ಬೆಂಗಳೂರನ್ನು ಭಿಕ್ಷಾಟನಾ ಮುಕ್ತ ನಗರವನ್ನಾಗಿಸಲು ತೆರಿಗೆ ಸಂಗ್ರಹ : ಆದರೂ ಪರಿಸ್ಥಿತಿ ಸುಧಾರಿಸಿಲ್ಲ.

ಬೆಂಗಳೂರು, ಅಕ್ಟೋಬರ್ 28, 2022(www.justkannada.in): ಬೆಂಗಳೂರು ಮಹಾನಗರವನ್ನು ಭಿಕ್ಷಾಟನಾ ಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜನರಿಂದ ಸೆಸ್ (ತೆರಿಗೆ) ರೂಪದಲ್ಲಿ ಹಣ ಸಂಗ್ರಹಿಸಿತು. ಆದರೆ ನಗರದಲ್ಲಿ ಭಿಕ್ಷುಕರ ಪುನರ್ವಸತಿ ಏನೂ ಸುಧಾರಿಸಿಲ್ಲ.

ಬೆಂಗಳೂರನ್ನು ಭಿಕ್ಷಾಟನಾ ಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ಜನರಿಂದ ತೆರಿಗೆ ರೂಪದಲ್ಲಿ ಹಣ ಸಂಗ್ರಹಿಸಲಾಗುತ್ತಿದೆ. ಇದರಿಂದ ನಗರದಲ್ಲಿರುವ ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಆದರೆ ಈಗಲೂ ನಗರದಲ್ಲಿ ಎಲ್ಲೆಂದರಲ್ಲಿ ಭಿಕ್ಷುಕರು ಕಂಡು ಬರುತ್ತಿದ್ದಾರೆ. ಹಾಗಾದರೆ ಜನರಿಂದ ಸಂಗ್ರಹಿಸಿದ ತೆರಿಗೆ ಹಣ ಎಲ್ಲಿ ಹೋಯಿತು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಇತ್ತೀಚೆಗೆ ವಿಧಾನ ಪರಿಷತ್‌ ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಭಿಕ್ಷಾಟನಾ ನಿರ್ಮೂಲನಾ ತೆರಿಗೆ ರೂಪದಲ್ಲಿ ರಾಜ್ಯದ 10 ಮುನಿಸಿಪಲ್ ನಿಗಮಗಳಿಂದ ಒಟ್ಟು ರೂ. 437 ಕೋಟಿ ಸಂಗ್ರಹಿವಾಗಿರುವುದಾಗಿ ತಿಳಿಸಿದರು. ಈ ಪೈಕಿ ಬೆಂಗಳೂರು ಮಹಾನಗರ ಸಿಂಹಪಾಲು ಅನ್ನು ಹೊಂದಿದೆ.  ಅಂದರೆ ಬೆಂಗಳೂರಿಗರಿಂದಲೇ ಬರೋಬ್ಬರಿ ರೂ.309 ಕೋಟಿ ಭಿಕ್ಷಾಟನಾ ನಿರ್ಮೂಲನಾ ತೆರಿಗೆ ಸಂಗ್ರಹಿಸಲಾಗಿದೆ.

ಈ ಹಣವನ್ನು ರಾಜ್ಯದಲ್ಲಿರುವ 14 ಭಿಕ್ಷುಕರ ಪುನರ್ವಸತಿ ಕೇಂದ್ರಗಳ ಅಭಿವೃದ್ಧಿಗಾಗಿ ವ್ಯಯಿಸಲಾಗಿದೆ ಎಂದು ಪೂಜಾರಿ ಅವರು ಮಾಹಿತಿ ನೀಡಿದರು. ಈ ಹಣದಲ್ಲಿ ಕೇಂದ್ರಗಳಿಗೆ ಮೂಲಸೌಕರ್ಯ ಒದಗಿಸುವುದು, ಹೊಸ ಕಟ್ಟಡಗಳ ನಿರ್ಮಾಣ, ಸಿಬ್ಬಂದಿ ವೇತನ, ಕೇಂದ್ರದಲ್ಲಿರುವ ನಿವಾಸಿಗಳ ನಿರ್ವಹಣೆ, ಇತ್ಯಾದಿಗಳಿಗೆ ಹಣ ಖರ್ಚು ಮಾಡಲಾಗಿದೆಯಂತೆ.

