ಶಿವಮೊಗ್ಗ ರಿಂಗ್ ರಸ್ತೆ ಪೂರ್ಣಗೊಳ್ಳಲು ಇದ್ದ ಅಡೆತಡೆ ನಿವಾರಣೆ- ಸಂಸದ ಬಿ.ವೈ. ರಾಘವೇಂದ್ರ ಹೇಳಿಕೆ…

Promotion

ಶಿವಮೊಗ್ಗ,ನ,27,2019(www.justkannada.in): ಶಿವಮೊಗ್ಗ ಜನತೆಯ ಬಹುದಿನಗಳ ಕನಸಾಗಿದ್ದ ವರ್ತುಲ ರಸ್ತೆ ನಿರ್ಮಾಣ ಪೂರ್ಣಗೊಳ್ಳಲು ರೈಲು ನಿಲ್ದಾಣ ಮುಂಭಾಗ ರಸ್ತೆ ನಿರ್ಮಾಣಕ್ಕೆ ಇದ್ದ ಅಡೆತಡೆಯನ್ನು ನಿವಾರಿಸಲಾಗಿದ್ದು, ಶೀಘ್ರವೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸದ ಬಿವೈ ರಾಘವೇಂದ್ರ, ವರ್ತುಲ ರಸ್ತೆಯು ಶಿವಮೊಗ್ಗ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಹಾದುಹೋಗಬೇಕಾಗಿದ್ದು, ರೈಲ್ವೆ ಇಲಾಖೆಯವರ ತಡೆಯಿಂದಾಗಿ ನೆನೆಗುದಿಗೆ ಬಿದ್ದಿತ್ತು. ರೈಲ್ವೆ ಕಾಂಪೌಂಡ್ ನಿಂದ ಹೊಸಪೇಟೆ-ಶಿವಮೊಗ್ಗ ರಸ್ತೆ ಸಂಪರ್ಕಿಸುವ 100 ಅಡಿ ವರ್ತುಲ ರಸ್ತೆ ನಿರ್ಮಿಸಲು ರೈಲ್ವೆ ಇಲಾಖೆ ಮತ್ತು ಜಿಲ್ಲಾ ಆಡಳಿತದೊಂದಿಗೆ ಚರ್ಚಿಸಿ, ರೈಲ್ವೆ ಇಲಾಖೆಯು ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಬಾಕಿ ಇದ್ದ 700 ಮೀಟರ್ ಉದ್ದದ ರಸ್ತೆ ನಿರ್ಮಾಣ ಕಾಮಗಾರಿಯನ್ನು 20 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ನಾಲ್ಕು ಪಥದ ಈ ಕಾಂಕ್ರೀಟ್ ರಸ್ತೆಯು, ರೈಲ್ವೆ ನಿಲ್ದಾಣದ ಎರಡೂ ಕಡೆಗಳಲ್ಲಿ ಸಂಪರ್ಕ ರಸ್ತೆಯ ನಿರ್ಮಾಣವನ್ನು ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್ ಯಡಿಯೂರಪ್ಪನವರು ಶಂಕು ಸ್ಥಾಪನೆ ನೆರವೇರಿಸಿದ್ದ ಈ ಯೋಜನೆಯನ್ನು ಅವರೇ ಮುಖ್ಯಮಂತ್ರಿಗಳಾಗಿ ಪೂರ್ಣಗೊಳಿಸುವಂತಾಗಿದೆ. ಶಿವಮೊಗ್ಗ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಹಿಂದೆ ಯಡಿಯೂರಪ್ಪ ಅವರು ಮಂಜೂರು ಮಾಡಿದ್ದ ಅಭಿವೃದ್ಧಿ ಕಾರ್ಯಗಳು ಒಂದೊಂದಾಗಿ ಅವರ ಸಹಕಾರದಿಂದಲೇ ಈಗ ಪೂರ್ಣಗೊಳ್ಳುತ್ತಿದೆ. ಶೀಘ್ರದಲ್ಲಿ ವಿಮಾನ ನಿಲ್ದಾಣ ಕಾಮಗಾರಿ, ಹಳೆಯ ಜೈಲು ಆವರಣದಲ್ಲಿ ಫ್ರೀಡಂ ಪಾರ್ಕ್ ನಿರ್ಮಾಣ, ಇಎಸ್‍ಐ ಆಸ್ಪತ್ರೆ ನಿರ್ಮಾಣ ಇತ್ಯಾದಿ ಯೋಜನೆಗಳು ಪೂರ್ಣಗೊಳ್ಳಲಿವೆ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದ್ದಾರೆ.

Key words: Shimoga -Ring Road- Obstacle-MP- B.Y Raghavendra