷಯಗಳಿಗೆ ಇದು ಕ್ರಮವಾಗಿ 45 ಹಾಗೂ 40 ಅಂಕಗಳು ). ಈ ಕಾರಣದಿಂದ ಇಂಗ್ಲಿಷ್ ಅಧ್ಯಾಯನ ವಿಭಾಗಕ್ಕೆ ದಾಖಲಾಗುವವರ ಸಂಖ್ಯೆಯಲ್ಲಿ ಇಳಿಮುಖವಾಗುತ್ತದೆ. ಆದ್ದರಿಂದ ಇದನ್ನು ಸರಿಪಡಿಸಿ ಉಳಿದ ವಿಷಯಗಳಂತೆ ಅಂಕ ನಿಗಧಿ ಪಡಿಸಬೇಕು ಎಂದರು. ಇದಕ್ಕೆ ಪ್ರೊ.ಮಹಾದೇವ ಆಕ್ಷೇಪ ವ್ಯಕ್ತಪಡಿಸಿ, ಬೋರ್ಟ್ ಆಫ್ ಸ್ಟಡೀಸ್ ನಲ್ಲಿ ಅಂಕ ನಿಗಧಿ ತೀರ್ಮಾನ ಮಾಡಲಾಗಿದೆ. ಇದು ಮೂರು ವರ್ಷಗಳ ವರೆಗೆ ಜಾರಿಯಲ್ಲಿರುತ್ತದೆ. ಆದ್ದರಿಂದ ಈ ಹಂತದಲ್ಲಿ ಯಾವುದೇ ಕಾರಣಕ್ಕೂ ನಿಗಧಿತ ಅಂಕಗಳ ಬದಲಾವಣೆ ಮಾಡುವುದು ಸರಿಯಲ್ಲ ಎಂದರು.
ಸಭೆಯಲ್ಲಿ ಪರ-ವಿರುದ್ಧ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ , ಕುಲಪತಿ ಪ್ರೊ.ಹೇಮಂತ್ ಕುಮಾರ್ ಮಧ್ಯ ಪ್ರವೇಶಿಸಿ, ಉಪ ಸಮಿತಿ ರಚಿಸಿ ವರದಿ ಪಡೆದು ಬಳಿಕ ಅಂತಿಮ ನಿರ್ಧಾರಕ್ಕೆ ಬರೋಣ ಎಂದರು.

2019-20ನೇ ಸಾಲಿನಿಂದ ಮೈಸೂರು ವಿವಿಯಲ್ಲಿ ಯೋಗಿಕ್ ಸೈನ್ಸ್ ಸ್ನಾತಕೋತ್ತರ ಕೋರ್ಸ್ ಪ್ರಾರಂಭಿಸುವ ಬಗ್ಗೆ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಷಯವನ್ನು ಪೂರಕ ಪಠ್ಯ ವಿಷಯವನ್ನಾಗಿ ಸೇರ್ಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

————-
the vacant 336 teaching faculty posts at the University of Mysore will be filled within the next 6 months. Vice Chancellor Prof. Hemant Kumar said.