ತೆಲಂಗಾಣದಲ್ಲಿರುವ ಮಹಾತ್ಮ ಗಾಂಧಿ ದೇವಾಲಯಕ್ಕೆ ಹೆಚ್ಚಿದ ಭಕ್ತಾದಿಗಳ ಸಂಖ್ಯೆ.

ನಲಗೊಂಡ (ತೆಲಂಗಾಣ), ಆಗಸ್ಟ್ 15, 2022 (www.justkannada.in): ಭಾರತ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವಂತೆ ತೆಲಂಗಾಣದಲ್ಲಿರುವ ಮಹಾತ್ಮ ಗಾಂಧಿಯ ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.

ತೆಲಂಗಾಣ ರಾಜ್ಯದ, ಹೈದ್ರಾಬಾದ್‌ ನಿಂದ ಸುಮಾರು ೭೫ ಕಿ.ಮೀ.ಗಲ ದೂರದಲ್ಲಿರುವ  ಚಿತ್ಯಾಲ ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಜನರಿಗೆ ಮಹಾತ್ಮ ಗಾಂಧಿಯ ದೇವಾಲಯಕ್ಕೆ ಭೇಟಿ ನೀಡುವುದು ಒಂದು ಭಾವನಾತ್ಮಕ ಸಂಬಂಧವಾಗಿ ರೂಪುಗೊಂಡಿದೆ.

ಈ ದೇವಾಲಯವನ್ನು ನಡೆಸುತ್ತಿರುವ ಮಹಾತ್ಮ ಗಾಂಧಿ ಚಾರಿಟೆಬಲ್ ಟ್ರಸ್ಟ್  ನ ಕಾರ್ಯದರ್ಶಿ ಪಿ.ವಿ. ಕೃಷ್ಣ ರಾವ್ ಅವರ ಪ್ರಕಾರ, ಚಿತ್ಯಾಲ ಪಟ್ಟಣದ ಬಳಿ ಇರುವ ಪೆದ್ದ ಕಾಪರ್ತಿ ಗ್ರಾಮದಲ್ಲಿರುವ ಈ ರೀತಿಯ ಮೊಟ್ಟ ಮೊದಲ ದೇವಾಲಯಕ್ಕೆ ದೂರದ ಊರುಗಳಿಂದ ಜನರು ಭೇಟಿ ನೀಡಲಾರಂಭಿಸಿದ್ದಾರೆ. “ಈ ದೇವಾಲಯಕ್ಕೆ ಸಾಮಾನ್ಯವಾಗಿ ಪ್ರತಿ ದಿನ ೬೦-೭೦ ಜನರು ಭೇಟಿ ನೀಡುತ್ತಾರೆ. ಆದರೆ ಭಾರತ ಸರ್ಕಾರ ಮತ್ತು ತೆಲಂಗಾಣ ಸರ್ಕಾರಗಳು ಭಾರತದ ೭೫ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅಮೃತ ಮಹೋತ್ಸವವನ್ನು ಆಚರಿಸಲು ನಿರ್ಧರಿಸಿದಾಗಿನಿಂದ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ೩೫೦ಕ್ಕೆ ಏರಿಕೆಯಾಗಿದೆ,” ಎನ್ನುತ್ತಾರೆ.

“ಸಾಮಾನ್ಯವಾಗಿ ಈ ದೇವಾಲಯಕ್ಕೆ ಸುಮಾರು ೬೦ ರಿಂದ ೭೦ ಜನರು ಬಂದು ಪ್ರಾರ್ಥಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಂದರೆ ಅಜಾದಿ ಕಾ ಅಮೃತ್ ಮಹೋತ್ಸವ್‌ ನ ಹೆಸರಿನಲ್ಲಿ ದೊರೆತಂತಹ ಬೃಹತ್ ಪ್ರಚಾರದಿಂದಾಗಿ ಹಾಗೂ ತೆಲಂಗಾಣ ಸರ್ಕಾರದ ವತಿಯಿಂದ ‘ಸ್ವತಂತ್ರ ಭಾರತ ವಜ್ರೋತ್ಸವಲು’ ಹೆಸರಿನಲ್ಲಿ ನೀಡಿದ ಬೃಹತ್ ಪ್ರಚಾರದ ಹಿನ್ನೆಲೆಯಲ್ಲಿ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಪ್ರತಿ ದಿನಕ್ಕೆ ೩೦೦ ರಿಂದ ೩೪೦ರಷ್ಟಾಗಿದೆ,” ಎಂದು ತಿಳಿಸಿದ್ದಾರೆ. ೨೦೧೪ರಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಯಿತು. ಆದರೆ ಆಗಸ್ಟ್ ೧೫ರಂದು ಸ್ವಾತಂತ್ರ್ಯ ದಿನಾಚರಣೆ ಇರುವುದಕ್ಕಾಗಿ ವಿಶೇಷ ಪೂಜೆಗಳನ್ನೇನು ನಡೆಸಲಾಗುವುದಿಲ್ಲ. ಆದರೆ ಅಕ್ಟೋಬರ್ ೨, ಗಾಂಧಿ ಜಯಂತಿಯಂದು ಮಾತ್ರ ವಿಶೇಷ ಪೂಜೆಗಳನ್ನು ಆಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಈ ದೇವಾಲಯಕ್ಕೆ ಪ್ರತಿ ದಿನ ತಪ್ಪದೇ ಬಂದು ಪ್ರಾರ್ಥಿಸುವ ಜನರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇವಾಲಯ ನಿಧಾನವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆಯಂತೆ.

