ಮೈಸೂರಲ್ಲೊಂದು ‘ಆಕ್ಟ್ 1978’ …!

mysore-bank-loan-manjula-artist-face.book-protest

 

ಮೈಸೂರು, ಜ.17, 2022 : (www.justkannada.in news ) : ಮಹಿಳೆಯೊಬ್ಬರು ಸ್ವಯಂ ಉದ್ಯೋಗಕ್ಕಾಗಿ ಆರ್ಥಿಕ ನೆರವಿಗೆಂದು ಬ್ಯಾಂಕಿಗೆ ಸಾಲ ಪಡೆಯಲು ಮುಂದಾಗುತ್ತಾರೆ. ಆದರೆ ಬ್ಯಾಂಕಿನ ವ್ಯವಸ್ಥೆ ಹಾಗೂ ಸ್ಥಳೀಯಮಟ್ಟದ ಕೆಲ ಅಧಿಕಾರಿಗಳು ಹೇಗೆಲ್ಲಾ ಸಮಸ್ಯೆಗಳನ್ನು ಉಂಟು ಮಾಡುತ್ತಾರೆ..? ಈ ಅವ್ಯವಸ್ಥೆ ಖಂಡಿಸಿ ಆ ಮಹಿಳೆ ನಡೆಸಿದ ಕೃತ್ಯವೊಂದು ಕನ್ನಡ ಸಿನಿಮಾ ಆಕ್ಟ್ 1978 ನೆನಪಿಸುತ್ತದೆ.

ಈ ಸಿನಿಮಾದಲ್ಲಿ ಮಹಿಳೆ ನ್ಯಾಯಕ್ಕಾಗಿ ಇಡಿ ವ್ಯವಸ್ಥೆಯನ್ನೇ ಬಗ್ಗಿಸುತ್ತಾಳೆ. ಅದೇ ರೀತಿ ಮೈಸೂರಿನ ಈ ಮಹಿಳೆ ಸಹ ಅನ್ಯಾಯ ಖಂಡಿಸಿ, ಬ್ಯಾಂಕಿನ ಬಾಗಿಲಲ್ಲೇ ಪ್ಲೆಕಾರ್ಡ್ ಹಿಡಿದು ಪ್ರತಿಭಟನೆಗೆ ಮುಂದಾಗುತ್ತಾರೆ. ಜತೆಗೆ ಈ ಸಂಬಂಧ ತಮ್ಮ ಫೇಸ್ ಬುಕ್ ಪುಟದಲ್ಲಿ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ.

ಇದಾದ ಕೆಲವೇ ಸಮಯದಲ್ಲಿ, ಬ್ಯಾಂಕಿನ ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ನೊಂದ ಆ ಮಹಿಳೆ ಜತೆಗೆ ಸಮಾಲೋಚನೆ ನಡೆಸಿ, ಲೋನ್ ಜಾರಿಗೆ ವ್ಯವಸ್ಥೆ ಕಲ್ಪಿಸುತ್ತಾರೆ.

ಈ ರೀತಿ ಬ್ಯಾಂಕಿನ ಎದುರು ಪ್ರತಿಭಟನೆ ನಡೆಸಿದ ಮಹಿಳೆ ಹೆಸರು ಮಂಜುಳಾ. ಜೆ. (ನೀಲಿ ಲೋಹಿತ್ – ನೀಲಿ ಕಲಾ ಕ್ರಿಯೇಷನ್ಸ್ ನ ಸಂಸ್ಥಾಪಕಿ), ಇವರು ತಮ್ಮ ಫೇಸ್ ಬುಕ್ ಪುಟದಲ್ಲಿ ಬ್ಯಾಂಕಿನ ಸಿಬ್ಬಂದಿ ವರ್ಗದಿಂದ ತಾವು ಅನುಭವಿಸಿದ ಕಿರಿಕಿರಿ ಬಗ್ಗೆ ಬರೆದುಕೊಂಡಿರುವುದು ಹೀಗೆ……

ನನ್ನ ಬದುಕಿನ ಗತಿಯನ್ನ ಬದಲಿಸಿದ್ದು ಆ ಒಂದು ಸಿನೆಮಾ… ನಾನು ನನ್ನ ಗಂಡ ಕಡೆಯದಾಗಿ ನೋಡಿದ ಸಿನೆಮಾ… ಇವತ್ತು ನನಗೆಲ್ಲಾ ಶಕ್ತಿ ಇದ್ದು ಮೂರು ತಿಂಗಳಿಂದ ನನ್ನನ್ನು ಕಡೆಪಕ್ಷ ಮನುಷ್ಯ ಜಾತಿಯೆಂದು ನೋಡದೆ ಅವಮಾನಿಸಿದ ವ್ಯವಸ್ಥೆಗೆ ನನ್ನ ಧಿಕ್ಕಾರ….

ನಾನು ಮಂಜುಳಾ. ಜೆ. (ನೀಲಿ ಲೋಹಿತ್ – ನೀಲಿ ಕಲಾ ಕ್ರಿಯೇಷನ್ಸ್ ನ ಸಂಸ್ಥಾಪಕಿ),
ಮಣ್ಣಿನ ಆಭರಣಗಳ ವಿನ್ಯಾಸಕಿ ಹಾಗೂ ಶಿಕ್ಷಕಿ, ಸದ್ಯದ ಮಾರುಕಟ್ಟೆಯಲ್ಲಿ ವಿಪರೀತ ಬೇಡಿಕೆಯಿರುವ ಆಭರಣವೆಂದರೆ, ನಮ್ಮ ನೆಲದ ಹೆಮ್ಮೆಯ ಮಣ್ಣಿನ ಆಭರಣಗಳು. ಸಾವಿರಾರು ವರ್ಷಗಳ ಇತಿಹಾಸವಿರುವ ಮಣ್ಣಿನ ಆಭರಣಗಳೆಂದರೆ ಹೆಣ್ಣುಮಕ್ಕಳಿಗೆ ಅದೊಂದು ವಿಭಿನ್ನವಾದ ಅನುಭಾವ. ರಾಜಸ್ಥಾನದ ಪುಷ್ಕರ್, ವೆಸ್ಟ್ ಬೆಂಗಾಲ್ ನ ಬಿಷ್ನುಪುರ್ ಈ ಮಣ್ಣಿನ ಆಭರಣಗಳ ಇತಿಹಾಸದಲ್ಲಿ ಮಹತ್ವದ ಪಾತ್ರ ಪಡೆಯುತ್ತವೆ. ಇಂತಹ ವಿಶಿಷ್ಠವಾದ ಕಲೆಯನ್ನು ನಾನು ಮೈಸೂರಿನಲ್ಲಿ ಪ್ರಾರಂಭಿಸಿದ್ದು, ಈಗಾಗಲೇ ಈ ಕಲೆಯನ್ನು ದೇಶದ ವಿವಿಧ ಭಾಗಗಳ ಹಾಗೂ ವಿದೇಶದಲ್ಲಿ ನೆಲೆಸಿರುವ ಭಾರತೀಯರನ್ನೂ ಸೇರಿಸಿ 95 ಜನ ಹೆಣ್ಣು ಮಕ್ಕಳಿಗೆ (ಸಾಕ್ಷಿ ಅಷ್ಟೂ ಜನರ ವಿವರ ಲಗತ್ತಿಸಿದೆ) ಈ ಕಲೆಯನ್ನು Online ಮೂಲಕ ಕಲಿಸಿಕೊಟ್ಟಿದ್ದೇನೆ. ಈ ಕಲೆಯನ್ನು ಕಲಿತ ಅನೇಕ ಮಂದಿ ಹೆಣ್ಣುಮಕ್ಕಳು ಕೊರೋನಾ ಕಾಲದಲ್ಲಿಯೂ ಕುಗ್ಗದೆ, ಮನೆಯಿಂದಲೇ ಸ್ವಂತ ದುಡಿಮೆ ಪ್ರಾರಂಭಿಸಿದ್ದಾರೆ ಕೂಡ. ನನ್ನ ಮಣ್ಣಿನ ಆಭರಣಗಳು ದೂರದ ಕ್ಯಾಲಿಫೋರ್ನಿಯಾ, ಸಿಂಗಪೂರ್, ಅಮೆರಿಕಾದವರೆಗೂ ನನ್ನ ಭಾರತೀಯ ಮಣ್ಣಿನ ಸೊಗಡನ್ನು ಹೊತ್ತು ಹೋಗಿವೆ. ನಾನೂ ಸಹ ಕೊರೋನಾ ಮಾರಿಗೆ ಪತಿಯನ್ನು ಬಲಿಕೊಟ್ಟು ಒಂಟಿಯಾಗಿ ಉಳಿದವಳು.‌ ನನ್ನ ಈ ವಿಶಿಷ್ಟ ಕಲೆಗೆ ಕಾರಣನಾದ ನನ್ನ ಪತಿ (ಲೋಹಿತ್ ಜಿ.ಕೆ. – ರಾಯಚೂರು ರಿಮ್ಸ್ ನಲ್ಲಿ Senior Research Scientist ಆಗಿ ಕೊರೊನಾ ವಾರಿಯರ್ ಆಗಿದ್ದರು) ಅವರನ್ನು ಕಳೆದುಕೊಂಡು, ಅಪ್ಪಾ – ಅಮ್ಮಾ, ಅತ್ತೆ-ಮಾವ, ಅಣ್ಣ-ತಂಗಿ ಅನ್ನೋ ಯಾವ ಸಂಬಂಧಗಳ ಸಹಕಾರ‌ವಿಲ್ಲದೆ, ಯಾರ ಬಳಿಯೂ ಕೊರೋನಾ ವಾರಿಯರ್ ಪತ್ನಿ ಎಂದು ಭಿಕ್ಷೆ ಬೇಡದೆ, ನಾನು ಬದುಕಲೇ ಬೇಕು ಎಂದು ನಿರ್ಧರಿಸಿ ಗಟ್ಟಿಯಾಗಿ ನಿಂತಿದ್ದು ಈ ಮಣ್ಣಿನಿಂದಲೇ. ನನ್ನ ಗಂಡ ತೀರಿಕೊಂಡ ಐದು ದಿನದಿಂದಲೇ ನಾನು ನನ್ನ ದುಡಿಮೆಯನ್ನು ಪ್ರಾರಂಭಿಸಿದ್ದೇನೆ, ಹಗಲು- ರಾತ್ರಿಯೆನ್ನದೆ, ವಾರದ ಏಳೂ ದಿನವೂ ಬೆಳಗ್ಗೆ 6ರಿಂದ ಹಿಡಿದು ರಾತ್ರಿ 12ರವರೆಗೆ ದೇಹವನ್ನೇ ದಂಡವಾಗಿಸಿಕೊಂಡು ಬೆನ್ನುಹುರಿ ಮುರಿವ ಮಟ್ಟಕ್ಕೆ ದುಡಿಯುತ್ತಿದ್ದೇನೆ ( ಸಾಕ್ಷಿ ನನ್ನ ಬ್ಯಾಂಕ್ ಖಾತೆಯ ವಹಿವಾಟು‌ ಮತ್ತು ನನ್ನ ಸಾಮಾಜಿಕ ಜಾಲತಾಣದ ವಿಶಿಷ್ಟ ಮಣ್ಣಿನ ಆಭರಣಗಳ ಸ್ವ ಜಾಹಿರಾತುಗಳು) ಸದ್ಯಕ್ಕೆ ನನ್ನ ಖಾತೆಯ ವಹಿವಾಟು ಯಾವ machine ಅಳವಡಿಸಿಕೊಳ್ಳದೆ ತಿಂಗಳಿಗೆ 50000 ಸಾವಿರಗಳ ಗಡಿ ಮುಟ್ಟುತ್ತಿರುವುದು ನನ್ನ ಶ್ರಮದಿಂದಲೇ. ನಾನು ಪತ್ರಿಕೋದ್ಯಮ ಡಿಪ್ಲೊಮಾ ಮಾಡಿದ್ದು, ಮಾಧ್ಯಮ ರಂಗದಲ್ಲಿ ಅವಕಾಶವಿದ್ದರೂ, ನನ್ನ ಗಂಡನ ಕನಸು ಹಾಗೂ ನನ್ನ ಗುರಿಯನ್ನು ಮುಟ್ಟಲು, ಹಾಗೂ ಅಪರೂಪಕ್ಕೆ ಒಲಿದಿರುವ ಕಲೆಯ ಸೇವೆ ಮಾಡಲು, ಮಣ್ಣಿನ ಆಭರಣಗಳ ಸ್ವ ಉದ್ಯಮವನ್ನೇ ನನ್ನ ಬದುಕಾಗಿಸಿಕೊಂಡಿದ್ದೇನೆ.

