CRIME NEWS : ಪಾರಂಪರಿಕ ವೈದ್ಯನ ಜೀವಕ್ಕೆ ಮುಳುವಾಯ್ತು PILES ಚಿಕಿತ್ಸೆ ವಿದ್ಯೆ…?

mysore-piles-doctor-murder-in-Kerala

ಕೊಲೆ ಆರೋಪಿಗಳು (ಮೇಲಿನ ಇಬ್ಬರು) ಕೊಲೆಗೀಡಾದ ಪೈಲ್ಸ್ ವೈದ್ಯ (ಕೆಳಗಿನ ಚಿತ್ರ)

 

ಮೈಸೂರು, ಮೇ.13, 2022 : (www.justkannada.in news) ಕಳೆದ ಮೂರು ವರ್ಷಗಳ ಹಿಂದೆ ಮೈಸೂರಿನಿಂದ ನಿಗೂಢವಾಗಿ ಕಣ್ಮರೆಯಾದ ಪಾರಂಪರಿಕ ವೈದ್ಯನೋರ್ವ ಕೇರಳದಲ್ಲಿ ದುಷ್ಕರ್ಮಿಗಳಿಂದ ಭೀಕರವಾಗಿ ಕೊಲೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕುಟುಂಬದಲ್ಲಿ ತಲೆತಲಾಂತರದಿಂದ ಬಂದಿದ್ದ ವೈದ್ಯಪದ್ದತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದ ಮೈಸೂರಿನ ಬೋಗಾಧಿ ನಿವಾಸಿ ಶಾಬಾದ್ ಶರೀಫ್ ಕೊಲೆಯಾದವರು. ಪ್ರಕರಣ‌ ಸಂಬಂಧ ಪ್ರಮುಖ ಆರೋಪಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಇತರೆ ಆರೋಪಿಗಳಿಗೆ ಹುಡುಕಾಟ ನಡೆದಿದೆ.

ಪ್ರಕರಣ ಹಿನ್ನೆಲೆ:

ಮೈಸೂರಿನ ಬೋಗಾಧಿ ನಿವಾಸಿಯಾದ ಶಾಬಾದ್ ಶರೀಫ್ ಅವರ ಪೂರ್ವಜರ ಕಾಲದಿಂದಲೂ ಪೈಲ್ಸ್ ಹಾಗೂ ಪಿಸ್ತೂಲ ಕಾಯಿಲೆಗೆ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದರು.
ತಲೆತಲಾಂತರದಿಂದ ಬಂದ ವೈದ್ಯ ಪದ್ದತಿಯನ್ನು ಶಾಬಾದ್ ಶರೀಫ್ ಕೂಡ ಮುಂದುವರೆಸಿಕೊಂಡು ಹೋಗಿದ್ದು, ಇವರಿಂದ ಚಿಕಿತ್ಸೆ ಪಡೆದವರು ಗುಣಮುಖರಾಗಿದ್ದರು.

ಈ ಮಾಹಿತಿ ಪಡೆದ ಕೇರಳ ರಾಜ್ಯದ ಮಲಪುರಂ ಜಿಲ್ಲೆಯ ನೀಲಾಂಬುರ್ ನಿವಾಸಿ ಶೈಬಿನ್ ಅಶ್ರಫ್‌ ಹಾಗೂ ಇತರರು ಸಂಚು ರೂಪಿಸಿ, ಕೇರಳದಲ್ಲಿರುವ ತಮ್ಮ ಕಡೆಯವರಿಗೆ ಪೈಲ್ಸ್ ಚಿಕಿತ್ಸೆ ನೀಡಬೇಕಿದೆ ಎಂದು ನಂಬಿಸಿ ೨೦೧೯ರ ಆಗಸ್ಟ್ ತಿಂಗಳಲ್ಲಿ ಬೈಕಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಸ್ವಲ್ಪ ದೂರ ಹೋದ ಬಳಿಕ ಕಾರಿಗೆ ಹತ್ತಿಸಿಕೊಂಡು ಪ್ರಯಾಣಿಸಿದ್ದಾರೆ.

