ಪವಾಡ ನಡೆದರಷ್ಟೇ ಸರ್ಕಾರದ ಉಳಿವು

kannada t-shirts

ಬೆಂಗಳೂರು:ಜುಲೈ-9: ಹದಿಮೂರು ಶಾಸಕರ ರಾಜೀನಾಮೆ, ಇಬ್ಬರು ಪಕ್ಷೇತರರ ಬೆಂಬಲ ವಾಪಸ್‌ನಿಂದ ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಇನ್ನೇನಾದರೂ ‘ಪವಾಡ’ ನಡೆದರಷ್ಟೇ ಸರ್ಕಾರ ಉಳಿಯಬಹುದು.ಇಲ್ಲವೇ ಅನರ್ಹತೆ ಅಸ್ತ್ರವಷ್ಟೇ ವರದಾನವಾಗಬೇಕು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಮುಂಬೈಗೆ ಹೋಗದೆ ಬೆಂಗಳೂರಿನಲ್ಲೇ ಇರುವ ಹಿರಿಯ ಕಾಂಗ್ರೆಸ್‌ ನಾಯಕ ರಾಮಲಿಂಗಾರೆಡ್ಡಿ, ಮುನಿರತ್ನ ಹಾಗೂ ಆನಂದ್‌ಸಿಂಗ್‌, ಮುಂಬೈನಲ್ಲಿರುವ ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವರಾಜ್‌, ಗೋಪಾಲಯ್ಯ ಸೇರಿ ಆರು ಮಂದಿ ರಾಜೀನಾಮೆ ವಾಪಸ್‌ ಪಡೆದರೆ ಸರ್ಕಾರ ಪವಾಡ ಸದೃಶವಾಗಿ ಉಳಿಯಬಹುದು. ಅದಕ್ಕಾಗಿಯೇ ಶಾಸಕರು ವಾಪಸ್‌ ಬರುವಂತಾಗಲು ಅನರ್ಹತೆ ಅಸ್ತ್ರ ಸಹ ಪ್ರಯೋಗಿಸಲಾಗುತ್ತಿದೆ ಎನ್ನಲಾಗಿದೆ.

ಆರು ಶಾಸಕರು ವಾಪಸ್‌ ಬಂದರೆ ಸಮ್ಮಿಶ್ರ ಸರ್ಕಾರ ಉಳಿಯುತ್ತದೆ ಎಂಬುದು ಖಾತರಿಯಾದರೆ ಪಕ್ಷೇತರ ಶಾಸಕರು ವಾಪಸ್‌ ಬರಲೂ ಬಹುದು. ಸರ್ಕಾರ ಉಳಿಯಲು ಇದೊಂದೇ ಆಶಾಭಾವನೆ ಉಳಿದಿದೆ.

13 ಶಾಸಕರು ರಾಜೀನಾಮೆ ನೀಡಿದ್ದರೂ, ಆ ಪೈಕಿ ಆರು ಜನ ವಾಪಸ್‌ ಪಡೆದರೂ ಸರ್ಕಾರದ ಸಂಖ್ಯಾಬಲ 110ಕ್ಕೆ ಏರಲಿದೆ. ಇಬ್ಬರು ಪಕ್ಷೇತರರ ಬೆಂಬಲ ಪಡೆದರೆ 112 ಆಗಲಿದೆ. ಆಗ ಸದನದಲ್ಲಿ ಬಹುಮತ ಸಾಬೀತಿಗೆ ರಾಜ್ಯಪಾಲರು ಸೂಚಿಸಿದರೂ ಬಹುಮತ ಸಾಬೀತು ಮಾಡಿ ಸರ್ಕಾರ ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ ಮತ್ತು ಜೆಡಿಎಸ್‌ನದು.

ರಮೇಶ್‌ ಜಾರಕಿಹೊಳಿ, ಪ್ರತಾಪಗೌಡ ಪಾಟೀಲ್, ಮಹೇಶ್‌ ಕುಮಟಳ್ಳಿ, ಬಿ.ಸಿ.ಪಾಟೀಲ್, ಶಿವರಾಮ್‌ ಹೆಬ್ಟಾರ್‌, ಎಚ್.ವಿಶ್ವನಾಥ್‌, ನಾರಾಯಣಗೌಡ ವಾಪಸ್‌ ಬರದಿದ್ದರೂ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌-ಜೆಡಿಎಸ್‌ ಕಾರ್ಯತಂತ್ರ ರೂಪಿಸಿದೆ. ಅವಕಾಶ ಸಿಕ್ಕರೆ ಬಿಜೆಪಿಯ ಕೆಲವು ಶಾಸಕರ ಸೆಳೆಯುವ ಪ್ರಯತ್ನವೂ ನಡೆಯುತ್ತಿದೆ.

