ಅಕ್ಟೋಬರ್‌ ನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಚಾರ ಸಂಕಿರಣ- ಪ್ರೊ.ಕೆ.ಎಸ್.ರಂಗಪ್ಪ.

ಮೈಸೂರು, ಸೆಪ್ಟಂಬರ್,20,2021(www.justkannada.in): ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಒಳ್ಳೆಯ ಅಂಶದೊಂದಿಗೆ ಕೆಲವು ನ್ಯೂನ್ಯತೆಗಳೂ ಇವೆ. ಅದಕ್ಕಾಗಿ ಅಕ್ಟೋಬರ್‌ ನಲ್ಲಿ ಮೈಸೂರು ವಿವಿ ಸಹಯೋಗದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆ  ಅಧ್ಯಕ್ಷ  ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದ್ದಾರೆ.

ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದಿಷ್ಟು…

ರಾಷ್ಟ್ರೀಯ ಶಿಕ್ಷಣ ನೀತಿ ಬೆಸ್ಟ್ ಪಾಲಿಸಿ. ಆದರೆ, ಕೆಲವೊಂದು ಭಾಗಗಳಲ್ಲಿ ಗೊಂದಲವಿರುವಂತೆ ತೋರುತ್ತದೆ. ಈ ನಿಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸಂಯುಕ್ತಾಶ್ರಯದಲ್ಲಿ ಒಂದು ಸಮಾವೇಶ ನಡೆಸಲಾಗುವುದು. ಈ ಸಮಾವೇಶದಲ್ಲಿ ಹೊಸ ಶಿಕ್ಷಣ ನೀತಿಯ ಬಗ್ಗೆ ವಿಸ್ತೃತ ಚರ್ಚೆ ಮಾಡಲಾಗುವುದು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ವಿಚಾರ ಸಂಕಿರಣ ಉದ್ಘಾಟಿಸಲು ಒಪ್ಪಿದ್ದಾರೆ. ಇದರಲ್ಲಿ ಎಲ್ಲಾ ವಿವಿಗಳ ಕುಲಪತಿಗಳು, ಕಾಲೇಜು ಪ್ರಾಂಶುಪಾಲರು, ಸ್ನಾತಕೋತ್ತರ ಪ್ರಾಧ್ಯಾಪಕರು ಹಾಗೂ  ಭಾಗವಹಿಸಲಿದ್ದಾರೆ ಎಂದರು.

ಸರ್ಕಾರ ನಮ್ಮ ಸಲಹೆ ಪಡೆದುಕೊಳ್ಳಲಿ

ಸರ್ಕಾರ ವಿಶ್ರಾಂತ ಕುಲಪತಿಗಳ ವೇದಿಕೆಯ ಸಲಹೆ ಪಡೆದುಕೊಳ್ಳಬೇಕು. ಈ ವೇದಿಕೆಯಲ್ಲಿ 70 ಜನ ನಿವೃತ್ತ ಕುಲಪತಿ ಗಳು ಇದ್ದಾರೆ. ಶಿಕ್ಷಣ, ವಿಜ್ಞಾನ, ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸಲಹೆ ನೀಡುತ್ತೇವೆ. ರಾಜ್ಯಕ್ಕೆ ಒಳ್ಳೆಯದಾಗಬೇಕು ಎಂಬುದು ನಮ್ಮ ಉದ್ದೇಶ. ಒಂಬತ್ತು ವಿಚಾರಗಳ ಚರ್ಚೆಗೆ ಸರ್ಕಾರದ ಮುಂದಿಟ್ಟಿದ್ದೇವೆ ಎಂದು ತಿಳಿಸಿದರು.

ಸರಕಾರ ವಿವಿಗಳಿಗೆ ಕುಲಪತಿ ನೇಮಕ ಮಾಡುವ ಪ್ರಕ್ರಿಯೆಯನ್ನು ತಡವಾಗಿ ಮಾಡಬಾರದು. ಹಾಲಿ ಇರುವ ಕುಲಪತಿ ನಿವೃತ್ತರಾಗುವ 3-4 ತಿಂಗಳುಗಳ ಮೊದಲೇ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಬೇಕು. ನೇಮಕಾತಿಯಲ್ಲಿ ವಿಳಂಬವಾಗುವುದರಿಂದ ಪ್ರಸ್ತುತ ನಮ್ಮ ವಿವಿಗಳು ಸುಲಲಿತವಾಗಿ ನಡೆಯುವುದರಲ್ಲಿ ತೊಂದರೆ ಆಗುತ್ತದೆ. ಮೊದಲು ವಿವಿಗಳಲ್ಲಿನ ಖಾಲಿ ಹುದ್ದೆ ಭರ್ತಿ ಮಾಡಬೇಕು. ಅಧಿವೇಶನ ಮುಗಿದ ಮೇಲೆ ಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡುತ್ತೇವೆ. ರಾಜ್ಯದಲ್ಲಿ ವಿಜ್ಞಾನ ಮತ್ತು ಶಿಕ್ಷಣದ ಬಗ್ಗೆ ನಮ್ಮ ಸಲಹೆ ಸೂಚನೆ ಕೊಡಲಿದ್ದೇವೆ. ಗುಣಮಟ್ಟದ ಶಿಕ್ಷಣ ತೆಗೆದುಕೊಳ್ಳಲು ಸಮಗ್ರವಾಗಿ ಸರ್ಕಾರ ನಮಗೆ ಪ್ರೋತ್ಸಾಹ ಕೊಡಬೇಕು ಎಂದರು. ಪ್ರೊ. ಎಸ್.ಆರ್.ನಿರಂಜನ, ಪ್ರೊ.ಎಸ್.ಎನ್.ಹೆಗ್ಡೆ ಇದ್ದರು.

Key words: mysore- university-Seminar – National Education Policy –October- Prof. KS Rangappa.