ರಾಧಿಕಾ ಕುಮಾರಸ್ವಾಮಿಯ ಬಹು ನಿರೀಕ್ಷಿತ ‘ದಮಯಂತಿ’ ಟ್ರೈಲರ್ ರಿಲೀಸ್​…..

Promotion

ಬೆಂಗಳೂರು,ನ,13,2019(www.justkannada.in):  ಬಹಳ ದಿನಗಳ ನಂತರ ನಟಿ ರಾಧಿಕಾ ಮತ್ತೆ ಬಣ್ಣ ಹಚ್ಚಿದ್ದು ಭಿನ್ನ ಅವತಾರದಲ್ಲಿ ಕಾಣಿಸಿದ್ದಾರೆ.

ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಮತ್ತೆ ಬಣ್ಣ ಹಚ್ಚಿರುವ ಚಿತ್ರ ದಮಯಂತಿ ಟ್ರೈಲರ್​ ಲಹರಿ ಯೂಟ್ಯೂಬ್​ ಚಾನೆಲ್​ ನಲ್ಲಿ ಮಂಗಳವಾರ, ನ.12 ರ ಸಂಜೆ 6 ಗಂಟೆಗೆ ಬಿಡುಗಡೆಯಾಗಿದೆ. ದಶಕದ ಹಿಂದೆ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದ ರಾಧಿಕಾ ಈಗ ದಮಯಂತಿ ಮೂಲಕ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಟ್ರೈಲರ್​ ನಲ್ಲಿ ಏನಿದೆ?

ಚಿತ್ರದ ಟ್ರೈಲರ್​ ನಲ್ಲಿ ರಾಧಿಕಾ ಗ್ಲಾಮರಸ್​ ಲುಕ್​ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಶತಮಾನದ ಹಿಂದಿನ ಮಹಾರಾಣಿಯಾಗಿಯೂ ಅಬ್ಬರಿಸಿದ್ದಾರೆ. ರಾಜನ ಮಗಳಾದ ರಾಧಿಕಾ ಆತನ ನಿಧನದ ನಂತರ ಹೇಗೆ ರಾಜ್ಯಭಾರ ಮಾಡುತ್ತಾಳೆ ಎಂಬ ಕಥಾನಕ ಒಳಗೊಂಡಿದೆ. ಟ್ರೈಲರ್​ ನಲ್ಲಿ ರಾಧಿಕಾ ಪ್ರಾರಂಭದಲ್ಲಿ ಮಹಾರಾಣಿಯಾಗಿ ಕಾರಿನಿಂದ ಇಳಿಯುತ್ತಾಳೆ. ನಂತರದ ದೃಶ್ಯಗಳಲ್ಲಿ ಫ್ಯಾಂಟಸಿಯ ಅಂಶಗಳಿವೆ. ಮಹಾರಾಣಿ ನಿಧನದ ನಂತರ ಆಕೆ ಆತ್ಮವಾಗುತ್ತಾಳೆ. ಆತ್ಮವಾಗಿ ರಾಧಿಕಾ ರಾಣಿಯ ಪೋಷಾಕಿನಲ್ಲಿ ಅಬ್ಬರಿಸುತ್ತಾರೆ. ಆಕೆಯನ್ನು ಬಂಧಿಸುವ ಪ್ರಯತ್ನಗಳನ್ನೂ ಟ್ರೈಲರ್​ ನಲ್ಲಿ ಕಾಣಬಹುದು. ಟ್ರೈಲರ್​ ನೋಡಿದರೆ ಚಿತ್ರ ಅರುಂಧತಿ ಕಥೆಯನ್ನು ಹೋಲುತ್ತದೆ ಎಂಬ ಅನುಮಾನ ಬರುತ್ತದೆ. ಒಟ್ಟಿನಲ್ಲಿ ರಾಧಿಕಾ ಹೊಸ ಪಾತ್ರಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ.

ಟ್ರೈಲರ್​ ನಲ್ಲಿ ಆಧುನಿಕ ಯುವತಿ ಮತ್ತು ರಾಣಿಯಾಗಿ ರಾಧಿಕಾ ಗಮನ ಸೆಳೆದಿದ್ದಾರೆ. ಚಿತ್ರದ ಮೂಲಕ ರಾಧಿಕಾ ಮತ್ತೊಂದು ಇನ್ನಿಂಗ್ಸ್​ ಆರಂಭಿಸಬಹುದು ಎಂದು ಹೇಳಲಾಗುತ್ತಿದೆ. ರಾಧಿಕಾರ ಈ ಪ್ರಯತ್ನವನ್ನು ಪ್ರೇಕ್ಷಕ ಎಷ್ಟರ ಮಟ್ಟಿಗೆ ಸ್ವೀಕರಿಸಲಿದ್ದಾರೆ ಎಂದು ನೋಡಬೇಕಿದೆ.

