MYSORE BUS SHELTER : ಸಂಸದ ‘ಪ್ರತಾಪ’ಕ್ಕೆ ಶಾಸಕ ರಾಮದಾಸ್ ‘Google’E ರಿಪ್ಲೈ..!

 

ಮೈಸೂರು, ನ.15, 2022 : (www.justkannada.in news) : ಬಸ್ ತಂಗುದಾಣ ನಿರ್ಮಾಣ ಸಂಬಂಧ ಅದರ ವಿನ್ಯಾಸಕ್ಕೆ ಸಂಬಂಧಿಸಿದಂತೆ ಮೈಸೂರು ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟನೆ ನೀಡಿದ್ದಾರೆ.

ಮೈಸೂರು ನಗರದ ಪಾರಂಪರಿಕ ಮಹತ್ವದ ಹಿನ್ನೆಲೆಯಲ್ಲಿ ತಂಗುದಾಣ ವಿನ್ಯಾಸಗೊಳಿಸಲಾಗಿದೆಯೇ ಹೊರತು ಯಾವುದೇ ಧರ್ಮದ ಆಧಾರದ ಮೇಲಲ್ಲ. ಇದನ್ನು ಮುಸ್ಲೀಂ ಗುತ್ತಿಗೆದಾರ ನಿರ್ಮಿಸಿದ್ದಾನೆ ಎಂಬುದು ಸುಳ್ಳು ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಸ್ ತಂಗುದಾಣದ ವಿನ್ಯಾಸಕ್ಕೆ ಸಂಬಂಧಿಸಿದಂತೆ ಶಾಸಕ ಎಸ್.ಎ.ರಾಮದಾಸ್ ಅವರ ಮಾಧ್ಯಮ ಹೇಳಿಕೆ ಹೀಗಿದೆ..

ಮೈಸೂರು ಪಾರಂಪರಿಕ ನಗರ, ಇದರ ಮಹತ್ವವನ್ನು ಸಾರುವ ದೃಷ್ಠಿಯಲ್ಲಿ ಬಸ್ ತಂಗುದಾಣಗಳನ್ನು ಅರಮನೆ ಮಾದರಿಯಲ್ಲಿ ನಿರ್ಮಿಸಲು ತೀರ್ಮಾನಿಸಿ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ವಿವಿಧ ವಿನ್ಯಾಸಗಳಲ್ಲಿ ಶಾಸಕರ ಅನುದಾನದಲ್ಲಿ ರೂ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು ಇದರ ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಬೆಂಗಳೂರು-ನೀಲಗಿರಿ ರಸ್ತೆಯಲ್ಲಿ (ಊಟಿ ರಸ್ತೆ) ಬರುವ ವಾರ್ಡ್ ನಂ 54 ರ ವ್ಯಾಪ್ತಿಗೆ ಬರುವ ಬಸ್ ತಂಗುದಾಣವನ್ನು ಅರಮನೆ ಮಾದರಿಯಲ್ಲಿ ವಿನ್ಯಾಸ ಮಾಡಿ ಕಾಮಗಾರಿ ಪ್ರಾರಂಭಿಸಲಾಗಿದೆ. ಈಗಾಗಲೇ 60% ಕಾಮಗಾರಿ ಮುಗಿಸಲಾಗಿದ್ದು ಕಾಮಗಾರಿ ಇನ್ನು ಪ್ರಗತಿಯಲ್ಲಿದೆ. ಮೈಸೂರಿನ ಪಾರಂಪರಿಕತೆ ತೋರಿಸುವ ದೃಷ್ಠಿಯಲ್ಲಿ ಅರಮನೆಯ ಮಾದರಿಯಲ್ಲಿ ಇರುವ ಈ ಬಸ್ ತಂಗುದಾಣವನ್ನು ತಪ್ಪಾಗಿ ಅರ್ಥೈಸಿ ಸಾಮಾಜಿಕ ಜಾಲತಾಣಗಳಲ್ಲಿ ಮಸೀದಿ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಹಾಗೂ ಈ ಕಾಮಗಾರಿಯ ಗುತ್ತಿಗೆಗಾರ ಒಬ್ಬ ಮುಸ್ಲಿಂ ಇವನು ಮಸೀದಿ ರೀತಿಯಲ್ಲಿ ಕಾಮಗಾರಿ ಮಾಡಿರುತ್ತಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಗಾಳಿಸುದ್ದಿ ಹಬ್ಬಿಸುವ ಹುನ್ನಾರ ನಡೆದಿರುವುದು ನನ್ನ ಗಮನಕ್ಕೆ ಬಂದ ತಕ್ಷಣದಲ್ಲಿ ಮೈಸೂರು ನಗರದ ಪೊಲೀಸ್ ಕಮೀಷನರ್ ಗೆ ಪತ್ರದ ಮೂಲಕ ದೂರು ನೀಡಿ ಸೂಕ್ತ ಕ್ರಮವಹಿಸಲು ಪತ್ರ ಬರೆದಿರುವುದು ಸರಿಯಷ್ಟೆ.

