ನಾಯಿ-ಹಾವು ಕಡಿತಕ್ಕಿಲ್ಲ ಔಷಧ: ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅಲಭ್ಯ, ರೇಬಿಸ್, ಎಎಸ್​ವಿ ಮದ್ದು ಸಿಗ್ತಿಲ್ಲ

Promotion

ಬೆಂಗಳೂರು:ಜುಲೈ-21: ನಾಯಿ, ಹಾವು ಕಡಿತಕ್ಕೊಳಗಾದವರು ಸರ್ಕಾರಿ ಆಸ್ಪತ್ರೆಗೆ ಹೋಗುವ ಮುನ್ನ ಯೋಚಿಸಿ! ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ನೀಡುವ ‘ಆಂಟಿ ಸ್ನೇಕ್ ವೆನಮ್ (ಎಎಸ್​ವಿ), ನಾಯಿ ಕಡಿತಕ್ಕೆ ಕೊಡುವ ರೇಬಿಸ್ ಚುಚ್ಚುಮದ್ದು ಕೊರತೆ ಕಾಡುತ್ತಿದ್ದು, ಜೀವ ಕೈಯಲ್ಲಿಡಿದು ಬರುವ ರೋಗಿಗಳ ಪ್ರಾಣ ಉಳಿಸಲು ಇಲ್ಲಿ ಔಷಧವೇ ಇಲ್ಲ.

ಬಹುತೇಕ ತಾಲೂಕು, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಎರಡೂ ಔಷಧ ಇಲ್ಲ ಎಂದು ಅಧಿಕಾರಿಗಳೇ ಹೇಳಿದ್ದಾರೆ. ಸಾರ್ವಜನಿಕ ಆಸ್ಪತ್ರೆಗಳು ಹಾವು ಕಡಿತ ಪ್ರಕರಣಗಳಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡುವಲ್ಲಿ ವಿಫಲವಾಗುತ್ತಿವೆ. ಬಹುತೇಕ ಆಸ್ಪತ್ರೆಗಳಲ್ಲಿ ಆಂಟಿ ಸ್ನೇಕ್ ವೆನಮ್ ಚುಚ್ಚುಮದ್ದು ಇಲ್ಲ ಎಂಬುದನ್ನು ಹೇಳದ ವೈದ್ಯರು, ತಕ್ಷಣ ಚಿಕಿತ್ಸೆ ನೀಡದೆ ಜಿಲ್ಲಾಸ್ಪತ್ರೆಗಳಿಗೆ ತೆರಳುವಂತೆ ಸೂಚಿಸುತ್ತಿದ್ದಾರೆ. ಕೆಲ ಜಿಲ್ಲಾಸ್ಪತ್ರೆಗಳಲ್ಲೂ ಔಷಧ ಕೊರತೆ ಇದ್ದು, ರೋಗಿಗಳು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ. ರೇಬಿಸ್ ಔಷಧವನ್ನು ತಾತ್ಕಾಲಿಕವಾಗಿ ಆರೋಗ್ಯ ಇಲಾಖೆಯೇ ಪೂರೈಕೆ ಮಾಡಿದೆ.

