ಸಂಶೋಧನೆಗಳು ಆಯಾ ಕ್ಷೇತ್ರಕ್ಕೆ ತಲುಪುವಂತಾಗಬೇಕು: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

Promotion

ಮೈಸೂರು,ನವೆಂಬರ್,02,2020: ವಿಜ್ಞಾನಿಗಳ ಎಲ್ಲ ಸಂಶೋಧನೆಗಳು ಆಯಾ ಕ್ಷೇತ್ರಕ್ಕೆ ತಲುಪುವಂತಾಗಬೇಕು. ಹೀಗೆ ತಲುಪಿದಾಗ ಮಾತ್ರವೇ ಸಂಶೋಧನೆಯು ಯಶಸ್ವಿಯಾಗಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೃಷಿ ಜ್ಞಾನ ವಿಜ್ಞಾನ ವೇದಿಕೆಯು ಸೋಮವಾರ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಕೃಷಿ ವಿಜ್ಞಾನಿ ಡಾ.ವಸಂತಕುಮಾರ್ ತಿಮಕಾಪುರ ಅವರ ‘ಕೃಷಿ ಲೋಕದೊಳಗೆ…’ ಹಾಗೂ ಟ್ಝಚ್ಞಠಿ ಟ್ಚಠಿಟ್ಟ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಶೋಧನೆಗಳು ಕೇವಲ ಲೆಕ್ಕಕ್ಕೆ ಎನ್ನುವಂತ್ತಾಗಬಾರದು. ಸಂಶೋಧನೆಯ ನಂತರ ಅವುಗಳನ್ನು ಪರಿಣಾಮಕಾರಿಯಾಗಿ ಆಯಾ ಕ್ಷೇತ್ರಕ್ಕೆ ತಲುಪಿಸಿ ಫಲಿತಾಂಶ ಪಡೆಯಬೇಕು. ದೇಶದ ಬೆನ್ನೆಲುಬಾದ ರೈತನಾಗಿದ್ದು, ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾಗುತ್ತಿದೆ. ವಿಜ್ಞಾನಿಗಳ ಸಂಶೋಧನೆಗಳು ಹಾಗೂ ಹೊಸ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿದಾಗ ಮಾತ್ರ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಕೃಷಿ ವಿಜ್ಞಾನಿ ಡಾ.ವಸಂತಕುಮಾರ್ ತಿಮಕಾಪುರ ಅವರು ರೈತರಿಗೆ ಅನುಕೂಲವಾಗುವಂತಹ ಲೇಖನಗಳನ್ನು ಬರೆಯುತ್ತಿದ್ದಾರೆ. ಸಂಶೋಧನೆಗಳನ್ನು ನಡೆಸಿ ರೈತರಿಗೆ ತಿಳಿಸುತ್ತಿದ್ದಾರೆ. ಇಂದು ಬಿಡುಗಡೆಯಾಗುತ್ತಿರುವ ಎರಡು ಪುಸ್ತಕಗಳು ರೈತರಿಗೆ ಅನುಕೂಲವಾಗಲಿವೆ. ವಿವಿಯ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೂ ಅವರು ಮಾರ್ಗದರ್ಶನ ನೀಡಬೇಕು ಎಂದರು.

ಮಾಜಿ ಶಾಸಕ ವಾಸು ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಆಗ್ಗಾಗೆ ಹೆಚ್ಚೆಚ್ಚು ಸಂಶೋಧನೆಗಳು ನಡೆಯುತ್ತಿರುತ್ತವೆ. ದೇಶದ ಉನ್ನತ ಸ್ಥಾನ ಪಡೆದವರೆಲ್ಲ ಕೃಷಿ ಕುಟುಂಬದ ಹಿನ್ನೆಲೆ ಹೊಂದಿರುವರು. ಕೃಷಿ ಕ್ಷೇತ್ರದಲ್ಲಿ ಸಂಶೋಧನೆಗಳು ಪ್ರಗತಿ ಕಂಡರೂ, ಕೃಷಿ ಜಮೀನು ಹೆಚ್ಚಾಗುವುದಿಲ್ಲ. ಆದರೂ, ನಗರಾಭಿವೃದ್ಧಿ ಯೋಜನೆ ಅಡಿ ಕೃಷಿ ಭೂಮಿಯನ್ನು ವಶಪಡೆಸಿಕೊಳ್ಳಲಾಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು.
ದೇಶದ ಪ್ರಗತಿಗೆ ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮಗಳ ಪಾತ್ರ ದೊಡ್ಡದು ಎಂದು ಎಲ್ಲರೂ ಹೇಳುತ್ತಾರೆ. ಅಂತೆಯೇ ಮಾನವನ ಬದುಕಿಗೆ ಕೃಷಿ ಕ್ಷೇತ್ರದ ಪಾತ್ರ ದೊಡ್ಡದಾಗಿದ್ದು, ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾದರೆ ಮಾನವನ ಕುಲಕ್ಕೆ ಕಷ್ಟವಾಗುತ್ತದೆ. ಇಂದು ವಿದ್ಯಾಂತರು, ವಿದೇಶದಲ್ಲಿದ್ದವರು ಕೃಷಿ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಆದರೆ, ಮಧ್ಯವರ್ತಿಗಳ ಹಾವಳಿಯಿಂದ ರೈತರ ಬೆಳೆಗೆ ಸೂಕ್ತ ಬೆಲೆ ಇಲ್ಲದಂತಾಗಿದೆ ಎಂದರು.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳಾಗಬೇಕು. ರೈತರ ಜೀವನ ಸುಧಾರಿಸಬೇಕು ಎಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅನೇಕರು ಚರ್ಚೆ ನಡೆಸುತ್ತಿದ್ದಾರೆ. ಆದರೆ, ಈ ಎಲ್ಲ ಚರ್ಚೆಗಳು ಮತ್ತು ಸಂಶೋಶಧನೆಗಳಿಂದ ರೈತರಿಗೆ ಎಷ್ಟರ ಮಟ್ಟಿಗೆ ಅನುಕೂಲವಾಗಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದರು.