ಮೈಸೂರಿನಲ್ಲಿ ಈಗಾಗಲೇ ಹಲವಾರು ಸ್ಥಳಗಳಲ್ಲೂ ಇದೇ ಮಾದರಿಯ ಬಸ್ ತಂಗುದಾಣ ನಿರ್ಮಾಣವಾಗಿದ್ದು ಅದರ ವಿನ್ಯಾಸದ ಆದಾರದ ಮೇಲೆ ನಮ್ಮ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ವಿವಿಧ ವಿನ್ಯಾಸದೊಂದಿಗೆ ಬಸ್ ತಂಗುಂದಾಣವನ್ನು ನಿರ್ಮಿಸಲಾಗುವುದು, ಬಸ್ ತಂಗುದಾಣದ ಕಾಮಗಾರಿಯನ್ನು ಗುತ್ತಿಗೆದಾರ ಮಹದೇವ್ ರವರು ದಂತ ಕಂಸ್ಟ್ರಕ್ಷನ್ ಎಂಬ ಹೆಸರಿನಲ್ಲಿ ನಿರ್ಮಿಸುತಿದ್ದಾರೆ. ಕಾಮಗಾರಿ ಪ್ರಗತಿಯಲ್ಲಿದ್ದು ತಂಗುದಾಣದ ಒಳಗೆ ಎಲ್.ಇ.ಡಿ ಸ್ಕ್ರೀನ್ ಕೂಡ ಅಳವಡಿಸಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿಶೇಷವಾಗಿ ಉಪಯುಕ್ತ ಮಾಹಿತಿಗಳನ್ನು ನೀಡಲಾಗುವುದು. ಪ್ರಸ್ತುತ ಕಾಮಗಾರಿಯಲ್ಲಿ ಕೇವಲ 60% ಮಾತ್ರ ಮುಗಿದಿದ್ದು ಹಂತಹಂತವಾಗಿ ಕಾಮಗಾರಿ ನಡೆಯುತ್ತಿದೆ.

ಕೆಲವು ಮಾಧ್ಯಮಗಳಲ್ಲಿ ಸಂಸದರು ಹೇಳಿಕೆ ನೀಡಿದ ನಂತರ ರಾತ್ರೋರಾತ್ರಿ ಕಳಶ ಅಳವಡಿಸಲಾಗಿದೆ ಎಂದು ಬಂದಿದ್ದು ಆದರೆ, ವಾಸ್ತವಾಂಶ ಕಳೆದ ವಾರವೇ ಅದನ್ನು ಅಳವಡಿಸಲಾಗಿರುತ್ತದೆ (ಗೂಗಲ್ ಇಮೇಜ್ ಅನ್ನು ಲಗತ್ತಿಸಲಾಗಿದೆ).
ಬಸ್‌ ತಂಗುದಾಣವನ್ನು ಪಾರಂಪರಿಕವಾಗಿ ಕಾಣುವ ದೃಷ್ಟಿಯಿಂದ ನಿರ್ಮಿಸಲಾಗುತ್ತಿದೆಯೇ ಹೊರೆತು ಇದರಲ್ಲಿ ಯಾವುದೇ ಧರ್ಮದ ಆಧಾರದ ಮೇಲೆ ನಿರ್ಮಾಣ ಆಗುತ್ತಿಲ್ಲ ಎಂದು ಈ ಮೂಲಕ ಸ್ಥಷ್ಟೀಕರಣ ನೀಡಲಾಗುತ್ತಿದೆ.
ಅರಮನೆ ಮಾದರಿಯಲ್ಲಿ ಬಸ್ ತಂಗುದಾಣ ನಿರ್ಮಿಸಲು, ವಿನ್ಯಾಸವನ್ನು ಈಗಾಗಲೇ ಮೈಸೂರಿನ ಹಲವಾರು ಕಡೆ ಇರುವಂತಹ ರೀತಿಯಲ್ಲಿ ತಯಾರಿಸಲಾಗಿದ್ದು, ಈ ವಿನ್ಯಾಸದಿಂದ ವಿವಾದಗಳಾಗಲಿದೆ ಎಂದು ಕಂಡು ಬಂದಲ್ಲಿ, ಒಂದು ತಜ್ಞರ ಸಮಿತಿಯನ್ನು ರಚನೆ ಮಾಡಿ, ಸಮಿತಿಯವರು ಬಂದು ನೋಡಿ ವರದಿ ನೀಡಲು ಮನವಿ ಮಾಡಲಾಗಿದ್ದು ಸಮಿತಿಯ ವರದಿಯಲ್ಲಿ ತಪ್ಪಿದೆ ಎಂದು ತಿಳಿಸಿದ್ದಲ್ಲಿ ಬದಲಾವಣೆ ಮಾಡಲು ನಮ್ಮದೇನು ಅಭ್ಯಂತರವಿಲ್ಲ ಎಂದು ಈ ಮೂಲಕ ತಿ‍ಳಿಸುತ್ತೇವೆ.

key words : Mysore-bus-shelter-controversy-mp-prathap.simha-ramadas-reaction