ನನ್ನ ಉದ್ದಿಮೆಯನ್ನು ಉನ್ನತ ಮಟ್ಟಕ್ಕೆ ತಂದು, ವಿಸ್ತಾರಗೊಳಿಸಲು ನನಗೆ ಮೂಲಭೂತ machineryಗಳ ಅವಶ್ಯಕತೆಯಿದ್ದು, ಹಣಕಾಸಿನ ಸಹಯಾಕ್ಕಾಗಿ PMEGP ಅಡಿಯಲ್ಲಿ SBI ನಲ್ಲಿ ಸ್ವಂತ ಉದ್ದಿಮೆಗೆ ನೀಡುವ ಸಾಲಕ್ಕಾಗಿ ದಿನಾಂಕ 18-10-2021ರಂದು ಅರ್ಜಿ ಸಲ್ಲಿಸುತ್ತೇನೆ. ನನ್ನ ಕಲೆಯ ನಿಜವಾದ ಹೋರಾಟ ಮತ್ತು ಅವಮಾನ ಇಲ್ಲಿಂದ ಪ್ರಾರಂಭವಾಗುತ್ತದೆ. ಕೊರೋನಾ ಸಮಯದಲ್ಲೂ, ಒಂಟಿಯಾಗಿ ಉಳಿದರೂ ಸಾಯದೆ ಸ್ವಾವಲಂಬಿ ಬದುಕ ಕಟ್ಟಲು ನಾನು ಪಟ್ಟಿರುವ ಪಾಡು ಒಂದು ತೂಕವಾದರೆ, ನನ್ನನ್ನು, ನನ್ನ ಕಲೆಯನ್ನೂ ಅವಮಾನಿಸಿದ SBI ಅಧಿಕಾರಿಗಳ ಅಮಾನವೀಯ ವರ್ತನೆಯೇ ಇನ್ನೊಂದು ತೂಕ. ಕಳೆದ ಮೂರು ತಿಂಗಳಿಂದ ನನ್ನ Loan ಗಾಗಿ ನಾನು ಬೇಡಿರುವ ಪರಿ ಅಷ್ಟಿಷ್ಟಲ್ಲಾ, ಕಡೆಗೆ ಮೊನ್ನೆ 14/01/22 ರಂದು, SBI ಬಂಬೂಬಜಾರ್ ಬ್ರ್ಯಾಂಚ್ ನ ಅನುರಾಧ, ಮುಖ್ಯ ವ್ಯವಸ್ಥಾಪಕರು, ಅರೂಪ್ ಕುಮಾರ್ ಚಟರ್ಜಿ, ಹಾಗೂ ಪರೋಕ್ಷವಾಗಿ ಶುಭಂ ಎಂಬ ಸಿಬ್ಬಂದಿ ಸೇರಿ ನನ್ನ ಕಲೆ‌ ಹಾಗೂ ನಾನು ಬದುಕುತ್ತಿರುವ ರೀತಿಯನ್ನೇ ಲೇವಡಿಮಾಡಿ ಅವಮಾನ ಮಾಡಿ ಕಳಿಸುತ್ತಾರೆ. ಅದರ ಸಂಪೂರ್ಣ ವಿವರ ಹೀಗಿದೆ.

ಲೋನ್ Apply “SBI” ನಲ್ಲಿ ಮಾಡಿದ ದುರಂತ ಕಥೆ…

ದಿನಾಂಕ 18-10-2021 ರಂದು SBIನಲ್ಲಿ PMEGP ಅಡಿಯಲ್ಲಿ Loan Apply ಮಾಡುತ್ತೇನೆ. ( Ref No – SBICA20211018000776913024) ದಿನಾಂಕ 30-10-2021 ರಂದು ನನ್ನ work Unit Verification “ಶುಭಂ” ಎಂಬ SBI ಅಧಿಕಾರಿಯಿಂದ ನಡೆಯುತ್ತದೆ, ತಪಾಸಣಾ ಸಮಯದಲ್ಲಿಯೇ ನನ್ನ CIBIL Report ಅಧಿಕಾರಿಯ‌ ಬಳಿ ಇರುತ್ತದೆ, ಮತ್ತು ನನ್ನ ಹಳೆಯ Loan ಬಗ್ಗೆಯೂ ತಪಾಸಣೆ ಮಾಡುತ್ತಾರೆ, ಮತ್ತು ನನ್ನ Original Document Verification ಕೂಡ ಮಾಡುತ್ತಾರೆ. ಆ ಸಮಯದಲ್ಲಿ ನನ್ನ ವಿದ್ಯಾರ್ಥಿನಿ ಒಬ್ಬರು SBI ಸಿಬ್ಬಂದಿಯನ್ನು ನನ್ನ ಗಂಡನ ಕೊರೊನಾ ವಾರಿಯರ್ ಸಾವಿನ ನಂತರದ ವಿಮಾ ಹಣ ನೀಡುವ ಅಧಿಕಾರಿಯೆಂದು ಭಾವಿಸಿ “ಸರ್ ಬೇಗ ಹಣ ಕೊಡಿಸಿ ಪಾಪ ಒಬ್ಬರೆ ಇದ್ದಾರೆ, ಮನೆ ಬಾಡಿಗೆ ಕೂಡ ಕಟ್ಟಿಲ್ಲ” ಎಂದು ಹೇಳುತ್ತಾರೆ. ತಕ್ಷಣ ನಾನು “ಸರ್ ತಪ್ಪಾಗಿ ಭಾವಿಸಬೇಡಿ ನಿಮ್ಮನ್ನ ವಿಮಾ ಹಣದ ಅಧಿಕಾರಿ ಎಂದು ಕೊಂಡು ಹೀಗೆ ಹೇಳುತ್ತಿದ್ದಾರೆ” ಎಂದು ಇರುವುದನ್ನು ಬಿಡಿಸಿ ಹೇಳುತ್ತೇನೆ ಕೂಡ. ಅಲ್ಲದೆ ” ನನ್ನ ಎರಡು ಪೆಟ್ಟಿಗೆಯಲ್ಲಿ ಮಾಡಿರುವ 200ಕ್ಕೂ ಹೆಚ್ಚಿನ ಮಣ್ಣಿನ ಆಭರಣಗಳಿಗೆ ಸರಿಯಾಗಿ Showcase ಮಾಡಿ ಇಡಬೇಕು ಸರ್, ಅಕ್ಕ ಪಕ್ಕದ ಮನೆಯವರು jewelery Baking ಮಾಡುವಾಗ ಬರುವ ಹೊಗೆಗೆ ತಕರಾರು ಮಾಡುತ್ತಾರೆ, ಹಿಂಸೆಯಾಗುತ್ತಿದೆ ದಯಮಾಡಿ ಬೇಗ Loan ಮಾಡಿಸಿಕೊಡಿ” ಎಂದು ಬೇಡಿಕೊಳ್ಳುತ್ತೇನೆ ನಂತರ ಆತ Unit ನ ಭಾವಚಿತ್ರ ತೆಗೆದುಕೊಂಡು ಹೊರಡುತ್ತಾರೆ.

