ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ವೇಯಿಂದ ಚನ್ನಪಟ್ಟಣದ ಗೊಂಬೆಗಳ ತಯಾರಕರಿಗೆ ಸಂಕಷ್ಟ.

ಚನ್ನಪಟ್ಟಣ, ಸೆಪ್ಟೆಂಬರ್ 28, 2022 (www.justkannada.in): ಹತ್ತು ದಿನಗಳ ಐತಿಹಾಸಿಕ ಮೈಸೂರು ದಸರಾ ವಿಶ್ವವಿಖ್ಯಾತ ಚನ್ನಪಟ್ಟಣದ ಗೊಂಬೆಗಳಿಗೂ ಒಂದು ವೇದಿಕೆಯನ್ನು (ಗೊಂಬೆಗಳ ಹಬ್ಬ) ಒದಗಿಸಿದೆ. ಚನ್ನಪಟ್ಟಣದ ಗೊಂಬೆಗಳು ರಾಜ್ಯ, ಮತ್ತು ರಾಷ್ಟ್ರವಷ್ಟೇ ಅಲ್ಲದೆ ವಿಶ್ವಖ್ಯಾತಿಯನ್ನು ಗಳಿಸಿದ್ದು, ಮೈಸೂರು ದಸರಾ ಸಂದರ್ಭದಲ್ಲಿ ಮರದ ಗೊಂಬೆಗಳಿಂದಾಗಿ ಹೆಚ್ಚು ಬೆಳಕಿಗೆ ಬರುತ್ತದೆ. ಆದರೆ ಈ ವರ್ಷ ಚನ್ನಪಟ್ಟಣ ಗೊಂಬೆ ಹಬ್ಬ ಆಚರಣೆಯ ಭಾಗವಾಗಿ ದೊಡ್ಡ ಪ್ರಮಾಣದ ವ್ಯಾಪಾರವನ್ನು ಮಾಡುವಲ್ಲಿ ವಿಫಲವಾಗಿದೆ. ಇದಕ್ಕೆ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌ ವೇನೆ ಕಾರಣ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಈ ಹಿಂದೆ, ಬೆಂಗಳೂರು ಹಾಗೂ ಮೈಸೂರು ನಗರಗಳ ನಡುವೆ ಪ್ರಯಾಣಿಸುವ ಎಲ್ಲಾ ವಾಹನಗಳೂ ಸಹ ಚನ್ನಪಟ್ಟಣವನ್ನು ದಾಟಿಕೊಂಡೇ ಹೋಗಬೇಕಾಗುತಿತ್ತು (ರಾಮನಗರದ ಕಡೆಯಿಂದ ಮೈಸೂರಿಗೆ ತೆರಳುವವರು). ಆದರೆ ಈ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ ಹೊಸದಾಗಿ ನಿರ್ಮಾಣವಾಗುತ್ತಿರುವ ಎಕ್ಸ್ಪ್ರೆಸ್‌ ವೇ ರಾಮನಗರ ಹಾಗೂ ಚನ್ನಪಟ್ಟಣ ಎರಡನ್ನೂ ಬೈಪಾಸ್ ಮಾಡಿಕೊಂಡು ಹೋಗುತ್ತದೆ. ಇದರಿಂದಾಗಿ ಮುಂಚಿನ ಹೆದ್ದಾರಿಯ ಅಕ್ಕಪಕ್ಕದಲ್ಲಿ ವ್ಯಾಪಾರವನ್ನು ಆರಂಭಿಸಿದ್ದಂತಹ ಅನೇಕ ವರ್ತಕರಿಗೆ ನಷ್ಟವುಂಟಾಗಿದೆ. ಏಕೆಂದರೆ ವಾಹನಗಳು ಎಕ್ಸ್ಪ್ರೆಸ್‌ ವೇ ಮೂಲಕ ತೆರಳಲು ಆದ್ಯತೆ ನೀಡುತ್ತಿವೆ.

