ರಾಜ್ಯದಲ್ಲಿ ಪಿಎಂ-ಕಿಸಾನ್ ಯೋಜನೆಯಡಿ ಅನರ್ಹ, ಮೃತಪಟ್ಟಿರುವ ರೈತರ ಪಾಲಾಯಿತೇ ರೂ. 443 ಕೋಟಿ..!

ಬೆಂಗಳೂರು, ಸೆಪ್ಟೆಂಬರ್ 28, 2022 (www.justkannada.in):  ಆಡಳಿತಾರೂಢ ಬಿಜೆಪಿ ಸರ್ಕಾರದ ಮುಂಚೂಣಿ ಕಾರ್ಯಕ್ರಮ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಬರೋಬ್ಬರಿ ರೂ.೪೪೨ ಕೋಟಿ ಆರ್ಥಿಕ ನೆರವು ನಾಲ್ಕು ಲಕ್ಷ ‘ಅನರ್ಹ’ ಹಾಗೂ ‘ಮೃತ’ ರೈತರ ಪಾಲಾಗಿರುವ ಬೃಹತ್ ವಂಚನೆಯೊಂದು ಬಯಲಾಗಿದೆ.

ಸಂಬಂಧಪಟ್ಟ ಪ್ರಾಧಿಕಾರಗಳು ಹಣ ಪಡೆದುಕೊಂಡಿರುವ ಅನರ್ಹ ರೈತರಿಂದ ಮರಳಿ ಪಡೆಯುವ ಕೆಲಸದಲ್ಲಿ ತೊಡಗಿದ್ದಾರೆ. ೨೦೧೯ರಲ್ಲಿ ಚಾಲನೆ ನೀಡಲಾದಂತಹ ಪಿಎಂ-ಕಿಸಾನ್ ಕಾರ್ಯಕ್ರಮದಡಿ, ಕೇಂದ್ರ ಸರ್ಕಾರ ಪ್ರತಿ ಭೂಹಿಡುವಳಿ ಹೊಂದಿರುವ ರೈತರ ಕುಟುಂಬಕ್ಕೆ ವಾರ್ಷಿಕ ರೂ.೬,೦೦೦ ಹಣಕಾಸಿನ ನೆರವನ್ನು ಒದಗಿಸುತ್ತಿದೆ. ಇದರ ಜೊತೆಗೆ, ರಾಜ್ಯ ಸರ್ಕಾರ ರೂ.೪,೦೦೦ ಸೇರಿಸಿ ಒಟ್ಟು ರೂ.೧೦,೦೦೦ ಹಣಕಾಸಿನ ನೆರವನ್ನು ರೈತರಿಗೆ ನೀಡುತ್ತಿದೆ.

ಆದಾಯ ತೆರಿಗೆ ಪಾವತಿಸುವ ರೈತ ಕುಟುಂಬಗಳು ಹಾಗೂ ಸಾಂಸ್ಥಿಕ ಹಿಡುವಳಿ ಉಳ್ಳಂತಹ ಕುಟುಂಬಗಳು ಪಿಎಂ-ಕಿಸಾನ್ ಅಡಿ ನೆರವು ಪಡೆಯುವ ಮಾನದಂಡದಿಂದ ಹೊರತುಪಡಿಸಿದ್ದಾರೆ. ಈ ಅಂಶವನ್ನು ಆಧರಿಸಿಯೇ ಈಗ ಹಣಕಾಸಿನ ನೆರವು ಪಡೆದಿರುವ ಅನರ್ಹ ರೈತರನ್ನು ಗುರುತಿಸಲಾಗಿದೆ.

“ಈ ಯೋಜನೆಗೆ ಚಾಲನೆ ನೀಡಿದಾಗ ರೈತರಿಗೆ ಸ್ವಯಂ ನೋಂದಣಿ ಆಯ್ಕೆಯನ್ನು ನೀಡಲಾಗಿತ್ತು. ಆದರೆ ಅದರ ದುರಪಯೋಗವಾಯಿತು,” ಎಂದು ಕೃಷಿ ಆಯುಕ್ತ  ಶರತ್ ಬಿ ಅವರು ತಿಳಿಸಿದ್ದಾರೆ. ಈ ಕುರಿತು ಅವರು ಅನರ್ಹ ರೈತರಿಂದ ಹಣವನ್ನು ಮರಳಿ ಪಡೆಯಲು ಕ್ರಮ ಕೈಗೊಳ್ಳುವಂತೆ ಬ್ಯಾಂಕುಗಳನ್ನು ಕೋರಿದ್ದಾರೆ.

“ಈ ಹಣವನ್ನು ಮರಳಿ ಪಡೆಯುವ ಕೆಲಸದಲ್ಲಿ ಬ್ಯಾಂಕುಗಳಿಗೆ ಅಗತ್ಯ ನೆರವನ್ನು ಒದಗಿಸುವಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಕೋರಲಾಗಿದೆ,” ಎಂದು ತಿಳಿಸಿದರು. ಜೊತೆಗೆ, ಸರ್ಕಾರದ ಬಿಗಿಯಾದ ತಪಾಸಣಾ ಪ್ರಕ್ರಿಯೆಗಳಿಂದಾಗಿ ಇನ್ನು ಮುಂದೆ ಇಂತಹ ವಂಚನೆಗಳಿಗೆ ಆಸ್ಪದವಿರುವುದಿಲ್ಲ ಎಂದು ತಿಳಿಸಿದರು.