ಅದಾದ ಬಳಿಕ ದಿನಾಂಕ 12/11/2021 ರಂದು ನನ್ನ ಖಾತೆಯಿರುವ Branch Manager ಒಂದೆರಡು ದಾಖಲಾತಿಗಳನ್ನು ಒದಗಿಸಿದರೆ ನಾಲ್ಕೈದು ದಿನದಲ್ಲಿ Loan ಆಗುತ್ತದೆ ಎಂದು ಹೇಳಿದಾಗ ದಿನಾಂಕ 15/11/21 ರಂದು ಆಕಾಶವಾಣಿಯ ಮಹಿಳಾರಂಗ ಮತ್ತು ಸಾವಯವ ಆಭರಣಗಳ ವಿಶೇಷ ಆಹ್ವಾನಿತೆಯಾಗಿ ಹೋಗಿ SBIನವರು ಸಾಲ ನೀಡುತ್ತಿರುವ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡು ನನ್ನ ಕಾರ್ಯಕ್ರಮ ಮುಗಿಸಿ ಖುಷಿಯಾಗಿ ಕುಣಿಯುತ್ತಾ ಬ್ಯಾಂಕ್ಗೆ ಹೋಗಿ Documents ಕೊಟ್ಟು ಬರುತ್ತೇನೆ. (ಸಾಕ್ಷಿ – ಆಕಾಶವಾಣಿಯಲ್ಲಿ ನನ್ನ ಮಣ್ಣಿನ ಆಭರಣಗಳ ಬಗ್ಗೆ ಹಾಗೂ ನನ್ನ ಉದ್ದಿಮೆಯ ಬಗ್ಗೆ ಪ್ರಸಾರವಾಗಿರುವ ಎರಡೂ ಕಾರ್ಯಕ್ರಮಗಳ ಮಾಹಿತಿಯಿದೆ)

ಕಾದು ಕಾದು ಸಾಕಾಗಿ December 06 ನೇರ ಬಂಬೂಬಜಾರ್ ನ ಶಾಖೆಗೆ ಹೋಗಿ ಅಲ್ಲಿ “ಅರೂಪ್ ಕುಮಾರ್ ಚಟರ್ಜಿ” ಎಂಬ ಅಧಿಕಾರಿಯನ್ನು ಭೇಟಿಯಾಗಿ “loan apply ಮಾಡಿ ಎರಡು ತಿಂಗಳ ಹತ್ತಿರ ಆಗ್ತಾ ಇದೆ, Unit Verification ಆಗಿ ಒಂದು ತಿಂಗಳಾಗಿ ಹೋಗಿದೆ ದಯಮಾಡಿ Loan sanction ಮಾಡಿ ಎಂದು ಕೇಳಿಕೊಳ್ಳುತ್ತೇನೆ, ಆದರೆ ನನ್ನ File ಶುಭಂ ಎಂಬುವವರ ಬಳಿಯಿದ್ದು ಅವರ ಮದುವೆಯ ರಜಾ 13/12/21 ಕ್ಕೆ ಮುಗಿದ ಮೇಲೆ ಅವರೇ ಬಂದು ಮಾಡಬೇಕು ಎಂದು ಹೇಳಿ ಕಳಿಸುತ್ತಾರೆ.

ನಂತರ ದಿನಾಂಕ 15-12-21 ರಂದು, ನನ್ನ Loan Application Reject ಅಗಿದೆ ಎಂದು ಬ್ಯಾಂಕ್ ನಿಂದ ಕರೆಬರುತ್ತದೆ. ಎರಡು ತಿಂಗಳಿಂದ ಅಲೆಸಿ, ಕಡೆಗೆ Reject ಮಾಡಿದ್ದು ಕೇಳಿ ನಿಂತ ನೆಲವೇ ಅಲುಗಾಡಿ ಮತ್ತೆ ನನ್ನವನ್ನು ಕಳೆದುಕೊಂಡೆನೆ ಎಂಬ ಅನಾಥಭಾವ ಆವರಿಸುತ್ತದೆ, ಅವನ ಕನಸಿನ ಮೊದಲ ಹಂತವೇ ಮುರಿದುಬಿದ್ದಾಗ.‌ ಕೆಲವು ದಿನಗಳ ನಂತರ ನನ್ನ Branch Manager ಅವರನ್ನು ಈ ವಿಷಯದ ಕುರಿತು ವಿಚಾರಿಸಲು ಹೋದಾಗ, ಒಂದು ಮನವಿ ಪತ್ರವನ್ನೂ ಸಹ ಕೊಡುತ್ತೇನೆ ” ನಾನು ಮೃತ ಕೊರೊನಾ ವಾರಿಯರ್ ಪತ್ನಿಯಾಗಿದ್ದು, ಅವರನ್ನು ಉಳಿಸಿಕೊಳ್ಳುವ ಸಮಯದಲ್ಲಿ Credit Card ಬಳಸಿದ್ದೇನೆ, ಅಲ್ಲದೆ ಅದನ್ನೂ ನಿಯಮಿತವಾಗಿ ಕಟ್ಟುತ್ತಿದ್ದೇನೆ, ಬಿಟ್ಟರೆ ಬೇರಾವ loan ಇಂದಲೂ ನಾನು Defaulter ಆಗಿಲ್ಲ, ಕಡೆಪಕ್ಷ Deviation ಮೇಲಾದರೂ ನನಗೆ Loan ಕೊಡಿಸಿ” ಎಂದು ಬರೆದು ಬೇಡಿಕೊಳ್ಳುತ್ತೇನೆ, ಆದರೆ ಅದಾಗಲೇ ನನ್ನ Credit Report Recheck ಮಾಡಿದ್ದ ನನ್ನ Branch Manager ಇದಾವುದರ ಅಗತ್ಯವಿಲ್ಲ, ನೀವೇ ಖುದ್ದು ಈ File ತೆಗೆದುಕೊಂಡು ಹೋಗಿ ಅರೂಪ್ ಅವರನ್ನ ಭೇಟಿಯಾಗಿ ನಿಮ್ಮ Loan Sanction ಆಗುತ್ತದೆ ಎಂದು ಹೇಳಿ ಹೊಸ ಭರವಸೆ ಕೊಡುತ್ತಾರೆ. ಅಲ್ಲಿಂದ ನೇರ ಮತ್ತೆ ಅಮಾನವೀಯ ಬಂಬೂಬಜಾರ್ ನ ಶಾಖೆಗೆ ನೂರು ದೇವರನೆಲ್ಲಾ ದೂರ ನೂಕಿ ಅಲ್ಲಿನ ಅಧಿಕಾರಿಗಳೆ ದೇವರೆಂದು ಬೇಡಿಕೊಳ್ಳುತ್ತಾ ನಿಲ್ಲುತ್ತೇನೆ…

ನಾನು ಶಾಖೆಯೊಳಗೆ ಕಾಲಿಟ್ಟು ಎದುರಿಗೆ ಸಿಕ್ಕ ಗಂಡುದೇವರನೆಲ್ಲಾ ಕೇಳುತ್ತೇನೆ ಇದು ನನ್ನ PMEGP File, Manager ಕಳಿಸಿದ್ದಾರೆ, ದಯಮಾಡಿ ನೋಡಿ ಎಂದು, ಯಾವ ದೇವರಿಗೂ ಕಿವಿಯಿಲ್ಲ, ಕಣ್ಣಂತೂ ಮೊದಲೇ ಇಲ್ಲ, ನೀವು File ತರುವ ಹಾಗಿಲ್ಲ, ಹೋಗಿ ವಾಪಸ್ಸು Bank ಅವರಿಗೆ ಕೊಡಿ ಎಂದು. Manager ಹೇಳಿದ್ದು ನೆನಪಿತ್ತು ಜಯಾ ಅನ್ನೋ ಹೆಣ್ಣು ದೇವತೆ, ಕಡೆಗೆ ಜಯಾ madam ಯಾರು ಎಂದೆ, ಪುಣ್ಯಾತ್ಮ ಕೈ ತೋರಿದ, ಆಕೆ ಬಳಿ ಹೋಗಿ ಹಲ್ಲು ಕಿರಿದು ಬೇಡಿದೆ ” Mam ನಾನು ಮಂಜುಳ ಜೆ, PMEGP Loan, ಅಜಿತ್ ಸರ್ ಕಳಿಸಿದ್ದಾರೆ” ಕೇಳೋಕೆ ಪಾಪ ಆ ದೇವತೆಗೂ ಸಮಯವಿಲ್ಲ, ನಾನೇನೋ ನಕ್ಸಲ್ ಅನ್ನೋ ನೋಟದಲ್ಲಿ, ನೀವು File ತರುವ ಹಾಗಿಲ್ಲ ಟಪಾಲು ಬರಬೇಕು ಹೋಗಿ” ಮುಗಿಯಿತು ಅಲ್ಲಿಗೆ. ಮೆಟ್ಟಿಲಿಳಿದು ಕೆಳಗೆ ಬಂದವಳು ಯೋಚಿಸಿದೆ manager ನೋಡಬೇಕಿತ್ತು ನಾನು, ದೇವರು ಅವನು, ಈಗ ಸಿಕ್ಕವರೆಲ್ಲಾ ಪೂಜಾರಿಗಳು ಮಾತ್ರ ಎಂಬ ಸತ್ಯ ಅರಿತು ಮತ್ತೆ ಬೆಟ್ಟವೇರಿ ಪೂಜಾರಿಗಳಿಗಿಂತ ಬಾಗಿಲ ಬಳಿ ಕುಳಿತ ಗುಮಾಸ್ತನೇ ಮೇಲೆಂದು ಭಾವಿಸಿ ಕೇಳಿದೆ manager ಯಾರು ಎಂದು, ನನ್ನಂತ ಬಡಪಾಯಿ, ರೂಪಾಯಿ ಬೆಲೆ ತಿಳಿದವ, ಹೆಣ್ಣಿನ ಕಣ್ಣೀರು ಅರ್ಥವಾಗಿ manager ಬಂದಿಲ್ಲ, ಅಲ್ಲಿದ್ದಾರಲ್ಲ ಅವರು manager next ಅಧಿಕಾರಿ ಹೋಗಿ ಎಂದು ತೋರಿದ ಪುಣ್ಯಾತ್ಮ.