ಚನ್ನಪಟ್ಟಣದ ಓರ್ವ ಗೊಂಬೆ ತಯಾರಕರಾದ ಮುಸ್ತಫಾ ಪಾಷಾ ಅವರು, ೧೯೬೩ರಿಂದಲೂ ಗೊಂಬೆಗಳ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. “ಇಷ್ಟು ವರ್ಷಗಳ ನನ್ನ ಅನುಭವದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ ವ್ಯಾಪಾರ ನಡೆದಿರುವುದನ್ನು ನಾನು ನೋಡಿದಂತಾಗಿದೆ. ಏಕೆಂದರೆ ಬಹುಪಾಲು ಜನರು ಹೊಸ ಎಕ್ಸ್ ಪ್ರೆಸ್‌ ವೇ ಮಾರ್ಗವಾಗಿ ಮೈಸೂರಿಗೆ ತೆರಳಲು ಬಯಸುತ್ತಿದ್ದಾರೆ. ಚನ್ನಪಟ್ಟಣದ ಮೂಲಕ ಹಾದು ಹೋಗುವುದಿಲ್ಲ. ಆದರೆ ಈ ಗೊಂಬೆಗಳ ತಯಾರಿಕೆ ಹಾಗೂ ಮಾರಾಟವನ್ನು ನಂಬಿಕೊಂಡು ಅನೇಕ ಕುಟುಂಬಗಳು ಜೀವಿಸುತ್ತಿವೆ. ಅವರೆಲ್ಲರಿಗೂ ಈಗ ದೊಡ್ಡ ನಷ್ಟವುಂಟಾಗಿದೆ,” ಎಂದರು.

ಸರ್ಕಾರ ಚನ್ನಪಟ್ಟಣದ ಗೊಂಬೆಗಳಿಗೆ ಆನ್‌ ಲೈನ್ ಮಾರಾಟದ ವೇದಿಕೆಯನ್ನು ಕಲ್ಪಿಸಲು ಇದು ಸೂಕ್ತವಾದ ಸಮಯವಾಗಿದೆ ಎನ್ನುವುದು ಇಲ್ಲಿನ ವರ್ತಕರ ಅಭಿಪ್ರಾಯವಾಗಿದೆ. ಕಳೆದ ವರ್ಷ ಸರ್ಕಾರ ಆನ್‌ ಲೈನ್ ಮೂಲಕ ಗೊಂಬೆಗಳ ಮಾರಾಟಕ್ಕಾಗಿ ಗೊಂಬೆಗಳ ಹಬ್ಬ ಆಚರಿಸುವ ಮೂಲಕ ಒಂದು ಅವಕಾಶವನ್ನು ಕಲ್ಪಿಸಿತ್ತು. ಅದರಿಂದ ಸ್ವಲ್ಪ ಅನುಕೂಲವೂ ಆಗಿತ್ತು.

ಚನ್ನಪಟ್ಟಣದ ಮರದ ಗೊಂಬೆಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಟಿಪು ಸುಲ್ತಾನ್‌ ನ ಅವಧಿಯಲ್ಲಿ ಈ ಗೊಂಬೆಗಳ ತಯಾರಿಕಾ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಇಂಬು ಲಭಿಸಿತ್ತಂತೆ. ಇಲ್ಲಿ ಸ್ಥಳೀಯ ಕರಕುಶಲಕರ್ಮಿಗಳಿಗೆ ಉತ್ತಮ ಗೊಂಬೆಗಳನ್ನು ತಯಾರಿಸಲು ತರಬೇತಿ ನೀಡುವ ಸಲುವಾಗಿ ಪರ್ಷಿಯಾ ದೇಶದಿಂದ ತರಬೇತುದಾರರನ್ನು ಕರೆಸಿ ತರಬೇತಿ ಕೊಡಿಸಲಾಗಿತ್ತಂತೆ. ೧೯೦೨ರಲ್ಲಿ ಮೈಸೂರಿನ ದಿವಾನರು ಚನ್ನಪಟ್ಟಣದ ಗೊಂಬೆ ತಯಾರಕರಿಗಾಗಿಯೇ ಒಂದು ಚನ್ನಪಟ್ಟಣದಲ್ಲಿ ವಿಶೇಷ ತರಬೇತಿ ಸಂಸ್ಥೆಯನ್ನು ಆರಂಭಿಸಿದ್ದರು.

