ಪ್ರಧಾನಿ ಮೋದಿ ಯೋಗಾಭ್ಯಾಸಕ್ಕೆ ಸ್ಥಳ ನಿಗದಿ: ಈ ಬಾರಿ ಗಿನ್ನಿಸ್ ರೆಕಾರ್ಡ್ ಇರೋದಿಲ್ಲ- ಸಂಸದ ಪ್ರತಾಪ್ ಸಿಂಹ.

Promotion

ಮೈಸೂರು,ಮೇ,31,2022(www.justkannada.in): ಜೂನ್ 21 ರಂದು 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ, ಪ್ರಧಾನಿ ಮೋದಿ ಅವರ ಯೋಗಾಭ್ಯಾಸಕ್ಕೆ ಮೈಸೂರು ಅರಮನೆಯ ಸ್ಥಳ ನಿಗದಿ ಮಾಡಲಾಗಿದೆ. ಈ ಬಾರಿ ಗಿನ್ನಿಸ್ ರೆಕಾರ್ಡ್ ಇರೋದಿಲ್ಲ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದರು.

ಅರಮನೆ ಆಡಳಿತ ಮಂಡಳಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಂಸದ ಪ್ರತಾಪ್ ಸಿಂಹ ಚರ್ಚಿಸಿದರು. ಈ ಭಾರಿ ಯೋಗದಲ್ಲಿ ಪ್ರಧಾನಿ ಮೋದಿ ಭಾಗಿ ಹಿನ್ನಲೆ,  ಅರಮನೆ ಆವರಣದಲ್ಲಿ ಭದ್ರತೆ ಬಗ್ಗೆ ಚರ್ಚಿಸಿ, ಪ್ರಧಾನಿ ಮೋದಿ ಆಗಮಿಸುವ ರಸ್ತೆ ಸುಸ್ಥಿತಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಮಾಹಿತಿ ಪಡೆದರು. ಸಭೆಯಲ್ಲಿ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ಮುಡಾ ಅಧ್ಯಕ್ಷ ರಾಜೀವ್ ಸೇರಿದಂತೆ ಪಾಲಿಕೆ ಹಾಗೂ ಮೂಡಾ ಅಧಿಕಾರಿಗಳು ಭಾಗಿಯಾಗಿದ್ದರು.

ಸಭೆ ಬಳಿಕ ಮಾತನಾಡಿದ ಸಂಸದ ಪ್ರತಾಪ್ ಸಿಂಹ,  ಇದು ಸಂಪೂರ್ಣ ಕೇಂದ್ರ ಸರ್ಕಾರದ ಕಾರ್ಯಕ್ರಮ. ಇದರಲ್ಲಿ ರಾಜ್ಯ ಸರ್ಕಾರದ್ದು ಪೋಷಕ ಪಾತ್ರ ಮಾತ್ರ. ಇಲ್ಲಿ ನಾವು ವಿಶ್ವ ಯೋಗ ದಿನ ಆಚರಣೆ ಮಾಡುತ್ತೇವೆ. ಅದಕ್ಕೆ ಬೇಕಾದ ಸಹಕಾರವನ್ನ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕೊಡುತ್ತದೆ. ಗಿನ್ನೀಸ್ ರೆಕಾರ್ಡ್ ಗಾಗಿ ಯೋಗ ಮಾಡುತ್ತಿಲ್ಲ. ಗಿನ್ನಿಸ್ ರೆಕಾರ್ಡ್ ಮುಂದಿ‌ನ ವರ್ಷವೂ ಮಾಡಬಹುದು. ಈ ಬಾರಿ ಅಚ್ಚುಕಟ್ಟಾಗಿ ಯೋಗ ನಡೆಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ಯೋಗಾಭ್ಯಾಸ ನಡೆಸಿ ವಿಶ್ವಕ್ಕೆ ಸಂದೇಶ ಕೊಡಲಿದ್ದಾರೆ ಎಂದರು.

ಸಭೆಯಲ್ಲಿ ಅರಮನೆ ಹೊರತಾಗಿ ಇತರ ಸ್ಥಳಗಳಲ್ಲಿ ನಡೆಯುವ ಯೋಗದ ಬಗ್ಗೆ ಚರ್ಚೆ ನಡೆಯಿತು. ಅರಮನೆಯಲ್ಲಿ ಸಿದ್ಧತೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಪ್ರಧಾನಿ ಆಗಮನದ ಸ್ಥಳಗಳಲ್ಲಿ ಸ್ವಚ್ಚತೆ  ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಏರ್‌ಪೋರ್ಟ್ ನಿಂದ ‌ ರ್ಯಾಡಿಷನ್ ಬ್ಲೂ, ಲಲಿತ್‌ ಮಹಲ್ ಸೇರಿದಂತೆ ಸ್ಥಳಗಳ ಭದ್ರತೆ ಬಗ್ಗೆ ಚರ್ಚೆ ನಡೆಯಿತು. ಅಂತಿಮವಾಗಿ ಎಸ್‌ ಪಿಜಿ ನೀಡುವ ಮಾರ್ಗಸೂಚಿ ಅನ್ವಯ ತೀರ್ಮಾನಿಸಲಾಗುತ್ತೆ. ಮೋದಿ ಅವರು ಯೋಗಾ ಕಾರ್ಯಕ್ರಮ ಜೊತೆಗೆ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಭೇಟಿ ಕೊಡುತ್ತಾರೆ. ಸುತ್ತೂರು ಶ್ರೀಗಳು ಕೂಡ ಮಠಕ್ಕೆ ಭೇಟಿ ಕೊಡುವಂತೆ ಕೇಳಿದ್ದಾರೆ. ಅಂತಿಮವಾಗಿ ಪ್ರಧಾನಿಗಳ ಭದ್ರತೆ ನೋಡಿಕೊಂಡು ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.

Key words: Prime Minister-Modi – yoga day-mysore-MP-Prathap simha