ಪ್ರತಿ ತಿಂಗಳು ವೇತನ ಪಡೆಯುವ ನೌಕರರಿಗೆ ರೈತರ ಕಷ್ಟ ತಿಳಿಯುವುದಿಲ್ಲ. ವೇತನದಲ್ಲಿ ತಾರತಮ್ಯವಾದಗ ಹೋರಾಟ ಮಾಡಿ ಸರಿಪಡಿಸಿಕೊಳ್ಳುತ್ತಾರೆ. ಆದರೆ, ರೈತರಿಗೆ ಅವರದೆಯಾದ ಸಮಸ್ಯೆ ಇವೆ. ಉತ್ತರ ಕರ್ನಾಟಕದ ರೈತರು ಕಷ್ಟಪಟ್ಟು ಬೆಳೆದ ಬೆಳೆ ಕೈ ಸೇರುವಷ್ಟರಲ್ಲಿ ಅತಿವೃಷ್ಠಿಯಾಗಿ ಹಾಳಾಗಿದೆ. ಈ ಹಿನ್ನೆಲೆಯಲ್ಲಿ ಡಾ.ವಸಂತಕುಮಾರ್ ತಿಮಕಾಪುರ ಅವರು ಕೃಷಿಕರ ಪರ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ ಎಂದರು.

ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಕೃತಿ ಬಿಡುಗಡೆ ಮಾಡಿ ಮಾತನಾಡಿ, ವಸಂತ ತಿಮಕಾಪುರ ಇಬ್ಬರು ಜೊತೆಗೆ ಓದಿದವರು. ನಾನು ಹೊಲಗದ್ದೆಯಲ್ಲಿ ಕೆಲಸ ಮಾಡಿದ್ದು, ವ್ಯವಸಾಯ ಗೊತ್ತು. ವಸಂತ ತಿಮಕಾಪುರಗೆ ಗೊತ್ತಿಲ್ಲ. ನನಗೂ ಮುಂಚೆಯೇ ಆತನಿಗೆ ಪ್ರಾಧ್ಯಾಪಕ ಅವಕಾಶ ದೊರಕಿತ್ತು. ಆದರೆ, ಕೃಷಿ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ಎಂದರು.

ತಾನು ಸಂಶೋಧನೆಗಳ ಮೂಲಕ ಕಂಡುಕೊಂಡ ಸತ್ಯಗಳನ್ನು ರೈತರಿಗೆ ಲೇಖನದ ಮೂಲಕ ತಿಳಿಸುವ ಕಾರ‌್ಯವನ್ನು ಮಾಡುತ್ತಿದ್ದಾನೆ. ಬಹಳ ಶ್ರದ್ಧೆಯಿಂದ ಕೆಲಸ ಮಾಡುವಂತಹ ವ್ಯಕ್ತಿತ್ವ. ಔಷಧಿ ಗಿಡಗಳ ಕುರಿತು ಅಧ್ಯಯನ ಮಾಡಿ, ಕೃಷಿ ಕ್ಷೇತ್ರದಲ್ಲಿ ಇವುಗಳಿಗೂ ಹೆಚ್ಚಿನ ಆಧ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕಿದೆ ಎಂದು ಹೇಳಿದರು.

ಕಾರ‌್ಯಕ್ರಮದಲ್ಲಿ ವಿಶ್ವದ ಅತ್ಯುನ್ನತ ವಿಜ್ಞಾನಿ ಎಂಬ ಹಿರಿಮೆಗೆ ಪಾತ್ರರಾದ ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಸನ್ಮಾನಿಸಲಾಯಿತು.
ಕಾರ‌್ಯಕ್ರಮದಲ್ಲಿ ಹೈದ್ರಾಬಾದ್ ಐಸಿಆರ್‌ಐಎಸ್‌ಎಟಿ ಉಪ ಮಹಾನಿರ್ದೇಶಕ ಡಾ.ಸಿ.ಎಲ್.ಲಕ್ಷ್ಮೀಪತಿಗೌಡ,ಡಾ.ವಸಂತಕುಮಾರ್ ತಿಮಕಾಪುರ, ಅಂಕಣಕಾರ ಡಾ.ಗುಬ್ಬಿಗೂಡು ರಮೇಶ್, ಗುಲ್ಬರ್ಗ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಆರ್.ನಿರಂಜನ, ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಕಸಾಪ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ ಇತರರು ಉಪಸ್ಥಿತರಿದ್ದರು.