ಗೋಶಾಲೆ ತೆರೆಯುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ

ಬೆಂಗಳೂರು:ಆ-5: ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ಮುಖ್ಯಮಂತ್ರಿಗಳು ತಾಕೀತು ಮಾಡಿದ್ದಾರೆ. ಬರ ನಿರ್ವಹಣೆ, ಗೋಶಾಲೆ ತೆರೆಯುವ ವಿಚಾರವಾಗಿ ಹೈಕೋರ್ಟ್‌ ಚಾಟಿ ಬೀಸಿದೆ. ಆದರೆ, ಅಧಿಕಾರಿಗಳ ಕಾರ್ಯವೈಖರಿ ಮಾತ್ರ “ಆಮೆ ನಡಿಗೆ’ಯನ್ನೂ ನಾಚಿಸುವಂತಿದೆ.

ರಾಜ್ಯದ ಬರಪೀಡಿತ ತಾಲೂಕುಗಳಲ್ಲಿ ಗೋಶಾಲೆ ತೆರೆಯುವ ಸಂಬಂಧ ಹೈಕೋರ್ಟ್‌ ಆದೇಶಕ್ಕೂ ಅಧಿಕಾರಿಗಳು “ಕ್ಯಾರೆ ಅನ್ನುತ್ತಿಲ್ಲ’. ಎರಡು ವಾರದೊಳಗೆ ಎಲ್ಲ ಬರಪೀಡಿತ ತಾಲೂಕುಗಳಲ್ಲಿ ಗೋಶಾಲೆ ತೆರೆಯುವಂತೆ ಹೈಕೋರ್ಟ್‌ ಗಡುವು ನೀಡಿದ್ದರೂ, ಅಧಿಕಾರಿಗಳು ಮಾತ್ರ ಈಗ ಎಚ್ಚೆತ್ತುಕೊಂಡಿದ್ದಾರೆ.

ಈ ನಡುವೆ ಕಳೆದ ವಾರದಿಂದ ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯ ಞಚೂರು, ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದ್ದು, ಬರ ನಿರ್ವಹಣೆಗೆ ಮತ್ತಷ್ಟು ಸವಾಲು ಎದುರಾಗಿದೆ. ಪ್ರವಾಹ ಸ್ಥಿತಿಯಲ್ಲಿ ಜಾನುವಾರ ರಕ್ಷಣೆ ಹಾಗೂ ಗೋಶಾಲೆಗಳನ್ನು ತೆರೆಯುವುದು ಇನ್ನಷ್ಟು ಮುಖ್ಯವಾಗುತ್ತದೆ.

ರಾಜ್ಯದಲ್ಲಿ ಕಳೆದ ಮುಂಗಾರು ಹಾಗೂ ಹಿಂಗಾರಿನಲ್ಲಿ ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿರುವ 156 ತಾಲೂಕುಗಳಲ್ಲಿ ಹಾಗೂ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆ ಎದುರಿಸುತ್ತಿರುವ 56 ತಾಲೂಕುಗಳಲ್ಲಿ ಎರಡು ವಾರಗಳಲ್ಲಿ ತಲಾ ಒಂದೊಂದು ಗೋಶಾಲೆ ತೆರೆಯುವಂತೆ ಹೈಕೋರ್ಟ್‌ ಜು. 22ರಂದು ಆದೇಶ ನೀಡಿದ್ದರೂ, ಈ ಸಂಬಂಧ ಪಶುಸಂಗೋಪನಾ ಇಲಾಖೆ ಆ. 2ರಂದು ಸುತ್ತೋಲೆ ಹೊರಡಿಸಿದೆ.

ಬರ ನಿರ್ವಹಣೆ, ಗೋಶಾಲೆ ತೆರೆಯವುದು ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ-2005ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರದ ವೈಫ‌ಲ್ಯಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್‌, ಬರಪೀಡಿತ 156 ತಾಲೂಕುಗಳಲ್ಲಿ ಗೋಶಾಲೆ ತೆರೆಯಲು 2019ರ ಮೇ 3ರಂದು ನೀಡಲಾಗಿದ್ದ ನಿರ್ದೇಶನವನ್ನು ಸರ್ಕಾರ ಕಡ್ಡಾಯವಾಗಿ ಪಾಲಿಸಬೇಕು ಹಾಗೂ 56 ತಾಲೂಕುಗಳನ್ನು ತಕ್ಷಣ ಬರಪೀಡಿತ ಎಂದು ಘೋಷಿಸಿ ಆ ತಾಲೂಕುಗಳಲ್ಲೂ ಕನಿಷ್ಠ ಒಂದರಂತೆ ಗೋಶಾಲೆ ತೆರೆಯಬೇಕು.