ಬಿಜೆಪಿ ತಂತ್ರ: ‘ಆಪರೇಷನ್‌ ಕಮಲ ಇಲ್ಲ’ ಎಂದು ಹೇಳುತ್ತಲೇ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕುಗ್ಗಿಸು ತ್ತಿರುವ ಬಿಜೆಪಿಯ ಕಾರ್ಯತಂತ್ರ ಬೇರೆಯದೇ ಇದೆ. ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 13 ಶಾಸಕರು ಕಾಂಗ್ರೆಸ್‌-ಜೆಡಿಎಸ್‌ನವರ ಸಂಪರ್ಕ, ಮನವೊಲಿಕೆಗೆ ಮಣಿಯದಂತೆ ಮಾಡುವುದು. ಜತೆಗೆ ಸೌಮ್ಯಾ ರೆಡ್ಡಿ ಸೇರಿ ಇನ್ನೂ ಇಬ್ಬರು ಶಾಸಕರ ಕೈಲಿ ರಾಜೀನಾಮೆ ಕೊಡಿಸುವುದು. ಆಗ, ಸರ್ಕಾರದ ಸಂಖ್ಯಾಬಲ 102 ಕ್ಕೆ ಕುಸಿಯಲಿದೆ.

ಒಂದೊಮ್ಮೆ ರಾಜ್ಯಪಾಲರು ಸದನದಲ್ಲಿ ಬಹುಮತ ಸಾಬೀತಿಗೆ ಕುಮಾರಸ್ವಾಮಿಗೆ ಅವಕಾಶ ಕೊಟ್ಟರೂ ರಾಜೀನಾಮೆ ಕೊಟ್ಟಿರುವ ಶಾಸಕರನ್ನು ಹೊರತುಪಡಿಸಿ ಒಟ್ಟಾರೆ ವಿಧಾನಸಭೆ ಸಂಖ್ಯಾಬಲ 209ಕ್ಕೆ ಇಳಿಯಲಿದೆ. ಆಗ ಬಹುಮತಕ್ಕೆ 105 ಬೇಕಾಗುತ್ತದೆ. ಸಮ್ಮಿಶ್ರ ಸರ್ಕಾರದ ಬಲ 102 ಮಾತ್ರ ಇರುವುದರಿಂದ ವಿಶ್ವಾಸಮತಕ್ಕೆ ಸೋಲಾಗುತ್ತದೆ. ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ಕೊಟ್ಟರೆ 107 ಸಂಖ್ಯಾಬಲದೊಂದಿಗೆ ಸರ್ಕಾರ ರಚನೆಗೆ ಅವಕಾಶ ಸಿಗುತ್ತದೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.

ಹೈಕಮಾಂಡ್‌ಗೆ ಖಡಕ್‌ ಸಂದೇಶ: ಸರ್ಕಾರ ಉಳಿಸಿಕೊಳ್ಳಲು ಕೊನೇ ಪ್ರಯತ್ನವಾಗಿ ಎರಡೂ ಪಕ್ಷಗಳು ಮುಂದಾಗಿದ್ದು ಮುಂಬೈನಲ್ಲಿರುವ ಅತೃಪ್ತ ಶಾಸಕರು ಮನವೊಲಿಕೆ ಸಾಧ್ಯವಾಗಿದ್ದರೆ ಅಂತಿಮವಾಗಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ಕೊಡು ವುದು ಅನಿವಾರ್ಯ ವಾಗಬಹುದು. ಇದಕ್ಕಾಗಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಇಬ್ಬರೂ ಕಾಂಗ್ರೆಸ್‌ ಹೈಕಮಾಂಡ್‌ಗೆ ಖಡಕ್‌ ಸಂದೇಶ ಸಹ ರವಾನಿಸಿ, ಮುಂಬೈನಲ್ಲಿರುವ ಕಾಂಗ್ರೆಸ್‌ ಶಾಸಕರನ್ನು ಕರೆಸುವ ಹೊಣೆ ನಿಮ್ಮದು, ನಮ್ಮ ಶಾಸಕರ ಕರೆಸುವ ಜವಾಬ್ದಾರಿ ನಮ್ಮದು. ಇಲ್ಲದಿದ್ದರೆ ನಮ್ಮ ದಾರಿ ನಮಗೆ ಎಂದೇ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಕೃಪೆ:ಉದಯವಾಣಿ

ಪವಾಡ ನಡೆದರಷ್ಟೇ ಸರ್ಕಾರದ ಉಳಿವು

the-government-is-as-safe-as-the-rest-of-the-bangalore-legislators

website developers in mysore