ಚಿತ್ರದ ಮಲಯಾಳಂ ಆವೃತ್ತಿಯ ಪೋಸ್ಟರ್​ ಗುರುವಾರ, ಅ.17 ರಂದು ಬಿಡುಗಡೆಯಾಗಿತ್ತು. ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್​ ಲಾಲ್​ ಪೋಸ್ಟರ್​ ಬಿಡುಗಡೆಗೊಳಿಸಿದ್ದರು.

ಅ.7 ರಂದು ನಟಿ ರಾಧಿಕಾರ ದಮಯಂತಿ ಚಿತ್ರದ 2 ನೇ ಲುಕ್​ ಬಿಡುಗಡೆಯಾಗಿತ್ತು. ದಸರಾ ಹಿನ್ನೆಲೆಯಲ್ಲಿ ಚಿತ್ರದ ಸೆಕೆಡ್ ಲುಕ್ ನ್ನು ರಿಲೀಸ್ ಮಾಡಲಾಗಿತ್ತು, ಚಿತ್ರದ ಟೀಸರ್​ ನ ಕನ್ನಡ ಆವೃತ್ತಿ ಸೆ.20 ರಂದು ಬಿಡುಗಡೆಯಾಗಿತ್ತು.
ಅರಮನೆಯೊಂದರಲ್ಲಿ ರಾತ್ರಿಯ ವೇಳೆ ಕೆಂಪು ಸೀರೆಯನ್ನು ಧರಿಸಿದ ರಾಣಿಯ ಅವತಾರದಲ್ಲಿ ಕಾಣುವ ರಾಧಿಕಾ ಸಿಂಹಾಸನದ ಮೇಲೆ ಕುಳಿತುಕೊಂಡು ಗಂಭೀರ ನೋಟ ಬೀರುವುದನ್ನು ಟೀಸರ್​ ನಲ್ಲಿ ತೋರಿಸಲಾಗಿತ್ತು.
ಚಿತ್ರದಲ್ಲಿ ರಾಧಿಕಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಭಜರಂಗಿ ಖ್ಯಾತಿಯ ಲೋಕಿ, ಸಾಧು ಕೋಕಿಲ, ತಬಲಾ ನಾಣಿ, ಮಿತ್ರ, ಮಜಾ ಟಾಕೀಸ್​ ನ ಪವನ್​ ಮತ್ತು ಇತರರನ್ನು ಒಳಗೊಂಡಿದೆ.

ಚಿತ್ರವನ್ನು ನವರಸನ್​ ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಕಥೆ ಮತ್ತು ಚಿತ್ರಕಥೆಯನ್ನೂ ಬರೆದಿದ್ದಾರೆ. ಅಲ್ಲದೆ ಚಿತ್ರಕ್ಕೆ ಬಂಡವಾಳವನ್ನೂ ಹೂಡಿದ್ದಾರೆ. ಶ್ರೀ ಲಕ್ಷ್ಮಿ ವೃಶಾದ್ರಿ ಪ್ರೊಡೊಕ್ಷನ್​ ಸಂಸ್ಥೆ ನಿರ್ಮಾಣ ಮಾಡಿದೆ. ಆರ್​ ಎಸ್​ ಗಣೇಶ್​ ನಾರಾಯಣ್​ ಸಂಗೀತ ಸಂಯೋಜನೆ ಮಾಡಿದ್ದಾರೆ. ಪಿ ಕೆ ಎಚ್​ ದಾಸ್​ ಅವರ ಕ್ಯಾಮರಾ ಕೈಚಳಕ ಇದೆ.
ದಮಯಂತಿ ಭಯಾನಕ, ಕುತೂಹಲಕಾರಿ ಮತ್ತು ಹಾಸ್ಯ ಭರಿತ ಚಿತ್ರವಾಗಿದೆ. ಇದು 80 ರ ದಶಕದ ಚಿತ್ರವಾಗಿದೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು ರಾಧಿಕಾ ಕುಮಾರಸ್ವಾಮಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ತನ್ನ ತಂದೆಯ ನಂತರದಲ್ಲಿ ಮಗಳು ಹೇಗೆ ರಾಜ್ಯಭಾರ ಮಾಡುತ್ತಾಳೆ ಎಂಬ ಕಥೆಯನ್ನು ಚಿತ್ರ ಒಳಗೊಂಡಿದೆ. ದಮಯಂತಿ ಟ್ರೈಲರ್​ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ವಿಸಿದೆ. ಚಿತ್ರವು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂಗಳಲ್ಲಿ ಬಿಡುಗಡೆಯಾಗಲಿದೆ.

key words: Radhika Kumaraswamy- Damayanti-Trailer- Release.