ರಾಜ್ಯ ಸರ್ಕಾರದಿಂದ 4,475  ಸ್ವಾತಂತ್ರ್ಯ ಹೋರಾಗಾರರಿಗೆ ಪಿಂಚಣಿ : ಈ ಪೈಕಿ ಅನೇಕರು ಜೀವಂತವಿಲ್ಲ.

kannada t-shirts

ಬೆಂಗಳೂರು, ಆಗಸ್ಟ್ 15, 2022 (www.justkannada.in): ಕರ್ನಾಟಕ ಸರ್ಕಾರವು ೪,೪೭೫ ಸ್ವಾತಂತ್ರ್ಯ ಹೋರಾಟಗಾರಿಗೆ ಮಾಸಿಕ ರೂ.೧೦,೦೦೦ ಪಿಂಚಣಿ ಪಾವತಿಸಲಾಗುತ್ತಿದೆ. ಆದರೆ ಪ್ರಾಧಿಕಾರಗಳ ಪ್ರಕಾರ ಈ ಪೈಕಿ ಕೇವಲ ಕೆಲವು ನೂರು ಹೋರಾಟಗಾರರು ಮಾತ್ರ ಜೀವಂತವಿದ್ದು, ಉಳಿದವರ ಪ್ರಕರಣಗಳಲ್ಲಿ ಅವರ ಕುಟುಂಬಗಳ ಸದಸ್ಯರು ಪಿಂಚಣಿ ಮೊತ್ತವನ್ನು ಪಡೆಯುತ್ತಿದ್ದಾರೆ.

ಪಿಂಚಣಿ ಪಡೆಯುತ್ತಿರುವ ಒಟ್ಟು ೪,೪೭೫ ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಬೆಳಗಾವಿಯಲ್ಲಿ ಅತೀ ಹೆಚ್ಚ್ಲು ೮೭೦ ಜನರಿದ್ದಾರೆ. ಉಳೀದಂತೆ ಧಾರವಾಡದಲ್ಲಿ (೫೧೧), ಬೆಂಗಳೂರು ನಗರ (೪೭೨) ಹಾಗೂ ತುಮಕೂರು (೩೭೬). ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಪಿಂಚಣಿಯನ್ನು ಇತ್ತೀಚೆಗೆ ಡಿಪಿಎಆರ್ (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ) ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸಲಾಗಿದೆ.

ಈ ಕುರಿತು ಮಾತನಾಡಿದ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿಗಳ ನಿರ್ದೇಶಕ ಡಿ.ಎಂ. ಸತೀಶ್ ಕುಮಾರ್ ಅವರು, “ನಾವು ವಿವರಗಳನ್ನು ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇವೆ. ಈವರೆಗೆ, ೬೦೨ ಪಿಂಚಣಿ ಫಲಾನುಭವಿಗಳ ಮಾಹಿತಿ ಬಂದಿದೆ. ಆ ಪೈಕಿ ಕೇವಲ ೯೮ ಸ್ವಾತಂತ್ರ್ಯ ಹೋರಾಟಗಾರರು ಮಾತ್ರ ಜೀವಂತವಾಗಿದ್ದಾರೆ, ಮೂರು ಜನರ ವಿಳಾಸ ಪತ್ತೆಯಾಗಲಿಲ್ಲ. ಉಳಿದ ೫೦೧ ಜನರು ಮೃತರಾಗಿದ್ದಾರೆ,” ಎಂದು ಮಾಹಿತಿ ನೀಡಿದರು.

ನಿಯಮಗಳ ಪ್ರಕಾರ, ಸ್ವಾತಂತ್ರ್ಯ ಹೋರಾಟಗಾರರು ಮೃತಪಟ್ಟಿದ್ದರೆ, ಅವರ ಪತಿ/ಪತ್ನಿ ಅಥವಾ ಅವಲಂಭಿತ ಮಕ್ಕಳು ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ನೀಡುವ ಪದ್ಧತಿ ೧೯೬೯ರಲ್ಲಿ, ಅಂದಿನ ಮೈಸೂರು ರಾಜ್ಯ, ಮೈಸೂರು ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಕಲ್ಯಾಣ ನಿಯಮಾವಳಿಗಳನ್ನು ಪರಿಚಯಿಸಿದಾಗಿನಿಂದಲೂ ನಡೆದುಕೊಂಡು ಬಂದಿದೆ.