ಹೈದ್ರಾಬಾದ್-ವಿಜಯವಾಡ ಹೆದ್ದಾರಿಯಲ್ಲಿ ನಾಲ್ಕು ಎಕರೆಗಳ ಪ್ರದೇಶ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿರುವ ಈ ದೇವಾಲಯದಲ್ಲಿ ಕುಳಿತಿರುವ ಭಂಗಿಯಲ್ಲಿ ಜನರಿಗೆ ಆಶೀರ್ವಾದ ನೀಡುತ್ತಿರುವ ಮಹಾತ್ಮ ಗಾಂಧಿಯ ಮೂರ್ತಿಯಿದೆ. ರಾವ್ ಅವರ ಪ್ರಕಾರ, ಚಿತ್ಯಾಲದ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಅವರ ವಿವಾಹ ವಾರ್ಷಿಕೋತ್ಸವದಂದು ದೇವಾಲಯದ ಟ್ರಸ್ಟ್ ವತಿಯಿಂದ ರೇಷ್ಮೆ ಬಟ್ಟೆಗಳನ್ನು ವಿತರಿಸಲಾಗುತ್ತದೆ. ಇಲ್ಲಿನ ಗ್ರಾಮಸ್ಥರು ವಿವಾಹ ಆಹ್ವಾನ ಪತ್ರಿಕೆಗಳನ್ನು ಹಂಚುವ ಮುಂಚೆ, ಬಾಪುವಿನ ದೇವಾಲಯಕ್ಕೆ ಭೇಟಿ ನೀಡಿ ಬಾಪುವಿಗೆ ಪೂಜೆ ಮಾಡಿ ಆಶೀರ್ವಾದ ಪಡೆಯುವ ಹೊಸ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ.

೭೫ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಯಾವುದಾದರೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಕೃಷ್ಣ ರಾವ್ ಅವರು ಜನರು ಕೇವಲ ಸ್ವಾತಂತ್ರ್ಯೋತ್ಸವಕ್ಕೆ  ಮಾತ್ರ ಗಾಂಧೀಜಿಯನ್ನು ಮೀಸಲಾಗಿರಿಸಿಲ್ಲ. “ನಾವು ಮಹಾತ್ಮ ಗಾಂಧಿಯನ್ನು ಮಹಾತ್ಮನನ್ನಾಗಿ ಅಲ್ಲದೆ ದೇವರ ರೂಪದಲ್ಲಿ ಕಾಣುತ್ತೇವೆ,” ಎಂದರು. ತೆಲಂಗಾಣ ಪ್ರವಾಸೋದ್ಯಮ ಇಲಾಖೆಯು ರಾಜ್ಯದ ಪವಿತ್ರ ಸ್ಥಳಗಳ ಪಟ್ಟಿಯಲ್ಲಿ ಮಹಾತ್ಮ ಗಾಂಧಿ ದೇವಾಲಯವನ್ನೂ ಸೇರ್ಪಡೆಗೊಳಿಸಿದೆ.

ದೇವಾಲಯದ ಟ್ರಸ್ಟ್ ವತಿಯಿಂದ, ದೇವಾಲಯದ ಆವರಣದಲ್ಲಿರುವ ಕಲ್ಯಾಣ ಮಂಟಪವನ್ನು ಕಡಿಮೆ ದರದಲ್ಲಿ ಅಂತರ್ಜಾತಿ ವಿವಾಹಗಳನ್ನು ನಡೆಸಲು ಬಾಡಿಗೆಗೆ ನೀಡುತ್ತಿದೆ. ವಿಧಿಸಲಾಗುವ ಏಕೈಕ ಷರತ್ತೆಂದರೆ ಮದ್ಯಪಾನ ಹಾಗೂ ಮಾಂಸಾಹಾರದ ನಿಷೇಧ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Increased-number – devotees – Mahatma Gandhi -temple – Telangana.