ಆಪರೇಷನ್ ಫ್ಲಾಪ್​ಗೆ ಸಿದ್ದರಾಮಯ್ಯ ರೆಡಿ!

ಬೆಂಗಳೂರು:ಮೇ-26: ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಯಾವುದೇ ಕಾರಣಕ್ಕೂ ಬಲಿ ಕೊಡಬಾರದೆಂಬ ಪಕ್ಷದ ಹೈಕಮಾಂಡ್ ಸೂಚನೆಯಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಖಾಡಕ್ಕೆ ಇಳಿದಿದ್ದು, ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದಾರೆ. ಇದರ ಮೊದಲ ಭಾಗವಾಗಿ ಪಕ್ಷೇತರ ಶಾಸಕ, ಮಾಜಿ ಸಚಿವ ಆರ್. ಶಂಕರ್ ಅವರನ್ನು ಸೆಳೆದುಕೊಂಡಿದ್ದಾರೆ.

ಶನಿವಾರ ನವದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿಗೆ ತೆರಳಿದ ಸಂದರ್ಭದಲ್ಲಿ ಶಂಕರ್​ರನ್ನು ಕರೆದೊಯ್ದಿದ್ದಾರೆ. ಜತೆಗೆ ಮತ್ತೊಮ್ಮೆ ಮಂತ್ರಿ ಸ್ಥಾನ ಕೊಡಲಾಗುತ್ತದೆ ಎನ್ನಲಾಗುತ್ತಿದೆ. ಮುಳಬಾಗಿಲು ಶಾಸಕ ನಾಗೇಶ್ ಈಗಾಗಲೇ ಕಾಂಗ್ರೆಸ್ ಸದಸ್ಯತ್ವ ಪಡೆದಿದ್ದು, ಶಂಕರ್ ಸಹ ಸಿಎಲ್​ಪಿಯ ಸದಸ್ಯತ್ವ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹೇಶ್ ಸಂಪರ್ಕಕ್ಕೆ ಯತ್ನ: ಕೊಳ್ಳೇಗಾಲದ ಬಿಎಸ್​ಪಿ ಶಾಸಕ ಎನ್. ಮಹೇಶ್ ಅವರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ. ‘ಪಕ್ಷದ ಅಧ್ಯಕ್ಷೆ ಮಾಯಾವತಿ ನಿರ್ಧಾರಕ್ಕೆ ಬದ್ಧ’ ಎಂದು ಮಹೇಶ್ ಹೇಳಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಹುದ್ದೆ ಆಫರ್ ಕೊಟ್ರೂ ರಮೇಶ್ ಕಾಂಗ್ರೆಸ್​ನಲ್ಲಿ ಇರಲ್ಲ

ಬೆಳಗಾವಿ: ಸಹೋದರ ರಮೇಶ್ ಜಾರಕಿಹೊಳಿ ಅವರು ಮಂತ್ರಿ ಸ್ಥಾನ ಅಲ್ಲ, ಪ್ರಧಾನ ಮಂತ್ರಿ ಸ್ಥಾನದ ಆಫರ್ ಕೊಟ್ಟರೂ ಕಾಂಗ್ರೆಸ್​ನಲ್ಲಿ ಉಳಿಯುವುದಿಲ್ಲ. ಬಿಜೆಪಿ ಸೇರುವುದು ಖಚಿತ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನರೇಂದ್ರ ಮೋದಿ 2ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ನಡೆಯುವ ಸಾಧ್ಯತೆ ಇದೆ. ನಮ್ಮ ಶಾಸಕರನ್ನು ಅವರು ಹೈಜಾಕ್ ಮಾಡಿದರೆ ನಾವು ಕೂಡ ಅವರ ಶಾಸಕರನ್ನು ಸಂಪರ್ಕ ಮಾಡುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ವಿವೇಕರಾವ್ ಪುಣೆಗೆ: ಪುಣೆಗೆ ಹೊರಟಿದ್ದ ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿ, ರಮೇಶ್ ಜಾರಕಿಹೊಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ಈಗಾಗಲೇ ಅಥಣಿ ಶಾಸಕ ಮಹೇಶ ಕುಮಠಳ್ಳಿ ಕೂಡ ಅವರ ಜತೆಯಲ್ಲಿಯೇ ಇದ್ದಾರೆ ಎಂದರು.
ಕೃಪೆ:ವಿಜಯವಾಣಿ
siddaramaiah-said-he-is-getting-ready-for-flap-operation