ಬೆಂಗಳೂರು ನಗರದಲ್ಲಿ ಕೇವಲ ಅರ್ಧದಷ್ಟು ಆಟೋಗಳು ಮಾತ್ರ ಹೊಂದಿವೆ ಅಧಿಕೃತ ಮೀಟರ್.

Promotion

ಬೆಂಗಳೂರು, ನವೆಂಬರ್ 11, 2021 (www.justkannada.in): ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆಯು ಬೆಂಗಳೂರು ನಗರದ ರಸ್ತೆಗಳಲ್ಲಿ ಹಾಲಿ ಚಲಿಸುತ್ತಿರುವ ಒಟ್ಟು ಅಂದಾಜು ೧.೪೫ ರಿಂದ ೧.೭೫ ಲಕ್ಷ ಆಟೋರಿಕ್ಷಾಗಳ ಪೈಕಿ ಕೇವಲ ೭೫,೦೦೦ ಆಟೋಗಳ ಡಿಜಿಟಲ್ ದರ ಮೀಟರ್‌ ಗಳನ್ನು ಮಾತ್ರ ಅನುಮೋದಿಸಿದೆ.

ಅಂದರೆ ಇದರರ್ಥ ಬೆಂಗಳೂರು ನಗರದಲ್ಲಿ ಓಡಾಡುತ್ತಿರುವ ಅರ್ಧದಷ್ಟು ಆಟೋಗಳು ಕಾನೂನುಬಾಹಿರವಾಗಿ ಚಲಿಸುತ್ತಿವೆ. ನಗರದ ಆಟೋರಿಕ್ಷಾಗಳ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯ ಸಾರಿಗೆ ಇಲಾಖೆಯ ಆಡಳಿತಾತ್ಮಕ ಹಾಗೂ ಕಾನೂನು ಸಮಸ್ಯೆಗಳ ತಿಕ್ಕಾಟದಲ್ಲಿ ಸಿಲುಕಿಕೊಂಡಿದ್ದು, ಎಲ್ಲೆಡೆಗಳಿಂದ ಟೀಕೆಗೆ ಗುರಿಯಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಚಾಲಕರ ಸಂಘಗಳು ಆಟೋಗಳ ಸಂಖ್ಯೆಯನ್ನು ನಿಯಂತ್ರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರೂ ಸಹ ಹೊಸದಾಗಿ ನೋಂದಣಿ ಆಗುತ್ತಿರುವ ಆಟೋಗಳ ಸಂಖ್ಯೆ ಮಾತ್ರ ಏರುತ್ತಿದೆ. ಆಟೋಗಳಲ್ಲಿ ಅಳವಡಿಸಿರುವಂತಹ ಮೀಟರ್‌ ಗಳಿಗೆ ತೀರುವಳಿ ನೀಡುವ ಜವಾಬ್ದಾರಿಯನ್ನು ಹೊಂದಿರುವಂತಹ ಕಾನೂನು ಮಾಪನ ಇಲಾಖೆಯಲ್ಲಿರುವ ಅಧಿಕಾರಿಗಳು ಈ ಸಮಸ್ಯೆಯನ್ನು ಒಪ್ಪಿಕೊಂಡಿದ್ದಾರೆ.

ಇಲಾಖೆಯ ಸಹಾಯಕ ನಿಯಂತ್ರಣಾಧಿಕಾರಿ (ತಾಂತ್ರಿಕ) ಹಾಗೂ ಆಟೋರಿಕ್ಷಾಗಳ ದರ ಮೀಟರ್‌ ಗಳ ನಿರ್ವಹಣೆಯ ಪ್ರಭಾರ ಅಧಿಕಾರಿಯೂ ಆಗಿರುವಂತಹ ಕುಮಾರ್ ಎಂ.ಎಸ್. ಕುಮಾರ್ ಅವರು ತಿಳಿಸಿದಂತೆ, “ಬೆಂಗಳೂರು ನಗರದ ರಸ್ತೆಗಳಲ್ಲಿ ಓಡಾಡುತ್ತಿರುವ ಒಟ್ಟು ಆಟೋಗಳ ಪೈಕಿ ಕೇವಲ ೭೫,೦೦೦ ಆಟೋಗಳ ಡಿಜಿಟಲ್ ದರ ಮೀಟರ್‌ ಗಳನ್ನು ಮಾತ್ರ ನೋಂದಾಯಿಸಲಾಗಿದ್ದು, ಇವುಗಳಿಗೆ ಮಾತ್ರ ಇಲಾಖೆ ಅನುಮೋದನೆ ಲಭಿಸಿದೆ. ಇನ್ನುಳಿದ, ಅಂದರೆ ಅನುಮೋದನೆ ಪಡೆಯದೆ ರಸ್ತೆಯಲ್ಲಿ ಓಡಾಡುತ್ತಿರುವಂತಹ ಆಟೋಗಳ ಮೇಲೆ ಇಲಾಖೆ ಕ್ರಮ ಕೈಗೊಳ್ಳಬಹುದು,” ಎಂದು ವಿವರಿಸಿದರು.

