ಬರಗಾಲ ಬಂದಾಗ ಎತ್ತಿನಹೊಳೆ ನೆನಪು: ಬತ್ತಿದ ನೇತ್ರಾವತಿಯಿಂದ ತೆರೆದ ಜನರ ಕಣ್ಣು

ಮಂಗಳೂರು:ಮೇ-26 ಎತ್ತಿನಹೊಳೆ ಯೋಜನೆ ವಿರೋಧಿಸಿದ್ದ ಎಲ್ಲ ಅರ್ಜಿಗಳನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್​ಜಿಟಿ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರ ಆವರಿಸಿದ ಸಂದರ್ಭದಲ್ಲೇ ವಜಾಗೊಳಿಸಿರುವುದು ಜನರನ್ನು ಚಿಂತೆಗೆ ಹಚ್ಚಿದೆ.

ಯೋಜನೆಗೆ ಸರ್ಕಾರ ಅನುಮೋದನೆ ನೀಡಿದಾಗ, ಬಜೆಟ್​ನಲ್ಲಿ ಹಣ ಕಾದಿರಿಸಿದಾಗ, ಕಾಮಗಾರಿ ಆರಂಭಗೊಂಡಾಗ ಜಿಲ್ಲೆಯ ಜನ ಸುಮ್ಮನಿದ್ದರು. ಹೆಚ್ಚಿನವರು ಮನೆ ಆವರಣದಲ್ಲೇ ಇರುವ ಬಾವಿ, ಬೋರ್​ವೆಲ್​ಗಳನ್ನು ನಂಬಿದ್ದರು. ಪೈಪ್​ಲೈನ್​ನಲ್ಲಿ ನೀರು ಬರುವವರು ಚಿಂತೆ ಮಾಡಿರಲಿಲ್ಲ. ರಾಜಕೀಯ ವ್ಯಕ್ತಿಗಳು ತಮ್ಮ ನಾಯಕರು ಕೈಗೊಂಡ ತೀರ್ವನವನ್ನು ವಿರೋಧಿಸಲಾಗದ ಗೊಂದಲದಲ್ಲಿದ್ದರು. ಆದರೆ ಇಂದು ನೀರಿನ ಬರ ಎಲ್ಲರ ಮನೆ ಬಾಗಿಲು ಬಡಿಯಲು ಆರಂಭಿಸಿದೆ.

ಕಣ್ಣು ತೆರೆಸಿದ ಪರಿಸ್ಥಿತಿ: ಅಂದು ಎತ್ತಿನಹೊಳೆ ಯೋಜನೆ ವಿರೋಧಿಸುತ್ತಿರುವವರನ್ನು ‘ಹುಚ್ಚರು’ ಎನ್ನುತ್ತಿದ್ದ ಜನರೇ ಈಗ ಹೋರಾಟಗಾರರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಂದು ಹೋರಾಟಗಾರರು ಹೇಳಿದ್ದು ನಿಜವಿರಬಹುದು ಎಂದು ಚಿಂತಿಸತೊಡಗಿದ್ದಾರೆ. ಎನ್​ಜಿಟಿಯಲ್ಲೇ ದೊರೆಯದ ನ್ಯಾಯ, ಸುಪ್ರೀಂ ಕೋರ್ಟ್​ನಲ್ಲಿ ದೊರೆಯುತ್ತದೆಯೇ ಎಂದು ಕೆಲವರು ಹೋರಾಟದಿಂದ ಹಿಂದೆ ಸರಿಯುವ ಸೂಚನೆ ನೀಡಿದ್ದಾರೆ. ಪಶ್ಚಿಮ ಘಟ್ಟದ ತಪ್ಪಲಲ್ಲಿ ಸರ್ಕಾರ ಕೈಗೊಂಡ ನಿಸರ್ಗ ವಿರೋಧಿ ಚಟುವಟಿಕೆಗಳ ದುಷ್ಪರಿಣಾಮ, ಯೋಜನೆ ಅನುಷ್ಠಾನಗೊಳ್ಳುವ ಸಂದರ್ಭದಲ್ಲೇ ಎನ್​ಜಿಟಿ ಪ್ರತಿಕೂಲ ತೀರ್ಪು ನೀಡಿದ್ದರೂ ನೀರಿಗಾಗಿ ಬದ್ಧತೆಯಿಂದ ಹೋರಾಟ ನಡೆಸುತ್ತಿರುವ ಕಿರಿಯ ತಂಡ ವಿಚಲಿತಗೊಂಡಿಲ್ಲ.

