ಸರಕಾರದ ಸೂಚನೆಯಂತೆ ಸೆಪ್ಟೆಂಬರ್’ನೊಳಗೆ ಮೈಸೂರು ವಿವಿ ಪರೀಕ್ಷೆ: ಕುಲಪತಿ ಪ್ರೊ.ಹೇಮಂತ್ ಕುಮಾರ್

ಬೆಂಗಳೂರು, ಜುಲೈ 23, 2020 (www.justkannada.in): ಸೆಪ್ಟೆಂಬರ್ ಒಳಗೆ ವಿವಿ ಪರೀಕ್ಷೆಗಳನ್ನು ನಡೆಸುವಂತೆ ಸರ್ಕಾರ ಸೂಚಿಸಿದೆ. ಹೀಗಾಗಿ ಪರೀಕ್ಷೆ ನಡೆಸುವ ನಿರ್ಧಾರ ಸರ್ಕಾರದ ನಿರ್ಧಾರವೇ ಹೊರತು ವಿವಿಯ ವೈಯಕ್ತಿಕ ನಿರ್ಧಾರವಲ್ಲ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ವಿವಿ ವಿದ್ಯಾರ್ಥಿಗಳು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸರ್ಕಾರ ಎಸ್ಸೆಸ್ಸೆಲ್ಸಿಯ 7 ಲಕ್ಷ ವಿದ್ಯಾರ್ಥಿಗಳ ಪರೀಕ್ಷೆಯನ್ನು ಅಗತ್ಯ ಮುಂಜಾಗ್ರತೆ ತೆಗೆದುಕೊಂಡು ಯಶಸ್ವಿಯಾಗಿ ನಡೆಸಿದೆ. ಇನ್ನು 30000 ವಿವಿ ವಿದ್ಯಾರ್ಥಿಗಳ ಪರೀಕ್ಷೆ ನಡೆಸಲು ಸರ್ಕಾರಕ್ಕೆ ತೊಂದರೆಯಾಗದು ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡೆ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಕ್ಕಪಕ್ಕದ ಜಿಲ್ಲಾ ಕೇಂದ್ರಗಳಲ್ಲೇ ಪರೀಕ್ಷೆ ನಡೆಸುವ ಚಿಂತನೆ ಇದೆ. ಸೋಮವಾರ ಅಥವಾ ಮಂಗಳವಾರದೊಳಗೆ ಈ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ‘ಜಸ್ಟ್ ಕನ್ನಡ’ಗೆ ಮಾಹಿತಿ ನೀಡಿದ್ದಾರೆ.