ಆರ್ಥಿಕ ದುರ್ಬಲರ ಸಬಲೀಕರಣದಲ್ಲಿ ಸಹಕಾರ ಕ್ಷೇತ್ರದ ಪಾತ್ರ ಮಹತ್ವದ್ದು-ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್

ಬೆಂಗಳೂರು,ಜನವರಿ,7,2022(www.justkannada.in):  ಸಹಕಾರ ಕ್ಷೇತ್ರವನ್ನು ಕೇಂದ್ರ ಸರಕಾರವು ಪ್ರಮುಖವೆಂದು ಪರಿಗಣಿಸಿದ್ದು, ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರ ಸಬಲೀಕರಣಕ್ಕೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಹೇಳಿದ್ದಾರೆ.

ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಮಲ್ಲೇಶ್ವರದಲ್ಲಿ ಪ್ರಧಾನ ಕಚೇರಿ ಹೊಂದಿದ್ದು ಅಲ್ಲಿ ನಿರ್ಮಿಸಿರುವ ‘ಸೌರ್ಹಾದ ಸಹಕಾರಿ ಸೌಧ’ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, `ಬ್ಯಾಂಕುಗಳೇ ಸಮಾಜದಲ್ಲಿ ಎಲ್ಲರಿಗೂ ಆರ್ಥಿಕ ನೆರವನ್ನು ನೀಡುವುದು ಸಾಧ್ಯವಿಲ್ಲ. ಅಂತಹ ಕಡೆಗಳಲ್ಲಿ ಸಹಕಾರ ಸಂಘಗಳು ಸಾಲದ ಅಗತ್ಯವಿರುವವರ ನೆರವಿಗೆ ಧಾವಿಸುತ್ತಿದ್ದು, ಅಂಥವರನ್ನು ಮೇಲಕ್ಕೆತ್ತುವ ಕೆಲಸ ಮಾಡುತ್ತಿವೆ ಎಂದರು.

ಸಮಾಜದಲ್ಲಿ ಆರ್ಥಿಕ ಶಕ್ತಿ ಇರುವವರಿಂದ ಠೇವಣಿ ರೂಪದಲ್ಲಿ ಬಂಡವಾಳ ಸಂಗ್ರಹಿಸಿ, ಅದನ್ನು ದುರ್ಬಲರಿಗೆ ಸಾಲದ ರೂಪದಲ್ಲಿ ಕೊಡುವುದು ಸಹಕಾರ ಕ್ಷೇತ್ರದ ಪರಂಪರೆಯಾಗಿದೆ. ಇನ್ನೂ ಅಭಿವೃದ್ಧಿಶೀಲ ದೇಶವಾಗಿರುವ ಭಾರತದಲ್ಲಿ ಈ ವಲಯವು ವಹಿಸಬೇಕಾದ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ಸಹಕಾರ ಕ್ಷೇತ್ರವು ಪರಿಣಾಮಕಾರಿಯಾಗಿ ಮತ್ತು ಉತ್ತರದಾಯಿತ್ವದೊಂದಿಗೆ ಕೆಲಸ ಮಾಡಬೇಕೆನ್ನುವುದು ಕೇಂದ್ರ ಸರಕಾರದ ಕಳಕಳಿಯಾಗಿದೆ. ಹೀಗಾಗಿಯೇ ಪ್ರತ್ಯೇಕವಾಗಿ ಸಹಕಾರ ಸಚಿವಾಲಯವನ್ನೇ ಪ್ರಧಾನಿ ಮೋದಿ ಸ್ಥಾಪಿಸಿದ್ದಾರೆ. ಇದರಿಂದಾಗಿ ಸಹಕಾರ ಕ್ಷೇತ್ರದ ಲಾಭ ಕಟ್ಟಕಡೆಯ ವ್ಯಕ್ತಿಗೂ ಸಿಗಲಿದೆ ಎಂದು ಅವರು ಪ್ರತಿಪಾದಿಸಿದರು.

ಸಹಕಾರ ಕ್ಷೇತ್ರದಲ್ಲಿ ಮತ್ತಷ್ಟು ಸುಧಾರಣೆಗಳು ಅಗತ್ಯವಿವೆ. ಅಂತಿಮವಾಗಿ ಇಲ್ಲಿಗೆ ಬರುವವನಿಗೆ ಪ್ರಯೋಜನವಾಗಬೇಕೇ ವಿನಾ ಮೋಸವಾಗಬಾರದು. ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ದುರ್ಬಲರ ನೆರವಿಗೆ ಮತ್ತಷ್ಟು ರಚನಾತ್ಮಕವಾಗಿ ಚಿಂತಿಸಬೇಕು ಎಂದು ಸಚಿವರು ನುಡಿದರು.

ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಕೃಷ್ಣಾರೆಡ್ಡಿ, ನಿಕಟಪೂರ್ವ ಅಧ್ಯಕ್ಷ ಗುರುರಾಜ್, ಸ್ಥಳೀಯ ಮುಖಂಡ ಗುಂಡೂರಾವ್ ಮುಂತಾದವರಿದ್ದರು.

key words: role – co-operative sector -Minister -Dr. C.N. Ashwaththanarayan