ಇದಕ್ಕಾಗಿ ನ್ಯಾಯಾಲಯದ ಆದೇಶದ ಪ್ರತಿಗೂ ಕಾಯುವಂತಿಲ್ಲ ಎಂದು ಹೈಕೋರ್ಟ್‌ ಹೇಳಿತ್ತು. ಆದರೆ, ಹೈಕೋರ್ಟ್‌ ಆದೇಶ ನೀಡಿ 10 ದಿನ ಕಳೆದ ಬಳಿಕ ಗೋಶಾಲೆ ತೆರೆಯುವ ಬಗ್ಗೆ ಪಶುಸಂಗೋಪನಾ ಇಲಾಖೆ ಸುತ್ತೋಲೆ ಹೊರಡಿಸಿದೆ. ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ಪ್ರಕಾರ ಬರಪೀಡಿತ ಪ್ರದೇಶಗಳಲ್ಲಿ ಗೋಶಾಲೆ ತೆರೆಯುವ ಹಾಗೂ ಬರ ನಿರ್ವಹಣೆಗೆ ಸಂಬಂಧಿಸಿದ ಅನುಪಾಲನಾ ವರದಿಯನ್ನು ಆ.8ಕ್ಕೆ ಹೈಕೋರ್ಟ್‌ಗೆ ಸಲ್ಲಿಸಬೇಕಿದೆ.

ಅದಕ್ಕಾಗಿ ಆ.2ಕ್ಕೆ ಸುತ್ತೋಲೆ ಹೊರಡಿಸಿ ಆ.5ರೊಳಗೆ ಎಲ್ಲ ಬರಪೀಡಿತ ಪ್ರದೇಶಗಳಲ್ಲಿ ಗೋಶಾಲೆ ತೆರೆಯುವಂತೆ ಪಶುಸಂಗೋಪನಾ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದು ಬರೀ ಕಣ್ಣೋರೆಸುವ ತಂತ್ರವಷ್ಟೇ ಎಂದು ಈ ವಿಚಾರವಾಗಿ ಕಾನೂನು ಹೋರಾಟ ನಡೆಸುತ್ತಿರುವ ಎ.ಮಲ್ಲಿಕಾರ್ಜುನ ಹೇಳುತ್ತಾರೆ.

ಕೇವಲ 27 ಗೋಶಾಲೆ: ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕೇವಲ 27 ಗೋಶಾಲೆಗಳನ್ನು ತೆರೆಯಲಾಗಿದೆ. ಆದರೆ, ಬರಪೀಡಿತ ಪ್ರದೇಶಗಳ ವ್ಯಾಪ್ತಿಯಲ್ಲಿ 80 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿವೆ ಎಂದೂ ಸಹ ಸರ್ಕಾರ ಹೇಳಿದೆ. ಸದ್ಯ ಪ್ರತಿ ದಿನ ಪ್ರತಿ ಜಾನುವಾರುಗೆ 5 ಕೆ.ಜಿ. ಒಣ ಮೇವು ಹಾಗೂ 2 ಕೆ.ಜಿ. ಪಶು ಆಹಾರ ನೀಡಲಾಗುತ್ತಿದೆ. ಮೇವು ಹೆಚ್ಚಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಆದರೆ, ಈ ವಿಚಾರವಾಗಿ ಸರ್ಕಾರದಿಂದ ಅಂತಿಮ ತೀರ್ಮಾನ ಆಗುವವರೆಗೆ ಪ್ರತಿ ಜಾನುವಾರಿಗೆ ದಿನಕ್ಕೆ 6 ಕೆ.ಜಿ. ಒಣ ಮೇವು, 18 ಕೆ.ಜಿ. ಹಸಿರು ಮೇವು ಹಾಗೂ 1 ಕೆ.ಜಿ. ಪಶು ಆಹಾರ ನೀಡುವಂತೆ ಹೈಕೋರ್ಟ್‌ ಹೇಳಿದೆ.

ಬರ ನಿರ್ವಹಣೆ ಹಾಗೂ ಗೋಶಾಲೆ ತೆರೆಯವ ವಿಚಾರದಲ್ಲಿ ಸರ್ಕಾರ ಗಂಭೀರ ನಿರ್ಲಕ್ಷ್ಯ ತೋರಿದ್ದು, ಹೈಕೋರ್ಟ್‌ ಆದೇಶದ ಉಲ್ಲಂಘನೆ ಮಾಡಿದೆ. ಆದೇಶದ ಪ್ರತಿ ಕಾಯದೆ ಒಂದು ವಾರದಲ್ಲಿ ಗೋಶಾಲೆ ತೆರೆಯುವಂತೆ ಹೈಕೋರ್ಟ್‌ ಸ್ಪಷ್ಟವಾಗಿ ಹೇಳಿದ್ದರೂ, ಪಶುಸಂಗೋಪನಾ ಇಲಾಖೆ ಕ್ರಮ ಕೈಗೊಂಡಿಲ್ಲ. ಹಾಗಾಗಿ, ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್‌ ಕೊಟ್ಟಿದ್ದೇನೆ.
-ಎ.ಮಲ್ಲಿಕಾರ್ಜುನ್‌, ಅರ್ಜಿದಾರ
ಕೃಪೆ:ಉದಯವಾಣಿ

ಗೋಶಾಲೆ ತೆರೆಯುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ

state-government-negligence-in-opening-goshala