ದೇಶದಲ್ಲಿ 5 ಮಿಲಿಯನ್ ಜನರಲ್ಲಿ ಸಂವಹನ ವೈಕಲ್ಯತೆ:  ವಿಕಾಸ್ ಶೀಲ್

ಮೈಸೂರು,ಫೆಬ್ರವರಿ,19,2022(www.justkannada.in):  2011ರ ಸರ್ವೆ ಪ್ರಕಾರ ದೇಶದಲ್ಲಿ 5 ಮಿಲಿಯನ್ ಜನರು ಸಂವಹನ ವೈಕಲ್ಯತೆಯಿಂದ ಬಳಲುತ್ತಿದ್ದಾರೆ. ಆದರೆ, ಸರ್ವೆಯಲ್ಲಿ ಸಾಕಷ್ಟು ಜನ ಹೊರಗುಳಿದಿದ್ದಾರೆ. ಅವರನ್ನು ಲೆಕ್ಕ ಹಾಕಿದರೆ ಸಂವಹನ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಶೀಲ್ ತಿಳಿಸಿದ್ದಾರೆ.

ಭಾರತೀಯ ವಾಕ್-ಭಾಷಾ ಮತ್ತು ಶ್ರವಣ ಸಂಘದ  ಮೈಸೂರು ಅಧ್ಯಾಯ ನಗರದ ಐಷ್‌ ನ ನಾಲೆಡ್ಜ್ ಪಾರ್ಕ್‌ ನಲ್ಲಿ ಆಯೋಜಿಸಿದ್ದ 53ನೇ ರಾಷ್ಟ್ರಮಟ್ಟದ ಭಾರತೀಯ ವಾಕ್ -ಭಾಷಾ ಮತ್ತು ಶ್ರವಣ ಸಂಘದ ಸಮಾವೇಶದಲ್ಲಿ ವರ್ಚುವಲ್ ಮೂಲಕ ಮಾತನಾಡಿದರು. ಅಂಗ ವೈಕಲ್ಯತೆ ಇರುವವರಿಗೆ ಗುಣಮಟ್ಟದ ಸೂಕ್ತ ಆರೋಗ್ಯ ಸೇವೆ ಲಭಿಸುತ್ತಿಲ್ಲ. ಸೌಲಭ್ಯ ಹಾಗೂ ಸಲಕರಣಿಗಳ ಕೊರತೆ ಕಾರಣವೆಂದು 2017ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವರದಿ ಬಿಡುಗಡೆ ಮಾಡಿದೆ. ಆದ್ದರಿಂದ ಅಂಗ ವೈಕಲ್ಯತೆ ಇಲ್ಲದವರಿಗೆ ಸಿಗುತ್ತಿರುವ ಎಲ್ಲಾ ಸೌಲಭ್ಯ ಹಾಗೂ ಚಿಕಿತ್ಸೆಗಳು ವಿಶೇಷಚೇತನರಿಗೂ ಸಿಗುವಂತಾಗಬೇಕೆಂದು ಆಶಿಸಿದರು.

ಸಂವಹನ ವೈಕಲ್ಯತೆ ಒಂದು ಸವಾಲು. ಇದು ಆರ್ಥಿಕತೆಗಷ್ಟೇ ಅಲ್ಲದೆ, ಶಿಕ್ಷಣ, ಸಾಮಾಜಿಕ ವ್ಯವಸ್ಥೆಯಲ್ಲೂ ಪ್ರಭಾವ ಬೀರುತ್ತದೆ. ಕೇಂದ್ರದ ಆಯುಷ್ಮಾನ್ ಭಾರತ್ ಅಡಿ 1.5 ಲಕ್ಷ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ತೆರೆಯಲು ಗುರಿ ಇಟ್ಟುಕೊಳ್ಳಲಾಗಿದ್ದು, ಅದರಲ್ಲಿ 91 ಸಾವಿರ ಕಾರ್ಯ ಪ್ರವೃತ್ತವಾಗಿದೆ ಎಂದರು ಹೇಳಿದರು.

ಭಾರತ ಸರ್ಕಾರವು ಡಿಸೆಂಬರ್ 2016 ರಲ್ಲಿ ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯಿದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಇದು ಭಾಷಣ, ಭಾಷೆ ಮತ್ತು ಶ್ರವಣ ದೋಷಗಳಿರುವ ವ್ಯಕ್ತಿಗಳಿಗೆ ರಕ್ಷಿಸಲು, ಉತ್ತೇಜಿಸಲು ಮತ್ತು ಅವಕಾಶಗಳನ್ನು ಒದಗಿಸಲು ಸಾಕಷ್ಟು ಪ್ರಾತಿನಿಧ್ಯವನ್ನು ನೀಡುತ್ತದೆ. ಸರ್ಕಾರವು ತಿದ್ದುಪಡಿಯ ಮೂಲಕ ಕಾಯಿದೆಯ ವ್ಯಾಪ್ತಿಯಲ್ಲಿ ಅಂಗವೈಕಲ್ಯತೆಯು 7 ರಿಂದ 21 ಕ್ಕೆ ವಿಸ್ತರಿಸಲಾಗಿದೆ. ಇದು ಸಂವಹನ ಅಸ್ವಸ್ಥತೆಗಳಿರುವ ವ್ಯಕ್ತಿಗಳಿಗೆ ಗುಣಮಟ್ಟದ ಸೇವೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೆಚ್ಚಿಸಿದೆ. ಶಿಕ್ಷಣ ವ್ಯವಸ್ಥೆಯಲ್ಲಿ, ವೃತ್ತಿಯಲ್ಲಿ ಮತ್ತು ಅವರ ದೈನಂದಿನ ಜೀವನದಲ್ಲಿ ವಿಶೇಷ ಚೇತನರ ಒಳಗೊಳ್ಳುವಿಕೆಯನ್ನು ತರುವುದು ದೊಡ್ಡ ಗುರಿಯಾಗಿದೆ ಎಂದರು.