ಸುಮಾರು ೩.೮೩ ಲಕ್ಷ ರೈತರು ಪಿಎಂ-ಕಿಸಾನ್ ಯೋಜನೆಯಡಿ ಸ್ವಯಂ ನೋಂದಣಿ ಆಯ್ಕೆಯಡಿ ನೋಂದಣಿ ಮಾಡಿಕೊಂಡಿದ್ದರು. ಚಿತ್ರದುರ್ಗ ಜಿಲ್ಲೆಯಲ್ಲಿ ಅತೀ ಹೆಚ್ಚಿನ ನೋಂದಣಿಗಳಿದ್ದವು. ಇದರಿಂದ ಅನುಮಾನಗೊಂಡ ಅಧಿಕಾರಿಗಳು ನೋಂದಾಯಿತ ಕಡತಗಳನ್ನು ಸರಿಯಾಗಿ ಪರಿಶೀಲಿಸಲು ಕ್ರಮ ಕೈಗೊಳ್ಳಲಾಯಿತು ಎಂದು ಶರತ್ ಅವರು ರಾಜ್ಯಮಟ್ಟದ ಬ್ಯಾಂಕರ್‌ ಗಳ ಸಮಿತಿಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಇದರ ಫಲವಾಗಿ ಸ್ವಯಂ ನೋಂದಣಿ ಆಯ್ಕೆಯಡಿ ನೋಂದಣಿಯಾಗಿರುವಂತಹ ಸುಮಾರು ೧.೦೬ ಲಕ್ಷ ರೈತರು ಅನರ್ಹರೆಂಬ ಅಂಶ ಬಹಿರಂಗಗೊಂಡಿದೆ. ಪ್ರಸ್ತುತ ಸ್ವಯಂ ನೋಂದಣಿ ಆಯ್ಕೆಯನ್ನು ಸ್ಥಗಿತಗೊಳಿಸಲಾಗಿದೆ. ಸರ್ಕಾರ ಆದಾಯ ತೆರಿಗೆ ಪಾವತಿಸುವ ೯೧,೯೬೯ ಫಲಾನುಭವಿಗಳು ಹಾಗೂ ಭೂಹಿಡುವಳಿ ಆಧಾರದ ಮೇಲೆ ಅನರ್ಹಗೊಳ್ಳುವ ೧.೯೯ ಲಕ್ಷ ರೈತರನ್ನು ಗುರುತಿಸಿದೆ. ಇದರ ಜೊತೆಗೆ ಹಣ ಪಡೆದಿರುವ ಫಲಾನುಭವಿಗಳ ಪೈಕಿ ೩,೩೧೨ ರೈತರು ಮೃತಪಟ್ಟಿದ್ದಾರೆ.

ಈವರೆಗೆ ಪ್ರಾಧಿಕಾರಗಳು ಸುಮಾರು ರೂ.೭.೨೬ ಕೋಟಿ ಮೊತ್ತವನ್ನು ಹಿಂದಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪಿಎಂ-ಕಿಸಾನ್ ಯೋಜನೆಯಡಿ ಕರ್ನಾಟಕದಲ್ಲಿ ೫೮.೪೨ ಲಕ್ಷ ರೈತರಿದ್ದು, ಬಿಜೆಪಿಯ ಅಭಿಯಾನಗಳಲ್ಲಿ ಈ ಯೋಜನೆ ಬಹಳ ದೊಡ್ಡ ಅಂಶವಾಗಿದೆ.

ಈ ಸಂಬಂಧ ಮಾತನಾಡಿದ ರೈತ ಮುಖಂಡ ಕುರುಬುರು ಶಾಂತಕುಮಾರ್ ಅವರು, ಈ ಯೋಜನೆಯಿಂದ ರೈತರಿಗೆ ಅಷ್ಟೇನೂ ಸಹಾಯವಾಗುವುದಿಲ್ಲ. “ಓರ್ವ ರೈತನಿಗೆ ಪ್ರತಿ ಚೀಲಕ್ಕೆ ರೂ.೧,೮೦೦ ವೆಚ್ಚವಾಗುವ ಆರು ರಸಗೊಬ್ಬರ ಚೀಲಗಳ ಅಗತ್ಯವಿರುತ್ತದೆ. ಅಂದರೆ ಒಟ್ಟು ಮೊತ್ತ ರೂ.೧೦,೮೦೦/-. ಹಾಗಾಗಿ ಪಿಎಂ-ಕಿಸಾನ್ ಯೋಜನೆಯಡಿ ದೊರೆಯುವ ಮೊತ್ತ ಕೇವಲ ಈ ವೆಚ್ಚವನ್ನು ಭರಿಸಬಹುದಷ್ಟೇ,” ಎಂದು ಅಭಿಪ್ರಾಯಪಟ್ಟರು. ಆದರೆ ಹೆಚ್ಚುತ್ತಿರುವ ಡೀಸೆಲ್ ದರಗಳು ಹಾಗೂ ಕೃಷಿ ಉಪಕರಣಗಳ ಮೇಲಿನ ಜಿಎಸ್‌ ಟಿ ಕುರಿತು ಮಾತನಾಡಿದರು. “ಮೇಲಾಗಿ, ೨೦೨೨ರಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಕೇಂದ್ರ ಸರ್ಕಾರ ನಮಗೆ ಆಶ್ವಾಸನೆ ನೀಡಿತ್ತು,’ ಎಂದು ವ್ಯಂಗ್ಯವಾಡಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: PM-Kisan-scheme –ineligible- deceased -farmers – Rs. 443 crore