ಆದರೆ ಈ ತೆರಿಗೆ ಮೊತ್ತ ಸಂಗ್ರಹ ಹಾಗೂ ಆ ಮೊತ್ತದ ಸರಿಯಾದ ಬಳಕೆಯನ್ನು ನಾಗರಿಕರು ಪ್ರಶ್ನಿಸಿದ್ದಾರೆ. ಕರ್ನಾಟಕ ಭಿಕ್ಷಾಟನಾ ನಿರ್ಮೂಲನಾ ಕಾಯ್ದೆ, ೧೯೭೫ರ ಪ್ರಕಾರ, ಬಿಬಿಎಂಪಿ ಸಂಗ್ರಹಿಸುವ ಒಟ್ಟು ಆಸ್ತಿ ತೆರಿಗೆಯಲ್ಲಿ ಶೇ.3ರಷ್ಟು ತೆರಿಗೆ ಮೊತ್ತವನ್ನು ಭಿಕ್ಷುಕರ ಪುನರ್ವಸತಿಗಾಗಿ ವರ್ಗಾಯಿಸಬೇಕು.

“ಬೆಂಗಳೂರು ನಗರದಲ್ಲಿ ಸಂಚಾರಿ ಸಿಗ್ನಲ್‌ ಗಳ ಬಳಿ ನಿಲ್ಲುವುದು ವಾಹನ ಚಾಲಕರಿಗೆ ದುಸ್ತರವಾಗಿದೆ. ಕಾಯುವ ಸಮಯವೇ ಹೆಚ್ಚಾಗಿರುವ ಸಂದರ್ಭದಲ್ಲಿ ಅನೇಕ ಭಿಕ್ಷುಕರು ಜನರನ್ನು ಭಿಕ್ಷೆ ನೀಡಲು ಪೀಡಿಸುತ್ತಾರೆ. ಚಿಕ್ಕ ಮಕ್ಕಳನ್ನೂ ಸಹ ಭಿಕ್ಷಾಟನೆಗೆ ದೂಡುವುದು ಅಥವಾ ಬಳಸಿಕೊಳ್ಳುವುದನ್ನು ನೋಡುವುದಕ್ಕೆ ಬಹಳ ಬೇಸರ ಹಾಗೂ ದುಃಖವಾಗುತ್ತದೆ. ನಾವು ಅಯ್ಯೋ ಎಂದು ಭಿಕ್ಷೆ ನೀಡಿದರೆ ಅದು ನಾವೇ ಸ್ವತಃ ಭಿಕ್ಷಾಟನೆಗೆ ಪ್ರೋತ್ಸಾಹ ನೀಡಿದಂಥಾಗುತ್ತದೆ. ಆಧರೆ ಅವರ ಮುಖಗಳನ್ನು ನೋಡಿದಾಗ ಸುಮ್ಮನೆ ಇರಲೂ ಆಗುವುದಿಲ್ಲ. ಸರ್ಕಾರ ಭಿಕ್ಷಾಟನಾ ನಿರ್ಮೂಲನೆಗಾಗಿ ತೆರಿಗೆ ಸಂಗ್ರಹಿಸುತ್ತಿದೆ. ಆದರೆ ಭಿಕ್ಷುಕರ ಪುನರ್ವಸತಿ ಮಾತ್ರ ಆಗುತಿಲ್ಲ. ಹಾಗಾದರೆ, ಜನರ ಹಣ ಎಲ್ಲಿಗೆ ಹೋಯಿತು?,” ಎನ್ನುವುದು ಟೆಕ್ಕಿ ಸಂತೋಷ್ ರೆಡ್ಡಿಯವರ ಪ್ರಶ್ನೆಯಾಗಿದೆ.