ಮೂವರಿಗೆ ಸನ್ಮಾನ:

ಈ ಸಮಾವೇಶದಲ್ಲಿ ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಮೂವರನ್ನು ಸನ್ಮಾನಿಸಲಾಯಿತು. ಐಷ್‌ನ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಅವರಿಗೆ ಡಾ.ಎನ್.ರತ್ನ ಒರೇಷನ್ ಪ್ರಶಸ್ತಿ, ಶ್ರವಣ ವಿಜ್ಞಾನ ಪ್ರಾಧ್ಯಾಪಕ ಡಾ.ಅಜಿತ್ ಕುಮಾರ್ ಯು. ಅವರಿಗೆ ಪ್ರೊ. ಎಸ್.ಕಾಮೇಶ್ವರನ್ ಎಂಡೋಮೆಂಟ್ ಒರೇಷನ್ ಪ್ರಶಸ್ತಿ ಹಾಗೂ ರಾಜಪಾಂಡಿಯನ್ ಎಸ್. ಇವರಿಗೆ ಪ್ರೊ.ಆರ್.ಕೆ. ಓಜಾ ಒರೇಷನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ.ಎಂ.ಜಯರಾಂ ಅಧಿಕಾರ ಸ್ವೀಕಾರ

ಇದೇ ವೇಳೆ ನಿಮಾನ್ಸ್‌ ನ ನಿವೃತ್ತ ಮುಖ್ಯಸ್ಥ ಡಾ.ಎಂ.ಜಯರಾಂ ಅವರು ಮಣಿಪಾಲ್‌ ನ ಪ್ರಾಧ್ಯಾಪಕ ಡಾ.ಕೃಷ್ಣ ವೈ. ಅವರಿಂದ 2022 -2023ರ ಅವಧಿಗೆ ಇಷಾ ಅಧ್ಯಕ್ಷ ಸ್ಥಾನದ ಅಧಿಕಾರ ಸ್ವೀಕರಿಸಿದರು.  ಡಾ. ಎಂ.ಜಯರಾಂ ದೇಶದ ಹಿರಿಯ ಹಾಗೂ ಖ್ಯಾತ ವಾಕ್-ಭಾಷಾ ತಜ್ಞರಾಗಿದ್ದು, ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ (ಐಷ್) ಆರು ವರ್ಷ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಐಷ್‌ನ ನಿರ್ದೇಶಕಿ ಡಾ.ಎಂ.ಪುಷ್ಪಾವತಿ, ಇಷಾ ಕಾರ್ಯದರ್ಶಿ ಸುಮನ್ ಕುಮಾರ್, ಅಚ್ಚಯ್ಯ ಎಂ.ಎ. ಸೇರಿದಂತೆ ಇತರರು ಹಾಜರಿದ್ದರು.

ಕೋವಿಡ್ ಮಾರ್ಗಸೂಚಿ ಇರುವುದರಿಂದ ಕಾರ್ಯಕ್ರಮವನ್ನು ಡಿಜಿಟಲ್ ರೂಪದಲ್ಲಿ ನಡೆಯಿತು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ವೃತ್ತಿಪರರೂ ಒಳಗೊಂಡಂತೆ ಸುಮಾರು 1,300ಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಿದ್ದರು. ಎರಡು ದಿನದಲ್ಲಿ ವಿಶ್ವದಾದ್ಯಂತ 16 ವಿದ್ವಾಂಸರಿಂದ ಉಪನ್ಯಾಸ, 36 ಮೌಖಿಕ ಸಂಶೋಧನಾ ವಿಷಯ ಮಂಡನೆ ಹಾಗೂ 115 ಪೋಸ್ಟರ್ ಮಂಡನೆ ಇರಲಿದೆ. ವಾಕ್-ಭಾಷಾ ವಿಜ್ಞಾನ ಮತ್ತು ಶ್ರವಣ ವಿಜ್ಞಾನ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಸಂಶೋಧಕರು ಹಾಗೂ ಅಭ್ಯಾಸನಿರತ ವೃತ್ತಿಪರರು ವಿಷಯ ಮಂಡನೆ ಮಾಡಲಿದ್ದಾರೆ. ಈ ಸಮಾವೇಶದಲ್ಲಿ ಡಿಜಿಟಲ್ ರೂಪದ ಒಂದು ಪ್ರದರ್ಶನವೂ ಇದೆ.

Key words: mysore-AIISH- Vikas Sheel