ತದನಂತರ ಶೈಬಿನ್ ಅಶ್ರಫ್‌ ನಡೆದುಕೊಂಡ‌ ರೀತಿಯಿಂದ ತಾನು ಮೋಸ ಹೋಗಿರುವುದಾಗಿ ಮೈಸೂರಿನ ಶಾಬಾದ್ ಶರೀಫ್ ಗೆ ಗೊತ್ತಾಗಿದೆ. ಆದರೆ, ಅವರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಮಾತ್ರವಲ್ಲ, ಶಾಬಾದ್ ಶರೀಫ್ ತಪ್ಪಿಸಿಕೊಳ್ಳದಂತೆ ಸರಪಳಿ ಬಿಗಿದು ಸುಮಾರು ಒಂದು ವರ್ಷಗಳ ಕಾಲ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಪೈಲ್ಸ್ ಗೆ ನೀಡುವ ಚಿಕಿತ್ಸಾ ವಿಧಾನ ಹಾಗೂ ಔಷಧಿಯ ಬಗ್ಗೆ ಮಾಹಿತಿ ಕೇಳಿ ಚಿತ್ರಹಿಂಸೆ ನೀಡಿದ್ದಾರೆ.

ಕೊಲೆ ಆರೋಪಿಗಳು (ಮೇಲಿನ ಇಬ್ಬರು)
ಕೊಲೆಗೀಡಾದ ಪೈಲ್ಸ್ ವೈದ್ಯ (ಕೆಳಗಿನ ಚಿತ್ರ)

ದುಷ್ಕರ್ಮಿಗಳ ಕಿರುಕುಳಕ್ಕೆ ಬಗ್ಗದ ಶರೀಫ್ ಕೊನೆಯವರೆಗೂ ಔಷಧಿ ಬಗ್ಗೆ ಬಾಯಿ ಬಿಟ್ಟಿಲ್ಲ. ಇದರಿಂದ ಬೇಸತ್ತ ದುಷ್ಕರ್ಮಿಗಳು ಶರೀಫ್ ಅವರನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ‌ ನದಿಗೆ ಬಿಸಾಡಿದ್ದಾರೆ.
ಇದಾದ ಬಳಿಕ ನೀಲಾಂಬುರ್ ನಿವಾಸಿ ಶೈಬಿನ್ ಅಶ್ರಫ್‌ ಮನೆಯಲ್ಲಿ ದರೋಡೆ ನಡೆದಿದ್ದು, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿರುವ ಹೊತ್ತಿನಲ್ಲಿ ಕೇರಳದ ಸಚಿವಾಲಯದ ಮುಂದೆ ವಿಷಯವೊಂದಕ್ಕೆ ಸಂಬಂಧಿಸಿದಂತೆ ಕೆಲವರು ಪ್ರತಿಭಟನೆ ಇಳಿದಿದ್ದಾರೆ. ಮಾತ್ರವಲ್ಲ, ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ವೇಳೆ ಎಲ್ಲರನ್ನೂ ವಶಕ್ಕೆ ಪಡೆದ ಪೊಲೀಸರಿಗೆ ಒಬ್ಬನ ಬಳಿ ಇದ್ದ ಪೆನ್ ಡ್ರೈವ್ ಮೇಲೆ‌ ಕುತೂಹಲ ಮೂಡಿ, ಆ ಕುರಿತು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ ಮೈಸೂರು ಮೂಲದ ಶರೀಫ್ ಎಂಬ ವ್ಯಕ್ತಿಯ ಕೊಲೆ ಹಾಗೂ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣ ಕುರಿತು ತನಿಖೆ ತೀವ್ರಗೊಳಿಸಿದ ವೇಳೆ ಘಟನೆ ಹಿಂದೆ ಆರೇಳು ಮಂದಿ‌ ಇರುವುದು ಕಂಡುಬಂದಿದೆ. ಘಟನೆ ಸಂಬಂಧ ನಾಲ್ವರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿರುವ ಮಲ್ಲಪುರಂ ಜಿಲ್ಲಾ ಪೊಲೀಸರು ಇದಕ್ಕಾಗಿ ವಿಶೇಷ ತಂಡ ರಚಿಸಿ ತನಿಖೆಗೆ ಇಳಿದಿದ್ದಾರೆ.

key words : mysore-piles-doctor-murder-in-Kerala