ದೃತಿ ಆರ್. ಎಂಬ ಕಾಲೇಜು ವಿದ್ಯಾರ್ಥಿನಿ ತನ್ನ ಅಭಿಪ್ರಾಯವನ್ನು ಹಂಚಿಕೊಂಡಂತೆ ಭಿಕ್ಷುಕರ ಪುನರ್ವಸತಿಗಾಗಿ ಸಂಗ್ರಹಿಸಿರುವ ಈ ಭಿಕ್ಷಾಟನಾ ತೆರಿಗೆ ಮೊತ್ತ ಸಂಬಂಧಪಟ್ಟ ಅಧಿಕಾರಿಗಳ ಪಾಲಾಗಿದೆ. “ಜೊತೆಗೆ ಭಿಕ್ಷುಕರೂ ಸಹ ಪುನರ್ವಸತಿ ಕೇಂದ್ರಕ್ಕೆ ಹೋಗಲು ನಿರಾಕರಿಸುತ್ತಿರಬಹುದು. ಏಕೆಂದರೆ ಅಲ್ಲಿನ ಪರಿಸ್ಥಿತಿಗಳು ಹಾಗಿರುತ್ತವೇನೋ? ಹಾಗಾಗಿ ಸರ್ಕಾರ ಈ ವಿಚಾರದಲ್ಲಿ ಸೂಕ್ತ ತನಿಖೆ ಕೈಗೊಂಡ ಸರಿಪಡಿಸಬೇಕು ಅಲ್ಲವೆ,” ಎಂದು ಕೇಳಿದರು.

ಸ್ಥಳಾಂತರ ಯೋಜನೆ

ಈ ನಡುವೆ, ಮಾಗಡಿ ರಸ್ತೆಯಲ್ಲಿರುವ ಭಿಕ್ಷುಕರ ಪುನರ್ವಸತಿ ಕೇಂದ್ರವನ್ನು ಸ್ಥಳಾಂತರಿಸಲು ಯೋಜಿಸಲಾಗಿದೆ. ಈ ಕಾಲೋನಿ ಮಾಗಡಿ ರಸ್ತೆಯಲ್ಲಿರುವ ವರ್ತುಲ ರಸ್ತೆಯ ಪಕ್ಕದಲ್ಲೇ ಬಹಳ ಮುಖ್ಯವಾದ ಸ್ಥಳದಲ್ಲಿದೆ. ಸರ್ಕಾರಕ್ಕೆ ಈ ಸ್ಥಳವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಬಹುದು ಎಂದನಿಸಿದ್ದು, ಈ ಕಟ್ಟಡವನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಆಲೋಚಿಸುತ್ತಿದೆ.

ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ, ೧೫೦ ಎಕರೆಯಷ್ಟಿರುವ ಭಿಕ್ಷುಕರ ಕಾಲೋನಿಯನ್ನು ಒಂದು ಮಿನಿ ಲಾಲ್‌ ಬಾಗ್ ಆಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ್ದರು.

ಆಗಸ್ಟ್ ೨೦೧೦ರಲ್ಲಿ ಇಲ್ಲಿನ ೨೩ಕ್ಕೂ ಹೆಚ್ಚಿನ ಸಂಖ್ಯೆಯ ನಿವಾಸಿಗಳು ನಿಗೂಢವಾಗಿ ಸಾವನ್ನಪ್ಪಿದ್ದರು. ಇದರಿಂದಾಗಿ ಭಯಗೊಂಡಿದ್ದಂತಹ ಅಲ್ಲಿದ್ದ ಪೈಕಿ ಸುಮಾರು ೨೦೦ ಜನರು ಅಲ್ಲಿಂದ ತಪ್ಪಿಸಿಕೊಂಡು ಹೊರಟು ಹೋಗಿದ್ದರು. ಆ ಪುನರ್ವಸತಿ ಕೇಂದ್ರದ ಅಧಿಕಾರಿಗಳು ಈ ಸಂಬಂಧ ಕಾಮಾಕ್ಷಿಪಾಳ್ಯ ಪೋಲಿಸ್ ಠಾಣೆಯಲ್ಲಿ ದೂರನ್ನೂ ಸಹ ದಾಖಲಿಸಿದ್ದರು.

