ಮಹಿಳೆ ರಕ್ಷಣೆಗೆ ಒನ್​ಸ್ಟಾಪ್ ಸೆಂಟರ್!

ಬಳ್ಳಾರಿ: ಜೂ-24: ದೌರ್ಜನ್ಯ, ಅತ್ಯಾಚಾರ, ಅನ್ಯಾಯಕ್ಕೊಳಗಾದ ಹೆಣ್ಣುಮಕ್ಕಳು ಸಮಾಜದಲ್ಲಿ ಮರಳಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ನೆರ ವಾಗಲು ಕೇಂದ್ರ ಸರ್ಕಾರ ನಿರ್ಭಯ ನಿಧಿ ಯೋಜನೆಯಡಿ ಡಿಸೆಂಬರ್​ನಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ಒನ್ ಸ್ಟಾಪ್ ಸೆಂಟರ್’ ಆರಂಭಿಸುತ್ತಿದ್ದು, ಒಂದೇ ಸೂರಿನಡಿ ಅಗತ್ಯ ಸೌಲಭ್ಯ ಸಿಗಲಿದೆ. ಜಿಲ್ಲಾಸ್ಪತ್ರೆಗೆ ಹೊಂದಿಕೊಂಡಂತೆ ಒಂದು ಕಿಮೀ ವ್ಯಾಪ್ತಿಯೊಳಗೆ ಕೇಂದ್ರ ಆರಂಭಿಸಲು ಯೋಜನೆ ರೂಪಿಸಲಾಗಿದ್ದು, ಪ್ರತಿ ಕೇಂದ್ರಕ್ಕೆ 38 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಮೊದಲ ಕಂತಿನ 18 ಲಕ್ಷ ರೂ. ಬಿಡುಗಡೆ ಆಗಿದ್ದು, ಸೆಂಟರ್ ನಿರ್ವಹಣೆಗೆ ಸರ್ಕಾರ ಪ್ರತಿ ತಿಂಗಳು ಎರಡು ಲಕ್ಷ ರೂ. ಬಿಡುಗಡೆ ಮಾಡಲಿದೆ.

ಸಿಗುವ ಸೌಲಭ್ಯಗಳು: ದೌರ್ಜನ್ಯಕ್ಕೆ ಒಳಗಾದ ಬಾಲಕಿ, ಯುವತಿ, ಮಹಿಳೆಯರಲ್ಲಿನ ಒಂಟಿತನ ದೂರ ಮಾಡಿ, ಸಮಾಜದಲ್ಲಿ ಎಲ್ಲರಂತೆ ಬದುಕು ಸಾಗಿಸುವ ಬಗೆಯನ್ನ ನಿರೂಪಿಸಲಾಗುತ್ತದೆ. ಒಂದೇ ಸೂರಿನಡಿ ವೈದ್ಯಕೀಯ, ಕಾನೂನು, ಆಪ್ತ ಸಮಾಲೋಚಕರ ಸೌಲಭ್ಯವಿದ್ದು, ತಕ್ಷಣದ ಸ್ಪಂದನೆ ಸಿಗಲಿದೆ. ಪರಿತ್ಯಕ್ತ ಮಹಿಳೆಯರಿಗೆ ವಸತಿ ಸೌಲಭ್ಯ ಒದಗಿಸುವ ಜತೆಗೆ ಸಾಮಾಜಿಕ ಬೆಂಬಲ ನೀಡಲಾಗುತ್ತಿದೆ.

ಗೆಳತಿ ಜತೆಗೆ ವಿಲೀನ?: ಈಗಾಗಲೇ ರಾಜ್ಯ ಸರ್ಕಾರ ಗೆಳತಿ ವಿಶೇಷ ಚಿಕಿತ್ಸಾ ಘಟಕ ಆರಂಭಿಸಿದ್ದರೂ ಅಲ್ಲಿ ಪೊಲೀಸ್ ನೆರವು ಹಾಗೂ ಕೌನ್ಸೆಲಿಂಗ್ ಮಾತ್ರ ನೀಡಲಾಗುತ್ತಿದೆ. ಹೀಗಾಗಿ ಒನ್ ಸ್ಟಾಪ್ ಸೆಂಟರ್ ಆರಂಭಿಸಿ, ಮುಂದೆ ಇದರಲ್ಲಿಯೇ ಗೆಳತಿ ವಿಶೇಷ ಚಿಕಿತ್ಸಾ ಘಟಕ ವಿಲೀನ ಮಾಡುವ ಉದ್ದೇಶ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ.

ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಒಂದೇ ಸೂರಿನಡಿ ಸೌಲಭ್ಯ ದೊರೆಯಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ರಾಜ್ಯಾದ್ಯಂತ ಒನ್ ಸ್ಟಾಪ್ ಸೆಂಟರ್ ಆರಂಭಿಸಲಾಗುತ್ತಿದೆ.

| ವಿಜಯಕುಮಾರ, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಳ್ಳಾರಿ
ಕೃಪೆ:ವಿಜಯವಾಣಿ
state-government-planning-to-start-one-stop-centres-for-women-affected-by-violence