ಮೊದಲ ಶಾಲು, ಹಾರ ಪಡೆದ ಕ್ಷಣವನ್ನು ಮನದುಂಬಿಕೊಂಡ ಹಿರಿಯ ಚೇತನ ವೆಂಕಟೇಶ ಭಟ್

Promotion

 

ಬೆಂಗಳೂರು,ಆಗಸ್ಟ್,16,2022(www.justkannada.in):  ಅಮೃತ ಸ್ವಾತಂತ್ರ್ಯದ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಹಮ್ಮಿಕೊಂಡಿರುವ ಹಿರಿಯ ಪತ್ರಕರ್ತರಿಗೆ ಗೌರವ ಸಮರ್ಪಣೆ ಮಾಡುವ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ಎಂಬತ್ತೆಂಟು ವಸಂತ ತುಂಬಿರುವ ವೆಂಕಟೇಶ ಭಟ್ (ಪಾಟಣಕರ್) ಅವರನ್ನು ಜೆ ಪಿ ನಗರದ ಅವರ ಮನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿದರು.

ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿ ಮೂರೂವರೆ ದಶಕಗಳ ಕಾಲ ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಶೃಂಗೇರಿ ಮೂಲದ ವೆಂಕಟೇಶ ಭಟ್ ಅವರದು.

1992 ರಲ್ಲಿ ನಿವೃತ್ತಿ ಹೊಂದಿದರೂ ಅವರ ವೃತ್ತಿ ಬದುಕಿನಲ್ಲಿ ಹಾಗೆಯೇ ಮುಂದುವರಿಸಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಪ್ರೂಫ್ ರೀಡ್ ಮಾಡಿಕೊಡುವುದನ್ನು ಮಾತ್ರ ನಿಲ್ಲಿಸಿಲ್ಲ.

ಮೊದಲ ಶಾಲು ಇದು:

ಕೆಯುಡಬ್ಲ್ಯೂಜೆ ಗೌರವ ಸ್ವೀಕರಿಸಿದ ವೆಂಕಟೇಶ ಭಟ್ ಅವರು ನನ್ನ ವೃತ್ತಿ ಜೀವನದಲ್ಲಿ ನನಗೆ ಸಿಕ್ಕ ಮೊದಲ ಶಾಲು ಇದು ಎಂದು ಭಾವುಕರಾದರು. ನಾನು ಎಂದು ಯಾರನ್ನೂ ಬೇಡಿದವನಲ್ಲ. ಸ್ವಾಭಿಮಾನ ಬದುಕು ಬದುಕಿದವನು. ಕೆಯುಡಬ್ಲ್ಯೂಜೆ ಅಧ್ಯಕ್ಷರು, ಮನೆಗೆ ಬಂದು ನನ್ನ ಗೌರವಿಸಿರುವುದು ರಾಜ್ಯೋತ್ಸವ ಪ್ರಶಸ್ತಿ ಬಂದಷ್ಟು ಸಂತಸ ತಂದಿದೆ ಎಂದು ತಮ್ಮ ಮನದಿಂಗಿತವನ್ನು ಹಂಚಿಕೊಂಡರು.

ಈ ಸಾರ್ಥಕ ಕ್ಷಣಕ್ಕೆ ಅವರ ಪತ್ನಿ, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಇಡೀ ಕುಟುಂಬ ಸಾಕ್ಷಿಯಾಗಿತ್ತು. ಬೆಂಗಳೂರು ನಗರ ಘಟಕದ ಸೋಮಶೇಖರ್ ಗಾಂಧಿ, ದೇವರಾಜು ಹಾಜರಿದ್ದರು.

Key words: senior journalist- Venkatesh Bhatt-moment – KUWJ