ಮೈಸೂರಿನ ಪೊಲೀಸ್ ಪೇದೆ ‘ಡಾಕ್ಟರೇಟ್’ ಆದ ಯಶೋಗಾಥೆ

Promotion

ಮೈಸೂರು, ಜೂನ್ 19, 2020 (www.justkannada): ಸದಾ ಒಂದಿಲ್ಲೊಂದು ಕಳ್ಳತನ, ಕೊಲೆ, ವಿಐಪಿಗಳ ಭದ್ರತೆ ಹೀಗೆ ಕರ್ತವ್ಯದಲ್ಲೇ ಕಾಲ ಕಳೆಯುವ ಪೊಲೀಸ್ ಸಿಬ್ಬಂದಿಯೂ ಶೈಕ್ಷಣಿಕ ಸಾಧನೆ ಮಾಡಬಹುದು ಎಂಬುದಕ್ಕೆ ನಗರದ ಪೊಲೀಸ್ ಪೇದೆಯೊಬ್ಬರು ಸಾಕ್ಷಿಯಾಗಿದ್ದಾರೆ.

ಹೌದು. ಮೈಸೂರು ನಗರದ ಪೊಲೀಸ್ ಪೇದೆಯೊಬ್ಬರು ಮಂಡಿಸಿದ ಸಂಶೋಧನಾ ಪ್ರಬಂಧ ಪಿಎಚ್ಡಿ ಪದವಿಗೆ ಭಾಜನರಾಗಿದೆ. ನಗರದ ಮುಖ್ಯ ಪೇದೆ ಎನ್.ಸುರೇಶ್ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಸಂಶೋಧನಾ ಪ್ರಬಂಧ ಮಂಡಿಸಿದ್ದು ಇದನ್ನು ವಿವಿ ಪಿಎಚ್ ಡಿಗೆ ಅಂಗೀಕರಿಸಿದೆ.

ತಮ್ಮ ದಿನನಿತ್ಯದ ಕರ್ತವ್ಯದ ನಡುವೆ ಸಂಶೋಧನೆಗೂ ಸಮಯ ಕೊಡುವುದು ಕಷ್ಟದ ಕೆಲಸ. ಅದರಲ್ಲೂ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವೈಯಕ್ತಿಕ ಕೆಲಸಗಳಿಗೆ ಬಿಡುವು ಸಿಕ್ಕುವುದು ತುಸು ಕಷ್ಟವೇ. ಇಂತಹದಲ್ಲಿ ಪಿಎಚ್ಡಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ ಸುರೇಶ್ ಅವರು.

ಸುರೇಶ್ ಅವರು ಮೈಸೂರು ವಿಶ್ವವಿದ್ಯಾಲಯದ  ಡಾ.ಎನ್.ಮಮತಾ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ‘ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿ ಕುರಿತ ವರದಿಗಳ ವಿಶ್ಲೇಷಣೆ: ಒಂದು ಅಧ್ಯಯನ’ ಕುರಿತು ಸುರೇಶ್ ಸಂಶೋಧನೆ ನಡೆಸಿದ್ದರು.

ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಸುರೇಶ ಎನ್. ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುರೇಶ್ ಅವರ ಸಾಧನೆಗೆ ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.