ತೀರ್ಪು ಪ್ರಶ್ನಿಸಲು ಸಿದ್ಧತೆ

ಹೋರಾಟದ ಮುಂಚೂಣಿ ಯಲ್ಲಿರುವ ಹಿರಿಯ ವಕೀಲ ಕೆ.ಎನ್. ಸೋಮಶೇಖರ, ಸಾಮಾಜಿಕ ಕಾರ್ಯಕರ್ತರಾದ ಕಿಶೋರ್ ಕುಮಾರ್ ಹಾಗೂ ಪುರುಷೋತ್ತಮ ಚಿತ್ರಾಪುರ ಎನ್​ಜಿಟಿ ತೀರ್ಪನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದಾರೆ. ಎನ್​ಜಿಟಿ ಮುಖ್ಯವಾಗಿ ಪರಿಸರ ಸಂಬಂಧಿಸಿದ ವಿಷಯಗಳನ್ನು ಮಾತ್ರ ಪರಿಗಣಿಸುತ್ತದೆ. ಅಲ್ಲಿ ಕುಡಿಯುವ ನೀರಿನ ಹೆಸರಿನಲ್ಲಿ ಅನೇಕ ಮುಖ್ಯ ಸಂಗತಿ ಮರೆಮಾಚಲಾಗಿದೆ. ಅವೈಜ್ಞಾನಿಕ ಸಂಗತಿ, ಭ್ರಷ್ಟಾಚಾರ ಮುಂತಾದ ವಿಚಾರ ಮನವರಿಕೆ ಮಾಡಿಕೊಡಲು ಸುಪ್ರೀಂನಲ್ಲಿ ಅವಕಾ ಶವಿದೆ. ನ್ಯಾಯ ಸಿಗಬಹುದು ಎಂಬ ನಂಬಿಕೆ ಇದೆ ಎಂದು ಸೋಮಶೇಖರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಬಹುರೂಪ ಹೋರಾಟ

ದ.ಕ. ಜಿಲ್ಲೆಯಲ್ಲಿ ಬರ ಆವರಿಸಿದ ನಂತರ ಎತ್ತಿನಹೊಳೆ ಯೋಜನೆ ವಿರುದ್ಧ ಕೆಲವರಲ್ಲಿ ಅಭಿಪ್ರಾಯ ಹುಟ್ಟಿ ಕೊಂಡಿದೆ. ವಿವಿಧ ವಾಟ್ಸ್​ಆಪ್ ಗುಂಪುಗಳಲ್ಲಿ ಚರ್ಚೆ ನಡೆಯುತ್ತಿದೆ. ಯೋಜನೆ ತಡೆಯಲು ಮತ್ತೆ ಹೋರಾಟಕ್ಕೆ ಒತ್ತಾಯ ಕೇಳಿ ಬರುತ್ತಿವೆ. ಆದರೆ, ಒಟ್ಟು 13 ಸಾವಿರ ಕೋಟಿ ರೂ. ಯೋಜನೆಗೆ ಈಗಾಗಲೇ 4 ಸಾವಿರ ಕೋಟಿ ರೂ. ವೆಚ್ಚವಾಗಿದೆ. ಈ ಹಂತದಲ್ಲಿ ಯೋಜನೆ ತಡೆಯುವುದು ಸುಲಭವಲ್ಲ.

| ಪ್ರಕಾಶ್ ಮಂಜೇಶ್ವರ

ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈಗ ಒಂದೇ ಪಕ್ಷದ ಸಂಸದರಿದ್ದಾರೆ. ಉಭಯ ಕಡೆಗಳ ಸಂಸದರು ಹಾಗೂ ಜಿಲ್ಲೆಯ ಶಾಸಕರ ಮೂಲಕ ಯೋಜನೆಯ ಅಡ್ಡ ಪರಿಣಾಮದ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು.
| ದಿನೇಶ್ ಹೊಳ್ಳ ಹೋರಾಟಗಾರ
ಕೃಪೆ:ವಿಜಯವಾಣಿ

ಬರಗಾಲ ಬಂದಾಗ ಎತ್ತಿನಹೊಳೆ ನೆನಪು: ಬತ್ತಿದ ನೇತ್ರಾವತಿಯಿಂದ ತೆರೆದ ಜನರ ಕಣ್ಣು
people-remembers-yettinahole-while-drought-conditions