ಮನ್ ಕಿ ಬಾತ್: ನೀರಿನ ಸಂರಕ್ಷಣೆಗೆ ದೇಶದ ಜನತೆಗೆ ಕರೆ ನೀಡಿದ ಪ್ರಧಾನಿ ಮೋದಿ

Promotion

ನವದೆಹಲಿ:ಜೂ-30:(www.justkannada.in) ನೀರಿನ ಸಂರಕ್ಷಣೆ ಮಹತ್ವವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ನೀರಿನ ಸಂರಕ್ಷಣೆಗೆ ಪಾರಂಪರಿಕ ನಿಯಮ ಬಳಸಿಕೊಳ್ಳುವ ಮೂಲಕ ನೀರಿನ ಸಂರಕ್ಷಣೆಗೆ ಜಲಾಂದೋಲನ ಆರಂಭಿಸಿ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಎರಡನೇ ಬಾರಿ ಪ್ರಧಾನಿ ಪಟ್ಟ ಅಲಂಕರಿಸಿರುವ ಮೋದಿ ತಮ್ಮ ಜನಪ್ರಿಯ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಎರಡನೇ ಸರಣಿ ಅರಂಭಿಸಿದ್ದು, ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಪ್ರಮುಖವಾಗಿ ದೇಶದ ಹಲವು ರಾಜ್ಯಗಳಲ್ಲಿ ಮಳೆ ಅಭಾವದಿಂದ ನೀರಿನ ಸಮಸ್ಯೆ ಹೆಚ್ಚುತ್ತಿದ್ದು ನೀರಿನ ಸಂರಕ್ಷಣೆಗೆ ಮುಂದಾಗಿ ಎಂದು ತಿಳಿಸಿದರು.

ನೀರಿನ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಹೊಸ ಜಲಶಕ್ತಿ ಸಚಿವಾಲಯವನ್ನು ದೇಶದಲ್ಲಿ ಸ್ಥಾಪಿಸಲಾಗಿದೆ. ನೀರಿನ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವಾಲಯ ಕ್ಷಿಪ್ರ ನಿರ್ಧಾರ ಮಾಡುತ್ತದೆ ಎಂದರು. ಪ್ರತಿವರ್ಷ ದೇಶದ ವಿವಿಧ ಭಾಗಗಳಲ್ಲಿ ನೀರಿನ ಸಮಸ್ಯೆ ತಲೆದೋರುತ್ತದೆ. ನಮ್ಮ ದೇಶದಲ್ಲಿ ಇಡೀ ವರ್ಷದಲ್ಲಿ ಕೇವಲ ಶೇಕಡಾ 8ರಷ್ಟು ಮಾತ್ರ ಮಳೆ ನೀರು ಕೊಯ್ಲು ನಡೆಯುತ್ತದೆ. ಈ ಸಂದರ್ಭದಲ್ಲಿ ನಾನು ಎಲ್ಲರಲ್ಲಿಯೂ 3 ವಿಷಯಗಳ ಕುರಿತು ಮನವಿ ಮಾಡಿಕೊಳ್ಳುತ್ತೇನೆ. ನೀರಿನ ಸಂರಕ್ಷಣೆ ಬಗ್ಗೆ ಸಮಾಜದ ಎಲ್ಲಾ ವರ್ಗಗಳಲ್ಲಿರುವ ಪ್ರಮುಖ ಜನರು ಅರಿವು ಮೂಡಿಸಬೇಕು. ನೀರಿನ ಸಂರಕ್ಷಣೆಯ ಸಾಂಪ್ರದಾಯಿಕ ವಿಧಾನಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಿ. ನೀರಿನ ಸಂರಕ್ಷಣೆ ಬಗ್ಗೆ ಕೆಲಸ ಮಾಡುತ್ತಿರುವ ವ್ಯಕ್ತಿ ಅಥವಾ ಸಂಘ-ಸಂಸ್ಥೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಿ ಎಂದು ಮನವಿ ಮಾಡಿದರು.

