ಪಠ್ಯಪುಸ್ತಕಗಳನ್ನು ʼಪಕ್ಷಪುಸ್ತಕʼಗಳನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರಕ್ಕೆ ನನ್ನ ಧಿಕ್ಕಾರ- ಸರ್ಕಾರದ ವಿರುದ್ಧ ಹೆಚ್.ಡಿಕೆ ಆಕ್ರೋಶ.

ಬೆಂಗಳೂರು,ಮೇ,17,2022(www.justkannada.in):  ಪಠ್ಯಪುಸ್ತಕಗಳಲ್ಲಿ ಭಗತ್‌ ಸಿಂಗ್‌ ಅವರ ಪಠ್ಯಕ್ಕೆ ಕೋಕ್ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ಸಂಬಂಧ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು  ಸರಣಿ ಟ್ವೀಟ್ ಮಾಡಿರುವ ಹೆಚ್.ಡಿಕೆ, ಪಠ್ಯಪುಸ್ತಕಗಳನ್ನು ʼಪಕ್ಷಪುಸ್ತಕʼಗಳನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರಕ್ಕೆ ನನ್ನ ಧಿಕ್ಕಾರವಿದೆ. ಬಿಜೆಪಿಯ ನೈಜ ಬಣ್ಣದ ವಿಸ್ತೃತರೂಪವೇ ಆಯ್ದ ಪಠ್ಯಗಳನ್ನು ಟಾರ್ಗೆಟ್‌ ಮಾಡಿ ಡಿಲೀಟ್‌ ಮಾಡುವುದು. ಬಿಜೆಪಿಯ ಈ ಬುಡಮೇಲು ಕೃತ್ಯಗಳ ಬಗ್ಗೆ ನನಗೆ ಅಚ್ಚರಿಯೇನೂ ಇಲ್ಲ. ನನ್ನ ಜತೆ ಮೈತ್ರಿ ಸರಕಾರ ಮಾಡಿದಾಗ ಅವರ ಬೇಳೆ ಬೇಯಲಿಲ್ಲ. ʼಆಪರೇಷನ್‌ ಕಮಲʼದ ಅನೈತಿಕ ಮಾರ್ಗದಲ್ಲಿ ಅಧಿಕಾರಕ್ಕೆ ಬಂದ ʼಸ್ವಘೋಷಿತ ಡೋಂಗಿ ರಾಷ್ಟ್ರಭಕ್ತರುʼ ಇನ್ನೇನು ಮಾಡಲು ಸಾಧ್ಯ ಎಂದು ಕಿಡಿಕಾರಿದ್ದಾರೆ.

ಮಹಾನ್‌ ರಾಷ್ಟ್ರಪ್ರೇಮಿ, ಬ್ರಿಟೀಷರಿಗೆ ಸಿಂಹಸ್ವಪ್ನ, ಭಾರತಮಾತೆಯ ಹೆಮ್ಮೆಯ ಪುತ್ರ ಸರ್ದಾರ್‌ ಭಗತ್‌ ಸಿಂಗ್‌ ಅವರ ಪಠ್ಯಕ್ಕೆ ಕೊಕ್‌ ಕೊಟ್ಟು, ಆರೆಸ್ಸೆಸ್‌ ಸಂಸ್ಥಾಪಕ ಹೆಡಗೇವಾರ್‌ ಕುರಿತ ಮಾಹಿತಿಯನ್ನು ಪಠ್ಯಕ್ಕೆ ತುರುಕುತ್ತಿರುವ ಬಿಜೆಪಿ ಮತ್ತವರ ಪಟಾಲಂ ವಿಕೃತಿಗೆ ಇದು ಪರಾಕಾಷ್ಠೆ.

ಭಗತ್‌ ಸಿಂಗ್‌ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಗಲ್ಲಿಗೇರಿದರು. ಸಂಘ ಪರಿವಾರಿಗಳು ಅದೇ ಬ್ರಿಟೀಷರಿಗೆ ಪರಿಚಾರಿಕೆ ಮಾಡಿಕೊಂಡು ಸ್ವಾತಂತ್ರ್ಯಕ್ಕಿಂತ ಗುಲಾಮಗಿರಿಯೇ ಲೇಸೆಂದುಕೊಂಡಿದ್ದರು. ಇಂಥವರು, ಭಗತ್‌ ಸಿಂಗ್‌ʼರಂಥ ರಾಷ್ಟ್ರಪ್ರೇಮಿಗಳನ್ನು ಸಹಿಸಿಕೊಳ್ಳುತ್ತಾರೆಯೇ?  ಎಂದು ಸರ್ಕಾರದ ವಿರುದ್ಧ ಹೆಚ್.ಡಿಕೆ ಗುಡಗುಗಿದ್ದಾರೆ.

ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ, ಚಾರಿತ್ರ್ಯಹೀನತೆಯೇ ಮೈವೇತ್ತ ಬಿಜೆಪಿಗೆ ರಾಜ್ಯದ ಬೆಳವಣಿಗೆಯಲ್ಲಿ ನಂಬಿಕೆ ಇಲ್ಲ. ಹಿಜಾಬ್‌, ಆಹಾರ, ವ್ಯಾಪಾರ, ಹಲಾಲ್‌ ಎಲ್ಲಾ ಆಯಿತು. ಈಗ ಪಠ್ಯಕ್ಕೆ ನೇತಾಡುತ್ತಿದೆ. ಅಭಿವೃದ್ಧಿ ಎಂದರೆ ಆ ಪಕ್ಷಕ್ಕೆ ಅಪಥ್ಯ.

ಬಿಜೆಪಿಗರು ಮತ್ತು ಬ್ರಿಟೀಷರು ಇಬ್ಬರೂ ಒಂದೇ. ಒಡೆದು ಆಳುವುದೇ ಇವರ ನೀತಿ & ಧರ್ಮ. ಬ್ರಿಟೀಷ್‌ ಪರಂಪರೆಯನ್ನು ಬಿಜೆಪಿಗರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲೂ ಮುಂದುವರಿಸಿದ್ದಾರೆ. ಜನರ ಸ್ವಾತಂತ್ರ್ಯವನ್ನು ಸಹಿಸಲು ಅವರಿಗೆ ಆಗುತ್ತಿಲ್ಲ

ಪಠ್ಯವನ್ನು ವಿಕೃತಿಗೊಳಿಸುತ್ತಿರುವುದು ಎಂದರೆ, ಕನ್ನಡ ಆಸ್ಮಿತೆಯನ್ನು ಹತ್ತಿಕ್ಕುವ ಪಾತಕ ಯತ್ನ. ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು, ಪ್ರಶ್ನಿಸಬೇಕು. ಹೋರಾಟಕ್ಕೂ ಇಳಿಯಬೇಕು. “ಅಯ್ಯೋ.. ಕರ್ನಾಟಕ ಕಟುಕರ  ಕೈಯಲ್ಲಿ ಸಿಕ್ಕಿಕೊಂಡಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: text book-Bhagath singh- government- HD Kumaraswamy