ಉಪ ಸಮರ ತಯಾರಿ ಮೈತ್ರಿಯಲ್ಲಿ ಕಿರಿಕಿರಿ

ಬೆಂಗಳೂರು:ಆ-5: ಸಮ್ಮಿಶ್ರ ಸರ್ಕಾರ ಪತನದ ಬಳಿಕ ಇದೀಗ ಮುಂಬರುವ ಉಪ ಚುನಾವಣೆಯಲ್ಲಿ ಮೈತ್ರಿ ಮುಂದುವರಿಸಬೇಕೆ, ಬೇಡವೇ ಎಂಬ ವಿಚಾರ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಸರ್ಕಾರ ಪತನಗೊಂಡ ಬಳಿಕ ಕಾಂಗ್ರೆಸ್, ಜೆಡಿಎಸ್ ನಾಯಕರು ಹಾವು- ಮುಂಗುಸಿಯಂತೆ ಕಿತ್ತಾಡುತ್ತಿದ್ದು, ಕಾಂಗ್ರೆಸ್ ಸಭೆಯಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಎಚ್.ಕೆ.ಪಾಟೀಲ ಮತ್ತಿತರ ನಾಯಕರು ಮೈತ್ರಿ ಕಡಿದುಕೊಳ್ಳುವುದೇ ಸರಿ ಎಂದು ಹೇಳಿದ್ದಾರೆ. ಇದಕ್ಕೂ ಕೆಲ ದಿನ ಮುನ್ನ ಮೈತ್ರಿಯಿಂದ ತಮಗೆ ದೊಡ್ಡ ಪ್ರಮಾಣದ ನಷ್ಟವಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರು ದೇವೇಗೌಡರ ಎದುರು ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದ್ದರು.

ಮತ್ತೊಂದೆಡೆ ಮೈತ್ರಿ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಜತೆ ರ್ಚಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ ಬೆನ್ನಲ್ಲೇ ಇನ್ನುಮುಂದೆ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ನಡುವೆ ಕಾಂಗ್ರೆಸ್ 17 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದೆ. ಅತ್ತ ಜೆಡಿಎಸ್ ಕೂಡ ಬೆಂಗಳೂರಿನ ಮಹಾಲಕ್ಷಿ್ಮ ಲೇ ಔಟ್, ಯಶವಂತಪುರ, ಕೆ.ಆರ್.ಪುರಂ, ರಾಜರಾಜೇಶ್ವರಿ ನಗರ ಕ್ಷೇತ್ರಗಳ ಅಭ್ಯರ್ಥಿಗಳ ಹುಡುಕಾಟಕ್ಕಾಗಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದೆ.

ಪಾಠ ಕಲಿಸಲು ಅನಿವಾರ್ಯ: ಮೈತ್ರಿ ಸರ್ಕಾರ ಮುರಿದು ಬೀಳಲು ಕಾರಣರಾದ 17 ಅನರ್ಹರನ್ನು ಸೋಲಿಸಲೇಬೇಕೆಂಬುದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಹಠ. ಈ ಹಠ ಸಾಧನೆಯಾಗಬೇಕಾದರೆ ಮೈತ್ರಿ ಅನಿವಾರ್ಯ ಎಂಬ ಚಿಂತನೆಯೂ ಶುರುವಾಗಿದೆ.

ಉಪ ಚುನಾವಣೆ ತಯಾರಿ

ಮುಂಬರುವ ಉಪ ಚುನಾವಣೆಯಲ್ಲಿ ಅನರ್ಹಗೊಂಡವರನ್ನೇ ಪಕ್ಷದಿಂದ ಕಣಕ್ಕಿಳಿಸಿ ಹೆಚ್ಚು ಕ್ಷೇತ್ರ ಗೆಲ್ಲುವ ಮೂಲಕ ಸರ್ಕಾರ ಭದ್ರ ಮಾಡಿಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ. ಇತ್ತ ಬಿಜೆಪಿಗೆ ಎದಿರೇಟು ನೀಡಲು ಕಾದಿರುವ ಕಾಂಗ್ರೆಸ್ ಬಿಜೆಪಿಯ ಪ್ರಭಾವಿ ಅಭ್ಯರ್ಥಿಯನ್ನು ತಮ್ಮತ್ತ ಸೆಳೆದು ಕಣಕ್ಕಿಳಿಸುವ ಪ್ರತಿತಂತ್ರ ಹೂಡುತ್ತಿದೆ. ಕಾಗವಾಡ ಕ್ಷೇತ್ರದಲ್ಲಿ ರಾಜುಕಾಗೆ, ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ, ಹಿರೆಕೆರೂರಲ್ಲಿ ಬಣಕಾರ್ ಅವರನ್ನು ಪಕ್ಷಕ್ಕೆ ಕರೆತಂದರೆ ಹೇಗೆ ಎಂಬ ಬಗ್ಗೆ ಕೈ ನಾಯಕರು ಚರ್ಚೆ ನಡೆಸಿದ್ದಾರೆ.
ಕೃಪೆ:ವಿಜಯವಾಣಿ

ಉಪ ಸಮರ ತಯಾರಿ ಮೈತ್ರಿಯಲ್ಲಿ ಕಿರಿಕಿರಿ
congress-and-jds-leaders-confused-about-continuation-of-coalition-in-by-election