ಕೊರತೆಗೆ ಕಾರಣ?: ಸರ್ಕಾರ ಎಎಸ್​ವಿ ಔಷಧಕ್ಕೆ ಕಡಿಮೆ ಬೆಲೆ ನಿಗದಿ ಮಾಡುತ್ತದೆ. ಖಾಸಗಿಯಾಗಿ ಈ ಔಷಧವನ್ನು ಮಾರಾಟ ಮಾಡಿದರೆ ಹೆಚ್ಚು ಲಾಭ ದೊರೆಯಲಿದೆ. ಸರ್ಕಾರಕ್ಕೆ ಪೂರೈಸುವ ಔಷಧದಿಂದ ನಷ್ಟ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಔಷಧ ಕಂಪನಿಗಳು ಹಿಂದೇಟು ಹಾಕುತ್ತಿವೆ ಎನ್ನಲಾಗಿದೆ. ಆಂಟಿ ಸ್ನೇಕ್ ವೆನಮ್ ಔಷಧ ತಯಾರಿಕೆಗೆ ಕುದುರೆ ರಕ್ತದ ಅವಶ್ಯಕತೆ ಇದೆ. ಸಂಗ್ರಹಿಸಿದ ಹಾವಿನ ವಿಷವನ್ನು ಕುದುರೆಗೆ ಚುಚ್ಚಿ ನಂತರ ವಿಷದ ಸಮೇತ ಕುದುರೆ ರಕ್ತವನ್ನು ತೆಗೆಯಲಾಗುತ್ತದೆ. ಹೀಗೆ ತೆಗೆದ ರಕ್ತದ ಮೇಲ್ಭಾಗದ ತಿಳಿನೀರಿನಂತಹ ರಕ್ತವನ್ನು ಔಷಧ ತಯಾರಿಕೆಗೆ ಬಳಸಲಾಗುತ್ತದೆ. ಇದಕ್ಕೆ ಪ್ರಾಣಿ ದಯಾ ಸಂಘ ಮತ್ತು ಪ್ರಾಣಿಪ್ರಿಯರ ವಿರೋಧವಿದೆ. ಇದು ಔಷಧ ಲಭ್ಯತೆ ಕಡಿಮೆಯಾಗಲು ಕಾರಣ ಎಂದು ಹೇಳಲಾಗುತ್ತಿದೆ.

ವೈದ್ಯರಿಲ್ಲದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾವು ಕಡಿತಕ್ಕೆ ಚಿಕಿತ್ಸೆ, ಎಎಸ್​ಬಿ ಚುಚ್ಚುಮದ್ದು ನೀಡದೆ ಇರಬಹುದು. ಆದರೆ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ವಾರ್ಷಿಕ ಬೇಡಿಕೆ ಶೇ.50 ಎಎಸ್​ವಿ ಚುಚ್ಚುಮದ್ದು ದಾಸ್ತಾನು ಇದೆ. ಮುಂದಿನ ದಿನಗಳಿಗೆ ಔಷಧ ಪೂರೈಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಎಎಸ್​ಬಿ, ರೇಬಿಸ್ ಔಷಧ ಕೊರತೆ ಎದುರಾದರೆ ಸ್ಥಳೀಯವಾಗಿ ಖರೀದಿಸಲು ಈಗಾಗಲೇ ಸೂಚನೆ ನೀಡಲಾಗಿದೆ.