ಈ ನಡುವೆ, ಈ ಕರಕುಶಲಕರ್ಮಿಗಳಿಗೆ ನೆರವಾಗಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಚನ್ನಪಟ್ಟಣದ ಗೊಂಬೆಗಳು ನಮ್ಮ ನಾಡಿನ ಶ್ರೀಮಂತ ಸಂಸ್ಕೃತಿ ಹಾಗೂ ಸಂಪ್ರದಾಯದ ಪರಂಪರೆಯಾಗಿದೆ ಹಾಗೂ ಇದಕ್ಕೆ ಭೌಗೋಳಿಕ ಮಾನ್ಯತೆ ಕೂಡ ಲಭಿಸಿದೆ. ಇದರಿಂದಾಗಿ ಕರಕುಲಕರ್ಮಿಗಳ ಜೀವನೋಪಾಯಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾಗಲಿದೆ ಎನ್ನುವುದು ಅಧಿಕಾರಿಯೊಬ್ಬರ ಅನಿಸಿಕೆಯಾಗಿದೆ.

ತರಬೇತಿ ವೆಬಿನಾರ್‌ ಗಳ ಆಯೋಜನೆ ಹಾಗೂ ಆನ್‌ ಲೈನ್ ಶಿಬಿರಗಳನ್ನು ಆಯೋಜಿಸಲು ಕರ್ನಾಟಕ ಸರ್ಕಾರ ಒಂದು ಇ-ವಾಣಿಜ್ಯ ಕಂಪನಿಯೊಂದಿಗೆ ಪಾಲುದಾರಿಕೆಯನ್ನೂ ಮಾಡಿಕೊಂಡಿದೆ. “ಈ ಶಿಬಿರಗಳು  ಬಿ೨ಇಸಿ ಇ-ಕಾಮರ್ಸ್ ಶಿಬಿರಗಳ ತರಬೇತಿ ನೀಡುವುದರ ಜೊತೆಗೆ ಜ್ಞಾನ ಹಂಚಿಕೆಗೆ ಅನುಕೂಲವಾಗುವ ಕಡೆ ಗಮನಕೇಂದ್ರೀಕರಿಸುತ್ತದೆ,” ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಚನ್ನಪಟ್ಟಣದ ಗೊಂಬೆಗಳ ತಯಾರಕರು ಹೈಟೆಕ್ ಆಗಲು ಕೆಲವು ಸ್ಥಳೀಯರೂ ಸಹ ನೆರವಾಗುತ್ತಿದ್ದಾರೆ. ಹಾಗಾಗಿ ಪ್ರಸ್ತುತ ಇಲ್ಲಿನ ಗೊಂಬೆ ತಯಾರಕರು ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇರುವಂತಹ ಗೊಂಬೆಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಹಾಗೂ ಅದರಿಂದ ಅವರ ಆದಾಯವೂ ಹೆಚ್ಚಳವಾಗುತ್ತಿದೆ. ಪ್ರಸ್ತುತ ಚನ್ನಪಟ್ಟಣದ ಗೊಂಬೆ ತಯಾಕರು ಉತ್ತಮ ನಿದ್ದೆಗೆ ಸಹಾಯವಾಗುವಂತಹ ದೀಪಗಳ ಉತ್ಪಾದನೆಗೆ ಯೋಜಿಸಿದ್ದಾರೆ. ಮೂಲಗಳ ಪ್ರಕಾರ ಈ ಕರಕುಶಲತೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾದ ಕಾರಣದಿಂದಾಗಿ ಅಳಿವಿನ ಅಂಚಿನಲ್ಲಿತ್ತು. ಚನ್ನಪಟ್ಟಣದ ಅನೇಕ ಕರಕುಶಲಕರ್ಮಿಗಳು ಕೂಲಿ ಕೆಲಸಗಾರರಾಗಿ ದುಡಿಯುವಂತಾಗಿತ್ತು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Mysore-Bangalore- Expressway – problem – Channapatnam doll -manufacturers