ಚೆಂಬರಂಬಕ್ಕಂ ಸರೋವರ ಸೇರಿದಂತೆ ನಾಲ್ಕು ಜಲಾಶಯಗಳಲ್ಲಿ ನೀರಿನ ಪ್ರಮಾಣ ಕೆಳಮಟ್ಟವನ್ನು ತಲುಪಿದ ಬಳಿಕ ದಕ್ಷಿಣ ರಾಜ್ಯಗಳಲ್ಲಿ ಕಳೆದ ಹಲವು ತಿಂಗಳುಗಳಿಂದ ನೀರಿನ ಸಮಸ್ಯೆಯಿಂದಾಗಿ ತತ್ತರಿಸುವಂತಾಗಿದೆ. ಭೀಕರ ಉಷ್ಣತೆ ಮತ್ತು ಮುಂಗಾರು ವಿಳಂಬದಿಂದಾಗಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. 2020ರ ವೇಳೆಗೆ ಚೆನ್ನೈನ ಅಂತರ್ಜಲ ನಿಕ್ಷೇಪಗಳು ಸಂಪೂರ್ಣವಾಗಿ ಬತ್ತುತ್ತವೆ ಎಂದು ಸರ್ಕಾರದ ನೀತಿ ಆಯೋಗವು ಈಗಾಗಲೇ ಅಂದಾಜಿಸಿದೆ. ಬೇಸಿಗೆಯಲ್ಲಿ ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳು ಕೂಡ ತೀವ್ರ ನೀರಿನ ಅಭಾವನ್ನು ಎದುರಿಸುತ್ತಿವೆ.ಸಮಾಜದ ಎಲ್ಲಾ ವರ್ಗದ ಜನರು ದೇಶಾದ್ಯಂತ ನೀರಿನ ಮಹತ್ವ ಕುರಿತು ಅಭಿಯಾನ ಆರಂಭಿಸಬೇಕು ಎಂದರು.

ಇದೇ ವೇಳೆ ಕೇದಾರನಾಥ ಪ್ರವಾಸವನ್ನು ಯಾರೂ ರಾಜಕೀಯಗೊಳಿಸುವುದು ಬೇಡ. ನಾನು ನನ್ನ ಅಂತರಾತ್ಮವನ್ನು ಕಂಡುಕೊಳ್ಳಲು ಕೇದಾರನಾಥ ಯಾತ್ರೆ ಮಾಡಿ ಗುಹೆಯಲ್ಲಿ ಏಕಾಂತವಾಗಿ ಕುಳಿತು ಧ್ಯಾನ ಮಾಡಿದೆ. ಮನ್ ಕಿ ಬಾತ್ ನಲ್ಲಿ ಹಲವು ತಿಂಗಳುಗಳಿಂದ ಮಾತನಾಡದೆ ಉಂಟಾಗಿದ್ದ ನಿರ್ವಾತ ಸ್ಥಿತಿಯನ್ನು ಕೇದಾರನಾಥ ಗುಹೆಯಲ್ಲಿ ಕಂಡುಕೊಳ್ಳಲು ಅವಕಾಶ ಸಿಕ್ಕಿತು. ಆದರೆ ನನ್ನ ಈ ಯಾತ್ರೆ ಮತ್ತು ಗುಹೆಯಲ್ಲಿ ಮಾಡಿದ ಧ್ಯಾನವನ್ನು ಕೆಲವರು ರಾಜಕೀಯಗೊಳಿಸಲು ನೋಡಿದರು ಎಂದರು.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ 61 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ಚುನಾವಣೆಯಿದು. ಮತಚಲಾಯಿಸಿದ ಎಲ್ಲರಿಗೂ ಧನ್ಯವಾದಗಳು. ಅಮೆರಿಕ ಜನಸಂಖ್ಯೆಗಿಂತಲೂ ಹೆಚ್ಚು ಜನ ಮತಹಾಕಿದ್ದಾರೆ. ಸಂಸತ್ ನಲ್ಲಿ ಈಗ 78 ಮಹಿಳಾ ಸಂಸದರಿದ್ದಾರೆ ಎಂದು ತಿಳಿಸಿದರು.

ಮನ್ ಕಿ ಬಾತ್: ನೀರಿನ ಸಂರಕ್ಷಣೆಗೆ ದೇಶದ ಜನತೆಗೆ ಕರೆ ನೀಡಿದ ಪ್ರಧಾನಿ ಮೋದಿ
PM Modi,Man ki baath,India Water Crisis