ಆಕೆ ಹೆಣ್ಣು, ಈ ಹೆಣ್ಣಿನ ನೋವು ಆ ಹೆಣ್ಣಿಗೆ ತಿಳಿಯದೆ ಇರದು, ಅದಾಗಲೇ ದುಃಖದ ಕಟ್ಟೆಯೊಡೆದಿತ್ತು, ನನ್ನ ಗಂಡ ನನ್ನ ಅಂಗೈಲಿಟ್ಟು ಸಾಕಿದ್ದ, ಅವನಿಲ್ಲದ ಸಮಯದಲ್ಲಿ ಸಮಾಜ ನನ್ನನ್ನ ಕಳಪೆ ಎಂಬಂತೆ ನೋಡುತ್ತಿದೆ ಅನ್ನೋ ನೋವು ಎದೆಮಟ್ಟ ಮೀರಿತ್ತು, ಅದುವರೆಗೂ ಅಳದವಳು ಆ ಹೆಣ್ಣು ದೇವತೆ ಮುಂದೆ ಕಣ್ಣೀರಾದೆ, ಕನಿಕರಕ್ಕಲ್ಲ, ನನ್ನಂತ ಹೆಣ್ಣು ಅನ್ನೋ ಅನುಕೂಲದಿಂದ. ಆಕೆಯೇನೋ ಸದ್ಯ ನಾನು ಹೇಳೋದನ್ನ ಕೇಳಿದಳು, “ನಿಮ್ಮ ಗಂಡ ಕೊರೊನಾ ವಾರಿಯರ್ ಅನ್ನೋದಕ್ಕೆ ಸಾಕ್ಷಿ” – ಮುಂದಿಟ್ಟೆ, ನಂಬಿಕೆ ಬಂತು ದೇವತೆಗೆ. “ಏನು ಕೆಲಸ ಮಾಡ್ತೀರಾ,,,” “Terracotta Jewelry Mam”, ” ಅಂದರೆ” , “ಮಣ್ಣಿಂದ ಆಭರಣ ಮಾಡೋದು Mam” “ಏನು! ಮಣ್ಣಲ್ಲಿ ಆಭರಣಾನಾ ” ಕಣ್ಣು ಅರಳಿತ್ತು ದೇವಿದು. “ಹೌದು Mam, ನೋಡಿ ನಾನಾಕಿರೋ ಈ ಸರ ಮಣ್ಣಿನದು, ಸಣ್ಣ ಮಣಿ, ಈ Pendent, ಯಾಕೆ ಈ ಮುತ್ತು ಕೂಡ ಮಣ್ಣು Mam” ಹೆಮ್ಮೆಯಿಂದ ಹೇಳಿದೆ. “Pearl ಅಲ್ವಾ ಅದು, ಮಣ್ಣು ಅಂತೀರಾ” ದೇವಿಗೆ ಅನುಮಾನ. ನಾನು ಬಿಡಬೇಕಾ ” ಇಲ್ಲಾ Mam ಇದು ಮಣ್ಣೇ, ಬೀಳಿಸಿದರೆ ಒಡೆಯುತ್ತೆ Mam, ಬೇಕಾದರೆ ನಮ್ಮ DIC Deputy Manager ಮೇಘಲಾ mam ಕೇಳಿ, ನನ್ನ ಕಲೆ ಬಗ್ಗೆ ಚೆನ್ನಾಗಿ ಗೊತ್ತು, ಮೊನ್ನೆ DIC ಇಂದ ಆದ Exhibitionನಲ್ಲಿ ನನಗೂ ಅವಕಾಶ ಕೊಟ್ಟಿದ್ರು, ನಮ್ ಜಿಲ್ಲಾಧಿಕಾರಿ ಕೂಡ ಮೆಚ್ಚಿದ್ದಾರೆ ನನ್ನ ಕಲೆನಾ” (ಸಾಕ್ಷಿ – ಜಿಲ್ಲಾಧಿಕಾರಿಗಳು ನನ್ನ ಆಭರಣಗಳನ್ನು ನೋಡಿತ್ತಿರುವ ಭಾವಚಿತ್ರ ಪತ್ರಿಕೆಗಳಲ್ಲಿ ವರದಿಯಾಗಿದೆ) ಒಣಜಂಭದಿಂದ ಹೇಳಿದ್ದಲ್ಲ, ನನ್ನ ಕಲೆಯ ಬಗೆಗಿನ ಹೆಮ್ಮೆಯಿಂದ ಒಂದೇ ಉಸಿರಿಗೆ ಹೇಳಿದೆ, ತಕ್ಷಣವೇ ದೇವಿಗೆ ಕೋಪ ನೆತ್ತಿಗೇರಿತ್ತು ” ನನ್ನ ಹತ್ತಿರ Influence ನಡೆಯಲ್ಲ, ಮೋದಿ ಹೇಳಿದ್ರೂ ಅಷ್ಟೇ “… ನಾನು ಹೇಳಿದ್ದು ಏನು, ಈ ದೇವಿ ಅನ್ಕೊಂಡಿದ್ದು ಏನು, ಪಾಪ ಮೋದಿ ಯಾಕೆ ದೆಹಲಿಯಿಂದ ಇಲ್ಲಿಗೆ ಬಂದಿದ್ದು ಅಂತಾ ಪೆಚ್ಚಾದೆ. ಕಡೆಗೆ ಹೋಗ್ಲಿ ಅತ್ತಾಗೆ ಈ ದೇವಿನ ನಂಬಿಸೋಕೆ ಮೊಬೈಲ್ನಲ್ಲಿ ಇದ್ದ ನನ್ನ ಆಭರಣಗಳ ವಿನ್ಯಾಸದ ಫೋಟೋ ತೋರಿಸಿದೆ, ಸದ್ಯ ದೇವಿ ಪ್ರಶಾಂತಳಾಗಿ ನೋಡಿ ” ಸರಿ ಮಾ, ನಾನು ನಿಮಗೆ Loan ಕೊಡ್ತೇನೆ ಆದರೆ ನೀವು ಸರಿಯಾಗಿ ಕಟ್ಟಬೇಕು, ನಿಮ್ಮನ್ನ ನಂಬಿ ಕಷ್ಟ ಅಂತಾ ಕೊಡ್ತಾ ಇದ್ದೇನೆ ಹೆಸರು ಉಳಿಸಿಕೊಳ್ಳಬೇಕು ಅಂತಾ ಮೂರು ಸಲ ಹೇಳಿದ ದೇವಿ ಕಾಲು Table ಇಂದ ಆಕಡೆ ಇತ್ತು, ಕಡೆಗೆ ಕೈ ಮುಗಿದೆ, “Mam ನೋಡಿ ನಾನು ಹೇಗೆ ಬೆಳೆದು, ಸಾಲ ಸರಿಯಾಗಿ ಕಟ್ಟಿ ತೋರಿಸ್ತೇನೆ”…

ನಿಜಾ ದೇವತೆ ಅಲ್ವಾ ಈಕೆ, ಸಾಲ ಕೊಡೋಕು ಮಾನವೀಯತೆ ಬೇಕಲ್ಲವಾ, ದೇವರಿಗಲ್ಲದೆ ಈಗಿನ ಕಾಲದ ಮಾನವರಿಗೆಲ್ಲಿದೆ ಮಾನವೀಯತೆ. ಪಕ್ಕದಲ್ಲೇ ಇದ್ದ ಶುಭಂ, ಮತ್ತು ಅರೂಪ್ ಅವರನ್ನ ಕರೆದು ನೋಡಿ ಇವರು ಮಣ್ಣಲ್ಲಿ ಆಭರಣ ಮಾಡುತ್ತಾರಂತೆ ಅನ್ನೋದೆ ತಡ, ಮೂರು ಜನರ ಕಣ್ಣು ಬೇರೇನೋ ಮಾತಾಡಿಕೊಂಡು, ನನ್ನನ್ನ ” ಮಂಜುಳಾ ನೀವು ಐದು ನಿಮಿಷಾ ಹೊರಗೆ ಇರಿ ಮಾ” ಸರಿ ದೇವತೇನೆ ಒಪ್ಪಿರುವಾಗ ಈ ಪಾಮರಳಿಗೇನು ಚಿಂತೆ, Baking kiln ತರೋದೆ ಹಿಂದೆ ಮನೆವಮ್ಮನ ಮುಖಕ್ಕೆ ಹೊಡೆದಾಗೆ ಹೊಗೆ‌‌ ಇಲ್ಲದೆ, ಕಣ್ಣುರಿಯಿಲ್ಲದೆ, ರಾತ್ರಿ ಎಲ್ಲಾ ಮಲಗಿದ ಮೇಲೆ ಬೆಂಕಿ ಹಾಕೊಂಡು ಕಾಯದೆ, ನೆಮ್ಮದಿಯಾಗಿ ಬೇಯಿಸಿ ಬಣ್ಣ ಕಟ್ಟಿ ಇವತ್ತಿಗಿಂತ ಮೂರು ಪಟ್ಟು-ನೂರು ಪಟ್ಟು ತಯಾರು ಮಾಡಿ sale ಮಾಡ್ತಾ ಇರೋದೆ… ಒಂದು ಕಡೆ Table ಮುಂದೆ ಒಂದು ಕುರ್ಚಿ ಹಾಕೊಂಡು ಬೆನ್ನು ನೆಟ್ಟಗೆ ಇರೋ ಹಾಗೆ ಕುಳಿತು ಆರಾಮಾಗಿ ಆಭರಣ ಮಾಡೋದೆ ಇನ್ನಾ… ಕನಸು ಕಣ್ತಾ ಇದ್ದೆ ನನ್ನ Terracotta Studio ಬಗ್ಗೆ, ದೇವಿ ಕರೆದ ಭಾವ, ಅಂತರಿಸಿ ನೋಡಿದೆ, ನಿಜಾ… ಹತ್ತಿರ ಹೋದೆ ಅದೇನು ಮಾತುಕತೆ ನಡೆದಿತ್ತೋ ದೇವಾನು ದೇವತೆಗಳ ನಡುವೆ ಈ ಪಾಪಿ ನಿಂತ ಸಮುದ್ರ ಮೊಣಕಾಲುದ್ದ ನೀರಾಗಿತ್ತು. “ನೋಡಮ್ಮಾ Loan ಕೊಡೋಣಾ ಅಂದ್ರೆ, ನಿಮ್ಮ MSME Certificateನಲ್ಲಿ 2019 Year mention ಆಗಿದೆ, PMEGP Loan ಕೊಡೋದು, ಈಗ ಉದ್ದಿಮೆ ಪ್ರಾರಂಭ ಮಾಡೋರಿಗೆ” ಅನ್ನೋದೆ… ಅಲ್ಲಾ license ಮಾಡಿಸಿರೋದೆ Oct 2021, ಗಂಡ ಸಾಯೋವರೆಗೂ ಉದ್ದಿಮೆ ಕನಸೇ ಇರಲಿಲ್ಲ, ಈಗ ಕಟ್ಟಲೇ ಬೇಕು ಅಂತಾ ನಿಂತಿದ್ದೀನಿ, ಕಡೆಗೆ ಈ ಇಸವಿ ನನ್ನ ಕನಸನ್ನೇ ಇರಿಬೇಕೆ… “Mam, ನನಗೆ ಇದೆಲ್ಲಾ ಗೊತ್ತಿಲ್ಲಾ, computer Center ನಲ್ಲಿ ಕಳೆದ ತಿಂಗಳು ಮಾಡಿಸಿರೋದು mam, pls ನೋಡಿ, ಒಮ್ಮೆ ಬನ್ನಿ ಬೇಕಾದ್ರೆ ನನ್ನ Studio ಕನಸು ಇನ್ನೂ ಕನಸಾಗೆ ಇದೆ, ಖಾಲಿ ಜಾಗ ಇದೆ, ದಯಮಾಡಿ ನೋಡಿ “… No way ತ್ರಿಮೂರ್ತಿಗಳು Fix ಆಗಿದ್ದರು, File ನೀವು ತರಬಾರದು ಅಂತಾ ಹೇಳಿದರೂ ಕೇಳದೆ, ಮೆಟ್ಟಿಲಿಳಿದವಳು ಮತ್ತೆ ಹತ್ತಿ ಹೋಗಿ ನಿಂತರೆ ದೇವರಿಗೆ ಕಣ್ಣಿಲ್ಲವಾ… ಕಡೆಗೆ ದೇವಿ ಹೇಳಿದ್ದು ” ಛೆ ನಿಮ್ಮಿಂದ ನಮ್ಮ Half an hour Waste ಆಯ್ತು” … ಅಯ್ಯೋ ದುರ್ವಿಧಿಯೇ, ನನ್ನಂತ‌ ಪಾಪಿಯಿಂದ ಈ ದೇವಸ್ಥಾನದ ಅದೆಷ್ಟು ಭಕ್ತರಿಗೆ ಇವತ್ತು ಪ್ರಸಾದ ಕೈ ತಪ್ಪಿರಬಹುದು…

