ಶಾಸಕ ರಾಮದಾಸ್ ಗೆ ಮನವಿ : ಪ್ರಧಾನಿ ಮೆಚ್ಚುಗೆ ಪಡೆದಂತೆ, ರಸ್ತೆ ಗುಂಡಿಗಳನ್ನು ಮುಚ್ಚಿಸಿ ನಾಗರಿಕರ ಮೆಚ್ಚುಗೆ ಪಡೆಯಿರಿ.

Mysore-constituency-s.a.ramdas-road-pothole

Promotion

 

ಮೈಸೂರು, ಜೂ.26, 2022 : (www.justkannada.in news) : ನಗರದ ಕೃಷ್ಣರಾಜ ಕ್ಷೇತ್ರದಲ್ಲಿ ರಸ್ತೆಗಳು ಗುಂಡಿ ಬಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಸದ್ಯದಲ್ಲೇ ಮುಂಗಾರು ಆಗಮಿಸುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ.

ಇದು ಬಿಜೆಪಿ ಹಿರಿಯ ಶಾಸಕ ಎಸ್.ಎ.ರಾಮದಾಸ್ ಪ್ರತಿನಿಧಿಸುವ ಕ್ಷೇತ್ರದ ಅವಸ್ಥೆ. ನಗರದ ವಿದ್ಯಾರಣ್ಯಪುರಂನಿಂದ ಸೂಯೇಜ್ ಫಾರಂ ಮಾರ್ಗವಾಗಿ ಬಂಡೀಪಾಳ್ಯ, ಆರ್‌ಎಂಸಿ ಸೇರುವ ರಸ್ತೆ ಸಂಪೂರ್ಣ ಹಳ್ಳಕೊಳ್ಳ ಬಿದ್ದಿದೆ. ಇಲ್ಲಿ ನಿತ್ಯ ನೂರಾರು ಬಾರಿ ಕಸ ಸಾಗಿಸುವ ಭಾರಿ ಗಾತ್ರದ ಕಂಟೇನರ್‌ಗಳು, ಆಟೋ ಟಿಪ್ಪರ್‌ಗಳು ಸಂಚರಿಸುತ್ತವೆ. ಜತೆಗೆ ಜೆ.ಪಿ.ನಗರ ಮೊದಲಾದ ಕಡೆಗಳಿಗೆ ತೆರಳುವ ಸವಾರರು ಇದೇ ಮಾರ್ಗವನ್ನೇ ಹೆಚ್ಚಾಗಿ ಅವಲಂಭಿಸಿದ್ದಾರೆ.

ಆದರೆ, ರಸ್ತೆ ಹಳ್ಳಕೊಳ್ಳಗಳಿಂದ ಕೂಡಿರುವ ಕಾರಣ, ವಾಹನಗಳ ಸವಾರರಿಗೆ ರಸ್ತೆಯಲ್ಲಿ ಸಂಚರಿಸುವುದು ಸರ್ಕಸ್ ಮಾಡಿದಂತಾಗಿದೆ. ಮಳೆ ಬಂದಾಗ ಯಾವುದು ಗುಂಡಿ, ಯಾವ ಜಾಗ ಸಮತಟ್ಟು ಎನ್ನುವುದು ಗೊತ್ತಿಲ್ಲದೆ ಸವಾರರು ಜಾರಿ ಬಿದ್ದು ಪೆಟ್ಟು ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಶಾಸಕರಿಗೆ ಹಲವಾರು ಬಾರಿ ಮನವಿ ಮಾಡಿದರು, ಸಮಸ್ಯೆ ಬಗೆಹರಿದಿಲ್ಲ. ಈಗಲಾದರು ಶಾಸಕ ರಾಮದಾಸ್ ಅವರು ರಸ್ತೆ ದುರಸ್ತಿಪಡಿಸುವತ್ತ ಗಮನಹರಿಸಲಿ, ಆ ಮೂಲಕ ಪ್ರಧಾನಿ ಮೋದಿ ಅವರಿಂದ ಬೆನ್ನುತಟ್ಟಿಸಿಕೊಂಡದ್ದಕ್ಕೂ ಸಾರ್ಥಕವಾಗುತ್ತದೆ. ತಪ್ಪಿದಲ್ಲಿ ಸಾರ್ವಜನಿಕರಿಂದ ಪ್ರತಿರೋಧ ಎದುರಿಸುವುದು ಗ್ಯಾರಂಟಿ.

ಪ್ರಧಾನಿ ಮೋದಿ ಸಂಚರಿಸುವ ರಸ್ತೆ ಮಾರ್ಗಗಳನ್ನು ಸಿಂಗರಿಸಿ , ಹಳ್ಳಕೊಳ್ಳಗಳನ್ನು ಮುಚ್ಚುವಂತೆ ನೋಡಿಕೊಂಡಿದ್ದ ನಗರ ಪಾಲಿಕೆ ಅಧಿಕಾರಿಗಳು ಸಹ, ನೂರಾರು ವಾಹನಗಳು ಓಡಾಡುವ ಪ್ರಮುಖ ರಸ್ತೆಗಳತ್ತ ಗಮನಹರಿಸದಿರುವುದು ಸಾರ್ವಜನಿಕರ ಅಸಮಧಾನಕ್ಕೆ ಕಾರಣವಾಗಿದೆ.

– ಪರಮೇಶ್ , ಸ್ಥಳೀಯ

key words : Mysore-constituency-s.a.ramdas-road-pothole