| ಪಿ.ನಾಗರಾಜು ಅಪರ ನಿರ್ದೇಶಕ, ಕೆಡಿಎಲ್​ಡಬ್ಲ್ಯುಎಸ್

ನಾಯಿ ಕಡಿತಕ್ಕೀಡಾದ್ರೆ ಎರಡು ವಿಧದಲ್ಲಿ ಚಿಕಿತ್ಸೆ

ಸಾಮಾನ್ಯವಾಗಿ ನಾಯಿ ಕಚ್ಚುವ ಪ್ರಕರಣ (ಕಚ್ಚುವ ಭಾಗದಲ್ಲಿ ನಾಯಿ ಹಲ್ಲು ಮತ್ತು ಜೊಲ್ಲು ಒಳಗೆ ಹೋಗಿರುವುದು) ಆಂಟಿ ರೇಬಿಸ್ ವಾಕ್ಸಿನ್ ಚುಚ್ಚುಮದ್ದು ನೀಡಬೇಕಾಗುತ್ತದೆ. ಈ ಔಷಧವನ್ನು ತುರ್ತಾಗಿ ಬಳಸಲು ಕೆಡಿಎಲ್​ಡಬ್ಲ್ಯುಎಸ್ ನೆರೆರಾಜ್ಯಗಳಿಂದ ಔಷಧ ಖರೀದಿಸಿ ಜಿಲ್ಲಾಸ್ಪತ್ರೆಗಳಿಗೆ ವಿತರಿಸಿದೆ. ಆದರೆ, ಮಾರಣಾಂತಿಕವಾಗಿ ನಾಯಿ ಕಚ್ಚುವ ಪ್ರಕರಣಗಳಲ್ಲಿ(ದೇಹದ ಭಾಗ ಮಾಂಸ ಕಿತ್ತು ಬರುವಂತೆ ಅಥವಾ ಅಳವಾಗಿ ಕಚ್ಚಿದರೆ) ರೋಗಿಯು ಉಳಿಯುವ ಸಾಧ್ಯತೆ ಕಡಿಮೆ. ಹೀಗಾಗಿ, ರೇಬಿಸ್ ಇಮ್ಯುನೊಗ್ಲೋಬಿನ್ ಚುಚ್ಚುಮದ್ದು ನೀಡಿದರೆ ಆ ರೋಗಿಯು ಬದುಕುತ್ತಾನೆ.

ಆರು ಜಿಲ್ಲೆಯಲ್ಲಿ ರೇಬಿಸ್ ಚುಚ್ಚುಮದ್ದು ಇಲ್ಲ

ಬೆಂಗಳೂರು, ಬೆಳಗಾವಿ, ಧಾರವಾಡ, ಕೊಪ್ಪಳ, ಮೈಸೂರು ಮತ್ತು ರಾಯಚೂರು ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬಿಸ್ ಇಮ್ಯುನೊಗ್ಲೋಬಿನ್ ಚುಚ್ಚುಮದ್ದು ಔಷಧ ಸಂಗ್ರಹವಿಲ್ಲ. ಚಿತ್ರದುರ್ಗದಲ್ಲಿ 2, ಬಾಗಲಕೋಟೆ 9, ಬಳ್ಳಾರಿ 10, ಬೆಂಗಳೂರು ಗ್ರಾಮಾಂತರ 94, ಬೀದರ್ 11, ದಾವಣಗೆರೆ 15, ಗದಗ 6, ಗೋಕಾಕ್ 11, ಹಾಸನ 155, ಹಾವೇರಿ 10, ಕಲಬುರಗಿ 25, ಕೋಲಾರ 153, ಮಡಿಕೇರಿ 19, ಮಂಗಳೂರು 243, ರಾಮನಗರ 14, ಶಿವಮೊಗ್ಗ 45, ತುಮಕೂರು 131, ವಿಜಯಪುರ 19 ಮತ್ತು ಯಾದಗಿರಿಯಲ್ಲಿ 43 ವಾಯಿಲ್ಸ್​ಗಳು ಮಾತ್ರ ಇವೆ. ಆದರೆ, ಸಂಗ್ರಹವಿರುವ ಔಷಧ 1 ತಿಂಗಳಿಗೆ ಮಾತ್ರ ಆಗಲಿದೆಯಷ್ಟೆ. ಆದರೆ, ಆರು ಜಿಲ್ಲೆಗಳಲ್ಲಿ ನಾಯಿ ಕಚ್ಚುವ ಪ್ರಕರಣಗಳಿಗೆ ಔಷಧ ಇಲ್ಲದಿರುವುದು ಜನರಲ್ಲಿ ಆತಂಕ ತರಿಸಿದೆ.
ಕೃಪೆ:ವಿಜಯವಾಣಿ

ನಾಯಿ-ಹಾವು ಕಡಿತಕ್ಕಿಲ್ಲ ಔಷಧ: ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅಲಭ್ಯ, ರೇಬಿಸ್, ಎಎಸ್​ವಿ ಮದ್ದು ಸಿಗ್ತಿಲ್ಲ
no medicine to dog and snake bite and most of government hospitals treatment is unavailable