ಸರಿ ಮತ್ತೆ DIC ಕಡೆಗೆ ಹೋದೆ, ಅಯ್ಯೋ Date ತಾನೆ onlineನಲ್ಲಿ Change ಮಾಡಿಕೊಳ್ಳಿ, ಅಷ್ಟೇ… ಅರೆ! ಪರಿಹಾರ ಇಷ್ಟೇನಾ… ಸರಿ ಮಾಡಿ ಮತ್ತೆ ನಮ್ಮ Branch Manager ಕಡೆ ಹೋದೆ, ಯಾಕಂದ್ರೆ ಮತ್ತೆ ನಾನೇ File ತಗೊಂಡು ಬಂಬೂಬಜಾರ್ ಗೆ ಹೋದ್ರೆ, ಗೊತ್ತಲ್ಲಾ ಬೆಟ್ಟ ಹತ್ತಿ-ಇಳಿಸಿ, ಅಲೆಸಿ – ಅಳಿಸಿ, ಕಡೆಗೆ ಶಾಪಕೊಟ್ಟು ಕಳಿಸುತ್ತೆ ದೇವರು, ಅಲ್ಲಿರೋ ಎಲ್ಲಾ ದೇವರೂ ಒಂದೇ, ಶಂಖದಿಂದ ಬರೋದು ಮಾತ್ರ ತೀರ್ಥ ಅನ್ನೋ ಭಾವ…

ನಿಜಾ ಕೈ ಮುಗಿಬೇಕು ಕುವೆಂಪುನಗರದ Managerಗೆ, ಅದಷ್ಟೂ ಬಾರಿ ಹೋದಾಗಲೂ, ಇಲ್ಲಾಮಾ “ನಿಮ್ಮ Loan ಆಗುತ್ತೆ” ಅನ್ನೋ ಭರವಸೆ ಕೊಡೋ ದೇವರು. ಮತ್ತೆ ನನ್ನ File ತಗೊಂಡು Loan ಆಗುತ್ತೆ ಹೋಗಿಬನ್ನಿ ಅಂದರು.

ಈ‌ ಮಧ್ಯೆ, ನಮ್ಮ ನಗರದ ಸಂಸದರಾದ ಪ್ರತಾಪ್ ಸಿಂಹ ಅವರನ್ನ ಭೇಟಿಯಾದ ಸಮಯದಲ್ಲಿ ನಾನು ಈ ಲೋನ್ ಬಗ್ಗೆ ಕೇಳಿಕೊಂಡೆ, ಕಡೆಪಕ್ಷ ಹೀಗಾದರೂ Loan ಆಗಬಹುದು ಎಂದು, ಅಧಿಕಾರಿಗಳು ಅಲೆಸಿದರೆ, ಜನನಾಯಕರನ್ನೇ ತಾನೆ ಕೇಳಬೇಕು, ತಕ್ಷಣ Lead Bank Manager ಕಡೆ ಮಾತಾಡಿ ನನ್ನನ್ನ ಕಳಿಸಿದರು, Lead Bank Manager ಸಹ ಹೇಳಿದ್ದನ್ನೆಲ್ಲಾ ಕೇಳಿ, ಎರಡು ದಿನಗಳ ಸಮಯ ಕೇಳಿ ಕಳಿಸಿದರು. ನಾಲ್ಕು ದಿನಗಳ ನಂತರ ಕರೆ ಮಾಡಿ ಬ್ಯಾಂಕ್ ಗೆ ಬರಲು ತಿಳಿಸಿದರು. ಹೋದ ಕೂಡಲೆ ಆದರದಿಂದ ಕೂರಿಸಿ, ಮಾತನಾಡಿ, ನಿಮಗೆ ಮುದ್ರಾ ಲೋನ್ ಮಾಡಿಕೊಡುತ್ತಾರೆ, ಹೋಗಿ ಅರೂಪ್ ಅವರಿಗೆ ಹೇಳಿ, Immediate ಆಗುತ್ತೆ, ನಿಮ್ಮ machine ಎಲ್ಲಾ ತಗೊಂಡು ನಿಮ್ಮ ಬದುಕನ್ನ ಕಟ್ಟಿಕೊಳ್ಳಿ, ಬೆಳೆದು ತೋರಿಸಿ ಎಂದು ಹಾರೈಸಿ ಮತ್ತೆ ಬಂಬೂಬಜಾರ್ ನ ಕಡೆಗೆ ಕಳಿಸಿದರು.

ಶಂಖದಿಂದ ತೀರ್ಥ ಬಂದಿದೆ, ದೇವರು ವರ ಕೊಡದೆ ಇರುವುದಿಲ್ಲವೆಂದು, ಮತ್ತೆ ಮೆಟ್ಟಿಲು ಹತ್ತಿ ಅರೂಪ್ ಅವರನ್ನು ಕೇಳಲು ಹೋಗುತ್ತಿದ್ದಂತೆ ಪಕ್ಕದಲ್ಲೇ ಇದ್ದ, ಅನುರಾಧ ಅವರು “ಕುಳಿತುಕೊಳ್ಳಿ ಕರೆಯುತ್ತಾರೆ” ಎಂದು ಕೂರಿಸಿದರು. ಮತ್ತೆ ದೇವಾನು ದೇವತೆಗಳ ಗುಸುಗುಸು, ಈ ಭಂಡ ಜೀವಕ್ಕೆ ಸುಮ್ಮನೆ ಹೇಳೋದಲ್ಲ, ಶಿವನ ತಲೆ ಮೇಲಿನ ಗಂಗೆಯನ್ನೇ ಚಿಮುಕಿಸಿ Loan ಅನ್ನೋ ಭ್ರಮೆಯಿಂದ ಎಬ್ಬಿಸಿ ಕಳಿಸಬೇಕು ಎಂದು ನಿರ್ಧರಿಸಿ, Chamber ಒಳಗೆ Chair ತುಂಬಾ ಕುಳಿತಿದ್ದ ಶಿವನ ಕಿವಿಯೂದಿ, ನನ್ನನ್ನು ಒಳಗೆ ಕರೆದರು, ಒಳಗೆ ಶಿವರೂಪಿ Manager, ನನ್ನ ಬಲಕ್ಕೆ ದೇವತೆ ಅನುರಾಧರವರು, ಎಡಕ್ಕೆ ಅರೂಪ್ ಕುಮಾರ್ ಚಟರ್ಜಿ.

ನಿಜಾ … ನನ್ನ ಕಚಡಾ ಜೀವನದ ಸವಿಸ್ತಾರವಾದ ವಿವರಣೆ ಕೊಟ್ಟ ಮಹಾದೇವ ಈತ. ಶಿವರೂಪಿ manager ಹೆಸರು ನಿಜಾ ಗೊತ್ತಿಲ್ಲಾ, ಆದರೆ ಆತ ನನ್ನ ಬದುಕು ಮತ್ತು ನನ್ನ ಕಲೆಯ ಬಗ್ಗೆ‌ ಬಿಚ್ಚಿಟ್ಟ ಸತ್ಯ ನಿಜಕ್ಕೂ ರೋಚಕ… ನನಗೇ ತಿಳಿಯದ ವಿಸ್ಮಯಕರ ವಿಷಯಗಳು ಅವು… ಹೇಳುತ್ತಾ ಹೋಗುತ್ತೇನೆ… ಕೇಳಿ ಬದುಕೋದನ್ನ ಕಲಿಯೋಣಾ… ಇನ್ನಾದರೂ ಮಧ್ಯಮ ವರ್ಗದವರಾದ ನಾವೆಲ್ಲಾ ಬದಲಾಗೋಣಾ…

Manager Points ಇದು ನನ್ನ Loan Reject ಆಗೋದಕ್ಕೆ…
*”ನನ್ನ Cibil Report ತೆಗೆದರೆ, ನಾಲ್ಕು ಪುಟ ಬರುತ್ತೇ – ನಿಮ್ಮದು ಹನ್ನೆರಡು ಪುಟವಿದೆ. ಇದರ ಅರ್ಥ ನೀವು ಸಾಲದಲ್ಲೇ ಬದುಕಿದ್ದೀರಿ”… (ನಾಚಿಕೆಯಾಗಬೇಕು ಇದನ್ನ ಹೇಳೋಕೆ, ನಾನು ದುಡಿಯೋಕೆ ಪ್ರಾರಂಭಿಸಿದ್ದು ನನ್ನ ಹತ್ತನೇ ತರಗತಿಯಿಂದ, ನನ್ನ ದುಡಿಮೆಯಿಂದಲೇ ನಾನು ಓದಿದ್ದು, ಅಪ್ಪಾ-ಅಮ್ಮಾ ನಾನು ಹೆಣ್ಣು ಅನ್ನೋ ಕಾರಣಕ್ಕೆ ಒಂಭತ್ತು ತಿಂಗಳ ಮಗುವಾಗಿದ್ದಾಗಲೇ ಬಿಟ್ಟರೂ, ನಾನೇ ದುಡಿದು ಡಿಗ್ರಿ ಮಾಡಿದ್ದೀನಿ, Typing ಕಲಿತಿದ್ದೀನಿ, Computer ಕಲಿತಿದ್ದೀನಿ, Journalism Diploma ಮಾಡಿದ್ದೀನಿ, ಇವತ್ತು ಗಂಡ ಸತ್ತರೂ ಅವನ ಕನಸಿಗಾಗಿ ನನ್ನ ಬದುಕಿನ ಗುರಿಗಾಗಿ ಬದುಕಿದ್ದೀನಿ… ನನ್ನ Cibil Report ನನ್ನನ್ನ ಸಾಲದಲ್ಲಿ ಬದುಕಿದ್ದೀನಿ ಅಂತಾ ಹೇಳ್ತಾ ಇದೆ ಹೊರತು ಸಾಲದಲ್ಲಿ ಸತ್ತಿದ್ದೀನಿ ಅಂತಾ ಅಲ್ಲಾ, ಅಥವಾ ಸಾಲದಿಂದ ತಲೆ ತಪ್ಪಿಸಿಕೊಂಡಿದ್ದೀನಿ ಅಂತಲೂ ಅಲ್ಲಾ… ನಿಮಗೂ-ನನಗೂ ಯಾವ ಹೋಲಿಕೆಯೂ ಇಲ್ಲಿ ಸಲ್ಲೋದಿಲ್ಲಾ, ಹೆಣ್ಣಾಗಿ ಇಷ್ಟಾದರೂ ಬದುಕಬಲ್ಲೇ ಅನ್ನೋ ನನ್ನ ಛಲದ ಮುಂದೆ ನಿಮ್ಮ ನಾಲ್ಕು ಪುಟದ Cibil Report ಮಹಾ ಸಾಧನೆಯಲ್ಲ)