ಆಗ ಪಿಂಚಣಿ ಮೊತ್ತ ಮಾಸಿಕ ಕೇವಲ ರೂ.೫೦ ಇತ್ತು. ೧೯೮೦ರಲ್ಲಿ ಆ ಮೊತ್ತವನ್ನು ರೂ.೯೦ಕ್ಕೆ, ೧೯೮೯ರಲ್ಲಿ ರೂ.೨೦೦, ೨೦೦೦ರಲ್ಲಿ ರೂ.೭೫೦ಕ್ಕೆ ಏರಿಕೆ ಮಾಡಲಾಯಿತು. ೨೦೧೭ರಲ್ಲಿ ಪಿಂಚಣಿ ಮೊತ್ತವನ್ನು ರೂ.೮೦೦೦ ದಿಂದ ರೂ.೧೦,೦೦೦ಕ್ಕೆ ಪರಿಷ್ಕರಿಸಲಾಯಿತು.

ಪ್ರಸ್ತುತ ಪಿಂಚಣಿ ಮೊತ್ತವನ್ನು ಪಾವತಿ ನೇರ ಫಲಾನುಭವಿ ಖಾತೆಗೆ (ಡಿಬಿಟಿ) ವ್ಯವಸ್ಥೆ ಮೂಲಕ ಪಾವತಿಸಲಾಗುತ್ತಿದೆ. ಆದರೆ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಪಿಂಚಣಿಯನ್ನು ಮಾತ್ರ ಈಗಲೂ ಜಿಲ್ಲಾಧಿಕಾರಿಗಳ ಮೂಲಕವೇ ನೀಡಲಾಗುತ್ತಿದೆ. “ನಾವು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಪಿಂಚಣಿಯನ್ನೂ ಸಹ ಡಿಬಿಟಿ ಮೂಲಕ ಪಾವತಿಸುವ ಕಡೆ ಹೆಜ್ಜೆ ಇಡುತ್ತಿದ್ದೇವೆ. ಸೆಪ್ಟೆಂಬರ್ ನಂತರ ಈ ಯೋಜನೆಯಡಿ ಪಿಂಚಣಿ ಪಡೆಯುವವರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುವುದು,” ಎಂದು ಕುಮಾರ್ ಮಾಹಿತಿ ನೀಡಿದರು.

ನಿಯಮಗಳ ಪ್ರಕಾರ ಸ್ವಾತಂತ್ರ್ಯ ಹೋರಾಟಗಾರ ಎಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಕನಿಷ್ಠ ೬ ತಿಂಗಳ ಕಾಲ ಜೈಲಿಗೆ ಹೋಗಿದ್ದ ವ್ಯಕ್ತಿ, ಅಥವಾ ಕೊಲ್ಲಲ್ಪಟ್ಟ ಅಥವಾ ನೇಣಿಗೆ ಹಾಕಿದ ವ್ಯಕ್ತಿ ಅಥವಾ ಪೋಲಿಸರು ಅಥವಾ ಮಿಲಿಟರಿಯವರ ಗುಂಡೇಟಿನಿಂದ ಮೃತಪಟ್ಟವರು, ಸ್ವಾತಂತ್ರ್ಯ ಚಳವಳಿಯಲ್ಲಿ ಉದ್ಯೋಗವನ್ನು ಕಳೆದುಕೊಂಡವರು ಅಥವಾ ಜೀವನೋಪಾಯವನ್ನು ಕಳೆದುಕೊಂಡವರು ಎಂದು ವ್ಯಾಖ್ಯಾನಿಸಲಾಗಿದೆ. ಭಾರತೀಯ ರಾಷ್ಟ್ರೀಯ ಸೇನೆ (ಐಎನ್‌ಎ)ಯ ಚಟುವಟಿಕೆಗಳಲ್ಲಿ ಭಾಗವಹಿಸಿದವರೂ ಸಹ ಪಿಂಚಣಿಗೆ ಅರ್ಹರಾಗಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರಿಗೆ ಕೇಂದ್ರ ಸರ್ಕಾರದಿಂದಲೂ ಸ್ವತಂತ್ರತಾ ಸೈನಿಕ ಸಮ್ಮಾನ್ ಯೋಜನಾ (ಎಸ್‌ಎಸ್‌ಎಸ್‌ವೈ) ಅಡಿ ರೂ.೨೬,೦೦೦ ಪಿಂಚಣಿ ದೊರೆಯುತ್ತದೆ. ಇದೇ ವರ್ಷ ಮಾರ್ಚ್ ನಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ೨೦೨೫-೨೬ರವರೆಗೂ ವಿಸ್ತರಿಸಲು ನಿರ್ಧರಿಸಿದ್ದರು, ಇದಕ್ಕಾಗಿ ರೂ.೩,೨೭೪.೮೭ ಕೋಟಿ ವೆಚ್ಚ ತಗಲುತ್ತದೆ ಎಂದು ಅಂದಾಜಿಸಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Pension – 4,475 freedom fighters- state government

website developers in mysore