ಇಲಾಖೆಯ ಬೆಂಗಳೂರಿನ ಕಚೇರಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ತೂಕ ಮತ್ತು ಅಳತೆಗೆ ಸಂಬಂಧಿಸಿದ ನಿಯಮಗಳನ್ನು ಜಾರಿಗೊಳಿಸಲು ೧೫ ನಿರೀಕ್ಷಕರಿದ್ದರು. “ನಮ್ಮಲ್ಲಿ ಸಿಬ್ಬಂದಿಗಳ ಕೊರತೆ ಇದ್ದರೂ ಸಹ, ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ಆರಂಭವಾಗುವುದಕ್ಕೂ ಮುಂಚಿನವರೆಗೂ ನಿರಂತರವಾಗಿ ತಪಾಸಣೆಗಳನ್ನು ನಡೆಸಿ, ನಿಯಮಬಾಹಿರವಾಗಿ ಓಡಾಡುತ್ತಿರುವಂತಹ ಆಟೋಗಳ ಮೇಲೆ ದಂಡವನ್ನೂ ವಿಧಿಸುತ್ತಿದ್ದೆವು,” ಎಂದರು.

ಆಟೋರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎನ್. ಶ್ರೀನಿವಾಸ್ ಅವರು ಆಟೋರಿಕ್ಷಾಗಳಲ್ಲಿರುವ ಲೋಪಗಳಿಗೆ ಸಂಬಂಧಪಟ್ಟಂತೆ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) ದೋಷವಿದೆ ಎಂದರು. “ಒಂದು ಕಡೆ ಸಾರಿಗೆ ಇಲಾಖೆ ಆ್ಯಪ್ ಆಧಾರಿತ ಟ್ಯಾಕ್ಸಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ, ಇದರಿಂದಾಗಿ ನಮ್ಮ ವ್ಯಾಪಾರದ ಮೇಲೆ ಪರಿಣಾಮ ಉಂಟಾಗಿದೆ. ಮತ್ತೊಂದೆಡೆ, ಸಾರಿಗೆ ಇಲಾಖೆ ನಗರದಲ್ಲಿ ಓಡಾಡುವ ಆಟೋಗಳ ಸಂಖ್ಯೆಯನ್ನೂ ನಿಯಂತ್ರಿಸುವಲ್ಲಿ ವಿಫಲವಾಗಿದೆ. ೨೦೧೯ರಲ್ಲಿ ನಗರದ ಬೇಡಿಕೆ ಹಾಗೂ ಸರಬರಾಜನ್ನು ಸರಿಯಾಗಿ ಅಂದಾಜಿಸದೆ ೩೦,೦೦೦ ಆಟೋಗಳಿಗೆ ಪರ್ಮಿಟ್ ನೀಡಿದೆ,” ಎಂದು ಆರೋಪಿಸಿದರು.

ಆದರೆ ಅಧಿಕಾರಿಗಳು ತಿಳಿಸಿದ ಪ್ರಕಾರ ಮಾನ್ಯ ಉಚ್ಛ ನ್ಯಾಯಾಲಯವು ೨೦೧೮ರ ಒಂದು ಆದೇಶದಲ್ಲಿ ತಿಳಿಸಿರುವಂತೆ ಹೊಸ ಆಟೋ ನೋಂದಣಿಗೆ ಪರ್ಮಿಟ್ ಕಡ್ಡಾಯವಲ್ಲ, ಏಕೆಂದರೆ ಸಾವಿರಾರು ಆಟೋಗಳು ಪರ್ಮಿಟ್‌ ಗಳಿಲ್ಲದೆಯೇ ರಸ್ತೆಗಳ ಮೇಲೆ ಸಂಚರಿಸುತ್ತಿವೆ ಎಂದಿತ್ತು.

ಆದರ್ಶ್ ಆಟೋ ಚಾಲಕರ ಸಂಘದ ಸಿ. ಸಂಪತ್ ಅವರು ಹೇಳುವಂತೆ ಆಟೋಗಳ ಅಸಮರ್ಪಕ ಸಂಖ್ಯೆಯಿಂದಾಗಿ, ಒಬ್ಬ ಗ್ರಾಹಕರಿಗೆ ಹಲವು ಆಟೋಗಳು ಕಾಯುವಂತಾಗಿದೆ. “ಬೆಂಗಳೂರು ನಗರಕ್ಕೆ ಒಂದು ಲಕ್ಷ ಆಟೋಗಳ ಅಗತ್ಯವೇ ಇಲ್ಲ. ಆದರೆ ಈ ಸಂಖ್ಯೆಯನ್ನು ನಿಯಂತ್ರಿಸಲು ಯಾರೂ ಪ್ರಯತ್ನಿಸುತ್ತಿಲ್ಲ. ಸಾರಿಗೆ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಕಾನೂನು ಮಾಪನ ಇಲಾಖೆಗಳು ಇಷ್ಟು ವರ್ಷಗಳಿಂದ ಕೇವಲ ಒಂದರ ಮೇಲೊಂದು ಆರೋಪವನ್ನು ಮಾಡುತ್ತಾ ಕಾಲಹರಣ ಮಾಡುತ್ತಿವೆ. ಇನ್ನು ಮುಂದಾದರೂ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬಹುದು ಎಂದು ಆಶಿಸುತ್ತೇವೆ,” ಎಂದು ಅಭಿಪ್ರಾಯಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Only- half -autos – Bangalore city – official meter.