*ಯಾವ Loan ಬಿಟ್ಟಿದ್ದೀರಿ ನೀವು, ಎಷ್ಟು Consumer loans ನಿಮ್ಮದು (ನನ್ನ ಮನೆಯ ಪ್ರತಿ ವಸ್ತುಗಳೂ ನನ್ನ ಶ್ರಮದ ಫಲ, ಮಧ್ಯಮ ವರ್ಗದ ಹೆಣ್ಣು ನಿಜಾ, ಆದರೆ ಬೇಕಿರೋದನ್ನ ಬೇಡಿ ಕೊಂಡಿಲ್ಲ, Loan ತಗೊಂಡೆ ನನ್ನ Laptop, Mobile, TV, Washing Machine, Refrigerator‌ ಎಲ್ಲವನ್ನ ತೆಗೆದುಕೊಂಡಿರೋದು, ತೆಗೆದುಕೊಂಡ ಹಾಗೆ ನಿಯಮಿತವಾಗಿ ನನ್ನ Loans Clear ಆಗಿದೆ ಕೂಡ, ಸಾಲ ಸರಿಯಾದ ಸಮಯದಲ್ಲಿ ತೀರಿಸದೆ ಇರೋದು ತಪ್ಪು ಅನ್ನೋದು ಗೊತ್ತು, ಆದರೆ ಸಾಲ ಮಾಡಿದ್ದೆ ತಪ್ಪು ಅನ್ನೋದು ಈಗ ಅರಿವಾಯ್ತು, ಒಂದು ಕಾನೂನು ಮಾಡಿಬಿಡಿ ಸರ್ ಒಬ್ಬ ವ್ಯಕ್ತಿಗೆ ಇಷ್ಟು ವರ್ಷದವರೆಗೆ ಸಾಲ ಮಾಡೋ ಯೋಗ್ಯತೆ ಇರುತ್ತೆ ಅದಾದ ಮೇಲೆ ಸಾಲದಲ್ಲೇ ಮುಂದುವರೆಯೋ ಯಾವ ವ್ಯಕ್ತಿಗೂ ಬದುಕೋ ಹಕ್ಕಿಲ್ಲ ಅಂತಾ….)

*”ಏನು ಮಾಡೋದು ನೀವು” – “Terracotta Jewelry Sir – ಮಣ್ಣಿನಿಂದ ಆಭರಣ” ಅಂತಾ Explain ಮಾಡೋ ಮೊದಲೇ – “ಗೊತ್ತು ಗೊತ್ತು ಏನಾದರು Certificate ಇದೆಯಾ ನೀವು ಕಲಿತಿರೋದಕ್ಕೆ, See ನಮ್ಮ ಅರೂಪ್ ಕೂಡ ಅದೇ ಊರಿನವರು” – ನಾನು ಸುಳ್ಳು ಹೇಳಿ ನಿಮ್ಮ ಬಳಿ Loan Apply ಮಾಡಿಲ್ಲ ಸ್ವಾಮಿ, ಅರೂಪ್ ಅಲ್ಲ ಅವರ ಊರಿನ ಅಷ್ಟೂ ಮಂದಿ ಕೂರಿಸಿ ಕುಳಿತಲ್ಲೇ ನನ್ನ ಕಲೆ ಏನು ಅಂತಾ ತೋರಿಸ್ತೇನೆ, ಅರೂಪ್‌ ಅದೇ ಊರಿನವರಾದರೇನು ಆ ಕಲೆಯ ಬೆಲೆ ತಿಳಿಯದವರು, ಯಾಕೆ ಎರಡು ತಿಂಗಳ ಹಿಂದೆ Unit Verification ಮಾಡಿದ ಶುಭಂ ಅವರಿಗೆ ಗೊತ್ತಿಲ್ಲವ ನನ್ನ ಕೆಲಸ, ಬನ್ನಿ ನಿಮ್ಮ ತಂಡ ಪ್ರತಿ ದಿನ ನನ್ನ Unit ಗೆ ನಾನು ಕೆಲಸ ಮಾಡುತ್ತೀನಾ ಇಲ್ಲವಾ ನೋಡಿ ಆಮೇಲೆ ಮಾತಾಡಿ…

*ನಿಮ್ಮಾಗೆ ಒಬ್ಬ PMEGP Loan Apply ಮಾಡಿದ್ದ ಅವನ Cibil Report ನೋಡಿದರೆ ಬರಿ Gold Loan He may be Pawn Broker, gold ತಗೊಳೋದು Pledge ಮಾಡೋದು ಬರೀ ಇದೆ – “ಯಾರಿಗೆ ಯಾರನ್ನ ಹೋಲಿಕೆ ಮಾಡ್ತಾ ಇದಿನಿ ಅನ್ನೋ ಜ್ಞಾನ ಇರಬೇಕು ಮಹಾಶಯರೇ, ನಾನು ಅವನಾಗೆ ಸುಳ್ಳು ಮಾಹಿತಿ ಕೊಟ್ಟು ಬರದೆ ಇರೋ ಕಲೆಯನ್ನ ಹೇಳಿಕೊಂಡು, ಮಾಡದ ಕೆಲಸ ತೋರಿಸಿ Loan Apply ಮಾಡಿಲ್ಲ, ಕೊರೋನಾ ಸಮಯದಲ್ಲೂ ನಾನು ದುಡಿಮೆ ಕಳೆದುಕೊಂಡಿಲ್ಲ, ದಿನದಿಂದ ದಿನಕ್ಕೆ ಹೆಚ್ಚಾಗೆ ಸಂಪಾದನೆ ಮಾಡ್ತಾ ಇದ್ದೇನೆ, ಒಂಟಿಯಾಗಿ ಎಲ್ಲವನ್ನ ನಿಭಾಯಿಸ್ತಾ ಇದ್ದೇನೆ, ಬಿಡುವಿಲ್ಲದೆ ದುಡಿಯುತ್ತಿದ್ದೇನೆ, ನನ್ನದೆ ಆಭರಣಗಳನ್ನ ನಾನೇ ಸ್ವತಃ ಯಾವ ಸಿನಿಮಾ ತಾರೆಗೂ ಕಡಿಮೆ ಇಲ್ಲದ ಹಾಗೆ Promote ಮಾಡಿ marketing ಮಾಡ್ತಾ ಇದ್ದೇನೆ. ಒಂದು ದಿನ ನೀವು, ಮತ್ತು ನಿಮ್ಮ ಅರೂಪ್ – ಅನುರಾಧ ಖಾಲಿ‌ ಕೈಲಿ ಕುಳಿತು ಒಂದು ರೂಪಾಯಿ ಸಂಪಾದಿಸಿ ತೋರಿಸಿ ನನ್ನಾಗೆ ಸಾಕು…

