ಟಾಟಾ ಕನ್‌ ಸ್ಯೂಮರ್ ವತಿಯಿಂದ  7 ಸಾವಿರ ಕೋಟಿ ರೂ.ಗೆ ಬಿಸ್ಲೇರಿ ಕಂಪನಿ ಖರೀದಿ..

ನವದೆಹಲಿ, ನವೆಂಬರ್ 24, 2022 (www.justkannada.in): ಟಾಟಾ ಕನ್‌ ಸ್ಯೂಮರ್ ರಮೇಶ್ ಚೌಹಾಣ್ ಅವರ ಬಿಸ್ಲೇರಿ ಇಂಟರ್‌ ನ್ಯಾಷನಲ್ ಕಂಪನಿಯನ್ನು  ರೂ. 7 ಸಾವಿರ  ಕೋಟಿಗೆ ವಶಪಡಿಸಿಕೊಳ್ಳಲಿದೆ ಎಂದು ‘ದಿ ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.

ಚೌಹಾಣ್ ಅವರು ಕಳೆದ ಸ್ವಲ್ಪ ಸಮಯದಿಂದ ಅನಾರೋಗ್ಯಪೀಡಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಬಿಸ್ಲೇರಿ ಕಂಪನಿಯ ಈಗಿನ ಆಡಳಿತ ಇನ್ನೂ ಎರಡು ವರ್ಷಗಳ ಕಾಲ ಅದೇ ರೀತಿ ಮುಂದುವರೆಯಲಿದೆ. ಅವರ ಮಗಳಾದ ಜಯಂತಿ ಅವರಿಗೆ ಇವರ ವ್ಯಾಪಾರವನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಅಷ್ಟು ಆಸಕ್ತಿ ಇಲ್ಲದಿರುವ ಕಾರಣ, ಅವರಿಗೆ ಬಿಸ್ಲೇರಿ ಕಂಪನಿಯನ್ನು ಮುಂದಿನ ಹಂತಕ್ಕೆ ವಿಸ್ತರಿಸಲು ಸೂಕ್ತ ವಾರಸುದಾರರ ಕೊರತೆ ಇರುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಭಾರತದ ಅತೀ ದೊಡ್ಡ ಪ್ಯಾಕೇಜ್ಡ್ ನೀರಿನ ಕಂಪನಿಯ ಮಾಲೀಕರಾಗಿರುವ ರಮೇಶ್ ಚೌಹಾಣ್ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿರುವಂತೆ ಟಾಟಾ ಸಮೂಹ, “ತಮ್ಮ ಸಂಸ್ಥೆಯು ತಮ್ಮ ವ್ಯಾಪಾರವನ್ನು ತಮಗಿಂತ ಉತ್ತಮವಾಗಿ ಕಾಪಾಡಿಕೊಳ್ಳುತ್ತದೆ,” ಎಂದು ನಂಬಿದ್ದಾರಂತೆ. “ನನಗೆ ಟಾಟಾ ಕಂಪನಿಯವರು ಮೌಲ್ಯಗಳು ಬಹಳ ಇಷ್ಟವಾಗುತ್ತದೆ. ಹಾಗಾಗಿ, ನಾನು ನನ್ನ ಕಂಪನಿಯನ್ನು ಖರೀದಿಸಲು ಇತರೆ ಸಂಸ್ಥೆಗಳು ತೋರಿದ ಅಪಾರ ಆಸಕ್ತಿಯನ್ನು ನಿರಾಕರಿಸಿ ಟಾಟಾ ಸಂಸ್ಥೆಯವರಿಗೆ ಈ ಜವಾಬ್ದಾರಿಯನ್ನು ಹಸ್ತಾಂತರಿಸುತ್ತಿದ್ದೇನೆ,” ಎಂದು ತಿಳಿಸಿದ್ದಾರೆ.

ಜೊತೆಗೆ ಚೌಹಾಣ್ ಅವರು, ತಮ್ಮ ಕಂಪನಿಯನ್ನು ಮಾರಾಟ ಮಾಡಿದ ನಂತರ ಅದರಲ್ಲಿ ಪಾಲನ್ನು ಹೊಂದಿರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದೂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Purchase -Bisleri company – Tata Consumer – Rs 7000 crore