ಬೆಂಗಳೂರಿನಲ್ಲಿ ಮಕ್ಕಳ ಭಿಕ್ಷಾಟನಾ ಪ್ರಮಾಣದಲ್ಲಿ ಹೆಚ್ಚು..

ರಾಜ್ಯ ಸರ್ಕಾರದ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ, ನಗರದ ರಸ್ತೆಗಳಲ್ಲಿ ಭಿಕ್ಷಾಟನೆ ನಡೆಸುತ್ತಿದ್ದ ಸುಮಾರು ೧೮೯ ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಲಾಗಿದೆ. ಆದಾಗ್ಯೂ, ಇಂತಹ ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಮಾಹಿತಿ ಲಭಿಸಿದೆ. ೨೦೨೦ರಲ್ಲಿ ನಗರದಲ್ಲಿ ೨೭ ಮಕ್ಕಳನ್ನು ರಕ್ಷಿಸಲಾಗಿತ್ತು. ಈ ಸಂಖ್ಯೆ ೨೦೨೧ರಲ್ಲಿ ೭೮ಕ್ಕೆ ಹಾಗೂ ೨೦೨೨ರಲ್ಲಿ ಈವರೆಗೆ ೮೪ಕ್ಕೆ ಏರಿದೆ. ಸಚಿವ ಹಾಲಪ್ಪ ಆಚಾರ್ ಅವರು ಈ ಸಂಬಂಧ ಮಾತನಾಡಿ, ಭಿಕ್ಷಾಟನೆಯಿಂದ ರಕ್ಷಿಸಿದಂತಹ ಮಕ್ಕಳನ್ನು ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ನಿರ್ವಹಿಸುತ್ತಿರುವಂತಹ ಪುನರ್ವಸತಿ ಗೃಹಗಳಿಗೆ ಭರ್ತಿ ಮಾಡಲಾಗಿದೆ. ಇಂತಹ ಮಕ್ಕಳಿಗೆ ಶಿಕ್ಷಣ ಹಾಗೂ ವಿವಿಧ ಕೌಶಲ್ಯಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಆದರೆ ಆಶ್ಚರ್ಯಕರವಾಗಿ, ಬೆಂಗಳೂರು ಮಹಾನಗರವನ್ನು ಭಿಕ್ಷುಕರ ಮುಕ್ತವನ್ನಾಗಿಸಲು, ತೆರಿಗೆ ಪಾವತಿದಾರರು ೨೦೨೧-೨೨ನೇ ಸಾಲಿನಲ್ಲಿ ಬರೋಬ್ಬರಿ ರೂ.೫,೧೪,೬೪೧,೩೮೫ ಭಿಕ್ಷಾಟನಾ ನಿರ್ಮೂಲನಾ ತೆರಿಗೆ ರೂಪದಲ್ಲಿ ಪಾವತಿಸಿದ್ದಾರೆ. ಈ ಮೊತ್ತವನ್ನು ಕೇಂದ್ರ ಪರಿಹಾರ ಸಮಿತಿ (ಸಿಆರ್‌ಸಿ)ಯಲ್ಲಿ ಠೇವಣಿ ಇರಿಸಲಾಗಿದೆ. ಕಳೆದ ೧೦ ವರ್ಷಗಳಲ್ಲಿ ಭಿಕ್ಷುಕರ ಪುನರ್ವಸತಿಗಾಗಿ ಸಿಆರ್‌ ಸಿಗೆ ಬರೋಬ್ಬರಿ ರೂ.೩,೦೯,೦೩೮೮,೮೦೮ ತೆರಿಗೆ ಸಂಗ್ರಹವಾಗಿದೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Tax -collection – make -Bangalore -beggar-free- city