* ಹೋ Two Wheeler ಕೂಡ Loanಲ್ಲಿ ತಗೊಂಡಿದ್ದೀರಾ – ಕರ್ಮ ಯಾವ ಕಾನೂನಿದೆ ಸ್ವಾಮಿ Two Wheeler loan ತಗೋಳದೆ ಇರಬೇಕು ಅಂತಾ, 2016 ರಲ್ಲಿ ನಾನು Muthoot ನಲ್ಲಿ ಕೆಲಸ ಮಾಡೋವಾಗ ನನ್ನ Salary base ಮೇಲೆ ತಗೊಂಡು ಒಂದು ವರ್ಷದಲ್ಲೇ ಎಲ್ಲವನ್ನಾ ತೀರಿಸಿದ್ದೀನಿ, ಯಾವ Loan ಕೂಡಾ ಒಂದು ದಿನ Delay ಮಾಡಿ ಕಟ್ಟಿ Defaulter ಆಗಿಲ್ಲಾ ನಾನು… ಮಾತಾಡೋಕೆ ಅರ್ಥ ಇರಬೇಕು ಅಲ್ಲವಾ ದೇವರು, ಎರಡು ಬಾರಿ Personal Loan ಇದೆ, ನಾನು ಕಟ್ಟಿದ್ದ ಮನೆಯಿಂದ ನನ್ನನ್ನೇ ಹೊರಗೆ ಹಾಕಿದ್ದರು, ಎಲ್ಲೋಗಬೇಕು ನಾನು ಸಾಯಬೇಕಿತ್ತು ಅಲ್ವಾ, ಒಂದೇ ದಿನದಲ್ಲಿ Loan ತೆಗೆದು ಬಾಡಿಗೆ ಮನೆ ಮಾಡಿದ್ದೆ, ತಾಕತ್ತಿತ್ತು Loan ಕೊಟ್ಟಿದ್ದಾರೆ, ನಿಯತ್ತಾಗಿ ಸಕಾಲದಲ್ಲಿ ಎಲ್ಲವನ್ನ ತೀರಿಸಿದ್ದೀನಿ, ಎರಡನೇ ಬಾರಿ Personal Loan ಕೊಟ್ಟರು (ಒಂದು ಲಕ್ಷ) – ನನ್ನ Savings ಸೇರಿಸಿ ಮನೆ ಭೋಗ್ಯ ಮಾಡಿಕೊಂಡೆ ಮಹಾಪರಾಧನಾ ಸ್ವಾಮಿ, ನಾನು ಒಂದು Loan ಸರಿಯಾಗಿ ಕಟ್ಟದೆ ಇದ್ದರೆ ಮತ್ತೊಂದು Loan ಯಾರು ಕೊಡುತ್ತಾರೆ, ಮೇಲಿಂದ ಮೇಲೆ Loan ತಗೊಂಡೇ ನಾನು ಬೆಳಿತಾ ಇದಿನಿ ಅಂದ್ರೆ ಅರ್ಥ ನಿಯತ್ತಾಗಿ ನಾನು Loan ಕಟ್ಟಿಕೊಂಡು ಬಂದಿರೋದು, ನಿಮ್ಮ ನಾಲ್ಕು Page Cibil Reportಗೂ ನನ್ನ ಬದುಕಿನ ರೀತಿಗೂ ಹೋಲಿಕೆ ಬೇಕಿಲ್ಲ… ಎಲ್ಲಾ ನಿಯಮಿತವಾಗಿ ಮುಗಿದಿರೋ Loan Report ಹಿಡ್ಕೊಂಡು ಇಷ್ಟೆಲ್ಲಾ ಮಾತಾಡೋ ಅವಶ್ಯಕತೆ ಇದೆಯಾ, ನನ್ನ ಕಲೆ ಏನು, ನನ್ನ ಕೌಶಲ್ಯ ಏನಿದೆ, ದುಡಿಮೆ ಹೇಗಿದೆ, ಯಾರು ನನ್ನ ಗ್ರಾಹಕ ವರ್ಗ, ಹೇಗೆ ನಾನು ನನ್ನ Product Sale ಮಾಡ್ತಾ ಇದ್ದೇನೆ, ಖರ್ಚು ವೆಚ್ಚಗಳೇನು, ಮುಂದೆ ಯಾವೆಲ್ಲಾ Machine ಬೇಕಿದೆ, Machine ಅಳವಡಿಸಿಕೊಂಡ ಮೇಲೆ ಆದಾಯ ಇನ್ನೆಷ್ಟು ತೆಗೆಯಬಲ್ಲೇ, ಇದಲ್ಲವಾ ಕೇಳಬೇಕಿರೋ ಪ್ರಶ್ನೆಗಳು. ಒಂಟಿ ಹೆಣ್ಣು – ನೋಡೋಕೆ ಪೆಕ್ರು ಥರಾ ಇದಾಳೆ, ಯಾರಿಗೋ Loan ಕೊಡಿಸೋಕೆ ಸುಳ್ಳು ಮಾಹಿತಿ ಕೊಟ್ಟು ಬೆಬ್ಬೆಬ್ಬೆ ಅಂತಾ ಕೂತಿದ್ದಾಳೆ, ಪ್ರತಿಬಾರಿ ಹಲ್ಲು ಕಿರಿದು ಬೇಡೋದು ನೋಡಿದ್ರೆ – ಬಡತನದ ಅರಿವಾಗುತ್ತೆ, Cibil ಅಂತಾ ಹೇಳಿ ಇಲ್ಲ ಸಲ್ಲದ ನಾಲ್ಕು Banking Words ಬಳಸಿ ಮಾತಾಡಿದ್ರೆ ಎದ್ದು ಹೋಗುತ್ತೆ ಅಂತಾ ಮೂರು ತಿಂಗಳಿಂದ ಆಟ ಆಡಿಸಿ ಅವಮಾನ ಮಾಡ್ತಾ ಇದ್ದೀರಲ್ಲಾ ಮಾನವೀಯತೆ ಇದೆಯಾ ನಿಮ್ಮ ಎದೆಯಲ್ಲಿ… ನಾಚಿಕೆ ಆಗಬೇಕು ನೀವು ಕುಳಿತ ಕುರ್ಚಿಗಳಿಗೆ… ನಾನು ವಿನಯವಾಗಿ ನಿಮಗೆ ಕೇಳಿದ್ದು ನನ್ನ ತಪ್ಪಿದೆ ಮುಚ್ಚಾಕಿ Loan ಕೊಡಿ ಎಂದು ಅಲ್ಲಾ, ತಗ್ಗಿ ನಡೆಯೋದು ನನ್ನ ಗುಣ, ಹಾಗಂತ ತಪ್ಪೇ ಮಾಡದೆ ತಲೆತಗ್ಗಿಸಿ, ಹೇಳಿದ್ದೆಲ್ಲಾ ಕೇಳಿಕೊಂಡು ನಿಲ್ಲೋದು ಅಲ್ಲಾ…

*ಹೋಗಲಿ ಇದೆಲ್ಲಾ‌ ಇದ್ದೂ ನಾವೂ ಮೂರು ಜನ ಈ Loan ಕೊಟ್ಟರೆ, ನಾಳೆ ನಮ್ಮ ಜಾಗಕ್ಕೆ ಬರೋರು ನಮ್ಮನ್ನ ಪ್ರಶ್ನೆ ಮಾಡ್ತಾರೆ ಮಾ” – ನಾನೇನು ಗಂಡ ಸತ್ತಿದ್ದಾನೆ ಅಂತಾ ಸೀರೆ ಸೊಂಟಕ್ಕೆ ಸಿಕ್ಕಿಸಿಕೊಂಡು, ಕಂಕುಳಲ್ಲಿ ಒಂದು ಮಗು ಇಟ್ಕೊಂಡು ನಿಮ್ಮ ಕಾರಿನ ಬಾಗಿಲು ಇಣುಕಿ ಕೈ ಚಾಚಿ ಭಿಕ್ಷೆ ಬೇಡ್ತಾಇಲ್ಲ ದೇವರು, ಮೂರೂ ಜನ ನಿಮ್ಮ ಸ್ವಂತ ಜೇಬಿನಿಂದ ನನಗೆ ಸಹಾಯ ಮಾಡೋ ಹಾಗೆ ನಾಟಕ ಬೇಡ ಇಲ್ಲಿ. ನನ್ನ ಕೈಲಿ ದುಡಿಮೆ ಇದೆ, ನೂರು ಜನಕ್ಕೆ ಕಲಿಸಿರೋ ಹೆಮ್ಮೆ‌ಇದೆ, ಹೊಸ ಮಾರುಕಟ್ಟೆಯನ್ನೇ ಸೃಷ್ಟಿ ಮಾಡೋ ಶಕ್ತಿ ಇದೆ, ನನ್ನ ದುಡಿಮೆಗೆ ಪ್ರತಿಯಾಗಿ ನನ್ನ ಖಾತಾ ವಹಿವಾಟು ಸಾಕ್ಷಿ ಇದೆ, ಆಕಾಶವಾಣಿ ಸೇರಿದಂತೆ ಅನೇಕ‌ ಪತ್ರಿಕೆಗಳು ನನ್ನ ಕಲೆಯನ್ನ ಮೆಚ್ಚಿ ಬರೆದ ದಾಖಲೆಗಳಿದೆ. ಅಲ್ಲದೆ ಯಾವ ಸಾಲದ‌ ಒಂದು ರುಪಾಯಿಯನ್ನೂ ಉಳಿಸಿಕೊಳ್ಳದೆ ಸಕಾಲದಲ್ಲಿ ತೀರಿಸಿರೋದಕ್ಕೆ ಮೂರು ತಿಂಗಳಿಂದ ನಿಮ್ಮ ಕೈನಲ್ಲಿ ಸಾಕ್ಷಿಯಾಗಿ ನನ್ನ Cibil Report ಇದೆ, ಇದಕ್ಕೂ ಮೀರಿ ನಿಮ್ಮ Loan ಇಲ್ಲದೆಯೂ ನಾನು ಬದುಕಬಲ್ಲೇ ಅನ್ನೋದಕ್ಕೆ ತಾಕತ್ತಿದೆ (ನಿಮ್ಮಲ್ಲಿ ಇಲ್ಲದ್ದು)…

ನನ್ನ ಪ್ರಶ್ನೆಗಳು ಇಷ್ಟೇ…
*ಮೂರು ತಿಂಗಳ ಹಿಂದಿನಿಂದ, Unit Verification ಸಮಯದಿಂದಲೂ Cibil Report ಇದೆ, ಅಲ್ಲದೆ Verification ಆದ ಮೇಲೆ, ಒಂದು Quotation Pending ನಿವಾರಿಸಿದ ಮೇಲೂ, ಯಾಕೆ ನನ್ನ Loan Reject ಆಗಿದ್ದು…

*ಅನುರಾಧ ಅವರ ಬಳಿ ಅಳಲು ತೋಡಿಕೊಂಡಾಗ ಮೂರು ಬಾರಿ ಒಪ್ಪಿಗೆ ನೀಡಿ, ಕಡೆಗೆ ಶುಭಂ ಮತ್ತು ಅರೂಪ್ ಬಂದು ಮಾತನಾಡಿದ ಮೇಲೆ ಕೇವಲ MSME Date ಕಾರಣಕ್ಕೆ‌ ನನ್ನ File ಮತ್ತೆ Reject ಆಗೋದು ಯಾಕೆ… ಇಲ್ಲಿ ಶುಭಂ ಅವರ ನಿರೀಕ್ಷೆ ಬೇರೆ ಏನಾದರು ಇತ್ತಾ, ಮಣ್ಣಿನ ಆಭರಣಗಳ ಊರಿನ ಅರೂಪ್ ಅವರಿಗೆ ನನ್ನ ಕೆಲಸದಿಂದ ಏನಾದರೂ ತೊಂದರೆ ಇದೆಯಾ…

*ಕಡೆಗೆ Lead Bank Manager ಕಡೆಯಿಂದ ಮುದ್ರಾ Loan ಆಗುತ್ತದೆ ಎಂದು ತಿಳಿದು ಓಡಿ ಬಂದಾಗ, ಅನುರಾಧ, ಅರೂಪ್, ಮತ್ತು ಹೆಸರು ತಿಳಿಯದ Manager ಸೇರಿ ನನ್ನನ್ನ, ನನ್ನ ಕೆಲಸವನ್ನ, ನನ್ನ ಬದುಕಿನ ರೀತಿಯನ್ನ, ಒಂದು ಕೋಣೆಯೊಳಗೆ ಎಳೆ ಎಳೆಯಾಗಿ ಎಳೆದು ಅವಮಾನ ಮಾಡುವ ಹಿಂದಿನ ಇರಾದೆಯಾದರು ಏನು… ಇಲ್ಲಿ ನಾನು ಸುಳ್ಳಾ, ನನ್ನ ಕೆಲಸ ಸುಳ್ಳಾ, ನನ್ನ ಕಲೆ‌ ಸುಳ್ಳಾ…

ಎಲ್ಲಿಯವರೆಗೂ ನನ್ನ ಹೋರಾಟ…

*ಮೂರು ತಿಂಗಳಿಂದ‌ ಅಲೆಸಿ ಕಡೆಗೆ ಅರ್ಥವಿಲ್ಲದ ಬಾಯಿ ಮಾತಿನ ಕಾರಣ ಕೊಟ್ಟು Reject ಎಂದರೆ ಒಪ್ಪುಲು ನಾನು ಅನಕ್ಷರಸ್ಥೆ ಅಲ್ಲಾ, ನೀವು ಹೇಳಿದ ಅಷ್ಟೂ ಮಾಹಿತಿಗಳು ನನಗೆ ಬರವಣಿಗೆಯಲ್ಲಿ ಬೇಕು…

