ಬೆಂಗಳೂರನ್ನ ಜೀರೋ ರೌಡಿಸಂ, ಡ್ರಗ್ಸ್ ಮುಕ್ತ ನಗರವನ್ನಾಗಿ ಮಾಡುವುದೇ ನಮ್ಮ ಗುರಿ- ಡಿಜಿ&ಐಜಿಪಿ ಅಲೋಕ್‌ ಮೋಹನ್‌.

Promotion

ಬೆಂಗಳೂರು,ಮೇ. 25,2023(www.justkannada.in):  ಜೀರೋ ರೌಡಿಸಂ ಮಾಡುವುದು, ಡ್ರಗ್ಸ್ ಮುಕ್ತ ನಗರವಾಗಿ  ಬೆಂಗಳೂರನ್ನು ಮಾಡುವುದು ನಮ್ಮ‌ ಗುರಿಯಾಗಿದೆ ಎಂದು ನೂತನ ಪೋಲೀಸ್ ಮಹಾ ನಿರ್ದೇಶಕ (ಡಿಜಿ ಮತ್ತು ಐಜಿಪಿ) ಅಲೋಕ್‌ ಮೋಹನ್‌ ತಿಳಿಸಿದ್ದಾರೆ.

ನಗರ ಪೊಲೀಸ್ ಕಮೀಷನರ್ ಕಚೇರಿಗೆ ‌ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಡಿಜಿ ಐಜಿಪಿ ಅಲೋಕ್‌ ಮೋಹನ್‌,  ಬೆಂಗಳೂರು ಪೊಲೀಸರೊಂದಿಗೆ ಸಭೆ ಮಾಡಿದ್ದೀನಿ. ಜೀರೋ ರೌಡಿಸಂ ಮಾಡುವುದು ನಮ್ಮ ಆದ್ಯತೆಯಾಗಿದೆ. ನಂತರ ಡ್ರಗ್ಸ್ ಮುಕ್ತ ನಗರವಾಗಿ ಬೆಂಗಳೂರನ್ನ ಮಾಡುತ್ತೇವೆ. ಪೊಲೀಸರಿಂದ ಉತ್ತಮ ವರ್ತನೆ ತೋರುವುದು ಕಡ್ಡಾಯ ಆಗಬೇಕು. ಜನಸ್ನೇಹಿ ಪೊಲೀಸ್ ಆಗುವುದು ಬಹಳ ಮುಖ್ಯವಾಗಿ ಮಾಡುತ್ತೇವೆ. ಅಲ್ಲದೆ ನಗರದಲ್ಲಿ ನಡೆಯುವ ಯಾವುದೇ ಅಕ್ರಮ ಚಟುವಟಿಕೆಗಳನ್ನ ಸಹಿಸುವುದಿಲ್ಲ ಎಂದು ಹೇಳಿದರು.

ರಾಜ್ಯಾದ್ಯಂತ ಪೊಲೀಸರ ದೈಹಿಕ ಸಾಮರ್ಥ್ಯದ ಬಗ್ಗೆಯೂ ಗಮನ ಹರಿಸಲಾಗುವುದು. ಅವರು ದೈಹಿಕವಾಗಿ ಸದೃಢರಾಗಿರುವಂತೆ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಹಿರಿಯ ಅಧಿಕಾರಿಗಳಿಗೂ ಪ್ರಕರಣಗಳ ಬಗ್ಗೆ ಕಾಲ ಕಾಲಕ್ಕೂ ಪರಿಶೀಲನೆ ಮಾಡಲು ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಪೊಲೀಸರ ನಿರ್ಲಕ್ಷ್ಯವನ್ನ ಸಹಿಸಲಾಗುವುದಿಲ್ಲ. ಯಾರಿಗೂ ಬೆಂಗಳೂರಿನಲ್ಲಿ ಸಮಸ್ಯೆ ಉಂಟು ಮಾಡಲು ಅವಕಾಶ ನೀಡುವುದಿಲ್ಲ. ಜೊತೆಗೆ, ಸಂಚಾರಿ ವ್ಯವಸ್ಥೆಯ ಬಗ್ಗೆಯೂ ಸಾಕಷ್ಟು ಚರ್ಚೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಮಹಿಳೆ ಹಾಗೂ ಮಕ್ಕಳ ಸುರಕ್ಷತೆ, ಸೈಬರ್ ಕ್ರೈಂಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸ್ ಠಾಣೆಗೆ ಬರುವ ಎಲ್ಲ ದೂರುಗಳನ್ನು ಸ್ವೀಕರಿಸಬೇಕು. ಪೊಲೀಸರಿಗೆ ಇನ್ನೂ ಕೆಲವು ಟೆಕ್ನಿಕಲ್ ಟ್ರೈನಿಂಗ್ ನೀಡಲಾಗುವುದು. ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಮ್ಯಾನೇಜ್‌ ಮೆಂಟ್ ಕೂಡ ಮುಖ್ಯವಾಗಿದ್ದು, ಎಲ್ಲಿಯೂ ಸಂಚಾರ ದಟ್ಟಣೆ ಆಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಗಮನ ಹರಿಸಲಾಗುವುದು, ಎಂದು ನೂತನ ಡಿಜಿ-ಐಜಿಪಿ ಅಲೋಕ್ ಮೋಹನ್ ಹೇಳಿದರು.

ಪ್ರವೀಣ್‌ ಸೂದ್‌ ಸಿಬಿಐ ನಿರ್ದೇಶಕರಾಗಿ ನೇಮಕ ಹಿನ್ನೆಲೆ ನೂತನ  ಡಿಜಿ ಮತ್ತು ಐಜಿಪಿಯಾಗಿ ಅಲೋಕ್‌ ಮೋಹನ್ ಪದಗ್ರಹಣ ಮಾಡಿದರು.  ಬಿಹಾರ ಮೂಲದ ಅಲೋಕ್‌ ಮೋಹನ್‌ ಅವರು 1987ನೇ ಬ್ಯಾಚ್‌ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ರಾಜ್ಯದಲ್ಲಿ 36 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಗ್ನಿಶಾಮಕ ದಳ, ತುರ್ತು ಸೇವೆಗಳ ಡಿಜಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಜೊತೆಗೆ, ಕಾರಾಗೃಹ ಡಿಜಿಪಿ, ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತರಾಗಿ, ಎಸಿಬಿ ಎಡಿಜಿಪಿ ಸೇರಿದಂತೆ ಹಲವು ವಿಭಾಗಗಳಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿದ ಅನುಭವ ಇವರಿಗಿದೆ. ಇನ್ನು ನೂತನ ಡಿಜಿ-ಐಜಿಪಿ ಅಲೋಕ್ ಮೋಹನ್ ಅವರು 2025ರ ಏಪ್ರಿಲ್‌ನಲ್ಲಿ ನಿವೃತ್ತಿಯಾಗಲಿದ್ದಾರೆ.

Key words: Our goal – Bangalore -zero rowdism-drug free city – DG&IGP- Alok Mohan.