*ಶುಭಂ ಅವರಿಗೆ ಮನೆ ಬಾಡಿಗೆ ಬಗ್ಗೆ ತಕರಾರು ಇದ್ದರೆ, ಖುದ್ದು ಇದ್ದಲ್ಲೇ ನಿಂತು ನಿವಾರಿಸಿಕೊಳ್ಳಬಹುದಿತ್ತು, ಗಂಡ ಸಾಯೋ ಮೂರು ದಿನದ ಮುನ್ನ ಬಾಡಿಗೆ ಕಟ್ಟಿದ್ದಾನೆ ಸ್ವಾಮಿ, ಹತ್ತು ತಿಂಗಳ ಬಾಡಿಗೆ ಮುಂಗಡವಾಗಿ ಕೊಟ್ಟಿದ್ದೀವಿ, ಅಲ್ಲದೆ MainRoad ಮನೆ ಮತ್ತು ಮಳಿಗೆಯನ್ನ ಬಿಟ್ಟಿಯಾಗಿ ಕೊಡೋದಕ್ಕೆ ಮನೆ ಮಾಲೀಕರು ನನ್ನ ಸಂಬಂಧಿಕರಲ್ಲ, ಅಥವಾ ಯಾರದೋ ಮಳಿಗೆ ತೋರಿಸಿ ನನಗೆ ತಿಳಿಯದ ಕೆಲಸ ಹೇಳಿಕೊಂಡು ನಾನು Loan Apply ಮಾಡಿಲ್ಲಾ…

*ಅಲ್ಲದೆ ನನ್ನ ಗಂಡನ ವಿಮಾ ಹಣ ಬರಬೇಕಿದ್ದ ಕಾರಣ ‌ಶುಭಂ ಅವರನ್ನ ವಿಮಾ ಅಧಿಕಾರಿ ಎಂದು ತಿಳಿದು ನನಗೆ ಸಹಾಯವಾಗಲಿ ಎಂದು ಪಾಪ ನನ್ನ ವಿದ್ಯಾರ್ಥಿನಿ / ಸಹಾಯಕಿ “ನೋಡಿ ಸರ್ ಮನೆ ಬಾಡಿಗೆ ಕಟ್ಟಿಲ್ಲಾ ಎಂದು ಹೇಳಿದ್ದಕ್ಕೆ ನಿಂತಲ್ಲೇ Clarification ನೀಡಿ ನನ್ನ ಗಂಡನ ಬಗೆಗಿನ Documents ಕೂಡ ತೋರಿಸಿದ್ದೇನೆ, ಕನ್ನಡಕ ಕಣ್ಣಿಗೆ ಮಾತ್ರ ಹಾಕಿ ಸ್ವಾಮಿ, ಮಾನವೀಯತೆಯ ಕಣ್ಣಿಗೆ ಸ್ವಲ್ಪ ಬೆಳಕು ಹೋಗಲು ಬಿಡಿ…

*ಅನುರಾಧರವರೆ ನಾನು ನಿಮಗೆ ಹೇಳಿದ್ದು ನಿಮಗೆ ತಿಳಿಯದ ಮಣ್ಣಿನ ಆಭರಣ ಮತ್ತು ನನ್ನ ಕಲೆ‌ ನಿಜಾ ಅನ್ನೋದಕ್ಕೆ DIC Deputy Director ಕೇಳಿ ಎಂದು, ಹೊರತು ಮೋದಿ ಹೇಳಿದ್ದಾರೆ ಎಂದು ಅಲ್ಲಾ, ನೀವೆ ಹೇಳಿದ ಹಾಗೆ ಮೋದಿ ಬಂದರೂ Loan ಕೊಡಲ್ಲಾ ಎಂದಾ ನೀವಾ ಇಲ್ಲಾ ಮೋದಿ ಬರೋವರೆಗೂ ನಿಮ್ಮ ಶಾಖೆಯ ಮುಂದೆ ಧರಣಿ ಕೂರೋ ನಾನಾ ನೋಡೆಬಿಡೋಣಾ…

* Adorable Manager ಅವರೆ ನಾಲ್ಕು ಗೋಡೆ ಮಧ್ಯ ಒಂದು ಒಂಟಿ ಹೆಣ್ಣನ್ನ ಕೂರಿಸಿ, ಅಸಮಾನತೆಯ ತಕ್ಕಡಿ ಹಿಡಿದು ಒಂದು ಬದಿಗೆ ಘಟಾನುಘಟಿ ತಮ್ಮನ್ನೆ ಕೂರಿಸಿಕೊಂಡು ಇನ್ನೊಂದು ಕಡೆಗೆ ಸುಂಡಿಲಿಯೆಂದು ಭಾವಿಸಿದ ಈ ಹೆಣ್ಣನ್ನ ತೂಗಿ ಹೀಯಾಳಿಸೋಕೆ ನಾನು ಬರಿ ಹೆಣ್ಣಲ್ಲಾ ಕಣಯ್ಯಾ… ಗಂಡಿನಾಗೆ ದುಡಿದು ಬದುಕ್ತಾ ಇರೋಳು… ಭಿಕ್ಷುಕಿನೂ ಅಲ್ಲಾಪ ನೀವು ಮೂವರು ಕೊಡ್ತೋನಿ ಕೊಡಲ್ಲಾ ಅಂತಾ ಆಟ ಆಡಿಸೋಕೆ… ನಾಲ್ಕು ಗೋಡೆ ಒಳಗೆ ಅವಮಾನ ಮಾಡಿದ ನೀವು ಮೂವರು ನಿಮ್ಮ ಕಾರಣ ಕೊಟ್ಟು ನನ್ನ ಪ್ರಶ್ನೆಗಳಿಗೆ ಬೀದಿಯಲ್ಲೇ ಉತ್ತರ ಕೊಡಬೇಕು…

*ನನ್ನ Branch Manager ಪ್ರಕಾರ ನನ್ನ File ನಿಮ್ಮ ಶಾಖೆಯಲ್ಲೇ ಇದ್ದರೂ, ನಾನು ಬರವಣಿಗೆ ರೂಪದಲ್ಲಿ ನಿಮ್ಮ Rejection ಕಾರಣಗಳನ್ನ ಕೊಡಿ ಎಂದು ಕೇಳಿಕೊಂಡರೂ, ಮೂವರೂ ತ್ರಿಮೂರ್ತಿಗಳು File ಬಂದೇ ಇಲ್ಲ ಎಂದು ತಪ್ಪಿಸಿಕೊಳ್ಳೋದು ಹೇಗೆ ಸರಿ. ಹಿಡಿತವಿಲ್ಲದ ನಾಲಿಗೆಯಿಂದ ಸುರಿಯೋ ಮಾತುಗಳು ಬರವಣಿಗೆಯಲ್ಲಿ ಬರದೆ ಇರೋದಕ್ಕೆ ಸತ್ಯ ಎಲ್ಲಿ ಸತ್ತಿದೆ… ಸತ್ಯದ ಹುಡುಕಾಟ ಆಗೋವರೆಗೂ, ನಾನು Defaulter ಎಂದು ಸಾಭೀತು ಪಡಿಸೋವರೆಗೂ ನಾನು ನಿಮ್ಮ ಶಾಖೆಯ ಬಾಗಿಲಿಂದ ಕದಲಲ್ಲ, ಇದು ಈವತ್ತಿಗೆ ನನ್ನೊಬ್ಬಳ ನೋವು, ಕೋಣೆಯೊಳಗೆ ಅವಮಾನಿಸಿದ ನಿಮ್ಮನ್ನ ಹೀಗೆ ಬಿಟ್ಟರೆ, ನಾಳೆ ರಸ್ತೆಬದಿಯ ನೂರು ಜನ ನನ್ನನ್ನ ಎಳೆದಾಡೋಕೆ ನಿಲ್ಲುತ್ತಾರೆ, ಇದೊಂದು ದಿನ ಸತ್ಯ ಗೆದ್ದರೆ ನಾಳೆ ನನ್ನಂತ ನೂರು ಹೆಣ್ಣುಮಕ್ಕಳಿಗೆ ಹೋರಾಟದ ಹೊಸ ಹಾದಿ ಸಿಗಲಿದೆ…

“ನಾನು ಸಾಲದಲ್ಲಿ ಬದುಕಿದ್ದೀನಿ ನಿಜಾ…
ಆದರೆ ಸಾಲಕ್ಕೆ ಬೆನ್ನು ಮಾಡಿ ಓಡಿಲ್ಲಾ,,,
ಸಾಲದ ಬದುಕಿಗೆ ಹೆದರಿ ಸತ್ತಿಲ್ಲಾ” ಇದನ್ನು ಸಾಭೀತು ಮಾಡುವವರೆಗೂ ನನ್ನ ಬಾಗಿಲ ಬಳಿ ಹೋರಾಟ ರಸ್ತೆಗಿಳಿದರೂ ತಪ್ಪಲ್ಲಾ-ತಪ್ಪೂ ಅಲ್ಲಾ…

– ಮಂಜುಳಾ.ಜೆ (ನೀಲಿಲೋಹಿತ್)

ನ್ಯಾಯ ಸಿಕ್ಕಿತು :

ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಿದ ಕೆಲ ಸಮಯದಲ್ಲೇ ಮಹಿಳೆಗೆ ನ್ಯಾಯ ದೊರಕಿದೆ. ಬ್ಯಾಂಕಿನ ಹಿರಿಯ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ. ಈ ಬಗ್ಗೆ ಖುದ್ದು ಮಂಜುಳಾ ಅವರೇ ಫೇಸ್ ಬುಕ್ ಪುಟದಲ್ಲಿ ಮಾಹಿತಿ ಹಂಚಿಕೊಂಡಿದ್ದು ಅದು ಹೀಗಿದೆ….
ನೀಲಿಗೆ ನ್ಯಾಯ ಸಿಕ್ಕಿದೆ…
SBI ಬ್ಯಾಂಕ್ ನ ಹಿರಿಯ ಅಧಿಕಾರಿಗಳ ನೇತ್ರತ್ವದಲ್ಲಿ, ಕೆಲವೊಂದು ದಾಖಲೆಗಳ ಬದಲಾವಣೆಯೊಂದಿಗೆ ಸಮಸ್ಯೆ ಬಗೆಹರಿಸುವುದರೊಂದಿಗೆ, ನನಗೆ ನ್ಯಾಯ ಕೊಡಿಸಿದ್ದಾರೆ… ಸಹಕರಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು..

key words : mysore-bank-loan-manjula-artist-face.book-protest